ಕಾಂಗ್ರೆಸ್ ಧಾರಾಳತನದ ಹಿಂದಿರುವ ದೂರದೃಷ್ಟಿ

Update: 2018-06-04 04:14 GMT

ಮುಂದೊಂದು ದಿನ ಮೈತ್ರಿ ಸರಕಾರಕ್ಕೆ ಮುಳುವಾಗಬಹುದಾಗಿದ್ದ ಒಂದು ಪ್ರಮುಖ ಚರ್ಚೆಗೆ ಕಾಂಗ್ರೆಸ್ ಆರಂಭದಲ್ಲೇ ಕತ್ತರಿ ಹಾಕಿದೆ. ಮೈತ್ರಿ ಸರಕಾರದಲ್ಲಿ ‘ಕುಮಾರಸ್ವಾಮಿ ಪೂರ್ಣಾವಧಿ ಮುಖ್ಯಮಂತ್ರಿಯೇ?’ ಎನ್ನುವ ಪ್ರಶ್ನೆಯನ್ನು ಅನಗತ್ಯವಾಗಿ ಬೆಳೆಯಲು ಬಿಡದೆ, ಆರಂಭದಲ್ಲೇ ಅದಕ್ಕೊಂದು ಗತಿ ಕಾಣಿಸಿರುವುದು ಅಚ್ಚರಿಯ ಬೆಳವಣಿಗೆ ಮಾತ್ರವಲ್ಲ, ಸಮಾಧಾನಕರ ಬೆಳವಣಿಗೆಯಾಗಿದೆ. 78 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಪಕ್ಷ 37 ಸ್ಥಾನಗಳನ್ನು ಹೊಂದಿರುವ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಲು ಒಪ್ಪಿರುವುದು ಸಂದರ್ಭಕ್ಕೆ ಅನಿವಾರ್ಯವಾಗಿತ್ತು. ಆದರೆ, ಮುಖ್ಯಮಂತ್ರಿ ಅವಧಿಯನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಸಮಾನವಾಗಿ ಹಂಚಿಕೊಳ್ಳುತ್ತವೆ ಎಂದು ಭಾವಿಸಲಾಗಿತ್ತು. ಎರಡೂವರೆ ವರ್ಷಗಳ ಬಳಿಕ ಮುಖ್ಯಮಂತ್ರಿ ಸ್ಥಾನವನ್ನು ತನ್ನದಾಗಿಸಲು ಕಾಂಗ್ರೆಸ್‌ಗೆ ಸಕಲ ಅರ್ಹತೆಯೂ ಇತ್ತು. ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿರುವುದು ಮಾತ್ರ ಕಾರಣ ಅಲ್ಲ, ಶೇಕಡಾವಾರು ಅತ್ಯಧಿಕ ಮತಗಳನ್ನೂ ತನ್ನದಾಗಿಸಿಕೊಂಡಿದೆ. ಇಷ್ಟಕ್ಕೂ ಇದರಿಂದ ಜೆಡಿಎಸ್‌ಗೆ ಲಾಭವಲ್ಲದೆ ನಷ್ಟವೇನೂ ಇದ್ದಿರಲಿಲ್ಲ. ಆದರೆ ಸಂದರ್ಭವನ್ನು ಮಾಜಿ ಪ್ರಧಾನಿ ದೇವೇಗೌಡರು ಸಂಪೂರ್ಣವಾಗಿ ತನ್ನ ಪರವಾಗಿ ಪರಿವರ್ತಿಸಿಕೊಂಡಿದ್ದಾರೆ.

