ಕಾಂಗ್ರೆಸ್ ಅವಮಾನಿಸಲು ಬಿಜೆಪಿಯ ಆಟಗಳು, ಪ್ರಣಬ್ ಮುಖರ್ಜಿ ಹೆಸರಲ್ಲಿ ಸುಳ್ಳು ಕೋಟ್‌ಗಳು

Update: 2018-06-07 18:17 GMT

 ಜೂನ್ 7ರಂದು ನಾಗಪುರದಲ್ಲಿ ಆರೆಸ್ಸೆಸ್ ಸಮಾವೇಶದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪಾಲ್ಗೊಂಡಿದ್ದಾರೆ. ಜಾತ್ಯತೀತ ಮನುಷ್ಯ ಎನಿಸಿಕೊಂಡಿದ್ದ ಪ್ರಣಬ್ ಮುಖರ್ಜಿ ಅದ್ಯಾವ ಪುಸಲಾಯಿಕೆಯಿಂದ ಈ ಸಮಾವೇಶಕ್ಕೆ ಹೊರಟಿದ್ದಾರೋ ಗೊತ್ತಿಲ್ಲ. ಅದ್ಯಾವ ಕಾರಣಕ್ಕೆ ಆರೆಸ್ಸೆಸ್ ಕರೆಯಿತೋ ಎಂಬುದೂ ಸ್ಪಷ್ಟವಿಲ್ಲ. ಇವೆರಡೂ ತಲೆ ಕೆಡಿಸಿಕೊಳ್ಳುವ ವಿಚಾರಗಳೂ ಅಲ್ಲ ಬಿಡಿ. ಆದರೆ ಇಂತಹ ಸಂದರ್ಭಗಳಿಗೆ ಕಾದು ಕುಳಿತಿರುವ ಸುಳ್ಳು ಉತ್ಪಾದಿಸುವ ಫ್ಯಾಕ್ಟರಿಗಳು ದಿನಕ್ಕೊಂದು ಹೊಸ ಹೊಸ ಫೇಕ್ ಉತ್ಪನ್ನಗಳನ್ನು ಸಾಮಾಜಿಕ ಜಾಲತಾಣ ಎಂಬ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಇವೆಲ್ಲದರ ಉದ್ದೇಶ ಕಾಂಗ್ರೆಸ್‌ನ್ನು ಹೀಗಳೆಯುವುದು. ಪ್ರಣಬ್ ಕಾಂಗ್ರೆಸ್ ಬಗ್ಗೆ ಹಾಗೆ ಹೇಳಿದ್ದರು, ಹೀಗೆ ಹೇಳಿದ್ದರು ಎಂದು ಕಪೋಕಲ್ಪಿತ ಸುದ್ದಿಗಳನ್ನು ತೇಲಿ ಬಿಡುವ ಕೆಲಸ ಶುರುವಾಗಿದೆ.

