ದಿಲ್ಲಿ ದರ್ಬಾರ್

Update: 2018-06-02 18:30 GMT

ಮೋದಿಯ ಫರ್ಮಾನು 
ಈಗ ಬಿಜೆಪಿ ಸಂಸದರಿಗೆ ಸಾಮಾಜಿಕ ಮಾಧ್ಯಮಗಳು ಅತ್ಯಾಪ್ತ ವಿಷಯವಾಗಿಬಿಟ್ಟಿವೆ. ಪ್ರಧಾನಿ ಪ್ರತೀ ತಿಂಗಳೂ ಅನೌಪಚಾರಿಕವಾಗಿ ಐವರು ಅತ್ಯುತ್ತಮ ಸಂಸದರನ್ನು ಆಯ್ಕೆ ಮಾಡುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿ ಇರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಧಾನಿಯವರ ಗಮನ ಸೆಳೆಯಲು ಸಂಸದರು ಸಾಮಾಜಿಕ ಮಾಧ್ಯಮದ ಮೊರೆ ಹೋಗುತ್ತಿದ್ದಾರೆ. 2019ರ ಚುನಾವಣೆಯ ಸೆಣಸಾಟ ಭೂಮಿಯ ಮೇಲೆ ನಡೆಯುತ್ತದೆ, ಸಾಮಾಜಿಕ ಮಾಧ್ಯಮದಲ್ಲಿ ಅಲ್ಲ ಎಂದು ಕೆಲವು ನಾಸ್ತಿಕವಾದಿಗಳು ಹೇಳುತ್ತಲೇ ಬರುತ್ತಿದ್ದಾರೆ. ಆದರೆ, ಸಾಮಾಜಿಕ ಮಾಧ್ಯಮಗಳು ಚುನಾವಣೆ ಗೆಲ್ಲಲು ಒಂದು ಸಾಧನವಾಗಿದೆ ಎಂಬ ವಿಶ್ವಾಸ ಹೊಂದಿರುವ ಪ್ರಧಾನಿ ಮೋದಿ ಈ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲಾ ಕಾರ್ಯಗಳನ್ನೂ ಮಾಡುತ್ತಿದ್ದಾರೆ. ಬಿಜೆಪಿ ಸಂಸದರು ಕೆಲವು ಆಪ್ತ ಸಲಹೆ ನೀಡುವ ಸಂಸ್ಥೆಗಳನ್ನು ನೇಮಿಸಿಕೊಂಡು ಪ್ರಧಾನಿಯವರಿಂದ ಶ್ಲಾಘನೆ ಪಡೆಯುವುದು ಒಳ್ಳೆಯದು.



