ಸ್ವಾಭಿಮಾನಿ ಹೋರಾಟದ ತೇರು ಚಲಿಸಿದೆ...!

Update: 2018-06-07 06:46 GMT

ಇವತ್ತಿನಷ್ಟು ರಾಜಕಾರಣಿಗಳು, ಅಧಿಕಾರಿಗಳು, ಭ್ರಷ್ಟಗೊಂಡ ದುರಂತದ ಕಾಲ ಮತ್ತೊಂದಿಲ್ಲ. ಸ್ವಜನ ಪಕ್ಷಪಾತ, ಜಾತಿವಾದ ಹಾಗೂ ದರ್ಪದ ಕೋಮುವಾದಗಳೇ ವಿಜೃಂಭಿಸುತ್ತಿವೆ. ಇಂತಹ ಹತಾಶೆಯ ದಿನಗಳಲ್ಲೂ ಅಧಿಕಾರ ಮತ್ತು ಸಂಪತ್ತುಗಳೆಂಬ ಎರಡೂ ಅಪಾಯಗಳ ನಡುವೆಯೇ ಬದುಕುತ್ತಾ ಶುದ್ಧ ವ್ಯಕ್ತಿತ್ವ ಮತ್ತು ಚಾರಿತ್ರ್ಯಗಳನ್ನೇ ತಮ್ಮ ಆಸ್ತಿ ಎಂಬಂತೆ ಗಾಢವಾಗಿ ನಂಬಿರುವ ಪರಮೇಶ್ವರ್ ಅವರು ಕರ್ನಾಟಕ ಸರಕಾರದ ಉಪಮುಖ್ಯಮಂತ್ರಿಯಾಗಿರುವುದು ನಾಡಿಗೆ ಒಂದು ಘನತೆ.

ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿಯವರ ಭರವಸೆಯನ್ನು ಡಾ. ಜಿ.ಪರಮೇಶ್ವರ್‌ರವರು ಇಂದು ಬಹುತೇಕ ಮಟ್ಟಿಗೆ ಈಡೇರಿಸಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವವನ್ನು ಮೈಗೂಡಿಸಿಕೊಂಡು ಬಂದಿದ್ದ ಪರಮೇಶ್ವರ್ ಅವರಲ್ಲಿನ ಸಂಘಟನಾತ್ಮಕ ಚಾತುರ್ಯವನ್ನು ಗಮನಿಸಿದ ರಾಜೀವ್ ಗಾಂಧಿಯವರು ತಮ್ಮ ಪಕ್ಷದ ಬಲವರ್ಧನೆಗೆ ಇವರು ಸಮರ್ಥರೆಂದು ಸೂಕ್ಷ್ಮವಾಗಿ ಗ್ರಹಿಸಿಯೇ ಅಂದು ಕಾಂಗ್ರೆಸ್ ತೆಕ್ಕೆಗೆ ಬರಮಾಡಿಕೊಂಡು ಬಂದದ್ದು. ಇಂದು ರಾಜೀವ್ ಗಾಂಧಿಯವರ ನಿರೀಕ್ಷೆ ಹುಸಿಯಾಗಲಿಲ್ಲ. ದಲಿತ ಸಮುದಾಯವನ್ನಷ್ಟೇ ಅಲ್ಲದೇ ಇಡೀ ರಾಜ್ಯದ ಜನತೆಯ ಆಶೋತ್ತರಗಳಿಗೆ ಪ್ರತೀಕವಾದ ಡಾ. ಜಿ. ಪರಮೇಶ್ವರ್ ಅವರೀಗ ಉಪಮುಖ್ಯಮಂತ್ರಿಯಾಗಿ ಆರು ಕೋಟಿ ಕನ್ನಗಡಿಗರ ಎದೆಯಲ್ಲಿ ಹೊಸ ಕನಸುಗಳ ಬೀಜ ಬಿತ್ತಿದ್ದಾರೆ. 