ಆರೆಸ್ಸೆಸ್ ಕಾರ್ಯಕರ್ತರನ್ನುದ್ದೇಶಿಸಿ ಪ್ರಣಬ್ ಮುಖರ್ಜಿಯವರು ಏನು ಮಾತಾಡಬಹುದು?

Update: 2018-06-05 18:28 GMT

ಆರೆಸ್ಸೆಸ್‌ಗೆ ಇದುವರೆಗೆ ದೊರೆತ ಕ್ಯಾಚ್‌ಗಳಲ್ಲಿ ಅತ್ಯಂತ ದೊಡ್ಡ ಕ್ಯಾಚ್ ಮುಖರ್ಜಿಯವರು. ಓರ್ವ ಮಾಜಿ ರಾಷ್ಟ್ರಪತಿ ಮತ್ತು ಬಹಳ ದೀರ್ಘ ಕಾಲದ ಓರ್ವ ಕಾಂಗ್ರೆಸಿಗನಾಗಿ ಅವರು ಆರೆಸ್ಸೆಸ್ ಸಮಾವೇಶಕ್ಕೆ ತುಂಬಾ ಪ್ರತಿಷ್ಠೆ ತರಲಿದ್ದಾರೆ. ಆರೆಸ್ಸೆಸ್‌ನ ಮೌಲ್ಯಗಳು ಹಾಗೂ ಉದ್ದೇಶದ ಕುರಿತು 23 ದಿನಗಳ ಕಠಿಣ ಬೋಧನೆಯ ಬಳಿಕ ಸಂಘಟನೆಯ ಶಿಸ್ತಿನ ಸಿಪಾಯಿಗಳು ಸ್ಥಿರ ಭಿನ್ನವಾದ ಅಭಿಪ್ರಾಯಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸದಿರಬಹುದು. ಆದರೂ ಅವರು ಮುಖರ್ಜಿ ಅವರ ಮಾತುಗಳನ್ನು ಗಮನವಿಟ್ಟು ಆಲಿಸುತ್ತಾರೆ.

ಜೂನ್ 7ರಂದು ನಾಗ್ಪುರದಲ್ಲಿ ಆರೆಸ್ಸೆಸ್‌ನ ನೂತನ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಲು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನಿರ್ಧರಿಸಿರುವುದು ಸಾಕಷ್ಟು ಪರ ವಿರೋಧ ಚರ್ಚೆಗೆ, ವಿವಾದಕ್ಕೆ ಕಾರಣವಾಗಿದೆ. ಅವರು ನಾಗ್ಪುರದ ಸಮಾವೇಶಕ್ಕೆ ಹೋಗ ಕೂಡದೆಂದು ಹಲವರು ಸೂಚಿಸಿದ್ದಾರೆ. ಯಾಕೆಂದರೆ ಅವರು ಅಲ್ಲಿಗೆ ಭೇಟಿ ನೀಡಿದರೆ ಅದು ಆರೆಸ್ಸೆಸ್‌ಗೆ ಗೌರವದ ಒಂದು ಮುದ್ರೆಯನ್ನೊತ್ತಿದಂತಾಗುತ್ತದೆ. ಇನ್ನು ಕೆಲವರು ಅವರಿಗೆ ನೀಡಿದ ಆಹ್ವಾನದ ಹಿಂದೆ ತಾನು ಮುಕ್ತ ಮನಸ್ಸಿನ ಒಂದು ಸಂಘಟನೆ ಎಂದು ತೋರಿಸಿಕೊಳ್ಳುವ ಆರೆಸ್ಸೆಸ್‌ನ ಹುನ್ನಾರವಿದೆ ಎಂದು ಹೇಳಿದ್ದಾರೆ. ಇನ್ನು ಕೆಲವರು ಇದೆಲ್ಲದರ ಹಿಂದೆ ಒಂದು ರಾಜಕೀಯ ಸಂಚು ಇದೆ ಎಂದಿದ್ದಾರೆ. ಮುಖರ್ಜಿ ಅವರು ಒಂದೊಮ್ಮೆ ಆರೆಸ್ಸೆಸ್‌ನ್ನು ‘ಕೋಮುವಾದಿ’ ಮತ್ತು ‘ದೇಶಭಕ್ತಿ ಇಲ್ಲದ’ ಒಂದು ಸಂಘಟನೆ ಎಂದು ಕರೆದಿದ್ದರೆಂದು ಕೆಲವು ಕಾಂಗ್ರೆಸಿಗರು ಅವರಿಗೆ ಈಗ ಜ್ಞಾಪಿಸಿದ್ದಾರೆ.