ಸಂಬಿತ್ ಪಾತ್ರರ ಹೇಳಿಕೆ

ಇಂದಿನ ದಿನಗಳಲ್ಲಿ ಪರಿಸ್ಥಿತಿ ವಿರೋಧ ಪಕ್ಷದವರಿಗೆ ಪೂರಕವಾಗಿದೆ ಎನ್ನಬಹುದು. ಉತ್ತರಪ್ರದೇಶದ ಕೈರಾನಾದಲ್ಲಿ ಎಸ್ಪಿ, ಬಿಎಸ್ಪಿ ಹಾಗೂ ಕಾಂಗ್ರೆಸ್ ಒಕ್ಕೂಟದ ಬಲದಿಂದ ಆರ್‌ಜೆಡಿ ಅಭ್ಯರ್ಥಿ ತಬಸ್ಸುಮ್ ಹಸನ್ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ವಿಪಕ್ಷಗಳ ಒಗ್ಗಟ್ಟಿನೆದುರು ನಿರುತ್ತರವಾದ ಬಿಜೆಪಿ ತನ್ನ ವಶದಲ್ಲಿದ್ದ ಕ್ಷೇತ್ರವನ್ನು ಬಿಟ್ಟುಕೊಡಬೇಕಾಯಿತು. ಕೈರಾನಾ ಕ್ಷೇತ್ರವು ಮುಸ್ಲಿಮ್ ಹಾಗೂ ಜಾಟ್ ಸಮುದಾಯದ ನಡುವಿನ ಒಗ್ಗಟ್ಟಿನ ಪರೀಕ್ಷೆಯಾಗಿತ್ತು. ಈ ಪರೀಕ್ಷೆಯಲ್ಲಿ ಪಾಸಾಗಿರುವ ಕಾರಣ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆಯುವುದು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಒಕ್ಕೂಟಕ್ಕೆ ಕಠಿಣ ಸವಾಲಾಗಬಹುದು ಎಂದು ಹಲವರು ನಿರೀಕ್ಷಿಸುತ್ತಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿ ಬಹುತೇಕ ಕ್ಷೇತ್ರಗಳಲ್ಲಿ ಸೋಲುಂಡರೂ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುವಾಗ ಪಕ್ಷದ ಸಾಧನೆಯನ್ನು ಸಮರ್ಥಿಸಿಕೊಂಡರು. ಕಾಂಗ್ರೆಸ್ ಪರಿಸ್ಥಿತಿಯನ್ನು ನೋಡಿ, ಆ ಪಕ್ಷ ಹೆಚ್ಚಿನ ಸ್ಥಾನ ಗೆಲ್ಲಲೂ ಇಲ್ಲ ಅಥವಾ ಇದ್ದ ಸ್ಥಾನವನ್ನು ಕಳೆದುಕೊಳ್ಳಲಿಲ್ಲ. ತನಗೆ ಗೆಲ್ಲಲು ಸಾಧ್ಯವಾಗದಿದ್ದರೂ ಇತರರು ಗೆದ್ದಾಗ ಸಂಭ್ರಮಿಸುವ ‘ಚಿಯರ್ ಗರ್ಲ್ಸ್’ಗೆ ಆ ಪಕ್ಷವನ್ನು ಹೋಲಿಸಬಹುದು ಎಂದು ಪಾತ್ರ ಪ್ರತಿಕ್ರಿಯಿಸಿದರು. ಪಕ್ಷದ ವೈಫಲ್ಯವನ್ನು ಮರೆಮಾಚಿ ಇತರ ಪಕ್ಷದೆಡೆಗೆ ಬೆರಳು ತೋರಿಸುವ ಬಿಜೆಪಿಯ ನಡೆಯನ್ನು ಇತರ ಪಕ್ಷದ ವಕ್ತಾರರೂ ಗಮನಿಸಿರಬಹುದು.