1951 ರ ಆಗಸ್ಟ್ 6 ರಂದು ಜನಿಸಿದ ಪರಮೇಶ್ವರ್, ಕಡು ಕಷ್ಟದಲ್ಲಿಯೇ ಬಾಲ್ಯ ಹಾಗೂ ವ್ಯಾಸಂಗವನ್ನು ಮುಗಿಸಿ ಸವಾಲುಗಳ ನಡುವೆಯೂ ಒಂದೊಂದೇ ಮೆಟ್ಟಿಲು ಏರುತ್ತಾ ಇಂದು ಈ ಹಂತಕ್ಕೆ ಬಂದು ನಿಂತಿರುವವರೇ ಹೊರತು ಶ್ರೀಮಂತ ಕುಟುಂಬದ, ಬಾಯಲ್ಲಿ ಬೆಳ್ಳಿ ಚಮಚದೊಂದಿಗೆ ಹುಟ್ಟಿದವರೇನಲ್ಲ. ಛಲ ಹಾಗೂ ಆತ್ಮ ವಿಶ್ವಾಸವಿದ್ದಲ್ಲಿ ಎಂತಹವರೂ ಬದುಕಲ್ಲಿ ಅನನ್ಯ ವ್ಯಕ್ತಿತ್ವದೊಂದಿಗೆ ಸಾಧನೆ ಮಾಡಲೂ ಕೂಡ ಸಾಧ್ಯವಿದೆ ಎಂಬುದಕ್ಕೆ ಪರಮೇಶ್ವರ್ ಅವರು ಜ್ವಲಂತ ಉದಾಹರಣೆಯಾಗಿದ್ದಾರೆ. ಪರಮೇಶ್ವರ್ ಅವರು ಪ್ರಸ್ತುತ ವೈದ್ಯಕೀಯ, ಇಂಜಿನಿಯರಿಂಗ್ ಒಳಗೊಂಡಂತೆ ಹಲವಾರು ಶಾಲಾ ಕಾಲೇಜುಗಳ, ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಸಮೂಹದ ರೂವಾರಿಯಾಗಿದ್ದರೂ, ಅವರು ಹುಟ್ಟಿ ಬೆಳೆದಿದ್ದು ಮತ್ತು ತಮ್ಮ ಬಾಲ್ಯವನ್ನು ಕಳೆದದ್ದು ಅತ್ಯಂತ ಕಡುಬಡುತನದ ದಲಿತ ಕುಟುಂಬದಲ್ಲಿ. ಇವರ ತಂದೆ ಗಾಂಧಿವಾದಿಯಾಗಿದ್ದ ಎಚ್.ಎಂ.ಗಂಗಾಧರಯ್ಯನವರು. 1936ರಲ್ಲಿ ತುಮಕೂರಿನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮಾಡುವಾಗಲೇ ತಮ್ಮ ಶಾಲೆಗೆ ಬಂದಿದ್ದ ಮಹಾತ್ಮಾ ಗಾಂಧಿಯವರಿಗೆ ರಾಗಿ ರೊಟ್ಟಿ ಹುಚ್ಚೆಳ್ಳು ಚಟ್ನಿಯನ್ನು ತಮ್ಮ ಕೈಯಾರೆ ತಿನ್ನಿಸಿದವರು ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಬೆಂಗಳೂರಿಗೆ ಬಂದಿದ್ದಾಗ ದಲಿತ ಸಮಾಜದ ದುಸ್ಥಿತಿಗಳನ್ನು ಕುರಿತು ಅವರೊಡನೆ ಸಂವಾದ ಮಾಡಿದವರು. ಬಾಬಾ ಸಾಹೇಬರ ಸಂದೇಶದಂತೆಯೇ ಬುದ್ಧ ಗುರುವಿನ ಕರುಣಾ ಮೈತ್ರಿಯ ತತ್ವವನ್ನು ಮನನ ಮಾಡಿಕೊಂಡು ತಮ್ಮ ಶಿಕ್ಷಕ ವೃತ್ತಿ ಮತ್ತು