ಈ ನಾಲ್ಕು ಬ್ಯಾಂಕ್ ಗಳನ್ನು ವಿಲೀನಗೊಳಿಸಲಿದೆ ಕೇಂದ್ರ ಸರಕಾರ?

Update: 2018-06-04 12:43 GMT

ಮುಂಬೈ, ಜೂ.4: ಸಾರ್ವಜನಿಕ ರಂಗದ  ಬ್ಯಾಂಕುಗಳಾದ ಬ್ಯಾಂಕ್ ಆಫ್ ಬರೋಡ, ಐಡಿಬಿಐ ಬ್ಯಾಂಕ್ ಲಿಮಿಟೆಡ್, ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಹಾಗೂ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಇವುಗಳನ್ನು ವಿಲೀನಗೊಳಿಸಲು ಸರಕಾರ ಯೋಚಿಸುತ್ತಿದೆಯೆನ್ನಲಾಗಿದ್ದು, ಇದು ಕಾರ್ಯಗತಗೊಂಡಿದ್ದೇ ಆದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಂತರ ಈ ವಿಲೀನಗೊಳ್ಳುವ ಬ್ಯಾಂಕುಗಳು ಜತೆಯಾಗಿ  ಎರಡನೇ ಅತಿ ದೊಡ್ಡ ಬ್ಯಾಂಕ್ ಆಗಲಿದೆ. ಈ ನಾಲ್ಕೂ ಬ್ಯಾಂಕ್ ಗಳು ವಿಲೀನಗೊಂಡರೆ ಅವುಗಳ ಒಟ್ಟು ಸಂಪತ್ತಿನ ಮೌಲ್ಯ 16.58 ಟ್ರಿಲಿಯನ್ ಆಗಲಿದೆ.

ಬ್ಯಾಂಕುಗಳ ಹೆಚ್ಚುತ್ತಿರುವ ಅನುತ್ಪಾದಕ ಸಾಲಗಳಿಂದ ಉಂಟಾಗಿರುವ ಸಮಸ್ಯೆಗೆ ಕಡಿವಾಣ ಹಾಕಲು ಈ ರೀತಿಯಾಗಿ ಸರಕಾರ ನಿರ್ಧರಿಸಿದೆಯೆಂದು ಮೂಲಗಳು ತಿಳಿಸಿವೆ. ವಿಲೀನಗೊಂಡಾಗ  ದುರ್ಬಲ ಬ್ಯಾಂಕುಗಳು ತಮ್ಮ ಆಸ್ತಿಗಳನ್ನು ಮಾರಾಟ ಮಾಡಬಹುದು ಹಾಗೂ ತಮ್ಮ  ನಷ್ಟದಲ್ಲಿರುವ ಶಾಖೆಗಳನ್ನೂ ಮುಚ್ಚಬಹುದಾಗಿದೆ. ವಿಲೀನಗೊಳ್ಳಲಿವೆ ಎಂದು ಹೇಳಲಾಗುತ್ತಿರುವ ನಾಲ್ಕು ಬ್ಯಾಂಕುಗಳು  ಮಾರ್ಚ್ 31ಕ್ಕೆ ಅಂತ್ಯಗೊಂಡ ಆರ್ಥಿಕ ವರ್ಷದಲ್ಲಿ ಒಟ್ಟು 21,648.38 ಕೋಟಿ ರೂ. ನಷ್ಟ ಅನುಭವಿಸಿವೆ.

ಐಡಿಬಿಐ ಬ್ಯಾಂಕಿನಲ್ಲಿರುವ ಶೇ 51ರಷ್ಟು ಪಾಲುದಾರಿಕೆಯನ್ನು 9,000 ಕೋಟಿ ರೂ.ಗಳಿಂದ 10,000 ಕೋಟಿ ರೂ.ಗಳ ಮೊತ್ತಕ್ಕೆ ಮಾರಾಟ ಮಾಡುವ ಬಗ್ಗೆಯೂ ವಿತ್ತ ಸಚಿವಾಲಯದ ಅಧೀನದಲ್ಲಿ ಬರುವ ವಿತ್ತೀಯ ಸೇವಾ ಇಲಾಖೆ ಯೋಚಿಸುತ್ತಿದೆ ಎಂದು ತಮ್ಮ ಹೆಸರು ಹೇಳಲಿಚ್ಛಿಸದ ಕೆಲ ಅಧಿಕಾರಿಗಳು ತಿಳಿಸಿದ್ದಾರೆ. ಐಡಿಬಿಐ ಬ್ಯಾಂಕಿನಲ್ಲಿ ಸರಕಾರದ ಪಾಲುದಾರಿಕೆಯನ್ನು ಖಾಸಗಿ ಈಕ್ವಿಟಿ ಹೂಡಿಕೆದಾರರಿಗೆ ಮಾರಾಟ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಆದರೆ ಈ ಬಗ್ಗೆ ವಿಲೀನಗೊಳ್ಳಲಿವೆಯೆಂದು ಹೇಳಲಾದ ನಾಲ್ಕು ಬ್ಯಾಂಕುಗಳು ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಐಡಿಬಿಐ ಬ್ಯಾಂಕ್ ನಲ್ಲಿನ ಸರಕಾರದ ಪಾಲುದಾರಿಕೆಯನ್ನು ಶೇ 50ಕ್ಕಿಂತ ಕಡಿಮೆಗೊಳಿಸುವ ಬಗ್ಗೆ ಯೋಚಿಸಲಾಗುತ್ತಿದೆ ಎಂದು ತಮ್ಮ 2016 ಬಜೆಟ್ ಭಾಷಣದಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದರು. ಎಪ್ರಿಲ್ 2017ರಲ್ಲಿ ಐದು ಸಹ ಬ್ಯಾಂಕ್ ಗಳು ಹಾಗೂ ಭಾರತೀಯ ಮಹಿಳಾ ಬ್ಯಾಂಕ್ ಅನ್ನು ಎಸ್‍ಬಿಐ ಜತೆ ಸರಕಾರ ವಿಲೀನಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News