ಮನೆ ಹುಡುಕುತ್ತಿರುವ ಸಿಂಧಿಯಾ
ಜ್ಯೋತಿರಾದಿತ್ಯ ಸಿಂಧಿಯಾ ಭೋಪಾಲ್‌ನಲ್ಲಿ ಮನೆಯೊಂದರ ಹುಡುಕಾಟದಲ್ಲಿದ್ದಾರೆ. ಭೋಪಾಲದಲ್ಲಿ ಮನೆಯೊಂದನ್ನು ಒದಗಿಸುವಂತೆ ಹಿರಿಯ ಕಾಂಗ್ರೆಸ್ ಸಂಸದ ಸಿಂಧಿಯಾ ಮಧ್ಯಪ್ರದೇಶ ಸರಕಾರಕ್ಕೆ ಪತ್ರವೊಂದನ್ನು ಬರೆದಿದ್ದಾರೆ. 16 ವರ್ಷದಿಂದ ಸಂಸದರಾಗಿ ಕಾರ್ಯ ನಿರ್ವಹಿಸಿರುವ ಸಿಂಧಿಯಾ ಇದೇ ಪ್ರಥಮ ಬಾರಿಗೆ, ರಾಜ್ಯದಿಂದ ಸಂಸದರಾಗಿ ಆಯ್ಕೆಯಾಗಿರುವವರಿಗೆ ಸರಕಾರಿ ನಿವಾಸ ಒದಗಿಸಿಕೊಡುವ ಯೋಜನೆಯನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ. ನವೆಂಬರ್‌ನಲ್ಲಿ ಮಧ್ಯಪ್ರದೇಶದಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಭೋಪಾಲದಲ್ಲಿ ಮನೆ ಮಾಡಿದರೆ ಮುಂದಿನ ದಿನದಲ್ಲಿ ಮುಖ್ಯಮಂತ್ರಿ ಪಟ್ಟಕ್ಕೆ ಸ್ಪರ್ಧೆ ಏರ್ಪಟ್ಟರೆ ಅನುಕೂಲವಾಗಬಹುದು ಎಂಬುದು ಸಿಂಧಿಯಾ ಲೆಕ್ಕಾಚಾರ ಎಂದು ಕಾಂಗ್ರೆಸ್ ಪಕ್ಷದ ಕೆಲವರು ಮಾತಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ನ ಮಧ್ಯಪ್ರದೇಶ ಘಟಕದ ಅಧ್ಯಕ್ಷರಾಗಿ ಕಮಲ್‌ನಾಥ್ ಹಾಗೂ ಪಕ್ಷದ ಸಮನ್ವಯ ಸಮಿತಿ ಅಧ್ಯಕ್ಷರಾಗಿ ದಿಗ್ವಿಜಯ್ ಸಿಂಗ್‌ರನ್ನು ನೇಮಿಸಲಾಗಿದೆ. ಬಹುಷಃ ಸಿಂಧಿಯಾ ರಾಜ್ಯದಲ್ಲಿ ಮೂರನೇ ಅಧಿಕಾರ ಕೇಂದ್ರವನ್ನು ಸ್ಥಾಪಿಸುವ ಇರಾದೆಯಲ್ಲಿದ್ದಾರೆ.


ನಿರ್ಮಲಾ ಸೀತಾರಾಮನ್ ಮತ್ತು ಹೊಣೆಗಾರಿಕೆ
ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ನಾಲ್ಕನೇ ವರ್ಷಾಚರಣೆ ಸಂದರ್ಭದಲ್ಲಿ ಸರಕಾರದ ಸಾಧನೆಯನ್ನು ಸುದ್ದಿಮಾಧ್ಯಮದ ಪತ್ರಕರ್ತರಿಗೆ ಪ್ರಾತ್ಯಕ್ಷಿಕೆ ಸಹಿತ ವಿವರಿಸುವ ಹೊಣೆಯನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ವಹಿಸಲಾಗಿತ್ತು. ಪಕ್ಷದ ಅಧ್ಯಕ್ಷರು ವಹಿಸಿಕೊಟ್ಟ ಕೆಲಸವನ್ನು ಬಿಜೆಪಿ ಸಚಿವರು ಹೃತ್ಪೂರ್ವಕವಾಗಿ ನಿರ್ವಹಿಸುತ್ತಾರೆ. ಆದರೆ ಅಮಿತ್ ಶಾ ನಿರೀಕ್ಷಿಸಿದ ರೀತಿಯಲ್ಲಿ ನಿರ್ಮಲಾ ಸೀತಾರಾಮನ್ ಕೆಲಸ ನಿರ್ವಹಿಸಿಲ್ಲ ಎಂದು ಕಾಣುತ್ತದೆ. ನಿರ್ಮಲಾ ಇಂಗ್ಲಿಷ್‌ನಲ್ಲಿ ವಿವರಿಸುತ್ತಿದ್ದರೆ ಓರ್ವ ಪತ್ರಕರ್ತರು (ಬಿಜೆಪಿ ಹೇಳಿಕೊಳ್ಳುವ ‘ಭರತವರ್ಷದ ಶ್ರೇಷ್ಠತೆ’ಯನ್ನು ನೆನಪಿಸುವಂತೆ) ಹಿಂದಿಯಲ್ಲಿ ವಿವರಿಸುವಂತೆ ಕೇಳಿಕೊಂಡರು. ಆದರೆ ಅವರು ಪ್ರಯತ್ನಿಸಿದರೂ ಹಿಂದಿ ಭಾಷಣವನ್ನು ಮುಂದುವರಿಸಲು ಅವರಿಂದ ಸಾಧ್ಯವಾಗಲಿಲ್ಲ. ಅಂತಿಮವಾಗಿ ಇಂಗ್ಲಿಷ್ ಭಾಷೆಯ ಪ್ರಭುತ್ವಕ್ಕೇ ಮನ್ನಣೆ ದೊರಕಿತು.