ಅತ್ಯದ್ಭುತ ಚಿತ್ರಕಲೆಯ ಪ್ರತಿಭೆಯನ್ನು ಧಾರೆ ಎರೆದು ದಲಿತ ಸಮುದಾಯದ ಅನಕ್ಷರಸ್ಥ ಮಕ್ಕಳಿಗಾಗಿ ಉಚಿತ ವಸತಿ ಶಾಲೆಯೊಂದನ್ನು ಆರಂಭಿಸಿ ತಮ್ಮ ಸಮಾಜ ಸೇವೆಯ ಮೊದಲ ಪುಟವನ್ನು ತೆರೆದರು. ಪಾದಗಳಲ್ಲಿ ರಕ್ತ ಸೋರುವಷ್ಟು ಸುದೀರ್ಘವಾದ ಕಾಲ್ನಡಿಗೆಯಿಂದಲೇ ತುಮಕೂರು, ಬೆಂಗಳೂರು, ಹಾಸನ, ಮಂಡ್ಯ, ಮೈಸೂರು ಜಿಲ್ಲೆಗಳ ಹಳ್ಳಿ ಹಳ್ಳಿಗೆ ತಿರುಗಾಡಿ ದಲಿತ ವಿದ್ಯಾರ್ಥಿಗಳಿಗಾಗಿ ದವಸ ಧಾನ್ಯಗಳನ್ನು ಸಂಗ್ರಹಿಸಿದರು. ಮನೆಯಲ್ಲಿ ತಮ್ಮ ಮಕ್ಕಳು ಉಪವಾಸವಿದ್ದರೂ ಕಡೆಗಣಿಸಿ ವಸತಿ ಶಾಲೆಯ ವಿದ್ಯಾರ್ಥಿಗಳನ್ನು ಪೋಷಿಸಿದರು. ಅಂದು ತಮ್ಮ ಸಂಸ್ಥೆಗೆ ಭೇಟಿ ನೀಡಿದ ವಿನೋಬಾ ಭಾವೆಯವರ ಸಲಹೆ ಮೇರೆಗೆ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಸಲಹೆ ಮೇರೆಗೆ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದರು. ಅಂದಿನ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಮಾನವೀಯ ಗುಣಗಳಿಂದಾಗಿ ಸಿದ್ಧಾರ್ಥ ಸಂಸ್ಥೆ ಆರಂಭವಾಯಿತು. ಇಂದು ಸಿದ್ಧಾರ್ಥ ಶಿಕ್ಷಣ ಸಂಸ್ಥೆಯು ಅಂತರ್ ರಾಷ್ಟ್ರೀಯ ಮಟ್ಟಕ್ಕೆ ಬೆಳೆದು ಆಲದ ಮರವಾಗಿ ನಿಂತಿದೆ. ಒಂದು ಲಕ್ಷಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಹಾಗೂ ಐದು ಸಾವಿರ ಕುಟುಂಬ ಈ ಸಂಸ್ಥೆಯ ನೆರಳಿನಲ್ಲಿ ಆಶ್ರಯ ಪಡೆದಿದೆ. ಇಂತಹ ಅನನ್ಯ ಬದ್ಧತೆಯ ಸಮಾಜ ಸೇವಕರ ಮನೆಯ ಉಪವಾಸಗಳ ನಡುವೆಯೇ ಪರಮೇಶ್ವರ್‌ರವರು ಛಲದೊಂದಿಗೆ ಹೋರಾಡಿ ತಮ್ಮ ಅತ್ಯುನ್ನತ ವ್ಯಾಸಂಗವನ್ನು ಮುಂದುವರಿಸಿರುವುದು ಅದ್ಭುತ. ಇಂತಹ ಚರಿತ್ರಾರ್ಹ ವ್ಯಕ್ತಿಯ ಅರಿವಿನ ಹಾದಿ ಮತ್ತು ಹೆಜ್ಜೆ ಜಾಡಿನಲ್ಲಿಯೇ ನಡೆಯಬೇಕೆಂಬ ಸಂಕಲ್ಪ ತೊಟ್ಟವರು ಡಾ. ಜಿ.