ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ: ನಿಮಗೆ ಐಟಿ ಇಲಾಖೆಯ ನೋಟಿಸ್ ಬಂದಿದೆಯೇ? ಹಾಗಾದರೆ ನೀವೇನು ಮಾಡಬೇಕು?

Update: 2018-06-06 13:06 GMT

ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲು ಗಡುವು ಮುಂದಿನ ತಿಂಗಳು ಅಂತ್ಯಗೊಳ್ಳಲಿದೆ ಮತ್ತು ನಿಮಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬರಬಹುದು. ಆದರೆ ನೀವು ಇಲಾಖೆಯ ನಿಯಮಗಳಿಗೆ ಅಂಟಿಕೊಂಡಿದ್ದರೆ ನೋಟಿಸ್‌ನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ಇಂತಹ ಹೆಚ್ಚಿನ ನೋಟಿಸುಗಳು ಮಾಮೂಲು ಕ್ರಮವಾಗಿರುತ್ತವೆ ಮತ್ತು 2017-18ನೇ ತೆರಿಗೆ ವರ್ಷಕ್ಕೆ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸುವಾಗ ಮಾಡಿರಬಹುದಾದ ತಪ್ಪುಗಳನ್ನು ನೆನಪಿಸುವ ಪತ್ರಗಳಾಗಿರುತ್ತವೆ.

ಆದಾಯ ತೆರಿಗೆ ಇಲಾಖೆಯ ಹೇಳಿಕೆಯಂತೆ ಇತ್ತೀಚಿನ ದಿನಗಳಲ್ಲಿ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸುವವರ ಸಂಖ್ಯೆಯು ಹೆಚ್ಚುತ್ತಿದೆ. ಹೀಗಾಗಿ ಕೆಲವರು ಹೀಗೆ ಸಲ್ಲಿಸಿದ ರಿಟರ್ನ್‌ಗಳಲ್ಲಿ ತಪ್ಪುಗಳನ್ನು ಮಾಡಿರಬಹುದು ಮತ್ತು ತೆರಿಗೆಗಳನ್ನು ಸಲ್ಲಿಸುವುದರಿಂದ ತಪ್ಪಿಸಿಕೊಳ್ಳುವ ಪ್ರಯತ್ನಗಳನ್ನೂ ಮಾಡಿರಬಹುದು. ಆದಾಯ ತೆರಿಗೆ ಇಲಾಖೆಯು ನಿಮಗೆ ನೋಟಿಸ್ ಕಳುಹಿಸಬಹುದಾದ ಮೂರು ಮುಖ್ಯ ಕಾರಣಗಳಿಲ್ಲಿವೆ.

1) ಆದಾಯ ಮತ್ತು ಆಸ್ತಿಗಳ ವಿವರಗಳ ಕುರಿತು ನೋಟಿಸ್

ಕಪ್ಪುಹಣ ಬಳಕೆ ಮತ್ತು ಬೇನಾಮಿ ಆಸ್ತಿಗಳಿಗೆ ಕಡಿವಾಣ ಹಾಕಲು ಆದಾಯ ತೆರಿಗೆ ಇಲಾಖೆಯು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಇಲಾಖೆಯು ನಿಮಗೆ ನೋಟಿಸ್ ಕಳುಹಿಸಬಹುದು ಮತ್ತು ನಿಮ್ಮ ಆದಾಯ ಮೂಲಗಳನ್ನು ಹಾಗೂ ಭಾರತದಲ್ಲಿ ಮತ್ತು ವಿದೇಶಗಳಲ್ಲಿ ನೀವು ಹೊಂದಿರುವ ಆಸ್ತಿಗಳನ್ನು ಘೋಷಿಸುವಂತೆ ನಿಮಗೆ ಸೂಚಿಸಬಹುದು.

