ಹೃದಯಾಘಾತಕ್ಕೊಳಗಾದ ವೃದ್ಧ ಯಾತ್ರಾರ್ಥಿಯನ್ನು ಬೆನ್ನಲ್ಲಿ ಹೊತ್ತು 2 ಕಿ.ಮೀ. ದೂರದ ಆಸ್ಪತ್ರೆಗೆ ಸೇರಿಸಿದ ಪೊಲೀಸ್

Update: 2018-06-07 10:07 GMT

ಉತ್ತರಕಾಶಿ, ಜೂ.7: ಲಘು ಹೃದಯಾಘಾತಕ್ಕೆ ಒಳಗಾದ ಹಿರಿಯ ಯಾತ್ರಾರ್ಥಿಯೊಬ್ಬರನ್ನು ಪೊಲೀಸ್ ಅಧಿಕಾರಿಯೊಬ್ಬರು 2 ಕಿಲೋಮೀಟರ್ ದೂರದ ಆಸ್ಪತ್ರೆಗೆ ಬೆನ್ನಮೇಲೆ ಹೊತ್ತುಕೊಂಡೇ ನಡೆದ ಅಪರೂಪದ ಘಟನೆ ವರದಿಯಾಗಿದೆ.

ಸಬ್ ಇನ್‍ಸ್ಪೆಕ್ಟರ್ ಲೋಕೇಂದ್ರ ಬಹುಗುಣ ಅವರ ಈ ಸಾಹಸದಿಂದಾಗಿ 55 ವರ್ಷದ ರಂಜಿ ರಾಜಾಗ್‍ ರ ಪ್ರಾಣ ಉಳಿದಿದೆ. ಕರ್ತವ್ಯದ ಬಗೆಗಿನ ಅಧಿಕಾರಿಯ ಬದ್ಧತೆ ಮೆಚ್ಚುಗೆಗೆ ಪಾತ್ರವಾಗಿದೆ.

ಮಧ್ಯಪ್ರದೇಶ ಮೂಲದ ಯಾತ್ರಾರ್ಥಿ ಯಮುನೋತ್ರಿ ಮಾರ್ಗಮಧ್ಯದ ಭೈರೋಮಂದಿರ ಬಳಿ ಕುಸಿದುಬಿದ್ದಾಗ ಕುಟುಂಬಸ್ಥರು ಕಂಗಾಲಾದರು. ಆಗ ಪೊಲೀಸ್ ಅಧಿಕಾರಿ ಮಾನವೀಯ ನೆರವು ನೀಡಿ ಅವರನ್ನು ಸಕಾಲಕ್ಕೆ ಆಸ್ಪತ್ರೆಗೆ ಕರೆದೊಯ್ದರು ಎಂದು ಬಾರ್‍ಕೋಟ್ ಪೊಲೀಸ್ ಅಧಿಕಾರಿ ವಿನೋದ್ ತಪ್ಲಿಯಾಲ್ ಹೇಳಿದ್ದಾರೆ. ಕುಟುಂಬಸ್ಥರು ಅಸ್ವಸ್ಥ ವ್ಯಕ್ತಿಯನ್ನು ಕುದುರೆ ಮೇಲೆ ಒಯ್ಯಲು ನಿರ್ಧರಿಸಿದರು. ಆದರೆ ಕುದುರೆ ಮೇಲೆ ಕುಳಿತುಕೊಳ್ಳಲು ಸಾಧ್ಯವಾಗದಿದ್ದಾಗ ಪೊಲೀಸ್ ಅಧಿಕಾರಿ ಅವರ ನೆರವಿಗೆ ಬಂದರು ಎನ್ನಲಾಗಿದೆ.

ಇತ್ತೀಚೆಗೆ ಉತ್ತರಾಖಂಡ ಪಿಎಸ್‍ಐ ಗಗನ್‍ದೀಪ್ ಸಿಂಗ್ ಎಂಬವರು, ನೈನಿತಾಲ್‍ನ ರಾಮನಗರ ಬಳಿ ಉದ್ರಿಕ್ತ ಗುಂಪಿನಿಂದ ಯುವಕನೊಬ್ಬ ಹಲ್ಲೆಗೊಳಲಾಗುವುದನ್ನು ತಪ್ಪಿಸಿದ್ದನ್ನು ಸ್ಮರಿಸಿಕೊಳ್ಳಬಹುದು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News