3 ದಿನಗಳ ಕಾಲ ತಿನ್ನಲು ಆಹಾರವಿಲ್ಲದೆ ಹಸಿವಿನಿಂದ ಮೃತಪಟ್ಟ ಮಹಿಳೆ

Update: 2018-06-04 10:44 GMT

ಗಿರಿಧ್, ಜೂ.4: ಪಡಿತರ ಚೀಟಿ ಹೊಂದಿಲ್ಲದ 58 ವರ್ಷದ ಬಡ ಮಹಿಳೆಯೊಬ್ಬರು ಮೂರು ದಿನ ತಿನ್ನಲು ಏನೂ ಆಹಾರ ದೊರೆಯದೆ ಹಸಿವಿನಿಂದ ನರಳಿ ಸಾವನ್ನಪ್ಪಿದ ಘಟನೆ ಜಾರ್ಖಂಡ್ ರಾಜ್ಯದ ಗಿರಿಧ್ ಎಂಬಲ್ಲಿಂದ ವರದಿಯಾಗಿದೆ.  ಮೃತ ಮಹಿಳೆಯನ್ನು ಸಾವಿತ್ರಿ ದೇವಿ  ಎಂದು ಗುರುತಿಸಲಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಆಕೆಯ ಕುಟುಂಬಕ್ಕೆ ರೇಷನ್ ಕಾರ್ಡ್ ದೊರೆತಿಲ್ಲ ಎಂದು ಆರೋಪಿಸಲಾಗಿದೆ. "ಹಲವಾರು ಮನವಿ ಮಾಡಿದರೂ ರೇಷನ್ ಕಾರ್ಡ್ ನೀಡುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ. ಆಕೆಯನ್ನು ಸಂಪರ್ಕಿಸಲು ನಮಗೆ ಸಾಧ್ಯವಾಗದೇ ಇದ್ದುದರಿಂದ ಪರಿಸ್ಥಿತಿಯ ಬಗ್ಗೆ ನಮಗೆ ತಿಳಿದಿರಲಿಲ್ಲ'' ಎಂದು ಮೃತ ಮಹಿಳೆಯ ಸೊಸೆ ಸರಸ್ವತಿ ದೇವಿ ಹೇಳಿದ್ದಾಳೆ.

ಮೃತ ಸಾವಿತ್ರಿಯ ಇಬ್ಬರು ಪುತ್ರರು ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ಜೀವನ ಸಾಗಿಸುತ್ತಿದ್ದು, ಹಲವಾರು ಬಾರಿ ಗ್ರಾಮಸ್ಥರಿಂದ ಆಹಾರಕ್ಕಾಗಿ  ಬೇಡುತ್ತಿದ್ದರು. ಆಕೆಯ ಪುತ್ರರು ಆಕೆಯ ಜತೆಗೆ ವಾಸಿಸುತ್ತಿದ್ದರೇ ಅಥವಾ ಇಲ್ಲವೇ ಎಂಬುದು ತಿಳಿದಿಲ್ಲ.

ಈ ಘಟನೆ ಭಾರೀ ಕಳವಳಕಾರಿ ಎಂದು ದುಮ್ರಿ ಶಾಸಕ ಜಗರನಾಥ್ ಮಹತೋ ಹೇಳಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ಈ ಘಟನೆಗೆ ಕಾರಣ ಎಂದು ಮಹತೋ ದೂರಿದರೂ ತಪ್ಪಿತಸ್ಥರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿಲ್ಲ.  ಈ ವಿಚಾರ ವಿಧಾನಸಭೆಯಲ್ಲಿ ಎತ್ತಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ಆರು ತಿಂಗಳ  ಹಿಂದೆ  ಉತ್ತರ ಪ್ರದೇಶದ ಬರೇಲಿಯಲ್ಲಿ ಐದು ದಿನ ಆಹಾರವಿಲ್ಲದೆ ಶಕೀನಾ ಅಶ್ಫಾಕ್ ಎಂಬ ಮಹಿಳೆ ಹಸಿವಿನಿಂದ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News