ಬೆಳಿಗ್ಗೆ ಅಥವಾ ಸಂಜೆ.....ಜಿಮ್‌ಗೆ ತೆರಳಲು ಸೂಕ್ತ ಸಮಯ ಯಾವುದು....?

Update: 2018-06-06 11:11 GMT

ವ್ಯಾಯಾಮವನ್ನು ಬೆಳಿಗ್ಗೆ ಮಾಡಿದರೆ ಒಳ್ಳ್ಳೆಯದೋ ಅಥವಾ ಸಂಜೆಗೋ? ಇಂತಹ ಗೊಂದಲ ನಿಮ್ಮನ್ನೂ ಎಂದಾದರೂ ಕಾಡಿರಬಹುದು. ಬೆಳಗ್ಗಿನ ಹೊತ್ತು ವ್ಯಾಯಾಮವನ್ನು ಇಷ್ಟ ಪಡುವ ಅದೆಷ್ಟೋ ಜನರಿದ್ದಾರೆ ಮತ್ತು ತಮ್ಮ ಅನುಭವದ ಮೂಲಕ ಬೆಳಗ್ಗಿನ ಸಮಯವೇ ಲಾಭಕಾರಿ ಎಂದು ಪ್ರತಿಪಾದಿಸುತ್ತಾರೆ. ಆದರೆ ಸಂಜೆಯ ಹೊತ್ತು ಜಿಮ್‌ನಲ್ಲಿ ಬೆವರು ಸುರಿಸಲು ಬಯಸುವವರೂ ಅದೆಷ್ಟೋ ಜನರಿದ್ದಾರೆ ಮತ್ತು ಅವರ ಅಭಿಪ್ರಾಯದಂತೆ ಅದೇ ಒಳ್ಳೆಯದು.

ಬೆಳಗಿನ ಮತ್ತು ಸಂಜೆಯ ವ್ಯಾಯಾಮಗಳಲ್ಲಿ ಯಾವ ವ್ಯತ್ಯಾಸಗಳಿವೆ ಎಂಬ ಅಚ್ಚರಿ ಕೆಲವರಲ್ಲಿ ಮೂಡುವುದು ಸಹಜವೇ ಆಗಿದೆ. ಯಾವ ಸಮಯದಲ್ಲಿ ವ್ಯಾಯಾಮ ಮಾಡಿದರೆ ನಮ್ಮ ಶರೀರಕ್ಕೆ ಒಳ್ಳೆಯದು ಎಂಬ ಬಗ್ಗೆ ಕೆಲವು ಅಧ್ಯಯನಗಳೂ ನಡೆದಿವೆ.

ಬೆಳಗಿನ ಹೊತ್ತು ವ್ಯಾಯಾಮ ಮಾಡುವುದರ ಒಳಿತುಗಳನ್ನು ನೋಡುವುದದಾದರೆ ಅದು ನಮ್ಮ ಶರೀರದ ಚಯಾಪಚಯವನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ. ವ್ಯಕ್ತಿಯೋರ್ವ ಸಾಮಾನ್ಯವಾಗಿ ಹಗಲಿಡೀ ಕಾರ್ಯಭಾರಗಳಿಂದ ದೈಹಿಕ ಮತ್ತು ಮಾನಸಿಕ ಒತ್ತಡಗಳನ್ನು ಅನುಭವಿಸಿರುತ್ತಾನೆ. ಆದರೆ ಬೆಳಗಿನ ಹೊತ್ತು ಇಂತಹ ಯಾವುದೇ ಒತ್ತಡಗಳಿಲ್ಲದೆ ಮನಸ್ಸು ಶಾಂತವಾಗಿರುತ್ತದೆ. ಹೀಗಾಗಿ ಹೆಚ್ಚಿನ ಶ್ರದ್ಧೆಯಿಂದ ವ್ಯಾಯಾಮ ಮಾಡಲು ಸಾಧ್ಯವಾಗುತ್ತದೆ.