ಪರಮೇಶ್ವರ್. ತಂದೆಯ ಕಠಿಣ ಶಿಸ್ತು ಮಾರ್ಗದರ್ಶನ ಅವರನ್ನು ಎಂದಿಗೂ ಹಾದಿ ತಪ್ಪದಂತೆಯೇ ನೈತಿಕ ಕಟ್ಟುಪಾಡುಗಳಿಂದ ದೂರ ಸರಿಯದಿರುವಂತೆಯೂ ಮಾಡಿದವು. ಬಹುಶಃ ಇಂದಿನ ಅವರ ಯಶಸ್ಸಿನ ಹಿಂದೆ ತಂದೆಯ ತತ್ವ ಆದರ್ಶಗಳೇ ಕಾರಣ. ಬಹುತೇಕರು ಪರಮೇಶ್ವರ್‌ಅವರನ್ನು ಅಜಾತ ಶತ್ರು ಎಂದೇ ಕರೆಯುತ್ತಾರೆ. ತಂದೆಯಂತೆಯೇ ಸಂಯಮ, ಸಭ್ಯ ನಡವಳಿಕೆ ತುಟಿ ಮೀರದ ಗಂಭೀರ ಹಾಗೂ ಸಜ್ಜನ ಮಾತುಗಾರಿಕೆ, ಪ್ರಾಮಾಣಿಕ ಹಾಗೂ ಪಾರದರ್ಶಕ ಅಂಶಗಳೇ ಪರಮೇಶ್ವರ್‌ರ ಒಡನಾಡಿ ಆಗಿವೆ. ಬೆಂಗಳೂರಿನ ಹೆಬ್ಬಾಳದಲ್ಲಿ ಕೃಷಿ ಪದವಿ ಓದುತ್ತಿರುವ ಹಂತದಲ್ಲೇ ವಿದ್ಯಾರ್ಥಿಗಳ ಸಮಸ್ಯೆಗಳನ್ನಿಟ್ಟುಕೊಂಡು, ವಿದ್ಯಾರ್ಥಿ ಸಂಘಟನೆಯೊಂದಿಗೆ ತಮ್ಮ ಮೊದಲದ ಹೋರಾಟದ ಬದುಕನ್ನು ಪ್ರಾರಂಭಿಸಿದವರು ಡಾ. ಜಿ.ಪರಮೇಶ್ವರ್. ಅಂದಿನ ಅನೇಕ ಮಂದಿ ಅವರ ಸಹಪಾಠಿಗಳು ಇಂದಿಗೂ ಅವರ ಸಂಘಟನಾ ಛಾತಿ ಮತ್ತು ವಾಕ್ಚಾರ್ತುಯವನ್ನು ಮರೆಯಲಾರರು. ಸ್ನಾತಕೋತ್ತರ ಪದವಿಯನ್ನು ಪಡೆದ ನಂತರ ಅವರು ಉನ್ನತ ವ್ಯಾಸಂಗಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳಿದರು. ಅಲ್ಲಿನ ಅಡಿಲೇಡ್ ವಿಶ್ವವಿದ್ಯಾನಿಲಯದ ವೇಟ್ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಕೃಷಿ ಸಂಬಂಧಿತವಾದ ತಮ್ಮ ಸಂಶೋಧನೆಯನ್ನು ಪೂರ್ಣಗೊಳಿಸಿ ಡಾಕ್ಟರೇಟ್ ಪದವಿಯನ್ನು ಪಡೆದು ಭಾರತಕ್ಕೆ ಹಿಂದಿರುಗಿದರು. ಬಹುಶಃ ಉದ್ಯೋಗಿಯಾಗಿದ್ದರೆ ಅವರಿಂದು ನಿವೃತ್ತ ಪ್ರೊಫೆಸರ್ ಆಗುತ್ತಿದ್ದರು. ಅಷ್ಟೊತ್ತಿಗಾಗಲೇ ಪರಮೇಶ್ವರ್‌ರಿಗೆ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ವಹಿಸುವುದಕ್ಕೆ ಪ್ರಮುಖವಾದ ಜವಾಬ್ದಾರಿಯೊಂದು ಕಾದಿತ್ತು. ಅದರೊಂದಿಗೆ ರಾಜ್ಯ ವಿಧಾನ ಪರಿಷತ್ತಿಗೆ ಒಮ್ಮೆ ಆಯ್ಕೆಯಾಗಿದ್ದ ತಂದೆ ಗಂಗಾಧರಯ್ಯ ನವರ ವ್ಯಕ್ತಿತ್ವ ಒತ್ತಾಸೆ ಮತ್ತು ರಾಜೀವ್ ಗಾಂಧಿಯವರ ಆಹ್ವಾನಗಳೆರಡೂ ಸೇರಿ 1989ರಲ್ಲಿ ಡಾ. ಜಿ.ಪರಮೇಶ್ವರ್ ರವರು ಕಾಂಗ್ರೆಸ್ ಪಕ್ಷವನ್ನು ಸೇರುವುದರ ಮೂಲಕ ಸಕ್ರಿಯ ರಾಜಕಾರಣವನ್ನು ಪ್ರಾರಂಭಿಸಿದರು.

 
ಇವತ್ತಿನಷ್ಟು ರಾಜಕಾರಣಿಗಳು, ಅಧಿಕಾರಿಗಳು, ಭ್ರಷ್ಟಗೊಂಡ ದುರಂತದ ಕಾಲ ಮತ್ತೊಂದಿಲ್ಲ. ಸ್ವಜನ ಪಕ್ಷಪಾತ, ಜಾತಿವಾದ ಹಾಗೂ ದರ್ಪದ ಕೋಮು ವಾದಗಳೇ ವಿಜೃಂಭಿಸುತ್ತಿವೆ. ಇಂತಹ ಹತಾಶೆಯ ದಿನಗಳಲ್ಲೂ ಅಧಿಕಾರ ಮತ್ತು ಸಂಪತ್ತು ಗಳೆಂಬ ಎರಡೂ ಅಪಾಯಗಳ ನಡುವೆಯೇ ಬದುಕುತ್ತಾ ಶುದ್ಧ ವ್ಯಕ್ತಿತ್ವ ಮತ್ತು ಚಾರಿತ್ರ್ಯಗಳನ್ನೇ ತಮ್ಮ ಆಸ್ತಿ ಎಂಬಂತೆ ಗಾಢವಾಗಿ ನಂಬಿರುವ ಪರಮೇಶ್ವರ್ ಅವರು ಕರ್ನಾಟಕ ಸರಕಾರದ ಉಪಮುಖ್ಯಮಂತ್ರಿಯಾಗಿರುವುದು ನಾಡಿಗೆ ಒಂದು ಘನತೆ. ತಂದೆ ಗಂಗಾಧರಯ್ಯ ಮತ್ತು ತಾಯಿ ಗಂಗಮಾಳಮ್ಮ ನವರಂತೆಯೇ ಅತ್ಯಂತ ಮೃದು ಭಾಷಿಕರಾದ ಪರಮೇಶ್ವರ್ ಅವರು ರಾಜೀವ್ ಗಾಂಧಿಯವರ ಆಶಯದಂತೆ ತುಮಕೂರು ಜಿಲ್ಲೆಯ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ 1989ರಲ್ಲಿ ಶಾಸಕರಾಗಿ ವಿಧಾನಸಭೆಗೆ ಆಯ್ಕೆಯಾಗುವುದರ ಮೂಲಕ ರಾಜಕಾರಣಕ್ಕೆ ನಾಂದಿ ಹಾಡಿದರು. 