ಎಚ್ಚರಿಕೆ, ಈ ಅಚ್ಚರಿಯ ಲಕ್ಷಣ ಮಹಿಳೆಯರಲ್ಲಿ ಹೃದಯಾಘಾತದ ಸಂಕೇತವಾಗಿರಬಹುದು

Update: 2018-06-03 12:18 GMT

ಹೃದಯಾಘಾತದ ಅಪಾಯ ಮಧ್ಯವಯಸ್ಕ,ಅತಿಯಾದ ದೇಹತೂಕ ಹೊಂದಿರುವ ವ್ಯಕ್ತಿಗಳಿಗೆ ಮಾತ್ರ ಸೀಮಿತವಲ್ಲ. ವಾಸ್ತವದಲ್ಲಿ 55 ವರ್ಷಕ್ಕಿಂತ ಕೆಳಗಿನ ವಯೋಮಾನದ ಮಹಿಳೆಯರು ಹೃದ್ರೋಗಗಳಿಗೆ ಗುರಿಯಾಗುವ ಸಾಧ್ಯತೆ ಪುರುಷರಷ್ಟೇ ಅಥವಾ ಅವರಿಗಿಂತ ಕೊಂಚ ಹೆಚ್ಚೇ ಇರುತ್ತದೆ ಎಂದು ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿಯ ಜರ್ನಲ್‌ನಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯೊಂದು ಬೆಟ್ಟು ಮಾಡಿದೆ. ಇಂತಹ ಅಪಾಯಗಳ ಹೊರತಾಗಿಯೂ ಈ ಮಾರಣಾಂತಿಕ ಸ್ಥಿತಿಗೆ ಮಹಿಳೆಯರು ಚಿಕಿತ್ಸೆ ಪಡೆದುಕೊಳ್ಳುವುದು ಕಡಿಮೆ ಎನ್ನುತ್ತದೆ ಅಮೆರಿಕನ್ ಹಾರ್ಟ್ ಅಸೋಸಿಯೇಷನ್(ಎಎಚ್‌ಎ)ನ ಇತ್ತೀಚಿನ ವರದಿ. ಮಹಿಳೆಯರಿಗೇ ವಿಶಿಷ್ಟವಾಗಿರುವ ಹೃದಯಾಘಾತದ ಅಪಾಯವನ್ನು ಸೂಚಿಸುವ, ಸದ್ದಿಲ್ಲದ ಲಕ್ಷಣಗಳನ್ನು ಗುರುತಿಸುವಲ್ಲಿ ಹೆಚ್ಚಿನವರು ವಿಫಲರಾಗುವುದು ಇದಕ್ಕೆ ಮುಖ್ಯ ಕಾರಣವಾಗಿದೆ.

ಎದೆನೋವು ಅಥವಾ ಹೃದಯದ ಮೇಲೆ ಭಾರ ಹೇರಿದಂತಹ ಅನುಭವ ಹೃದಯಾಘಾತದ ಅತ್ಯಂತ ಸಾಮಾನ್ಯ ಲಕ್ಷಣಗಳಾಗಿವೆ ಯಾದರೂ, ನೀವು ಗುರುತಿಸಲೇಬೇಕಾದ, ಅಚ್ಚರಿಯನ್ನುಂಟು ಮಾಡುವ ಲಕ್ಷಣವೊಂದಿದೆ. ಹೃದಯದ ಸಮಸ್ಯೆಗಳಿರುವ ಮಹಿಳೆಯರು ದವಡೆ ನೋವನ್ನು ಅನುಭವಿಸುವ ಸಾಧ್ಯತೆಗಳು ಹೆಚ್ಚು ಎನ್ನುತ್ತಾರೆ ಓಹಿಯೊ ಸ್ಟೇಟ್ ಯುನಿವರ್ಸಿಟಿಯ ವೆಕ್ಸ್‌ನರ್ ಮೆಡಿಕಲ್ ಸೆಂಟರ್‌ನ ವಿಮೆನ್ಸ್ ಕಾರ್ಡಿಯೊವಸ್ಕುಲರ್‌ಹೆಲ್ತ್ ಪ್ರೋಗ್ರಾಮ್‌ನ ಕ್ಲಿನಿಕಲ್ ಡೈರೆಕ್ಟರ್ ಡಾ.ಲಕ್ಷ್ಮೀ ಮೆಹತಾ. ಅವರು ಎಎಚ್‌ಎ ವರದಿಯ ಮುಖ್ಯ ಲೇಖಕಿಯೂ ಆಗಿದ್ದಾರೆ.

