ವಿರಾಟ್ ಕೊಹ್ಲಿಗೆ ಬಿಸಿಸಿಐ ವರ್ಷದ ಕ್ರಿಕೆಟಿಗ ಪ್ರಶಸ್ತಿ

Update: 2018-06-07 09:33 GMT

 ಹೊಸದಿಲ್ಲಿ, ಜೂ.7: ಭಾರತದ ನಾಯಕ ವಿರಾಟ್ ಕೊಹ್ಲಿ ಕಳೆದ ಎರಡು ವರ್ಷಗಳಲ್ಲಿ ತೋರಿದ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದ ಹಿನ್ನೆಲೆಯಲ್ಲಿ ಬಿಸಿಸಿಐ ವರ್ಷದ ಕ್ರಿಕೆಟಿಗನಿಗೆ ನೀಡುವ ಪ್ರತಿಷ್ಠಿತ ಪಾಲಿ ಉಮ್ರಿಗರ್ ಪ್ರಶಸ್ತಿಯನ್ನು ನೀಡಿ ಗೌರವಿಸಲು ನಿರ್ಧರಿಸಿದೆ.

ವಿಶ್ವಕಪ್ ತಾರೆಯರಾದ ಹರ್ಮನ್‌ಪ್ರೀತ್ ಕೌರ್ ಹಾಗೂ ಸ್ಮತಿ ಮಂಧಾನ ವರ್ಷದ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

 ಕಳೆದ ಎರಡು ಋತುವಿನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನೀಡಿರುವ ಅತ್ಯುತ್ತಮ ಪ್ರದರ್ಶನದ ಹಿನ್ನೆಲೆಯಲ್ಲಿ 2016-17 ಹಾಗೂ 2017-18ರ ಸಾಲಿಗೆ ಶ್ರೇಷ್ಠ ಅಂತರ್‌ರಾಷ್ಟ್ರೀಯ ಕ್ರಿಕೆಟಿಗನಿಗೆ ನೀಡುವ ಪ್ರತಿಷ್ಠಿತ ಪಾಲಿ ಉಮ್ರಿಗರ್ ಪ್ರಶಸ್ತಿಯನ್ನು ಜೂ.12ರಂದು ನಡೆಯಲಿರುವ ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀಡಿ ಗೌರವಿಸಲಾಗುತ್ತದೆ ಎಂದು ಬಿಸಿಸಿಐ ಪ್ರಕಟನೆಯೊಂದರಲ್ಲಿ ತಿಳಿಸಿದೆ.

2016-17ರ ಸಾಲಿನಲ್ಲಿ ಕೊಹ್ಲಿ 13 ಟೆಸ್ಟ್ ಪಂದ್ಯಗಳಲ್ಲಿ 74ರ ಸರಾಸರಿಯಲ್ಲಿ ಒಟ್ಟು 1,332 ರನ್ ಗಳಿಸಿದ್ದಾರೆ. ಇದೇ ಅವಧಿಯಲ್ಲಿ 27 ಏಕದಿನಗಳಲ್ಲಿ 84.22ರ ಸರಾಸರಿಯಲ್ಲಿ 1,516 ರನ್ ಗಳಿಸಿದ್ದಾರೆ.

2017-18ರ ಋತುವಿನಲ್ಲಿ 6 ಟೆಸ್ಟ್ ಪಂದ್ಯಗಳನ್ನು ಆಡಿರುವ ಕೊಹ್ಲಿ 89.6ರ ಸರಾಸರಿಯಲ್ಲಿ 896 ರನ್ ಗಳಿಸಿದ್ದಾರೆ. ಏಕದಿನದಲ್ಲಿ 75.50ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

ಎರಡು ವರ್ಷಗಳ ಸಾಧನೆಗೆ ಕೊಹ್ಲಿ ಟ್ರೋಫಿಯ ಜೊತೆಗೆ ತಲಾ 15 ಲಕ್ಷ ರೂ. ಬಹುಮಾನ ಸ್ವೀಕರಿಸಲಿದ್ದಾರೆ. ಕಳೆದ ವರ್ಷ ನಡೆದ ಮಹಿಳೆಯರ ವಿಶ್ವಕಪ್‌ನಲ್ಲಿ ಭಾರತ ರನ್ನರ್ಸ್‌ಅಪ್ ಪ್ರಶಸ್ತಿ ಜಯಿಸಲು ಪ್ರಮುಖ ಪಾತ್ರವಹಿಸಿರುವ ಹರ್ಮನ್‌ಪ್ರೀತ್ ಹಾಗೂ ಮಂಧಾನ ಕ್ರಮವಾಗಿ 2016-17 ಹಾಗೂ 2017-18ರ ಸಾಲಿನ ಶ್ರೇಷ್ಠ ಅಂತರ್‌ರಾಷ್ಟ್ರೀಯ ಕ್ರಿಕೆಟರ್(ಮಹಿಳೆಯರು) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಮಾಜಿ ಅಧ್ಯಕ್ಷ ಜಗಮೋಹನ್ ದಾಲ್ಮಿಯಾರ ಸ್ಮರಣಾರ್ಥ ಬಿಸಿಸಿಐ ನಾಲ್ಕು ಪ್ರಶಸ್ತಿಯನ್ನು ಸ್ಥಾಪಿಸಿದೆ.

ಜಗಮೋಹನ್ ದಾಲ್ಮಿಯಾ ಸ್ಮಾರಕ ಟ್ರೋಫಿಯನ್ನು ಅಂಡರ್-16 ವಿಜಯ್ ಮರ್ಚಂಟ್ ಟ್ರೋಫಿಯಲ್ಲಿ ಕ್ರಮವಾಗಿ ಗರಿಷ್ಠ ಸ್ಕೋರ್ ಗಳಿಸುವ ದಾಂಡಿಗ ಹಾಗೂ ಗರಿಷ್ಠ ವಿಕೆಟ್ ಪಡೆಯುವ ಬೌಲರ್‌ಗೆ ನೀಡಲಾಗುತ್ತದೆ. ಮಹಿಳಾ ಕ್ರಿಕೆಟ್‌ನಲ್ಲಿ ಶ್ರೇಷ್ಠ ಜೂನಿಯರ್ ಹಾಗೂ ಸೀನಿಯರ್ ಕ್ರಿಕೆಟರ್ ಪ್ರಶಸ್ತಿ ನೀಡಲಾಗುತ್ತದೆ.

  2016-17ರ ಸಾಲಿನ ಕರ್ನಲ್ ಸಿಕೆ ನಾಯ್ಡು ಜೀವಮಾನ ಸಾಧನಾ ಪ್ರಶಸ್ತಿಯನ್ನು ಮರಣೋತ್ತರವಾಗಿ ಮಾಜಿ ಬ್ಯಾಟ್ಸ್‌ಮನ್, ದಿವಂಗತ ಪಂಕಜ್ ರಾಯ್‌ಗೆ ನೀಡಲು ಬಿಸಿಸಿಐ ನಿರ್ಧರಿಸಿದೆ. ಸಿಒಎ ಸದಸ್ಯೆ ಡಿಯನಾ ಎಡುಲ್ಜಿಗೆ 2016-17ನೇ ಸಾಲಿನ ಜೀವಮಾನ ಸಾಧನಾ ಪ್ರಶಸ್ತಿ(ಮಹಿಳಾ ವಿಭಾಗ) ಘೋಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News