ಬೆಳಗಿನ ವ್ಯಾಯಾಮವು ಹೆಚ್ಚಿನ ಉತ್ಪಾದಕತೆಯನ್ನು ಹೊಂದಿರುತ್ತದೆ ಮತ್ತು ಇಡೀ ದಿನ ನಿಮ್ಮ ಶಕ್ತಿಯು ಕುಂದಲು ಬಿಡುವುದಿಲ್ಲ,ಜೊತೆಗೆ ನಿಮ್ಮ ಚಟುವಟಿಕೆಗಳ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಲು ನೆರವಾಗುತ್ತದೆ. ಅಲ್ಲದೆ ಸಂಜೆಯ ಹೊತ್ತಿಗೆ ಹೋಲಿಸಿದರೆ ನಿಮ್ಮ ಶರೀರವನ್ನು ವಾರ್ಮ್ ಅಪ್ ಮಾಡಿಕೊಳ್ಳಲು ಹೆಚ್ಚಿನ ಸಮಯ ದೊರೆಯುತ್ತದೆ. ಬೆಳಗಿನ ವ್ಯಾಯಾಮ ನಿಮ್ಮ ದಿನಚರಿಯನ್ನು ಆರೋಗ್ಯಯುತವಾಗಿಸುತ್ತದೆ.

ಬೆಳಗಿನ ಜಾವ ಎದ್ದು ವ್ಯಾಯಾಮದಲ್ಲಿ ತೊಡಗಿಕೊಳ್ಳುವುದರಿಂದ ಒಳ್ಳೆಯ ನಿದ್ರೆ ದೊರೆಯುತ್ತದೆ ಮತ್ತು ಶರೀರಕ್ಕೆ ಉತ್ತಮ ವಿಶ್ರಾಂತಿಯು ಲಭಿಸುತ್ತದೆ. ಬೆಳಗ್ಗೆ ವ್ಯಾಯಾಮವನ್ನು ಮಾಡುವವರು ರಾತ್ರಿ ಬೇಗನೇ ನಿದ್ರೆಗೆ ಜಾರುತ್ತಾರೆ. ಇದು ತಡರಾತ್ರಿಯಲ್ಲಿ ತಿನಿಸುಗಳನ್ನು ತಿನ್ನುವ ಅಭ್ಯಾಸದಿಂದ ದೂರವಿರಿಸುತ್ತದೆ,ತನ್ಮೂಲಕ ಆರೋಗ್ಯಕರ ದೇಹತೂಕವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಅಲ್ಲದೆ ಸಂಜೆಯ ಸಮಯಕ್ಕಿಂತ ಬೆಳಗಿನ ಹೊತ್ತು ಜಿಮ್‌ಗಳಲ್ಲಿ ಜನರ ಸಂಖ್ಯೆ ಕಡಿಮೆಯಿರುವುದರಿಂದ ನೀವು ಆರಾಮವಾಗಿ ವ್ಯಾಯಾಮದಲ್ಲಿ ತೊಡಗಿಕೊಂಡಿರಬಹುದು.

ನೀವು ಬೆಳಿಗ್ಗೆ ಬೇಗ ಏಳಲು ಇಷ್ಟ ಪಡುವುದಿಲ್ಲವಾದರೆ ಸಂಜೆಯ ವ್ಯಾಯಾಮ ನಿಮಗೆ ಹೆಚ್ಚು ಸೂಕ್ತವಾಗಬಹುದು. ಸಂಜೆಯ ವ್ಯಾಯಾಮದ ವೇಳೆ ನಿಮಗೆ ಜೊತೆಗಾರರು ಸಿಗಬಹುದು,ನಿಮಗೆ ನೆರವಾಗಲು ಕೋಚ್ ಕೂಡ ಇರುತ್ತಾರೆ. ಬೆಳಗಿನ ಸಮಯಕ್ಕೆ ಹೋಲಿಸಿದರೆ ಸಂಜೆಗಳಲ್ಲಿ ನಿಮ್ಮ ಶರೀರವನ್ನು ವಾರ್ಮ್ ಅಪ್ ಮಾಡಿಕೊಳ್ಳಲು ಹೆಚ್ಚು ಹೊತ್ತು ಬೇಕಾಗುತ್ತದೆ. ಇಡೀ ದಿನದ ಒತ್ತಡಗಳ ಬಳಿಕ ಸಂಜೆಯ ವ್ಯಾಯಾಮ ನಿಮ್ಮನ್ನು ಉಲ್ಲಸಿತರನ್ನಾಗಿಸುತ್ತದೆ. ಸಂಜೆಯ ಹೊತ್ತು ಶರೀರದಲ್ಲಿಯ ಕೀಲುಗಳು ಮತ್ತು ಸ್ನಾಯುಗಳು ಹೆಚ್ಚಿನ ನಮ್ಯತೆಯನ್ನು ಹೊಂದಿರುವುದರಿಂದ ನೀವು ಸುದೀರ್ಘ ಅವಧಿಯವರೆಗೆ ವ್ಯಾಯಾಮವನ್ನು ಮಾಡಬಹುದಾಗಿದೆ ಮತ್ತು ಯಾವುದೇ ಗಾಯಗಳಾಗುವ ಸಾಧ್ಯತೆಯು ಕಡಿಮೆಯಾಗಿರುತ್ತದೆ.

