ಸಚಿವ ಸಂಪುಟ ವಿಸ್ತರಣೆ: ಬೂದಿ ಮುಚ್ಚಿದ ಕೆಂಡ

Update: 2018-06-08 05:07 GMT

ಮೈತ್ರಿ ಸರಕಾರದ ಸಚಿವ ಸಂಪುಟದ ಚೊಚ್ಚಲ ಹೆರಿಗೆ ಕೊನೆಗೂ ಯಶಸ್ವಿಯಾಗಿದೆ. ಪೂರ್ಣ ಬಹುಮತ ಹೊಂದಿರುವ ಸರಕಾರವೇ ಸಚಿವ ಸಂಪುಟ ವಿಸ್ತರಣೆ ಹೊತ್ತಿನಲ್ಲಿ ಒತ್ತಡಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ತೀರಾ ಅಲ್ಪಮತ ಹೊಂದಿರುವ ಪಕ್ಷದ ನೇತೃತ್ವವಿರುವ ಸರಕಾರದಲ್ಲಿ ಸಚಿವ ಸಂಪುಟ ವಿಸ್ತರಣೆಯೆನ್ನುವುದು ಇನ್ನೊಮ್ಮೆ ವಿಶ್ವಾಸ ಮತ ಸಾಬೀತು ಪಡಿಸುವಷ್ಟೇ ಸಾಹಸದ ಕೆಲಸ. ಈ ಹಿನ್ನೆಲೆಯಲ್ಲಿ ಮೈತ್ರಿ ಸರಕಾರ ಸಂಪುಟ ವಿಸ್ತರಣೆಯನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ ಎರಡನೇ ಬಾರಿ ವಿಶ್ವಾಸ ಮತವನ್ನು ಗೆದ್ದಿದೆ. ಸಂಪುಟ ವಿಸ್ತರಣೆಯಾದ ಬೆನ್ನಿಗೇ ಮೈತ್ರಿ ಸರಕಾರದಲ್ಲಿ ಭಿನ್ನಮತ ಭುಗಿಲೇಳುತ್ತದೆ, ಅತೃಪ್ತರಾದ ಕನಿಷ್ಠ ಹತ್ತು ಶಾಸಕರಾದರೂ ಬಂಡಾಯವೆದ್ದು ಬಿಜೆಪಿ ಸೇರಿಕೊಳ್ಳುತ್ತಾರೆ ಎಂದು ಕಾದು ಕುಳಿತವರಿಗೆ ನಿರಾಶೆಯಾದಂತಿದೆ. ಸದ್ಯಕ್ಕೆ, ಮಗುವಿನ ಆರೋಗ್ಯದ ಬಗ್ಗೆ ಯಾರಿಗೂ ಕುತೂಹಲವಿಲ್ಲ. ಒಟ್ಟಿನಲ್ಲಿ ಹೆರಿಗೆ ಸುಸೂತ್ರವಾಗಿ ಆಗಿ ತಾಯಿ ಬದುಕಿಕೊಂಡಳಲ್ಲ ಎನ್ನುವುದೇ ಸಾಧನೆಯ ವಿಷಯವಾಗಿದೆ.