ಮುಖರ್ಜಿ ಅವರು ಜೂನ್ 7ರ ಸಮಾವೇಶದಲ್ಲಿ ಭಾಗವಹಿಸಲು ನೀಡಿರುವ ಒಪ್ಪಿಗೆಯಿಂದ ಹಲವರಿಗೆ ಆತಂಕ, ಆಘಾತವಾಗುವುದರಲ್ಲಿ ಆಶ್ಚರ್ಯವಿಲ್ಲ. ಮುಖರ್ಜಿಯವರು ಈಗ ಒಂದು ಪಕ್ಷದ ರಾಜಕಾರಣಿ ಅಲ್ಲದೇ ಇರಬಹುದು. ಆದರೆ ತನ್ನ ಹಳೆಯ ಪಕ್ಷ ಆರೆಸ್ಸೆಸ್‌ಗೆ ತೋರಿದ್ದ ವಿರೋಧವನ್ನು ಅವರು ಸುಲಭವಾಗಿ ಮರೆಯುವಂತಿಲ್ಲ. ಅವರಿಗಿದ್ದ ಕಾಂಗ್ರೆಸ್ ಜತೆಗಿನ ಸಂಬಂಧವಷ್ಟೇ ಅಲ್ಲ; ಸಂವಿಧಾನದ ಬಗ್ಗೆ, ವಿಶೇಷವಾಗಿ ಜಾತ್ಯತೀತತೆಯಂತಹ ಕೆಲವು ವಿಷಯಗಳ ಬಗ್ಗೆ ತನಗಿರುವ ಅಸಹನೆಯನ್ನು, ವಿರೋಧವನ್ನು ಗುಟ್ಟಾಗಿ ಏನೂ ಇಟ್ಟಿರದ ಒಂದು ಸಂಘಟನೆಯ ಸಮಾವೇಶ ಒಂದರಲ್ಲಿ ಅತಿಥಿಯಾಗಿ ಭಾಗವಹಿಸುವುದರ ಅರ್ಥ ಏನಾಗುತ್ತದೆ ಎಂದು ಮುಖರ್ಜಿಯವರಿಗೆ ಖಂಡಿತವಾಗಿಯೂ ತಿಳಿದಿದೆ.