ಮಿಥ್ಯ: ಪ್ರಣಬ್ ಮುಖರ್ಜಿ ಹೆಸರಿನಲ್ಲಿ ಹತ್ತಾರು ಸುಳ್ಳು ಕೋಟ್‌ಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅವೆಲ್ಲವೂ ಕಾಂಗ್ರೆಸ್ ವಿರುದ್ಧ ಪ್ರಣಬ್ ಮುಖರ್ಜಿ ಹೀಗೆ ಹೇಳಿದ್ದರು ಎಂಬ ಅಂತೆಕಂತೆಗಳೆ.
1. ‘‘ನಾನು ಮನಮೋಹನ್ ಸಿಂಗ್‌ರಂತೆ ಗುಲಾಮನಲ್ಲ. ಯಾವುದು ಸರಿ ಎನಿಸಿತ್ತೋ ಅದನ್ನು ನಾನು ಮಾಡುತ್ತಿದ್ದೇನೆ. ದೇಶಕ್ಕೆ ಇವತ್ತು ಆರೆಸ್ಸೆಸ್‌ನಂತಹ ಸಂಘಟನೆ ಬೇಕು’’- ಪ್ರಣಬ್ ಮುಖರ್ಜಿ.
ಇಲ್ಲಿರುವ ಇಮೇಜಿನಲ್ಲಿ ಕೆಳಗಡೆ ಪೋಸ್ಟರ್ ಮೇಕರ್ ಎಂಬ ಮಾರ್ಕ್ ಇರುವುದನ್ನು ಗಮನಿಸಿ. ಅದು ಒಂದು ಚಿತ್ರ-ಆಧಾರಿತ ಅಪ್ಲಿಕೇಷನ್
2. ‘‘ಸೋನಿಯಾ ಗಾಂಧಿ ಹಿಂದೂಗಳನ್ನು ದ್ವೇಷಿಸುತ್ತಾರೆ’’- ಪ್ರಣಬ್ ಮುಖರ್ಜಿ.
ಹೀಗೆ ಪ್ರಕಟಿಸಿದ್ದು ಒಂದು ವೆಬ್‌ಸೈಟ್. ಪ್ರಣಬ್ ಅವರ ‘the coaliation years’ ಪುಸ್ತಕದಲ್ಲಿ ಈ ಮಾತಿದೆ ಎಂದು ಅದು ಬರೆಯಿತು.
3. ‘‘ಕಾಂಗ್ರೆಸ್ ರಾಷ್ಟ್ರವಿರೋಧಿಯಾಗಿದೆ. ಅದು 2019ರಲ್ಲಿ ಅಂತ್ಯವಾಗಲಿದೆ’’-ಪ್ರಣಬ್ ಮುಖರ್ಜಿ.

ಸತ್ಯ: ನ್ಯೂಸ್ ಪೋರ್ಟಲ್ ಒಂದು ಈ ಮೇಲಿನ ಮೂರು ಕೋಟ್‌ಗಳು ನಿಜಕ್ಕೂ ಪ್ರಣಬ್ ಮುಖರ್ಜಿಯವರವೇ ಎಂದು ಹುಡುಕ ತೊಡಗಿತು. ರಾಷ್ಟ್ರಪತಿ ಕಾರ್ಯಾಲಯಕ್ಕೆ ಸಂಪರ್ಕಿಸಿದಾಗ, ಮೊದಲ ಎರಡು ಕೋಟ್‌ಗಳು ಪ್ರಣಬ್ ಅವರದ್ದು ಅಲ್ಲವೇ ಅಲ್ಲ. 3ನೇ ಕೋಟ್ ಬಗ್ಗೆ ಹೇಳುವ ಅಗತ್ಯವೇ ಇಲ್ಲ. ಏಕೆಂದರೆ, ಪ್ರಣಬ್ ಅವ ‘the coaliation years’ ಪುಸ್ತಕ ಈಗ ಎಲ್ಲೆಡೆ ಲಭ್ಯವಿದೆ. ಅದರಲ್ಲಿ ಅಂತಹ ಯಾವುದೇ ಸಾಲು ಇಲ್ಲವೇ ಇಲ್ಲ ಎಂದು ಸ್ಪಷ್ಟೀಕರಣ ನೀಡಿದೆ.
ಮೇಲ್ನೋಟಕ್ಕೆ ಸತ್ಯ ಗೊತ್ತಾಗುತ್ತಿದೆ. ಹಿಂದೆಂದೂ ತೋರದ ಪ್ರೀತಿಯನ್ನು ಈಗ ಬಲ ಪಂಥೀಯ ಗುಂಪುಗಳು ಪ್ರಣಬ್ ಬಗ್ಗೆ ತೋರುತ್ತಿವೆ. ನಾಚಿಕೆ ಬಿಟ್ಟವರೆಲ್ಲ ಇಂಥದ್ದನ್ನು ಮಾಡುತ್ತಲೇ ಇರುತ್ತಾರೆ.

Writer - -ಪಿ.ಕೆ. ಮಲ್ಲನಗೌಡರ್

contributor

Editor - -ಪಿ.ಕೆ. ಮಲ್ಲನಗೌಡರ್

contributor

Similar News

ಜಗದಗಲ
ಜಗ ದಗಲ