ಇಶ್ರತ್ ಜಹಾನ್ ನಕಲಿ ಎನ್‍ಕೌಂಟರ್ ಪ್ರಕರಣದಲ್ಲಿ ಮೋದಿಯನ್ನು ಸಿಬಿಐ ಬಂಧಿಸ ಬಯಸಿತ್ತು: ಮಾಜಿ ಡಿಐಜಿ ವಂಝಾರ

Update: 2018-06-06 08:42 GMT

ಅಹ್ಮದಾಬಾದ್, ಜೂ.6: ಇಶ್ರತ್ ಜಹಾನ್ ನಕಲಿ ಎನ್‍ಕೌಂಟರ್  ಪ್ರಕರಣದಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಅಂದಿನ ರಾಜ್ಯ ಗೃಹ ಸಚಿವ ಅಮಿತ್ ಶಾ ಅವರನ್ನು ಬಂಧಿಸಬೇಕೆಂದು ಸಿಬಿಐ ಬಯಸಿತ್ತು ಎಂದು  ರಾಜ್ಯದ ಮಾಜಿ ಡಿಐಜಿ  ಡಿ ಜಿ ವಂಝಾರ  ಮಂಗಳವಾರ ವಿಶೇಷ ನ್ಯಾಯಾಲಯದ ಮುಂದೆ ಹೇಳಿದ್ದಾರೆ.

ವಂಝಾರ ಮೇಲಿನ ಆರೋಪಗಳನ್ನು ಕೈಬಿಡಬೇಕೆಂದು ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಪೀಲಿನ ಮೇಲಿನ ವಿಚಾರಣೆ ವೇಳೆ ತಮ್ಮ ವಾದ ಮಂಡಿಸಿದ ವಂಝಾರ ಪರ ವಕೀಲ ವಿ ಡಿ ಗುಜ್ಜರ್, ಅದೃಷ್ಟವಶಾತ್ ಮೋದಿ ಮತ್ತು ಶಾ ಅವರ ಬಂಧನ ನಡೆದಿರಲಿಲ್ಲ ಎಂದು  ಹೇಳಿದ್ದಾರೆ. ತಮ್ಮ ಕಕ್ಷಿದಾರರ ವಿರುದ್ಧದ ಚಾರ್ಜ್ ಶೀಟ್ ಕಪೋಲಕಲ್ಪಿತ ಹಾಗೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತಹ ಯಾವುದೇ ಸಾಕ್ಷ್ಯವಿಲ್ಲ ಎಂದು ವಂಝಾರ ಅವರ ವಕೀಲರು ನ್ಯಾಯಾಲಯದ ಮುಂದೆ ಹೇಳಿದ್ದಾರೆ. ಕೆಲ ಸಾಕ್ಷಿಗಳು ಪ್ರಕರಣದಲ್ಲಿ ಆರೋಪಿಗಳಾಗಿರುವುದರಿಂದ ಅವರ ಸಾಕ್ಷ್ಯವನ್ನು ನಂಬಲು ಸಾಧ್ಯವಿಲ್ಲ ಎಂದೂ ಅವರು ಹೇಳಿದರು.

ಆದರೆ ವಂಝಾರ ಅವರ ವಿರುದ್ಧದ ಆರೋಪ ಕೈಬಿಡಬೇಕೆಂಬ ವಾದವನ್ನು ಸಿಬಿಐ ವಿರೋಧಿಸಿದೆ. ಪ್ರಕರಣದ ವಿಚಾರಣೆ ಜೂನ್ 15ಕ್ಕೆ ಮುಂದೂಡಲಾಗಿದೆ. ಮೋದಿ ಮುಖ್ಯಮಂತ್ರಿಯಾಗಿದ್ದಾಗ  ಪ್ರಕರಣದ ತನಿಖಾಧಿಕಾರಿ ಅವರನ್ನು ಗೌಪ್ಯವಾಗಿ ವಿಚಾರಣೆ ನಡೆಸಿದ್ದರು ಎಂದು ಪ್ರಕರಣದಲ್ಲಿ ಸದ್ಯ ಜಾಮೀನು ಮೇಲೆ ಹೊರಬಂದಿರುವ ವಂಝಾರ ಈ ಹಿಂದೆ ನ್ಯಾಯಾಲಯದ ಮುಂದೆ ಹೇಳಿದ್ದರು.

ಈ ಪ್ರಕರಣದಲ್ಲಿ ಅಮಿತ್  ಶಾ ಅವರ ವಿರುದ್ಧ ಸಾಕಷ್ಟು ಪುರಾವೆಗಳಿಲ್ಲ ಎಂಬ ಕಾರಣ ನೀಡಿ ಅವರಿಗೆ 2014ರಲ್ಲಿ ಕ್ಲೀನ್ ಚಿಟ್ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News