ಅಲ್ಲದೆ, ತನ್ನ ಇಂತಹ ಒಂದು ನಿರ್ಧಾರದಿಂದ ಯಾವ ರೀತಿಯ ರಾಜಕೀಯ ಊಹಾಪೋಹಗಳು ಹುಟ್ಟಿಕೊಳ್ಳುತ್ತವೆಂಬ ಕುರಿತು ಕೂಡ ಅವರಿಗೆ ಏನೂ ಅರಿವು ಇಲ್ಲ ಎನ್ನುವಂತಿಲ್ಲ. ಯಾಕೆಂದರೆ ಇನ್ನೊಂದು ವರ್ಷದಲ್ಲಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯುತ್ತವೆ. ಬಿಜೆಪಿಯನ್ನು ಎದುರಿಸಲು ವಿಪಕ್ಷಗಳ ಮೈತ್ರಿಕೂಟವೊಂದು ಈಗಾಗಲೇ ಸಜ್ಜಾಗುತ್ತಿದೆ. ಪರಸ್ಪರ ತೀವ್ರವಾದ ವಿರುದ್ಧ ನಿಲುವುಗಳನ್ನು ಹೊಂದಿರುವ ಒಂದು ಈ ಮೈತ್ರಿಕೂಟಕ್ಕೆ ಅದರದ್ದೇ ಆದ ಸಮಸ್ಯೆಗಳಿರುತ್ತವೆ. ಅಲ್ಲದೆ ಸಮಾನರ ಒಂದು ಕೂಟದಲ್ಲಿ, ಯಾರು ವಿವಾದಾತೀತ ನಾಯಕನಾಗಬೇಕು? ಇಂತಹ ಒಂದು ಸನ್ನಿವೇಶದಲ್ಲಿ ಮುಖರ್ಜಿ ಅವರಂತಹ ಓರ್ವ ಗೌರವಾನ್ವಿತ ಹಾಗೂ ಹಿರಿಯ ನಾಯಕನ ಪ್ರವೇಶವಾಗುವ ಸಾಧ್ಯತೆ ಇರುತ್ತದೆ. ಮಾಜಿ ರಾಷ್ಟ್ರಪತಿಗಳು ರಾಜಕೀಯಕ್ಕೆ ಮರು ಪ್ರವೇಶ ಮಾಡದೇ ಇರುವುದು ಒಂದು ಸಂಪ್ರದಾಯ; ಆದರೆ ಮರುಪ್ರವೇಶದ ವಿರುದ್ಧ ಯಾವುದೇ ಕಾನೂನು ಇಲ್ಲ. ಈ ಹಿಂದೆ ಎರಡು ಬಾರಿ ಮುಖರ್ಜಿ ಅವರು ಪ್ರಧಾನಿಯಾಗುವ ಅವಕಾಶದಿಂದ ವಂಚಿತರಾಗಿದ್ದರು. 1984ರಲ್ಲಿ ಇಂದಿರಾ ಗಾಂಧಿ ಅವರ ಹತ್ಯೆಯಾದ ಬಳಿಕ ಸಹಜವಾಗಿಯೇ ತಾನು ಅವರ ಉತ್ತರಾಧಿಕಾರಿಯಾಗುವ ಭರವಸೆ ಹೊಂದಿದ್ದರು ಮತ್ತು ಆ ಬಳಿಕ 2004ರಲ್ಲಿ ತನಗಿಂತ ರಾಜಕೀಯದಲ್ಲಿ ತುಂಬಾ ಕಿರಿಯರಾದ ಮನಮೋಹನ್ ಸಿಂಗ್ ಅವರಿಗೆ ಪ್ರಧಾನಿ ಹುದ್ದೆ ದೊರಕಿದಾಗ ದ್ವಿತೀಯ ಬಾರಿಗೆ ಮುಖರ್ಜಿ ಆ ಹುದ್ದೆಯಿಂದ ವಂಚಿತರಾಗಿದ್ದರು.
