×
Ad

ರೈಲಿನಲ್ಲಿ ಮಿತಿಗಿಂತ ಅಧಿಕ ಲಗೇಜ್ ಸಾಗಿಸಿದರೆ ಜೇಬಿಗೆ ಬೀಳಲಿದೆ ಕತ್ತರಿ !

Update: 2018-06-05 23:12 IST

 ಹೊಸದಿಲ್ಲಿ, ಜೂ. 5: ವಿಮಾನ ಪ್ರಯಾಣದಂತೆ, ರೈಲು ಪ್ರಯಾಣದಲ್ಲಿ ಕೂಡ ಈಗ ಮಿತಿಗಿಂತ ಅಧಿಕ ಲಗೇಜ್ ಒಯ್ಯದಂತೆ ಎಚ್ಚರ ವಹಿಸಿ. ರೈಲು ಬೋಗಿಯಲ್ಲಿ ಮಿತಿಗಿಂತ ಅಧಿಕ ಲಗೇಜ್ ಕೊಂಡೊಯ್ಯುತ್ತಿರುವ ಬಗ್ಗೆ ಅನೇಕ ದೂರುಗಳನ್ನು ಸ್ವೀಕರಿಸಿದ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ, ತನ್ನ ಮೂರು ದಶಕಗಳ ಹಳೆಯ ಸರಕು ಭತ್ಯೆ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ನಿರ್ಧರಿಸಿದೆ.

ರೈಲಿನಲ್ಲಿ ಪ್ರಯಾಣಿಸುವಾಗ ಮಿತಿಗಿಂತ ಅಧಿಕ ಲಗೇಜ್‌ನೊಂದಿಗೆ ಸಿಕ್ಕಿ ಬಿದ್ದರೆ ಈಗ ನಿರ್ಣಯಿಸಲಾಗಿರುವ ದಂಡದ ಮೊತ್ತದ ಆರು ಪಟ್ಟು ದಂಡವನ್ನು ಪ್ರಯಾಣಿಕರು ನೀಡಬೇಕಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಪರಿಷ್ಕೃತ ನಿಯಮಗಳ ಪ್ರಕಾರ, ಸ್ಲೀಪರ್ ಕ್ಲಾಸ್ ಹಾಗೂ ಸೆಕೆಂಡ್ ಕ್ಲಾಸ್ ಪ್ರಯಾಣಿಕರು ಕ್ರಮವಾಗಿ 40 ಕೆ.ಜಿ. ಹಾಗೂ 35 ಕೆ.ಜಿ. ಲಗೇಜ್‌ನ್ನು ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸದೆ ಕೊಂಡೊಯ್ಯಬಹುದು. ಕ್ರಮವಾಗಿ ಗರಿಷ್ಠ 80 ಕೆ.ಜಿ. ಹಾಗೂ 70 ಕೆ.ಜಿ. ಲಗೇಜ್ ಅನ್ನು ಪಾರ್ಸೆಲ್ ಕಚೇರಿಯಲ್ಲಿ ಮಿತಿಗಿಂತ ಅಧಿಕ ಲಗೇಜ್‌ನ ಶುಲ್ಕ ಪಾವತಿಸಿ ಕೊಂಡೊಯ್ಯಬಹುದು. ಅಧಿಕ ಲಗೇಜ್‌ನ ಅನ್ನು ಲಗೇಜ್ ವ್ಯಾನ್‌ಲ್ಲಿ ಹಾಕಲಾಗುತ್ತದೆ.

 ‘‘ಈ ನಿಯಮ ಈಗಾಗಲೇ ಇದೆ. ಆದರೆ, ನಾವು ಇದನ್ನು ಕಟ್ಟು ನಿಟ್ಟಾಗಿ ಜಾರಿಗೆ ತರುತ್ತಿದ್ದೇವೆ.’’ ಎಂದು ಅವರು ಹೇಳಿದ್ದಾರೆ. ‘‘ಒಂದು ವೇಳೆ ಪ್ರಯಾಣಿಕರು ಶುಲ್ಕ ವಿನಾಯಿತಿಗಿಂತ ಹೆಚ್ಚಿನ ತೂಕದ ಲಗೇಜ್ ಅನ್ನು ಕಾಯ್ದಿರಿಸದೆ ಕೊಂಡೊಯ್ಯುವುದು ಪತ್ತೆಯಾದಲ್ಲಿ ಹೆಚ್ಚುವರಿ ತೂಕದ ಲಗೇಜ್‌ಗೆ ಲಗೇಜ್ ಶುಲ್ಕದ ಆರು ಪಾಲು ದಂಡ ವಿಧಿಸಲಾಗುವುದು. ಪ್ರಯಾಣಿಕರ ಅನುಕೂಲಕ್ಕೆ ಹಾಗೂ ಬೋಗಿಗಳು ಲಗೇಜ್‌ಗಳಿಂದ ಕಿಕ್ಕಿರಿಯುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ’’ ಎಂದು ರೈಲ್ವೆ ಮಂಡಳಿಯ ಮಾಹಿತಿ ಹಾಗೂ ಪ್ರಸಾರ ನಿರ್ದೇಶಕ ವೇದ್ ಪ್ರಕಾಶ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News