ಬೆನ್ನಿನ ಮೇಲ್ಭಾಗದಲ್ಲಿ ಮತ್ತು ತೋಳುಗಳಲ್ಲಿ ನೋವು,ತೀವ್ರ ಆಯಾಸ,ಎದೆಯುರಿ ಇವೂ ಮಹಿಳೆಯರಿಗೇ ವಿಶಿಷ್ಟವಾಗಿರುವ ಹೃದ್ರೋಗ ಲಕ್ಷಣಗಳಲ್ಲಿ ಸೇರಿವೆ. ಇದರೊಂದಿಗೆ ‘ಯಾಕೋ ಏನೂ ಕೂಡುತ್ತಿಲ್ಲ’ಎಂದು ಮಹಿಳೆಯರಿಗೆ ಅನ್ನಿಸುತ್ತಿದ್ದರೆ ಅದೂ ಈ ಲಕ್ಷಣಗಳಲ್ಲಿ ಸೇರುತ್ತದೆ.

ಹೃದಯದಿಂದ ರಕ್ತ ಪರಿಚಲನೆಯ ಕುಗ್ಗುವಿಕೆ ಮಹಿಳೆಯರಲ್ಲಿ ್ಲದವಡೆ,ಕುತ್ತಿಗೆ ಅಥವಾ ಬೆನ್ನುನೋವುಗಳಿಗೆ ಕಾರಣವಾಗುತ್ತದೆ ಎಂದು ಎಎಚ್‌ಎ ವರದಿಯು ಹೇಳಿದೆ. ಆದರೆ ದವಡೆ ನೋವು ಮತ್ತು ಶರೀರದ ಮೇಲ್ಭಾಗದಲ್ಲಿ ಅಸ್ವಸ್ಥತೆ ಮಹಿಳೆಯರಲ್ಲಿಯೇ ಏಕೆ ಉಂಟಾಗುತ್ತದೆ ಮತ್ತು ಪುರುಷರನ್ನೇಕೆ ಕಾಡುವುದಿಲ್ಲ ಎನ್ನುವುದಕ್ಕೆ ವೈಜ್ಞಾನಿಕ ಕಾರಣವನ್ನು ವೈದ್ಯಕೀಯ ತಜ್ಞರು ಇನ್ನಷ್ಟೇ ಕಂಡುಕೊಳ್ಳಬೇಕಿದೆ.

ಮಹಿಳೆಯರಲ್ಲಿ ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಮಹಿಳೆಯರು ತಮ್ಮ ಕಾಯಿಲೆಗಳಿಗೆ ಚಿಕಿತ್ಸೆ ಪಡೆದುಕೊಳ್ಳುವುದನ್ನು ವಿಳಂಬಿಸುತ್ತಾರೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಆದರೆ ಹೀಗೆ ಕಡೆಗಣಿಸುವುದರಿಂದ ಅವರ ಆರೋಗ್ಯದ ಮೇಲೆ ಸರಿಪಡಿಸಲಾಗದಷ್ಟು ಗಂಭೀರ ಪರಿಣಾಮಗಳು ಉಂಟಾಗುತ್ತವೆ.

ಮಹಿಳೆಯರು ಕಾರ್ಡಿಯೊಜನಿಕ್ ಶಾಕ್‌ಗೆ ಗುರಿಯಾಗುವ ಅಪಾಯವನ್ನು ಎದುರಿಸುತ್ತಿರುತ್ತಾರೆ ಮತ್ತು ಸಾಕಷ್ಟು ರಕ್ತವನ್ನು ಪಂಪ್ ಮಾಡಲು ಹೃದಯವು ಏಕಾಏಕಿ ಅಸಮರ್ಥಗೊಂಡಾಗ ಇದು ಸಂಭವಿಸುತ್ತದೆ ಎನ್ನುತ್ತಾರೆ ಮೆಹತಾ.

ಯಾವುದೇ ಕಾಯಿಲೆಯ ಲಕ್ಷಣಗಳು ಕಂಡುಬಂದಾಗ ಸುದೀರ್ಘ ಕಾಲ ಅವುಗಳನ್ನು ಕಡೆಗಣಿಸಿ,ತೀವ್ರಗೊಂಡ ಹಂತದಲ್ಲಿ ವೈದ್ಯರ ಬಳಿಗೆ ಓಡಿದರೆ ಎಂತಹ ಉತ್ತಮ ಚಿಕಿತ್ಸೆ ನೀಡಿದರೂ ಪರಿಣಾಮಕಾರಿ ಯಾಗುವುದು ಕಷ್ಟ. ಹೀಗಾಗಿ ನಂತರ ವಿಷಾದ ಪಡುವುದಕ್ಕಿಂತ ಮೊದಲೇ ಜಾಗ್ರತೆ ವಹಿಸುವುದು ಉತ್ತಮ. ಮಹಿಳೆಯರು ತಮ್ಮ ಹೃದಯವು ಅಪಾಯಕ್ಕೆ ಸಿಲುಕುವುದನ್ನು ಸೂಚಿಸುವ ಲಕ್ಷಣಗಳ ಬಗ್ಗೆ ವಿಶೇಷ ನಿಗಾ ವಹಿಸಿದರೆ ಹೆಚ್ಚು ಕಾಲ ಸುಖವಾಗಿ ಬದುಕಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News