1999 ಮತ್ತು 2004ರಲ್ಲಿಯೂ ಸಹ ಮಧುಗಿರಿಯಿಂದಲೇ ಮರುಆಯ್ಕೆಗೊಂಡರು. ನಂತರ ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆಯಾಗಿ ಅವರು ತಮ್ಮ ಕ್ಷೇತ್ರವನ್ನು ಕೊರಟಗೆರೆಗೆ ಬದಲಾಯಿಸಿದರು. ಅದು ಅನಿವಾರ್ಯವೂ ಆಗಿತ್ತು. 2008ರಲ್ಲಿ ಕೊರಟಗೆರೆಯಿಂದ ಆಯ್ಕೆಯಾಗಿ, 2014ರಲ್ಲಿ ಸೋಲಿನ ಕಹಿ ಉಂಡರೂ ಮತ್ತೆ 2018ರ ಇತ್ತೀಚಿನ ಚುನಾವಣೆಯಲ್ಲಿ ವಿಜಯೀ ಅಭ್ಯರ್ಥಿಯಾಗಿ ಹೊರಹೊಮ್ಮಿದರು. 1993-94ರಲ್ಲಿ ರೇಷ್ಮೆ ಖಾತೆ ಸಚಿವರಾಗಿ ತಮ್ಮ ಕೃಷಿ ವಲಯದ ಜ್ಞಾನ ಮತ್ತು ಪ್ರತಿಭೆಗಳ ನೆರವಿನೊಂದಿಗೆ ಹೊಸ ಯೋಜನೆಗಳನ್ನು ರೂಪಿಸಿ ರೇಷ್ಮೆ ಕೃಷಿಕರ ಅನೇಕ ಸಮಸ್ಯೆಗಳನ್ನು ಬಗೆಹರಿಸಿದರು. ಖಾತೆಯೊಂದನ್ನು ಹೇಗೆ ನಿಭಾಯಿಸಬೇಕೆಂಬುದಕ್ಕೆ ಪರಮೇಶ್ವರ್ ಒಂದು ಮಾದರಿಯನ್ನಬಹುದು. 1999ರಿಂದ 2004ರವರೆಗೆ ಉನ್ನತ ಶಿಕ್ಷಣ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ವಾರ್ತಾ ಇಲಾಖೆಯ ಸಚಿವರಾಗಿ ಪರಮೇಶ್ವರ್ ರವರು ಮಾಡಿದ ಸಾಧನೆಗಳ ಕಾರಣದಿಂದಲೇ ಅವರ ವ್ಯಕ್ತಿತ್ವ ರಾಜ್ಯದಾಚೆಗೂ ಪಸರಿಸುವಂತಾಯಿತು. ಪಕ್ಷದಲ್ಲೂ ಅವರು ಗಣನೀಯವಾದ ಸ್ಥಾನಮಾನಗಳನ್ನು ಪಡೆಯಲು ನೆರವಾಯಿತು.
ಅವರು ರಾಜ್ಯದ ಗೃಹಮಂತ್ರಿಗಳಾಗಿದ್ದಾಗಲೇ ಅವರ ಬಗ್ಗೆ ದಲಿತ ಸಮುದಾಯವಷ್ಟೇ ಅಲ್ಲದೇ ಇಡೀ ರಾಜ್ಯದ ಸಹೃದಯ ಜನಕ್ಕೆ ಒಬ್ಬ ಚಿಂತನ ಶೀಲ ಹಾಗೂ ಚಲನಶೀಲ ದಿಟ್ಟ ನಾಯಕನೊಬ್ಬನನ್ನು ಗುರುತಿಸುವಂತಾಯಿತು. ಬುದ್ಧ ಚಿಂತನೆಗಳಿಂದ ಪ್ರೇರಿತವಾದ ಅವರ ಕೆಲಸಗಳು ಸಹಜವಾಗಿಯೇ ಅವರನ್ನು ರಾಜ್ಯ ರಾಜಕಾರಣದಲ್ಲಿಂದು ಅತ್ಯುನ್ನತ ಮಟ್ಟಕ್ಕೆ ತಂದು ನಿಲ್ಲಿಸಿ್ತೆಂಬುದು ನಿರ್ವಿವಾದದ ಸಂಗತಿಯಾಗಿದೆ.
ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಹೊರಡಿಸಿದ ಸ್ವಾಭಿಮಾನದ ಹೋರಾಟದ ತೇರನ್ನು ತಮ್ಮ ಸಾಮರ್ಥ್ಯ ಮೀರಿ ಮುನ್ನಡೆಸಿದ, ಮುನ್ನಡೆಸುತ್ತಿರುವ ಪರಮೇಶ್ವರ್ ಅವರ ಬಗ್ಗೆ ಅವರ ಅಭಿಮಾನಿ ವೃಂದ ಇಟ್ಟಿಕೊಂಡಿರುವ ನಿರೀಕ್ಷೆಗಳು ಅಷ್ಟಿಷ್ಟಲ್ಲ. ಭವಿಷ್ಯದ ದಿನಗಳಲ್ಲಿ ಅವರು ರಾಜ್ಯ, ರಾಷ್ಟ್ರ ರಾಜಕಾರಣದಲ್ಲೂ ಇನ್ನಷ್ಟು ಉನ್ನತ ಸ್ಥಾನ ಪಡೆದು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವುದರ ಮೂಲಕ ದಲಿತ ಸಮುದಾಯಕ್ಕೆ ಅರ್ಥಪೂರ್ಣ ದಾರಿಯೊಂದನ್ನು ತೋರಬೇಕಿದೆ. ‘ಮನೆ ಗೆದ್ದು ಮಾರು ಗೆಲ್ಲು’ ಎಂಬ ನಾಣ್ನುಡಿಯಂತೆ ಅಣ್ಣ ಡಾ.ಜಿ.ಶಿವಪ್ರಸಾದ್, ಅಕ್ಕ ನಾಗರತ್ನಮ್ಮ, ತಂಗಿ ಭಾಗ್ಯಮ್ಮ ಮತ್ತು ಕಮಲಮ್ಮ ಹಾಗೂ ಪತ್ನಿ ಕನ್ನಿಕಾ ಪರಮೇಶ್ವರಿಯವರೊಂದಿಗೆ ತುಂಬು ಕುಟುಂಬದ ಬದುಕನ್ನು ಬುದ್ಧಗುರುವಿನ ಬೆಳಕಿನ ಸಂದೇಶಕ್ಕೆ ಸಮರ್ಥ ವಾಹಕರಾಗಿ ಭಾರತದಾದ್ಯಂತ ಜೀವ ಕಾಳಜಿಯ, ಪ್ರಜಾಸತ್ತಾತ್ಮಕ ಮೌಲ್ಯಗಳ ಉಳಿವಿಗೆ ಇನ್ನಷ್ಟು, ಶ್ರಮಿಸಬೇಕೆಂಬುದೇ ಎಲ್ಲರ ಪ್ರಬಲ ಇರಾದೆಯಾಗಿದೆ. ಉಪಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಡಾ. ಜಿ.ಪರಮೇಶ್ವರ್ ರವರಿಗೆ ಎದೆತುಂಬಿದ ಹಾರೈಕೆಗಳು.

Writer - ಡಾ. ಮಾದೇವ್ ಭರಣಿ

contributor

Editor - ಡಾ. ಮಾದೇವ್ ಭರಣಿ

contributor

Similar News

ಜಗದಗಲ
ಜಗ ದಗಲ