ಮೊದಲ ಬಾರಿಗೆ ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಪ್ರತಿಷ್ಠೆಯನ್ನು ಸಂಪೂರ್ಣ ಪಕ್ಕಕ್ಕಿಟ್ಟು ವಾಸ್ತವಕ್ಕೆ ಮುಖ ಮಾಡಿ ನಿಂತಿದೆ. ತಕ್ಷಣದ ಮುಖ್ಯಮಂತ್ರಿ ಸ್ಥಾವನ್ನು ಅದು ಗಣನೆಗೆ ತೆಗೆದುಕೊಳ್ಳದೆ, ಮುಂದಿರುವ ಪ್ರಧಾನಮಂತ್ರಿ ಸ್ಥಾನದ ಮೇಲೆ ಕಣ್ಣು ನೆಟ್ಟಿದೆ. ಮುಖ್ಯವಾಗಿ ರಾಜ್ಯದಲ್ಲಿ ಕಾಂಗ್ರೆಸ್‌ನ ನಿರೀಕ್ಷೆ ತಲೆಕೆಳಗಾಗಿರುವುದು 2019ರ ಮಹಾಚುನಾವಣೆಯ ಬಗ್ಗೆ ಗಂಭೀರವಾಗಿ ತಲೆಕೆಡಿಸುವಂತೆ ಮಾಡಿದೆ. ಆದುದರಿಂದಲೇ, ಕಾಂಗ್ರೆಸ್ ಪಕ್ಷ ರಾಷ್ಟ್ರಮಟ್ಟದಲ್ಲಿ ಬೇರೆ ಬೇರೆ ಸಣ್ಣ ಪುಟ್ಟ ಪಕ್ಷಗಳ ಜೊತೆಗೆ ಮೈತ್ರಿಗಳನ್ನು ಗಟ್ಟಿ ಮಾಡುತ್ತಾ, ಎನ್‌ಡಿಎಗೆ ಪ್ರಬಲ ಸವಾಲು ಒಡ್ಡಲು ಹೊರಟಿದೆ. ಅದರ ಪರಿಣಾಮವಾಗಿಯೇ, ಕುಮಾರಸ್ವಾಮಿಯನ್ನು ಪೂರ್ಣಾವಧಿ ಮುಖ್ಯಮಂತ್ರಿ ಮಾಡುವ ಬಗ್ಗೆ ಧಾರಾಳತನ ತೋರಿಸಿದೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡುವ ಬಗ್ಗೆ ಸ್ಪಷ್ಟ ಸೂಚನೆಯನ್ನು ಕಾಂಗ್ರೆಸ್ ನೀಡಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಜೊತೆಯಾಗಿ ಲೋಕಸಭಾ ಚುನಾವಣೆಯನ್ನು ಎದುರಿಸಿದಲ್ಲಿ ಅದು ಮಹತ್ತರ ಫಲಿತಾಂಶ ನೀಡುವುದರಲ್ಲಿ ಸಂಶಯವಿಲ್ಲ. ಕುಮಾರಸ್ವಾಮಿಯನ್ನು ಪೂರ್ಣಾವಧಿ ಮುಖ್ಯಮಂತ್ರಿಯಾಗಿಸಿದ ಋಣವನ್ನು ರಾಹುಲ್‌ಗಾಂಧಿಯನ್ನು ಪ್ರಧಾನಿಯಾಗಿಸುವ ಮೂಲಕ ಜೆಡಿಎಸ್ ತೀರಿಸಬೇಕಾಗಿದೆ. ಕಾಂಗ್ರೆಸ್‌ನ ಈ ರಾಜಕೀಯ ನಿಲುವು ರಾಜ್ಯ ಜೆಡಿಎಸ್‌ನ ಪಾಲಿಗೆ ವರವಾಗಿ ಪರಿಣಮಿಸುತ್ತಿದೆ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರೆ ಖಂಡಿತವಾಗಿಯೂ ಕುಮಾರ ಸ್ವಾಮಿ ಪೂರ್ಣಾವಧಿ ಮುಖ್ಯಮಂತ್ರಿಯಾಗುತ್ತಿರಲಿಲ್ಲ. ಯಡಿಯೂರಪ್ಪ ಜೊತೆಗೆ ಅಧಿಕಾರವನ್ನು ಹಂಚಿಕೊಳ್ಳಬೇಕಾಗಿತ್ತು.

