ಒಂದಕ್ಕಿಂತ ಹೆಚ್ಚು ಪಾನ್‌ಕಾರ್ಡ್‌ಗಳಿದ್ದರೆ...?

Update: 2018-06-07 18:17 GMT

ಓರ್ವ ವ್ಯಕ್ತಿ ಕೆಟ್ಟ ಕ್ರೆಡಿಟ್ ಹಿಸ್ಟರಿಯನ್ನು ಹೊಂದಿದ್ದಾನೆ ಎಂದು ಇಟ್ಟುಕೊಳ್ಳಿ. ಇದರಿಂದಾಗಿ ಆತ ಗೃಹಸಾಲಕ್ಕಾಗಿ ಬ್ಯಾಂಕುಗಳಿಗೆ ಸಲ್ಲಿಸುವ ಅರ್ಜಿಗಳು ತಿರಸ್ಕೃತಗೊಳ್ಳುತ್ತವೆ. ಹೀಗಾಗಿ ತನ್ನ ಸ್ನೇಹಿತನೊಂದಿಗೆ ಚರ್ಚಿಸಿ ತನ್ನ ಇನ್ನೊಂದು ಗುರುತನ್ನು ಸೃಷ್ಟಿಸಲು ಇನ್ನೊಂದು ಪಾನ್‌ಕಾರ್ಡ್‌ಗೆ ಅರ್ಜಿ ಸಲ್ಲಿಸುತ್ತಾನೆ. ತನ್ನ ಕೆಟ್ಟ ಕ್ರೆಡಿಟ್ ಹಿಸ್ಟರಿಯನ್ನು ಅಳಿಸಿ ಹಾಕಲು ಮತ್ತು ಗೃಹಸಾಲಕ್ಕೆ ಅರ್ಜಿ ಸಲ್ಲಿಸಲು ಆತ ಈ ಕೆಲಸ ಮಾಡಿದ್ದು, ಇದು ಮೋಸ ಮತ್ತು ಅಕ್ರಮವಾಗಿದೆ. ಹೀಗೆ ಮೋಸದಿಂದ ಪಾನ್‌ಕಾರ್ಡ್‌ಗಳನ್ನು ಪಡೆದುಕೊಳ್ಳುತ್ತಿರುವ ಲಕ್ಷಾಂತರ ಜನರು ನಮ್ಮ ದೇಶದಲ್ಲಿದ್ದಾರೆ ಮತ್ತು ಅವರ ವಿರುದ್ಧ ಪ್ರಕರಣಗಳು ದಾಖಲಾಗಿವೆ.
ಉದ್ದೇಶಪೂರ್ವಕವಾಗಿಯೋ ಅನುದ್ದಿಷ್ಟವಾಗಿಯೋ ಜನರು ಒಂದಕ್ಕಿಂತ ಹೆಚ್ಚಿನ ಪಾನ್‌ಕಾರ್ಡ್‌ಗಳನ್ನು ಹೊಂದಿರುತ್ತಾರೆ. ಕೆಲವೊಮ್ಮೆ ಜನರು ತಮ್ಮ ಆದಾಯ ಮತ್ತು ಆಸ್ತಿಗಳನ್ನು ವಿಭಜಿಸುವ ಮೂಲಕ ತೆರಿಗೆ ಹೊರೆಯನ್ನು ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಒಂದಕ್ಕಿಂತ ಹೆಚ್ಚಿನ ಪಾನ್‌ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸುತ್ತಾರೆ. ಇನ್ನು ಕೆಲವರು ದುರುದ್ದೇಶಗಳೊಂದಿಗೆ ನಕಲಿ ದಾಖಲೆಗಳನ್ನು ಆಧರಿಸಿ ಹಣಕಾಸು ವಹಿವಾಟುಗಳನ್ನು ನಡೆಸಲು ಒಂದಕ್ಕಿಂತ ಹೆಚ್ಚಿನ ಪಾನ್‌ಕಾರ್ಡ್‌ಗಳನ್ನು ಪಡೆದುಕೊಳ್ಳುತ್ತಾರೆ. ಸಾಲಗಳು ಅಥವಾ ಕ್ರೆಡಿಟ್ ಕಾರ್ಡ್ ಬಾಕಿಗಳಿಗೆ ಸಂಬಂಧಿಸಿದಂತೆ ತಮ್ಮ ಕೆಟ್ಟ ಮರುಪಾವತಿ ಇತಿಹಾಸದ ಕುರಿತು ಹೊಸ ಪಾನ್‌ಕಾರ್ಡ್ ಯಾವುದೇ ಸುಳಿವನ್ನು ನೀಡುವುದಿಲ್ಲ ಎಂದು ಅವರು ಆಶಿಸಿರುತ್ತಾರೆ.