2) ಮಾಮೂಲು ನೋಟಿಸ್

ಸಾಮಾನ್ಯವಾಗಿ ನೀವು ಸಲ್ಲಿಸಿರುವ ತೆರಿಗೆ ರಿಟರ್ನ್‌ಗಳನ್ನು ಯಶಸ್ವಿಯಾಗಿ ಸಂಸ್ಕರಿಸಲಾಗಿದೆ ಎನ್ನುವುದನ್ನು ತಿಳಿಸಲು ಇಲಾಖೆಯು ಈ ನೋಟಿಸ್‌ನ್ನು ಕಳುಹಿಸುತ್ತದೆ. ಆದರೂ ಕೆಲವೊಮ್ಮೆ ನಿಮ್ಮ ಲೆಕ್ಕಾಚಾರಗಳಲ್ಲಿ ತಪ್ಪುಗಳಿದ್ದರೆ ಅಥವಾ ನೀವು ರಿಟರ್ನ್‌ನಲ್ಲಿ ಘೋಷಿಸಿರುವ ಆದಾಯವು ತಾಳೆಯಾಗಿದ್ದರೆ ಇಲಾಖೆಯು ನೋಟಿಸ್‌ಗಳನ್ನು ಕಳುಹಿಸುತ್ತದೆ.

3) ಕಾನೂನು ಕ್ರಮದ ನೋಟಿಸ್

ನೀವು ಇಲಾಖೆಯಿಂದ ನೋಟಿಸ್ ಸ್ವೀಕರಿಸಿದ ಬಳಿವೂ ನಿಮ್ಮ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲು ವಿಫಲಗೊಂಡಿದ್ದರೆ ಇಲಾಖೆಯು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 143(2)ರಡಿ ಕಾನೂನು ಕ್ರಮದ ನೋಟಿಸ್‌ನ್ನು ಕಳುಹಿಸುತ್ತದೆ.

ನೋಟಿಸ್ ಬಂದಾಗ ನೀವೇನು ಮಾಡಬೇಕು?

ನೀವು ಆನ್‌ಲೈನ್ ಮೂಲಕ ತೆರಿಗೆ ರಿಟರ್ನ್ ಸಲ್ಲಿಸಿದ್ದರೆ ನಿಮಗೆ ಇ-ಮೇಲ್ ಮೂಲಕ ನೋಟಿಸ್‌ನ್ನು ಕಳುಹಿಸಲಾಗುತ್ತದೆ. ನೀವು ಮುಂದೇನು ಮಾಡಬೇಕು ಎಂಬ ಬಗ್ಗೆ ನಿರ್ದೇಶಗಳನ್ನೂ ನೀಡಲಾಗಿರುತ್ತದೆ. ಪ್ರತಿಯೊಂದು ನೋಟಿಸ್‌ಗೂ ಸುಸ್ತಿದಾರರು ಅಗತ್ಯವಾಗಿ ಅನುಸರಿಸಬೇಕಾದ ಕ್ರಮಗಳಿರುತ್ತವೆ. ಇ-ಮೇಲ್ ಸ್ವೀಕರಿಸಿದ ಬಳಿಕ ನಿಮ್ಮ ಆದಾಯ ತೆರಿಗೆ ಖಾತೆಗೆ ಲಾಗಿನ್ ಆಗಿ ‘ಮೈ ಪೆಂಡಿಂಗ್ ಆ್ಯಕ್ಷನ್ಸ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ,ತೆರೆದುಕೊಳ್ಳುವ ಪುಟದಲ್ಲಿ ‘ಫಾರ್ ಯುವರ್ ಆ್ಯಕ್ಷನ್’ನ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರಿನಲ್ಲಿ ಯಾವುದಾದರೂ ತಗಾದೆಯು ಬಾಕಿ ಉಳಿದುಕೊಂಡಿದೆಯೇ ಎನ್ನುವುದನ್ನು ಪರಿಶೀಲಿಸಿ,ಇಲಾಳೆಯ ಸೂಚನೆಯಂತೆ ನಡೆದುಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News