ರಾಜೀವ್ ಗಾಂಧಿ ಪ್ರಧಾನಿಯಾದ ನಂತರ ಮುಖರ್ಜಿ ಕಾಂಗ್ರೆಸ್ ಪಕ್ಷವನ್ನು ತೊರೆದು ಹೋಗಿದ್ದರು. ಆದರೆ ಏಳು ವರ್ಷಗಳ ಬಳಿಕ ಮರಳಿ ಬಂದಿದ್ದರು. ತನಗೆ ಸಿಗಬೇಕಾದ ಹುದ್ದೆ ಪಡೆಯಲು ಇದೀಗ ಸರಿಯಾದ ಸಮಯವೆಂದು ಅವರು ತಿಳಿದಿರಬಹುದು. ಆರೆಸ್ಸೆಸ್ ಅವರಿಗೆ ಸಕ್ರಿಯವಾಗಿ ಸಹಾಯ ಮಾಡದೆ ಇರಬಹುದಾದರೂ ಜೂನ್ 7ರ ಸಮಾವೇಶದಲ್ಲಿ ಭಾಗವಹಿಸುವುದು ಸಾರ್ವಜನಿಕರೆದುರು ಮರಳಿ ಬರುವ ಅವರ ಒಂದು ವಿಧಾನವಿರಬಹುದು.
ಈ ಹಿಂದೆ ಸಿಬಿಐ ಮುಖ್ಯಸ್ಥ ಯೋಗೀಂದರ್ ಸಿಂಗ್ ಮತ್ತು ನಿವೃತ್ತ ಏರ್‌ಚೀಫ್ ಮಾರ್ಷಲ್ ಎ.ವೈ. ಟಿಫ್ನಿಸ್ ರಂಥವರು ನಾಗ್ಪುರ ಸಮಾವೇಶದಲ್ಲಿ ಭಾಗವಹಿಸಿದ್ದರು. ಒಂದು ವರದಿಯ ಪ್ರಕಾರ ಟಿಫ್ನಿಸ್ ಅವರು ಜಾತ್ಯತೀತತೆ, ಸಹನೆ ಮತ್ತು ನಂಬಿಕೆಯ ಬಗ್ಗೆ ಮಾತನಾಡಿದ್ದರು ಮತ್ತು ಇದನ್ನು ಅಂದಿನ ಆರೆಸ್ಸೆಸ್ ಮುಖ್ಯಸ್ಥ ವೈ.ಎನ್. ಸುದರ್ಶನ್ ವಿರೋಧಿಸಿದ್ದರು.
ಆರೆಸ್ಸೆಸ್‌ಗೆ ಇದುವರೆಗೆ ದೊರೆತ ಕ್ಯಾಚ್‌ಗಳಲ್ಲಿ ಅತ್ಯಂತ ದೊಡ್ಡ ಕ್ಯಾಚ್ ಮುಖರ್ಜಿಯವರು. ಓರ್ವ ಮಾಜಿ ರಾಷ್ಟ್ರಪತಿ ಮತ್ತು ಬಹಳ ದೀರ್ಘ ಕಾಲದ ಓರ್ವ ಕಾಂಗ್ರೆಸಿಗನಾಗಿ ಅವರು ಆರೆಸ್ಸೆಸ್ ಸಮಾವೇಶಕ್ಕೆ ತುಂಬಾ ಪ್ರತಿಷ್ಠೆ ತರಲಿದ್ದಾರೆ. ಆರೆಸ್ಸೆಸ್‌ನ ಮೌಲ್ಯಗಳು ಹಾಗೂ ಉದ್ದೇಶದ ಕುರಿತು 23 ದಿನಗಳ ಕಠಿಣ ಬೋಧನೆಯ ಬಳಿಕ ಸಂಘಟನೆಯ ಶಿಸ್ತಿನ ಸಿಪಾಯಿಗಳು ಸ್ಥಿರ ಭಿನ್ನವಾದ ಅಭಿಪ್ರಾಯಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸದಿರಬಹುದು. ಆದರೂ ಅವರು ಮುಖರ್ಜಿ ಅವರ ಮಾತುಗಳನ್ನು ಗಮನವಿಟ್ಟು ಆಲಿಸುತ್ತಾರೆ.