ಬಿಜೆಪಿಯೊಳಗಿರುವ ಒಳಸುಳಿಗಳು ಅದಕ್ಕೂ ಅವಕಾಶ ಕೊಡುವುದು ಕಷ್ಟವಿತ್ತು. ಇದೀಗ ಜೆಡಿಎಸ್‌ನ ರೊಟ್ಟಿ ತಾನಾಗಿಯೇ ಜಾರಿ ತುಪ್ಪಕ್ಕೆ ಬಿದ್ದಂತಾಗಿದೆ. ಕಳೆದ ಚುನಾವಣೆಯ ಫಲಿತಾಂಶ ಹೊರ ಬೀಳುವವರೆಗೂ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿತ್ತು. ಚುನಾವಣಾ ಫಲಿತಾಂಶ ಜೆಡಿಎಸ್‌ಗೆ ಭಾರೀ ಗೆಲುವನ್ನೇನೂ ತಂದುಕೊಟ್ಟಿರಲಿಲ್ಲ. ಹೀಗಿದ್ದರೂ ಅದು 78 ಶಾಸಕರನ್ನು ಹೊಂದಿರುವ ಕಾಂಗ್ರೆಸ್‌ನ ಮೇಲೆ ತನ್ನ ನಿಯಂತ್ರಣವನ್ನು ಸಾಧಿಸುತ್ತಿರುವುದು ರಾಜ್ಯ ಕಾಂಗ್ರೆಸ್‌ನ ಅತಿರಥರಿಗೆ ಇರಿಸುಮುರಿಸಿನ ವಿಷಯವಾಗಿದೆ. ಮೈತ್ರಿ ಸರಕಾರ ರಚನೆಯಾದ ಬೆನ್ನಿಗೇ ಕಾಂಗ್ರೆಸ್‌ನ ಹಲವು ನಾಯಕರು ‘ಪೂರ್ಣಾವಧಿ ಮುಖ್ಯಮಂತ್ರಿ ವಿಷಯ ಇತ್ಯರ್ಥವಾಗಿಲ್ಲ’ ಎಂದಿದ್ದರು. ಇದೀಗ ದಿಲ್ಲಿ ವರಿಷ್ಠರೇ ಕುಮಾರಸ್ವಾಮಿ ಪೂರ್ಣಾವಧಿ ಮುಖ್ಯಮಂತ್ರಿ ಎಂದು ಘೋಷಿಸಿರುವುದು ಅವರಿಗೆ ನುಂಗಲಾಗದ ಬಿಸಿತುಪ್ಪವಾಗಿದೆ. ಕಾಂಗ್ರೆಸ್‌ನ ನಿರ್ಧಾರ ಲೋಕಸಭಾ ಚುನಾವಣೆಯಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತದೆಯೋ ಕಾಲವೇ ಹೇಳಬೇಕು.

ಆದರೆ ಇದು ರಾಜ್ಯದಲ್ಲಿ ಜೆಡಿಎಸ್ ಬೇರನ್ನು ಗಟ್ಟಿಯಾಗಿ ಇಳಿಸಲಿದೆ. ಈಗಾಗಲೇ ದೊಡ್ಡಣ್ಣನಂತೆ ಮೆರೆಯುತ್ತಿದ್ದ ಕಾಂಗ್ರೆಸ್ ನಾಯಕರು ಐದು ವರ್ಷ ಜೆಡಿಎಸ್‌ನ ಮುಂದೆ ತಗ್ಗಿ ಬಗ್ಗಿ ನಡೆಯುವುದೆಂದರೆ ಪರೋಕ್ಷವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸುವುದೆಂದೇ ಅರ್ಥ. ಈಗಾಗಲೇ ಹಲವು ಮಹತ್ವದ ಖಾತೆಗಳು ಜೆಡಿಎಸ್ ವಶವಾಗಿವೆ. ನೋಟು ನಿಷೇಧದ ಬಳಿಕ ಆರ್ಥಿಕವಾಗಿ ಬಿಕ್ಕಟ್ಟಿನಲ್ಲಿರುವ ಜೆಡಿಎಸ್ ಪಕ್ಷಕ್ಕೆ ಈ ಖಾತೆಗಳು ಸಂಜೀವಿನಿಯಾಗಲಿವೆೆ. ಪಕ್ಷವನ್ನು ಇನ್ನಷ್ಟು ಸದೃಢವಾಗಿಸುವುದಕ್ಕೆ, ತಳಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸುವುದಕ್ಕೆ ಇದು ಸಹಕಾರಿಯಾಗಲಿವೆ. ಬರೇ 37 ಸ್ಥಾನಗಳನ್ನಿಟ್ಟುಕೊಂಡು ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಮುಂದುವರಿಯುವುದು, ಪಕ್ಷದೊಳಗೆ ಆತ್ಮವಿಶ್ವಾಸವನ್ನು ಮೂಡಿಸಲಿದೆ. ಅಂದರೆ ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿಗೆ, ಇನ್ನಷ್ಟು ಬಲಿಷ್ಟವಾಗಿ ಜೆಡಿಎಸ್ ಹೊರಹೊಮ್ಮಲಿದೆ.

