ಕೇಶವ್ ಮೌರ್ಯರನ್ನು ಸಿಎಂ ಮಾಡದೇ ಇದ್ದುದರಿಂದ ಉ.ಪ್ರದೇಶ ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲು

Update: 2018-06-04 09:12 GMT

ಲಕ್ನೋ, ಜೂ.4: ಕೇಶವ್ ಪ್ರಸಾದ್ ಮೌರ್ಯಯರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡದೇ ಇರುವುದರಿಂದ ಹಿಂದುಳಿದ ವರ್ಗಗಳ ಜನರು ಅಸಮಾಧಾನ ಹೊಂದಿದ್ದು, ಇದೇ ಕಾರಣದಿಂದ ಬಿಜೆಪಿ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಗಳಲ್ಲಿ ಸೋಲುಂಡಿದೆ ಎಂದು ಉತ್ತರ ಪ್ರದೇಶ ಸಚಿವ ಓಂ ಪ್ರಕಾಶ್ ರಾಜಭರ್ ಹೇಳಿದ್ದಾರೆ.

‘‘ಉತ್ತರ ಪ್ರದೇಶದಲ್ಲಿ ಬಿಜೆಪಿ ವಿಧಾನಸಭಾ ಚುನಾವಣೆಯನ್ನು ಕೇಶವ್ ಪ್ರಸಾದ್ ಮೌರ್ಯ ಅವರ ನಾಯಕತ್ವದಲ್ಲಿ ಎದುರಿಸಿದ್ದರೂ ನಂತರ ಆದಿತ್ಯನಾಥ್ ಅವರನ್ನು ಸಿಎಂ ಮಾಡಲಾಗಿತ್ತು. ಮೌರ್ಯ ಅವರು ಮುಖ್ಯಮಂತ್ರಿಯಾಗುತ್ತಾರೆಂಬ ಆಶಾವಾದದೊಂದಿಗೆ ಹಿಂದುಳಿದ ವರ್ಗಗಳು ಬಿಜೆಪಿಯನ್ನು ಬೆಂಬಲಿಸಿದ್ದವು. ಹಿಂದುಳಿದ ವರ್ಗಗಳ ಜನರ ಅಸಹನೆ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿನಲ್ಲಿ ಪ್ರತಿಫಲಿತವಾಗಿದೆ’’ ಎಂದು ರಾಜಭರ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿಯ ಮಿತ್ರ ಪಕ್ಷವಾಗಿರುವ ಸುಹೇಲ್ ದೇವ್ ಭಾರತೀಯ ಸಮಾಜ್ ಪಕ್ಷದ ಮುಖ್ಯಸ್ಥರೂ ಆಗಿರುವ ರಾಜಭರ್ ಅವರ ಪಕ್ಷಕ್ಕೆ ರಾಜ್ಯದಲ್ಲಿ ನಾಲ್ಕು ಸ್ಥಾನಗಳ ಬಲವಿದೆ.

ಉಪಚುನಾವಣೆ ಸೋಲಿಗೆ ಆದಿತ್ಯನಾಥ್ ಕಾರಣವೇ ಎಂಬ ಪ್ರಶ್ನೆಗೆ ‘‘ಸರಕಾರ ಅದಕ್ಕೆ ಕಾರಣವಾಗಿದೆ. ಬಿಜೆಪಿ ತನ್ನ ಸೋಲಿನ ಕಾರಣದ ಆತ್ಮಾವಲೋಕನ ನಡೆಸಬೇಕಿದೆ. ಯೋಗಿ ಅಥವಾ ಕೇಶವ್ ಅವರು ಸಿಎಂ ಆಗಬೇಕೇ ಎಂಬುದನ್ನು ಪಕ್ಷ ನಿರ್ಧರಿಸಬೇಕು’’ ಎಂದರು.

ಸರಕಾರದ ಯೋಜನೆಗಳನ್ನು ಪ್ರಚಾರ ಮಾಡಲು ವಿಫಲವಾಗಿರುವುದೇ ಬಿಜೆಪಿ ಸೋಲಿಗೆ ಕಾರಣ ಎಂದು ಜೂನ್ 1ರಂದು ರಾಜಭರ್ ಹೇಳಿದ್ದರಲ್ಲದೆ ಜಾತಿ ರಾಜಕೀಯ ಹಾಗೂ ಭ್ರಷ್ಟಾಚಾರದಿಂದಾಗಿ ಸೋಲುಂಟಾಗಿದೆ ಎಂದೂ ಅಭಿಪ್ರಾಯ ಪಟ್ಟಿದ್ದರು.

ವಿಪಕ್ಷಗಳು ಜತೆಯಾಗಿ ಉಪಚುನಾವಣೆ ಎದುರಿಸಿದ್ದರಿಂದ ಬಿಜೆಪಿ ಇತ್ತೀಚೆಗೆ ನಡೆದ ಕೈರಾನ ಲೋಕಸಭಾ ಹಾಗೂ ನೂರ್ಪುರ್ ವಿಧಾನಸಭಾ ಕ್ಷೇತ್ರಗಳಲ್ಲಿ ಸೋಲುಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News