 ಹಲವರಿಗೆ ಒಂದಕ್ಕಿಂತ ಹೆಚ್ಚಿನ ಪಾನ್‌ಕಾರ್ಡ್ ಗಳನ್ನು ಹೊಂದಿರುವುದು ಅಕ್ರಮವೆನ್ನುವುದು ಗೊತ್ತಿಲ್ಲದಿರುವುದರಿಂದ ಅನುದ್ದಿಷ್ಟವಾಗಿ ಆ ಕಾರ್ಯವನ್ನು ಮಾಡುತ್ತಾರೆ. ತಮ್ಮ ಪಾನ್‌ಕಾರ್ಡ್ ಕಳೆದುಹೋದಾಗ ಡುಪ್ಲಿಕೇಟ್ ಕಾರ್ಡ್ ಪಡೆದುಕೊಳ್ಳುವ ಬದಲು ಹೊಸ ಪಾನ್‌ಕಾರ್ಡ್‌ಗೆ ಅರ್ಜಿ ಸಲ್ಲಿಸುತ್ತಾರೆ. ಸಾಮಾನ್ಯವಾಗಿ ವಿವಾಹದ ಬಳಿಕ ಮಹಿಳೆಯರು ತಮ್ಮ ಹೆಸರುಗಳನ್ನು ಬದಲಿಸಿಕೊಳ್ಳುತ್ತಾರೆ. ಇಂತಹ ಸಂದರ್ಭಗಳಲ್ಲಿ ಅವರು ಮೂಲ ಕಾರ್ಡ್‌ನಲ್ಲಿ ಮಾಹಿತಿಗಳ ಅಪ್‌ಡೇಟ್‌ಗೆ ಕೋರುವ ಬದಲು ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸುತ್ತಾರೆ. ಕೆಲಸಕಾರ್ಯಗಳಿಗಾಗಿ ಭಾರತಕ್ಕೆ ಆಗಮಿಸುವ ಎನ್ನಾರೈಗಳೂ ಪಾನ್‌ಕಾರ್ಡ್‌ಗೆ ಅರ್ಜಿ ಸಲ್ಲಿಸುವುದಿದೆ. ಕೆಲವು ವರ್ಷಗಳ ಬಳಿಕ ಅವರು ಭಾರತಕ್ಕೆ ಪುನರ್ ಭೇಟಿ ನೀಡಿದಾಗ ಅನುದ್ದಿಷ್ಟವಾಗಿ ಇನ್ನೊಂದು ಪಾನ್‌ಕಾರ್ಡ್ ಪಡೆದುಕೊಳ್ಳುವ ಸಾಧ್ಯತೆಗಳು ಇರುತ್ತವೆ.
ಪಾನ್‌ಕಾರ್ಡ್‌ಗಾಗಿ ಸಲ್ಲಿಸುವ ಅರ್ಜಿಯಲ್ಲಿ ಸಾಮಾನ್ಯವಾಗಿ ಹೆಸರು, ಮೊಬೈಲ್ ಸಂಖ್ಯೆ, ಜನ್ಮ ದಿನಾಂಕ, ವಿಳಾಸ, ತಂದೆಯ ಹೆಸರು ಇತ್ಯಾದಿ ಪ್ರಾಥಮಿಕ ಮಾಹಿತಿಗಳನ್ನು ನೀಡಬೇಕಾಗುತ್ತದೆ. ಹೊಸ ಗುರುತನ್ನು ಸೃಷ್ಟಿಸಲು ಈ ಯಾವುದೇ ಮಾಹಿತಿಗಳನ್ನು ಸುಲಭವಾಗಿ ತಿರುಚಿ ಹೊಸ ಪಾನ್‌ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ.