ವ್ಯಾಯಾಮವನ್ನು ಬೆಳಗಿನ ಹೊತ್ತು ಮಾಡಿದರೇನೇ ಒಳ್ಳೆಯದು ಎಂಬ ಭಾವನೆಯನ್ನು ಸಾಮಾನ್ಯವಾಗಿ ಎಲ್ಲರೂ ಹೊಂದಿರುತ್ತಾರೆ. ಆದರೆ ಬೆಳಗಿನ ವ್ಯಾಯಾಮವು ಸಂಜೆಯ ವ್ಯಾಯಾಮಕ್ಕಿಂತ ಹೆಚ್ಚಿನ ಲಾಭಗಳನ್ನು ನೀಡುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ವಾಸ್ತವದಲ್ಲಿ ಇತ್ತೀಚಿನ ಕೆಲವು ಸಂಶೋಧನೆಗಳು ಸಂಜೆ ಹೊತ್ತು ವ್ಯಾಯಾಮ ಮಾಡುವುದು ಬೆಳಗಿನ ಹೊತ್ತಿಗೆ ಹೋಲಿಸಿದರೆ ಶರೀರಕ್ಕೆ ಹೆಚ್ಚಿನ ಫಿಟ್ನೆಸ್ ನೀಡುತ್ತದೆ ಎನ್ನುವುದನ್ನು ಬೆಟ್ಟು ಮಾಡಿವೆ. ಬೆಳಗಿನ ಹೊತ್ತಿರಲಿ ಅಥವಾ ಸಂಜೆಯ ಹೊತ್ತಿರಲಿ,ನಿಮ್ಮ ಶರೀರಕ್ಕೆ ಸೂಕ್ತವಾಗಿರುವ ಮತ್ತು ನಿಮ್ಮ ಜೀವನಶೈಲಿಗೆ ಅನುಕೂಲಕರವಾದ ಸಮಯವನ್ನು ಅನುಸರಿಸುವುದು ಮುಖ್ಯವಾಗುತ್ತದೆ.

ಅಲ್ಲದೆ ನಿಮ್ಮ ವ್ಯಾಯಾಮದ ಸಮಯ ನಿಗದಿತವಾಗಿರಬೇಕು. ಬೆಳಿಗ್ಗೆ ಮತ್ತು ಸಂಜೆಯ ವ್ಯಾಯಾಮಗಳಲ್ಲಿ ನಿಮ್ಮನ್ನು ಯಾವುದು ಹೆಚ್ಚು ಉಲ್ಲಸಿತಗೊಳಿಸುತ್ತದೆಯೋ ಅದಕ್ಕೇ ಅಂಟಿಕೊಳ್ಳುವುದು ಒಳ್ಳೆಯದು. ಇತರರಿಗೆ ಸೂಕ್ತವಾಗಿರುವುದು ನಿಮಗೆ ಸೂಕ್ತವಾಗದಿರಬಹುದು. ಹೀಗಾಗಿ ಬೆಳಿಗ್ಗೆ ವ್ಯಾಯಾಮ ಮಾಡುವುದೋ ಅಥವಾ ಸಂಜೆಗೋ ಎನ್ನುವುದನ್ನು ನೀವೇ ನಿರ್ಧರಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News