ಭೀಮಾ ಕೋರೆಗಾಂವ್ ಹಿಂಸಾಚಾರ: ನಕ್ಸಲೀಯರ ಸಂಪರ್ಕದ ಆರೋಪದಲ್ಲಿ ಐವರ ಬಂಧನ

Update: 2018-06-06 15:00 GMT

ಮುಂಬೈ, ಜೂ. 6: ಈ ವರ್ಷ ಜನವರಿಯಲ್ಲಿ ನಡೆದ ಭೀಮಾ-ಕೊರೇಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿ ನಕ್ಸಲ್ ಸಂಪರ್ಕ ಹೊಂದಿದ್ದಾರೆ ಎನ್ನಲಾದ ಐವರನ್ನು ಪುಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ರೋನಾ ವಿಲ್ಸನ್, ಸುಧೀರ್ ಧವಾಲೆ, ಸುರೇಂದ್ರ ಗಾಡ್ಲಿಂಗ್, ಶೋಮ ಸೇನ್ ಹಾಗೂ ಮಹೇಶ್ ರಾವತ್ ಅವರನ್ನು ದಿಲ್ಲಿ, ಮುಂಬೈ, ಪುಣೆ ಹಾಗೂ ನಾಗಪುರದಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಎಲ್ಗಾರ್ ಪರಿಷದ್‌ನ ಸಂದರ್ಭ ಪ್ರಚೋದಕ ಸಂದೇಶಗಳನ್ನು ಹರಡಿದರು ಹಾಗೂ ಸಾಮಾಜಿಕವಾಗಿ ವಿಭಜಿಸಲು ಪ್ರಯತ್ನಿಸಿದರು. ಕಾರ್ಯಕ್ರಮ ಆಯೋಜಿಸುವ ಮೂಲಕ ಅವರು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದರು ಹಾಗೂ ಎರಡು ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವ ಪ್ರಚೋದನಕಾರಿ ಭಾಷಣ ಮಾಡಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಭೀಮಾ-ಕೊರೆಗಾಂವ್ ಹೋರಾಟದ 200ನೇ ವರ್ಷಾಚರಣೆಯ ಸ್ಮರಣಾರ್ಥ 2017 ಡಿಸೆಂಬರ್ 31ರಂದು ಶನಿವಾರ್ವಾಡಾ ಪೋರ್ಟ್‌ನಲ್ಲಿ ಎಲ್ಗಾರ್ ಪರಿಷದ್ ಆಯೋಜಿಸಲಾಗಿತ್ತು. ಜನವರಿ 1ರಂದು ಎರಡು ಗುಂಪುಗಳ ನಡುವೆ ಘರ್ಷಣೆ ಆರಂಭವಾಗಿತ್ತು. ಈ ಘರ್ಷಣೆಯಲ್ಲಿ ಓರ್ವ ಮೃತಪಟ್ಟಿದ್ದ. ಇದು ರಾಜ್ಯ ವ್ಯಾಪಿ ಪ್ರತಿಭಟನೆ, ಹಿಂಸಾಚಾರಕ್ಕೆ ಕಾರಣವಾಗಿತ್ತು. ಹಿಂಸಾಚಾರದಲ್ಲಿ ಸರಕಾರಿ ಸೊತ್ತುಗಳಿಗೆ ಹಾನಿ ಉಂಟು ಮಾಡಲಾಗಿತ್ತು. ನಗರ ಕೇಂದ್ರಗಳಲ್ಲಿ ಮಾವೊ ವಾದಿಗಳೊಂದಿಗೆ ಸಂಪರ್ಕ ಹೊಂದಿರುವುದನ್ನು ಬಹಿರಂಗಪಡಿಸಲು ಪೊಲೀಸರು ಆರೋಪಿಗಳ ಮನೆ ಹಾಗೂ ಕಚೇರಿಗಳಿಗೆ ದಾಳಿ ನಡೆಸಿದ್ದರು.

 ಧವಾಲೆ ಎಡಪಂಥೀಯ ಉಗ್ರವಾದಿ ಹಾಗೂ ಕಬೀರ್ ಕಲಾ ಕಾಂಚನ್‌ನ ಸದಸ್ಯ. ವಕೀಲರಾಗಿರುವ ಗಾಡ್ಲಿಂಗ್ ನಕ್ಸಲೀಯರಿಗೆ ನೆರವು ನೀಡುತ್ತಿದ್ದರು, ವಿಲ್ಸಿನ್ ಈಗಾಗಲೇ ಮಾವೋವಾದಿ ಹೋರಾಟಗಾರ ಎಂದು ಪೊಲೀಸರು ಆರೋಪಿಸಿದ್ದಾರೆ. ಆದಾಗ್ಯೂ, ಪ್ರಕರಣದಲ್ಲಿ ತಮ್ಮನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ನಿಜವಾದ ಆರೋಪಿಗಳಿಂದ ಗಮನವನ್ನು ಬೇರೆಡೆ ಸೆಳೆಯಲು ನಮ್ಮನ್ನು ಬಲಿಪಶು ಮಾಡಲಾಗಿದೆ ಎಂದು ಆರೋಪಿಗಳು ಹೇಳಿದ್ದಾರೆ.

ನಿಜವಾದ ಆರೋಪಿ ಹೊರಗಡೆ: ಮೇವಾನಿ:

ಪ್ರಮುಖ ದಲಿತ ಹೋರಾಟಗಾರರಾದ ಸುಧೀರ್ ಧವಾಲೆ, ಸುರೇಂದ್ರ ಗಾಡ್ಲಿಂಗ್ ಹಾಗೂ ರೋನಾ ವಿಲ್ಸನ್ ಅವನ್ನು ಬಂಧಿಸಿರುವ ಬಗ್ಗೆ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೇವಾನಿ ಅವರು ಟ್ವಿಟ್ಟರ್‌ನಲ್ಲಿ ‘‘ಅಂಬೇಡ್ಕರ್ ಚಳುವಳಿ ಮೇಲೆ ದಾಳಿ: ಮಹಾರಾಷ್ಟ್ರ ಪೊಲೀಸರು ಅಂಬೇಡ್ಕರ್‌ವಾದಿ ಹೋರಾಟಗಾರರು ಹಾಗೂ ಸಂಪಾದಕ ಸುಧೀರ್ ಧವಾಲೆ ಅವರನ್ನು ಮುಂಬೈಯಿಂದ, ವಕೀಲ ಸುರೇಂದ್ರ ಗಾಡ್ಲಿಂಗ್ ಅವರನ್ನು ನಾಗಪುರದಿಂದ, ರೋನಾ ವಿಲ್ಸನ್ ರನ್ನು ದಿಲ್ಲಿಯಿಂದ ಬಂಧಿಸಿದ್ದಾರೆ. ಮೂವರ ವಿರುದ್ಧ ಕಠಿಣ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಭೀಮಾ ಕೋರೆಗಾಂವ್‌ನ ಆರೋಪಿ ಮನೋಹರ್ ಭಿಡೆ ನಿರ್ಭಯವಾಗಿ ಓಡಾಡುತ್ತಿದ್ದಾರೆ’’ ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News