ಆದ್ದರಿಂದ ಮುಖರ್ಜಿ ತನ್ನ ಭಾಷಣದ ವಿಷಯವನ್ನು ಜತನದಿಂದ ಆಯ್ದು ಸರಿಯಾದ ಸಂದೇಶವನ್ನೇ ನೀಡಬೇಕು. ಅವರು ನಮ್ಮ ಸಂವಿಧಾನದ ಬಗ್ಗೆ, ಅದರ ಭವ್ಯ ಇತಿಹಾಸ, ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆ, ಅದರ ಬದ್ಧತೆಯ ಬಗ್ಗೆ ಮಾತನಾಡಬಹುದು.
ಭಾರತದಲ್ಲಿ ಹಲವು ನಾಗರಿಕರು, ವಿಶೇಷವಾಗಿ ಅಲ್ಪಸಂಖ್ಯಾತರು ಇನ್ನೂ ತಮಗೆ ಭದ್ರತೆ ಇಲ್ಲ ಎಂದು ಯಾಕೆ ಭಾವಿಸುತ್ತಾರೆ ಎಂಬ ಕುರಿತು ಮುಖರ್ಜಿ ಮಾತನಾಡಬಹುದು ಮತ್ತು ಮಾತನಾಡಬೇಕು. ಆರೆಸ್ಸೆಸ್, ದ್ವೇಷವನ್ನು ಹರಡುವ ಒಂದು ಸಂಘಟನೆ ಎಂದು ಜಗತ್ತು ತಿಳಿದಿದೆ ಎಂಬ ಬಗ್ಗೆ ಅವರು ಹೇಳಬಹುದು. ಆದರೆ ವಿವೇಕಿಯಾದ ಅವರಿಗೆ ತನ್ನ ಅಭ್ಯಾಗತರ ಮನಸ್ಸನ್ನು ನೋಯಿಸುವುದು ಸರಿಯಲ್ಲ ಎಂದು ಅನ್ನಿಸದಿರುವುದಿಲ್ಲ. ಆದರೂ ಹೇಳಬೇಕಾದ್ದನ್ನು ಹೇಳಲು ಹಲವು ದಾರಿಗಳಿವೆ.
ಅಂತಹ ವಿವೇಕದ ಮಾತುಗಳು ಎಲ್ಲರಿಗೂ ಒಪ್ಪಿಗೆ ಯಾಗದಿರಬಹುದು. ಖಂಡಿತವಾಗಿಯೂ ಆ ಮಾತುಗಳ, ಭಾವನೆಗಳ ವಿರುದ್ಧವಾದವುಗಳನ್ನೇ ಸತತವಾಗಿ ಕೇಳಿಸಿಕೊಂಡವರಿಗಂತೂ ಒಪ್ಪಿಗೆ ಆಗದಿರಬಹುದು. ವಿವಿಧತೆ, ಬಹುತ್ವ, ಅಲ್ಪಸಂಖ್ಯಾತರು ಮತ್ತು ಮೀಸಲಾತಿಯ ಬಗ್ಗೆ ಆರೆಸ್ಸೆಸ್‌ನ ವಿಚಾರಗಳು, ಅಭಿಪ್ರಾಯಗಳು ಎಲ್ಲರಿಗೂ ತಿಳಿದಿವೆ. ಆದ್ದರಿಂದ ಮುಖರ್ಜಿ ಅವರ ಮಾತುಗಳು ಕಿವುಡರ ಕಿವಿಗಳಿಗೆ ಹೇಳಿದ ಮಾತುಗಳಾಗಬಾರದು; ಅವರ ಇರುವಿಕೆ ಅಲ್ಲಿ ಕೇವಲ ಆಲಂಕಾರಿಕವಾಗಬಹುದು. ಆದರೂ, ಮಾಜಿ ರಾಷ್ಟ್ರಪತಿಗಳು ತನಗೆ ದೊರಕಿದ ಅವಕಾಶವನ್ನು ವ್ಯರ್ಥಮಾಡಬಾರದು.
ಕೃಪೆ: thewire.in

Writer - ಸಿದ್ಧಾರ್ಥ್ ಭಾಟಿಯಾ

contributor

Editor - ಸಿದ್ಧಾರ್ಥ್ ಭಾಟಿಯಾ

contributor

Similar News

ಜಗದಗಲ
ಜಗ ದಗಲ