ಆದರೆ ಸನ್ನಿವೇಶ ಅಲ್ಲಿಯವರೆಗೆ ಮುಟ್ಟುವುದು ಅನುಮಾನ. ಯಾಕೆಂದರೆ, ಕುಮಾರಸ್ವಾಮಿ ಪೂರ್ಣಾವಧಿ ಮುಖ್ಯಮಂತ್ರಿಯಾಗುವುದರ ಕುರಿತಂತೆ ಈಗಾಗಲೇ ಕೆಲವು ಕಾಂಗ್ರೆಸ್ ನಾಯಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್‌ನ ವರ್ಚಸ್ಸು ಕುಗ್ಗುವ ಕುರಿತಂತೆ ವರಿಷ್ಠರಲ್ಲಿ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಆದುದರಿಂದ ಲೋಕಸಭಾ ಚುನಾವಣೆಯವರೆಗೆ ಮೈತ್ರಿ ಮುಂದುವರಿಯಬಹುದು. ಆದಾದ ಬಳಿಕ, ಕಾಂಗ್ರೆಸ್‌ನೊಳಗೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಜಟಾಪಟಿ ಆರಂಭವಾಗಬಹುದು. ಆದರೆ ಈಗಾಗಲೇ ಕಾಂಗ್ರೆಸ್ ವರಿಷ್ಠರು ‘ಕುಮಾರಸ್ವಾಮಿಯೇ ಪೂರ್ಣಾವಧಿ ಮುಖ್ಯಮಂತ್ರಿ’ ಎಂದು ಘೋಷಿಸಿರುವುದು ಅವರ ಕೈಗಳನ್ನು ಕಟ್ಟಿ ಹಾಕಬಹುದು.

ಈ ಅಸಮಾಧಾನ ಹಲವರು ಕಾಂಗ್ರೆಸ್‌ನ್ನು ತೊರೆಯುವಂತಹ ಸನ್ನಿವೇಶವನ್ನೂ ನಿರ್ಮಾಣ ಮಾಡಬಹುದು. ಒಟ್ಟಿನಲ್ಲಿ ರಾಜ್ಯದ ಮೈತ್ರಿ 2019ರ ಚುನಾವಣೆಯ ಬಗ್ಗೆ ಇನ್ನಷ್ಟು ಕುತೂಹಲವನ್ನು ಮೂಡಿಸಿದೆ. ಉತ್ತರ ಪ್ರದೇಶದಲ್ಲಿ ನಡೆದಿರುವ ಮೈತ್ರಿಯ ಕೊಂಡಿಯನ್ನು ಇದಕ್ಕೆ ಜೋಡಿಸುತ್ತಾ ಹೋದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಕಠಿಣ ಸ್ಪರ್ಧೆಯನ್ನು ಎದುರಿಸಬೇಕಾಗಬಹುದು. ಆದರೆ ದೇಶದಲ್ಲಿ ಇಂತಹ ಮೈತ್ರಿಗಳು ಹುಟ್ಟಿದಷ್ಟೇ ವೇಗವಾಗಿ ನಾಶವಾದ ಉದಾಹರಣೆಗಳಿವೆ. ಕಾಂಗ್ರೆಸ್‌ನಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ರಾಹುಲ್‌ಗಾಂಧಿಯಿದ್ದಾರೆ. ಇದೇ ಸಂದರ್ಭದಲ್ಲಿ ಇತರ ಪಕ್ಷಗಳಲ್ಲಿ ಅವರಿಗಿಂತಲೂ ಅನುಭವಿಗಳೂ, ಪ್ರಾಯದಲ್ಲಿ ಹಿರಿಯರೂ ಆಗಿರುವ ನಾಯಕರು ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಸಂದರ್ಭ ಸಿಕ್ಕಿದರೆ ರಾಹುಲ್‌ಗಾಂಧಿಯನ್ನು ಪಕಕ್ಕೆ ತಳ್ಳಿ ದೇವೇಗೌಡರೇ ಆ ಕುರ್ಚಿಯ ಮೇಲೆ ಕುಳ್ಳಿತುಕೊಳ್ಳುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಒಟ್ಟಿನಲ್ಲಿ ಕಾಂಗ್ರೆಸ್‌ನ ಸ್ಥಿತಿ ಏಡಿಯೂ ಇಲ್ಲ, ಏಡಿಗೆ ಹಾಕಿದ ಕೈಯೂ ಇಲ್ಲ ಎಂಬ ಸ್ಥಿತಿಯಾಗದಿದ್ದರೆ ಸಾಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News