ಸಿಂಘ್ವಿಯವರ ಕೃತಿ ಬಿಡುಗಡೆ
ಕಾಂಗ್ರೆಸ್ ಮುಖಂಡರು ಅಧಿಕಾರದಿಂದ ಹೊರಗಿರುವ ಕಾರಣ ಅವರಿಗೆ ಪುಸ್ತಕ ಬರೆಯಲು ಸಾಕಷ್ಟು ಸಮಯ ದೊರೆತಿದೆ ಎನ್ನಬಹುದು. ಪಕ್ಷದ ಇಬ್ಬರು ಮುಖಂಡರಾದ ಸಲ್ಮಾನ್ ಖುರ್ಷಿದ್ ಮತ್ತು ಅಭಿಷೇಕ್ ಸಿಂಘ್ವಿ ಕಳೆದ ವಾರ ತಮ್ಮ ಕೃತಿಯನ್ನು ಬಿಡುಗಡೆಗೊಳಿಸಿದರು. ಮಾಜಿ ಸಚಿವರಾದ ಮನೀಷ್ ತಿವಾರಿ ಹಾಗೂ ಕಪಿಲ್ ಸಿಬಲ್ ಕೂಡಾ ಕೃತಿ ಬರೆಯುವ ಕುರಿತು ಸಿದ್ಧತೆ ನಡೆಸುತ್ತಿರುವಂತೆ ಕಾಣಿಸುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿರಲಿ, ಇಲ್ಲದಿರಲಿ ಪುಸ್ತಕ ಬರೆಯುವ ಕಾರ್ಯವನ್ನು ಮುಂದುವರಿಸುತ್ತಿರುವ ಜೈರಾಮ್ ರಮೇಶ್ ಅವರು ಸಿಂಘ್ವಿಯವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕೃತಿ ಕುರಿತು ಮಾತನಾಡಿದರು. ಆದರೆ ಎಲ್ಲರ ಗಮನ ಸೆಳೆದಿದ್ದು ಮಾತ್ರ ಸಿಂಘ್ವಿಯವರೇ. ತಮ್ಮ ಭಾಷಣದಲ್ಲಿ ಅವರು ಅಮೆರಿಕ ಅಧ್ಯಕ್ಷರಾಗಿದ್ದ ರೊನಾಲ್ಡ್ ರೇಗನ್‌ರವರ ಮಾತನ್ನು ಉಲ್ಲೇಖಿಸಿದರು- ರಾಜಕೀಯವು ಕೆಟ್ಟ ವೃತ್ತಿಯಲ್ಲ. ನೀವು ಇದರಲ್ಲಿ ಯಶಸ್ವಿಯಾದರೆ ಹಲವು ಪುರಸ್ಕಾರ ಸಲ್ಲುತ್ತದೆ. ಯಶಸ್ವಿಯಾಗದಿದ್ದರೆ ಪುಸ್ತಕ ಬರೆಯಬಹುದು- ಎಂಬ ರೇಗನ್ ಮಾತನ್ನು ಸಿಂಘ್ವಿ ಸ್ಮರಿಸಿಕೊಂಡರು. ಹಲವು ಕಾಂಗ್ರೆಸ್ ನಾಯಕರು ತಾವು ಯಶಸ್ವಿಯಾಗಿಲ್ಲ ಎಂಬುದನ್ನು ಒಪ್ಪಿಕೊಳ್ಳಲಾರರು. ಆದರೆ ತಾವು ಪುಸ್ತಕ ಬರೆದಿರುವುದನ್ನು ಮಾತ್ರ ಒಪ್ಪಿಕೊಳ್ಳಲು ಅವರು ಸಿದ್ಧರಿದ್ದಾರೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News