ನ್ಯೂಕ್ಲಿಯರ್ ಸಾಮರ್ಥ್ಯದ ಪ್ರಕ್ಷೇಪಕ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ
ಬಾಲಸೋರ್, ಜೂ. 3: ಐದು ಸಾವಿರ ಕಿ.ಮೀ. ವ್ಯಾಪ್ತಿಯ ದಾಳಿ ಸಾಮರ್ಥ್ಯ ಹೊಂದಿರುವ ನ್ಯೂಕ್ಲಿಯರ್ ಸಾಮರ್ಥ್ಯದ ದೇಶಿ ನಿರ್ಮಿತ ಪ್ರಕ್ಷೇಪಕ ಕ್ಷಿಪಣಿ ಅಗ್ನಿ-5ನ್ನು ಒಡಿಶಾ ಕರಾವಳಿಯ ಡಾ. ಅಬ್ದುಲ್ ಕಲಾಂ ದ್ವೀಪದಿಂದ ರವಿವಾರ ದೇಶ ಯಶಸ್ವಿಯಾಗಿ ಪರೀಕ್ಷಾರ್ಥ ಪ್ರಯೋಗ ನಡೆಸಿತು.
ನೆಲದಿಂದ ನೆಲಕ್ಕೆ ಚಿಮ್ಮುವ ಕ್ಷಿಪಣಿಯನ್ನು ಬಂಗಳಾ ಕೊಲ್ಲಿಯ ಡಾ. ಅಬ್ದುಲ್ ಕಲಾಂ ಸಮಗ್ರ ಪರೀಕ್ಷಾ ವಲಯದ ಉಡಾವಣಾ ವೇದಿಕೆ 4ರಿಂದ ಸಂಚಾರಿ ವಾಹಕದ ನೆರವಿನಿಂದ ಬೆಳಗ್ಗೆ 9.48ಕ್ಕೆ ಪರೀಕ್ಷಾರ್ಥ ಪ್ರಯೋಗ ನಡೆಸಲಾಯಿತು ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಅತ್ಯಾಧುನಿಕ ಅಗ್ನಿ-5ರ ಪರೀಕ್ಷಾರ್ಥ ಪ್ರಯೋಗ ನಡೆಸುತ್ತಿರುವುದು ಇದು ಐದನೇ ಬಾರಿ. ಕ್ಷಿಪಣಿ ಪೂರ್ಣ ದೂರ ಕ್ರಮಿಸುವ ಮೂಲಕ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ ಎಂದು ಅದು ಹೇಳಿದೆ.
ಪರೀಕ್ಷಾರ್ಥ ಪ್ರಯೋಗದ ಸಂದರ್ಭ ಕ್ಷಿಪಣಿಯ ಹಾರಾಟ ಸಾಮರ್ಥ್ಯವನ್ನು ರ್ಯಾಡರ್, ಜಾಡು ಹಿಡಿಯುವ ಸಲಕರಣೆ ಹಾಗೂ ಪರಿವೀಕ್ಷಣಾ ಕೇಂದ್ರದ ಮೂಲಕ ಗಮನಿಸಲಾಗಿತ್ತು ಹಾಗೂ ನಿಗಾ ಇರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಸರಣಿಯ ಇತರ ಕ್ಷಿಪಣಿಗಳಂತೆ ಅಗ್ನಿ-5 ಸಂಚಾರ, ಮಾರ್ಗದರ್ಶನ, ಸಿಡಿತಲೆ ಹಾಗೂ ಎಂಜಿನ್‌ಗೆ ಸಂಬಂಧಿಸಿ ಹೊಸ ತಂತ್ರಜ್ಞಾನದೊಂದಿಗೆ ಅತ್ಯಾಧುನಿಕವಾಗಿದೆ ಎಂದು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.