ಆದರೆ ಸರಕಾರವು ಆಧಾರ್ ಅನ್ನು ಪಾನ್‌ಕಾರ್ಡ್‌ನೊಂದಿಗೆ ಜೋಡಣೆಗೊಳಿಸುವುದನ್ನು ಕಡ್ಡಾಯಗೊಳಿಸಿರುವುದರಿಂದ ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚುವುದು ಸುಲಭವಾಗಿದೆ ಮತ್ತು ಈ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ ತಜ್ಞರು.
ಆದಾಯ ತೆರಿಗೆ ಕಾಯ್ದೆ, 1961ರ 139ಎ ಸೆಕ್ಷನ್‌ನಂತೆ ಓರ್ವ ವ್ಯಕ್ತಿ ಒಂದೇ ಪಾನ್ ಕಾರ್ಡ್ ಹೊಂದಿರಬೇಕಾಗುತ್ತದೆ. ಒಂದಕ್ಕಿಂತ ಹೆಚ್ಚಿನ ಪಾನ್‌ಕಾರ್ಡ್‌ಗಳನ್ನು ಹೊಂದಿದ್ದರೆ ಅಂತಹ ವ್ಯಕ್ತಿಗೆ 10,000 ರೂ.ವರೆಗೆ ದಂಡವನ್ನು ವಿಧಿಸಬಹುದಾಗಿದೆ.
ಹೀಗೆ ದಂಡವನ್ನು ವಿಧಿಸುವ ಮುನ್ನ ಆದಾಯ ತೆರಿಗೆ ಅಧಿಕಾರಿಗಳು ತನ್ನ ಅಹವಾಲನ್ನು ಹೇಳಿಕೊಳ್ಳಲು ಅಂತಹ ವ್ಯಕ್ತಿಗೆ ಅವಕಾಶವನ್ನು ನೀಡುತ್ತಾರೆ. ತಾನು ಅನುದ್ದಿಷ್ಟವಾಗಿ ಒಂದಕ್ಕಿಂತ ಹೆಚ್ಚು ಪಾನ್‌ಕಾರ್ಡ್‌ಗಳನ್ನು ಪಡೆದುಕೊಂಡಿದ್ದೆ ಎನ್ನುವುದನ್ನು ಅಧಿಕಾರಿಗೆ ಮನದಟ್ಟು ಮಾಡಲು ಆತ ಯಶಸ್ವಿಯಾದರೆ ದಂಡದಿಂದ ಪಾರಾಗಲೂಬಹುದು.
ನಿಮ್ಮ ಬಳಿ ಹೆಚ್ಚುವರಿ ಪಾನ್‌ಕಾರ್ಡ್ ಗಳಿದ್ದರೆ ಅವುಗಳನ್ನು ಇಲಾಖೆಗೆ ಮರಳಿಸುವ ಅಥವಾ ರದ್ದುಗೊಳಿಸುವ ಪ್ರಕ್ರಿಯೆಯನ್ನು ಈಗ ಸುಲಭಗೊಳಿಸಲಾಗಿದೆ. ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಈ ಕೆಲಸವನ್ನು ಮಾಡಬಹುದಾಗಿದೆ.
ಆನ್‌ಲೈನ್ ವಿಧಾನ: ಇದಕ್ಕಾಗಿ ಎನ್‌ಎಸ್‌ಡಿಎಲ್ ವೆಬ್‌ಸೈಟ್‌ಗೆ ಭೇಟಿ ನೀಡಿ ‘ಪಾನ್ ಚೇಂಜ್ ರಿಕ್ವೆಸ್ಟ್’ ಅರ್ಜಿಯನ್ನು ಸಲ್ಲಿಸಬೇಕು. ನೀವು ಇಟ್ಟುಕೊಳ್ಳಲು ಬಯಸಿರುವ ಒಂದೇ ಪಾನ್ ಕಾರ್ಡ್‌ನ್ನು ಉಲ್ಲೇಖಿಸುವ ಜೊತೆಗೆ ಇತರ ಎಲ್ಲ ಪಾನ್‌ಕಾರ್ಡ್‌ಗಳ ರದ್ದತಿಗೆ ಕೋರಬೇಕು. ನೀವು ಮರಳಿಸಲು ಬಯಸಿರುವ ಹೆಚ್ಚುವರಿ ಪಾನ್ ಕಾರ್ಡ್‌ಗಳ ಸಂಖ್ಯೆಗಳನ್ನು ಕಾಲಂ ನಂ.11ರಲ್ಲಿ ಕಾಣಿಸಬೇಕು ಮತ್ತು ಅವುಗಳ ಪ್ರತಿಗಳನ್ನು ಸಲ್ಲಿಸಬೇಕು.
