ಉ. ಕೊರಿಯ ಶೃಂಗ ಸಮ್ಮೇಳನ ಸುಸೂತ್ರ
ವಾಶಿಂಗ್ಟನ್, ಜೂ. 2: ಉತ್ತರ ಕೊರಿಯದೊಂದಿಗೆ ಜೂನ್ 12ರಂದು ನಡೆಯಲು ನಿಗದಿಯಾಗಿದ್ದ ಶೃಂಗ ಸಮ್ಮೇಳನಕ್ಕೆ ಯಾವುದೇ ಧಕ್ಕೆಯಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.
ಐತಿಹಾಸಿಕ ಸಮ್ಮೇಳನಕ್ಕೆ ಪೂರ್ವ ಸಿದ್ಧತೆ ನಡೆಸುವುದನ್ನು ಮುಂದುವರಿಸುವ ನಿಟ್ಟಿನಲ್ಲಿ ಶ್ವೇತಭವನದಲ್ಲಿ ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್ ಅವರ ಹಿರಿಯ ಸಲಹಾಕಾರರೊಬ್ಬರೊಂದಿಗೆ ಮಾತುಕತೆ ನಡೆಸಿದ ಬಳಿಕ, ಟ್ರಂಪ್ ಈ ವಿಷಯ ಪ್ರಕಟಿಸಿದರು.
‘‘ನಾವು ಮಾತುಕತೆ ನಡೆಸಲಿದ್ದೇವೆ ಹಾಗೂ ನಾವು ನಿಜವಾಗಿಯೂ ಶಾಂತಿ ಪ್ರಕ್ರಿಯೆಯೊಂದನ್ನು ಆರಂಭಿಸಲಿದ್ದೇವೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ನುಡಿದರು.
ಆದಾಗ್ಯೂ, ಎರಡು ತಂಡಗಳು ಜೂನ್ 12ರಂದು ಯಾವುದೇ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿಲ್ಲ ಎಂದರು.
ಉತ್ತರ ಕೊರಿಯದ ಮೇಲೆ ವಿಧಿಸಲಾಗಿರುವ ದಿಗ್ಬಂಧನಗಳ ಬಗ್ಗೆ ಉತ್ತರ ಕೊರಿಯದ ಪ್ರತಿನಿಧಿ ಕಿಮ್ ಯಾಂಗ್ ಚೋಲ್ ಜೊತೆ ಮಾತನಾಡಿರುವುದಾಗಿ ಟ್ರಂಪ್ ತಿಳಿಸಿದರು. ನೂರಾರು ಹೊಸ ದಿಗ್ಬಂಧನಗಳನ್ನು ವಿಧಿಸಲು ಅಮೆರಿಕ ಸಿದ್ಧತೆ ಮಾಡಿಕೊಂಡಿದೆ, ಆದರೆ ಮಾತುಕತೆಗಳು ಜಾರಿಯಲ್ಲಿರುವಾಗ ಅವುಗಳನ್ನು ಅನುಷ್ಠಾನಗೊಳಿಸುವುದಿಲ್ಲ ಎಂದರು.
‘‘ನಾವು ಇಷ್ಟೊಂದು ಚೆನ್ನಾಗಿ ಮಾತನಾಡುತ್ತಿರುವಾಗ ನಾನು ಯಾಕೆ ಹಾಗೆ ಮಾಡುತ್ತೇನೆ?’’ ಎಂದು ಅವರು ಪ್ರಶ್ನಿಸಿದರು.
‘‘ಉತ್ತರ ಕೊರಿಯದ ವಿರುದ್ಧ ವಿಧಿಸಲಾಗಿರುವ ದಿಗ್ಬಂಧನಗಳನ್ನು ತೆರವುಗೊಳಿಸುವ ದಿನವನ್ನು ನಾನು ಎದುರು ನೋಡುತ್ತಿದ್ದೇನೆ’’ ಎಂದು ಟ್ರಂಪ್ ನುಡಿದರು. ‘‘ಇನ್ನು ಮುಂದೆ ‘ಗರಿಷ್ಠ ಒತ್ತಡ’ ಪದವನ್ನು ಬಳಸಲೂ ನಾನು ಬಯಸುವುದಿಲ್ಲ’’ ಎಂದರು.
ಉತ್ತರ ಕೊರಿಯದ ಹೇಳಿಕೆಗಳಲ್ಲಿ ಭಾರೀ ಕೋಪವಿದೆ ಹಾಗೂ ಬಹಿರಂಗ ವೈರತ್ವವಿದೆ ಎಂದು ಆರೋಪಿಸಿ, ಪ್ರಸ್ತಾಪಿತ ಶೃಂಗಸಭೆಯಿಂದ ಟ್ರಂಪ್ ಹಿಂದಕ್ಕೆ ಸರಿದಿರುವುದನ್ನು ಸ್ಮರಿಸಬಹುದಾಗಿದೆ. ಈ ಸಂಬಂಧ ಮೇ 24ರಂದು ಟ್ರಂಪ್ ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್‌ಗೆ ಪತ್ರವೊಂದನ್ನು ಬರೆದಿದ್ದರು.