ಆಫ್ ಲೈನ್ ವಿಧಾನ: ಎನ್‌ಎಸ್‌ಡಿಎಲ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಫಾರ್ಮ ನಂ.49 ಎ ಅನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಿ. ರದ್ದುಗೊಳಿಸಬೇಕಾದ ಪಾನ್‌ಕಾರ್ಡ್‌ಗಳ ಅಗತ್ಯ ವಿವರಗಳೊಂದಿಗೆ ಈ ಫಾರ್ಮ್ ಅನ್ನು ತುಂಬಿ ನಿಮ್ಮ ಸಮೀಪದ ಯುಟಿಐ ಅಥವಾ ಎನ್‌ಎಸ್‌ಡಿಎಲ್ ಟಿನ್ ಸೌಲಭ್ಯ ಕೇಂದ್ರಕ್ಕೆ ಸಲ್ಲಿಸಿ. ಇದಕ್ಕೆ ಹಿಂಬರಹವನ್ನು ಪಡೆದುಕೊಳ್ಳಲು ಮರೆಯಬೇಡಿ. ಇದಾದ ಬಳಿಕ ನಿಮ್ಮ ವ್ಯಾಪ್ತಿಯ ಅಸೆಸಿಂಗ್ ಅಧಿಕಾರಿಗೆ ಈ ಬಗ್ಗೆ ಪತ್ರವನ್ನು ಬರೆಯಬೇಕಾಗುತ್ತದೆ. ಈ ಪತ್ರವು ನೀವು ಇಟ್ಟುಕೊಳ್ಳಲು ಬಯಸಿರುವ ಪಾನ್‌ಕಾರ್ಡ್ ಮತ್ತು ರದ್ದುಗೊಳಿಸಲು ಬಯಸಿರುವ ಪಾನ್‌ಕಾರ್ಡ್‌ಗಳ ಎಲ್ಲ ವಿವರಗಳನ್ನು ಒಳಗೊಂಡಿರಬೇಕಾಗುತ್ತದೆ. ಪತ್ರದೊಂದಿಗೆ ಅವುಗಳ ಪ್ರತಿಗಳು ಮತ್ತು ಯುಟಿಐ ಅಥವಾ ಎನ್‌ಎಸ್‌ಡಿಎಲ್ ಟಿನ್‌ನಿಂದ ಪಡೆದುಕೊಂಡಿರುವ ಹಿಂಬರಹವನ್ನೂ ಲಗತ್ತಿಸಬೇಕಾಗುತ್ತದೆ.
ಆದರೆ ಆನ್‌ಲೈನ್ ಅಥವಾ ಆಫ್‌ಲೈನ್ ಪ್ರಕ್ರಿಯೆಯನ್ನು ಅನುಸರಿಸುವುದರಿಂದ ಮಾತ್ರ ಹೆಚ್ಚುವರಿ ಪಾನ್‌ಕಾರ್ಡ್ ರದ್ದಾಗುತ್ತದೆ ಎಂದು ನಂಬಿಕೊಳ್ಳುವಂತಿಲ್ಲ. ವ್ಯಕ್ತಿಯು ತಾನು ಯಾವುದೇ ದುರುದ್ದೇಶದಿಂದ ಹೆಚ್ಚುವರಿ ಕಾರ್ಡ್‌ಗಳನ್ನು ಪಡೆದು ಕೊಂಡಿರಲಿಲ್ಲ ಎನ್ನುವುದನ್ನು ತೆರಿಗೆ ಅಧಿಕಾರಿಗಳಿಗೆ ಮನದಟ್ಟು ಮಾಡಲು ಅವರನ್ನು ಭೇಟಿಯಾಬೇಕಾಗಬಹುದು.

 

Writer - -ಎನ್.ಕೆ.

contributor

Editor - -ಎನ್.ಕೆ.

contributor

Similar News

ಜಗದಗಲ
ಜಗ ದಗಲ