ಇದೇ ಸಂದರ್ಭದಲ್ಲಿ ಮಗುವಿನ ಆರೋಗ್ಯ ಭವಿಷ್ಯದಲ್ಲಿ ಸರಕಾರದ ಆರೋಗ್ಯವನ್ನು ನಿರ್ಧರಿಸುತ್ತದೆ ಎನ್ನುವುದನ್ನು ಮೈತ್ರಿಯ ಮುಖಂಡರು ಮರೆತಂತಿದೆ. ಸಂಪುಟ ರಚನೆಯ ಬೆನ್ನಿಗೇ ಕಾಂಗ್ರೆಸ್ ಮತ್ತು ಜೆಡಿಎಸ್‌ನೊಳಗೆ ಅತೃಪ್ತಿ ಬೂದಿ ಮುಚ್ಚಿದ ಕೆಂಡದಂತಿದೆ. ಈ ಕೆಂಡಗಳನ್ನು ತನ್ನ ಸೆರಗಲ್ಲಿಟ್ಟುಕೊಂಡೇ ಮುಖ್ಯಮಂತ್ರಿ ಕುಮಾರಸ್ವಾಮಿ ಮುಂದುವರಿಯಬೇಕಾಗಿದೆ. ಇದು ಯಾವಾಗ ಸೆರಗನ್ನು ಸುಡುತ್ತದೆ ಎನ್ನುವುದನ್ನು ಹೇಳುವಂತಿಲ್ಲ. ಕಾಂಗ್ರೆಸ್‌ನೊಳಗಿನ ಅತೃಪ್ತಿಯಂತೂ ಬೀದಿಗೆ ಬಿದ್ದಿದ್ದು, ಅದು ಯಾವ ಸಂದರ್ಭದಲ್ಲೂ ಪಕ್ಷವನ್ನು ಆಹುತಿ ತೆಗೆದುಕೊಳ್ಳಬಹುದು. ನಿರೀಕ್ಷೆಯಂತೆಯೇ ಒಕ್ಕಲಿಗರಿಗೆ ಈ ಬಾರಿ ಸಂಪುಟದಲ್ಲಿ ಅತಿ ಹೆಚ್ಚು ಆದ್ಯತೆ ದೊರಕಿದೆ. ಜೆಡಿಎಸ್‌ನ ನೇತೃತ್ವ ಒಕ್ಕಲಿಗ ನಾಯಕರ ಕೈಯಲ್ಲಿರುವುದು ಮಾತ್ರವಲ್ಲ, ಕಾಂಗ್ರೆಸ್‌ನ ನಿಯಂತ್ರಣವೂ ಒಕ್ಕಲಿಗ ನೇತಾರ ಡಿಕೆಶಿ ಕೈಗೆ ಹಸ್ತಾಂತರವಾಗಿರುವುದು ಇದಕ್ಕೆ ಮುಖ್ಯ ಕಾರಣವಾಗಿರಬಹುದು. ಎರಡನೆಯ ಸ್ಥಾನವನ್ನು ಲಿಂಗಾಯತರು ತಮ್ಮದಾಗಿಸಿಕೊಂಡಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಎಂ. ಬಿ. ಪಾಟೀಲ್ ಅವರು ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ. ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು ಎಂ. ಬಿ. ಪಾಟೀಲ್.

ಕಳೆದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ರಾಜ್ಯಾದ್ಯಂತ ಭುಗಿಲೆದ್ದ ಲಿಂಗಾಯತ ಧರ್ಮ ಹೋರಾಟ ಆರೆಸ್ಸೆಸ್ ವಲಯದಲ್ಲಿ ಸಂಚಲನ ಸೃಷ್ಟಿಸಿತ್ತು. ಲಕ್ಷಾಂತರ ಜನರನ್ನು ಒಟ್ಟು ಸೇರಿಸಿ ಒಂದು ಹೊಸ ಆಂದೋಲನವನ್ನೇ ಲಿಂಗಾಯತ ಧರ್ಮದ ಹೆಸರಿನಲ್ಲಿ ಅವರು ಹುಟ್ಟು ಹಾಕಿದ್ದರು. ಇದು ವೀರಶೈವರು ಮತ್ತು ಲಿಂಗಾಯತರ ನಡುವೆ ಬಿರುಕು ತಂದಿತ್ತು ಮಾತ್ರವಲ್ಲ, ‘ಹಿಂದೂಧರ್ಮವನ್ನು ಕಾಂಗ್ರೆಸ್ ಒಡೆಯುತ್ತಿದೆ’ ಎಂದೂ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಬಿಜೆಪಿ ಕೂಗೆಬ್ಬಿಸಿತ್ತು. ಜೆಡಿಎಸ್ ಲಿಂಗಾಯತ ಧರ್ಮದ ಪರವಾಗಿ ನಿಂತಿರಲಿಲ್ಲ. ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಕುಮಾರಸ್ವಾಮಿ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ಸಚಿವ ಸಂಪುಟದಿಂದ ಎಂ. ಬಿ. ಪಾಟೀಲ್‌ರನ್ನು ದೂರ ಇಡುವ ಮೂಲಕ, ಈ ಸರಕಾರ ಲಿಂಗಾಯತ ಸ್ವತಂತ್ರ ಧರ್ಮದಿಂದ ಅಂತರ ಕಾಪಾಡಲು ನಿರ್ಧರಿಸಿದಂತಿದೆ. ಲಿಂಗಾಯತರ ವಿಶೇಷ ಮತಗಳು ಕಾಂಗ್ರೆಸ್‌ಗೆ ಬಿದ್ದಿಲ್ಲದ ಕಾರಣದಿಂದಲೋ ಏನೋ, ಕಾಂಗ್ರೆಸ್ ಕೂಡ ಈ ಬಗ್ಗೆ ಆಸಕ್ತಿಯನ್ನು ವಹಿಸಿದಂತಿಲ್ಲ. ಎಂ. ಬಿ. ಪಾಟೀಲ್ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇದು ಕಾಂಗ್ರೆಸ್‌ನ ಮೇಲೆ, ಹಾಗೆಯೇ ಲಿಂಗಾಯತ ಸ್ವತಂತ್ರ ಧರ್ಮದ ಆಂದೋಲನದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದನ್ನು ಕಾದು ನೋಡಬೇಕು.

ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಇನ್ನೊಬ್ಬ ನಾಯಕ ಸತೀಶ್ ಜಾರಕಿ ಹೊಳಿ. ಕಾಂಗ್ರೆಸ್‌ನೊಳಗೆ ತನ್ನದೇ ಶಕ್ತಿವಲಯವನ್ನು ನಿರ್ಮಾಣಮಾಡಲು ಯತ್ನಿಸುತ್ತಿರುವವರು ಸತೀಶ್ ಜಾರಕಿಹೊಳಿ. ರಾಜ್ಯಾದ್ಯಂತ ವೌಢ್ಯದ ವಿರುದ್ಧ ಹೋರಾಟ ಮಾಡುತ್ತಾ ಬಂದವರು. ‘ಮಾನವಬಂಧುತ್ವ’ ಎನ್ನುವ ತಮ್ಮದೇ ಒಂದು ಜಾತ್ಯತೀತ ಬ್ರಿಗೇಡ್‌ನ್ನು ಕಟ್ಟಿಕೊಂಡು ಸಮಯ ಮತ್ತು ಸಂದರ್ಭಕ್ಕೆ ಕಾದು ಕುಳಿತವರು. ದಲಿತ ಸಮುದಾಯದಿಂದ ಬಂದಿರುವ ಸತೀಶ್ ಜಾರಕಿಹೊಳಿ ಒಂದೆಡೆ ಪ್ರಗತಿಪರ ಸಿದ್ಧಾಂತವನ್ನು ತನ್ನ ಹೆಗಲಲ್ಲಿ ಕಟ್ಟಿಕೊಂಡವರಷ್ಟೇ ಅಲ್ಲ, ಆರ್ಥಿಕವಾಗಿ ಬಲಾಢ್ಯರೂ ಹೌದು. ಕಾಂಗ್ರೆಸ್‌ನೊಳಗಿರುವ ಸಿದ್ದರಾಮಯ್ಯ, ಡಿಕೆಶಿ ಮೊದಲಾದವರಿಗೆ ಪರ್ಯಾಯವಾಗಿ ನಿಲ್ಲುವ ಶಕ್ತಿಯನ್ನು ಒಳಗೊಳಗೆ ಮೈಗೂಡಿಸಿಕೊಳ್ಳುತ್ತಿರುವವರು.

ಈ ಕಾರಣದಿಂದ ಕಾಂಗ್ರೆಸ್‌ನೊಳಗಿರುವ ಈಗಿನ ನಾಯಕರಿಗೆ ಸತೀಶ್ ಜಾರಕಿಹೊಳಿಯನ್ನು ದೂರ ಇಡುವುದು ಅಗತ್ಯವಾಗಿದೆ. ಅದಕ್ಕಾಗಿ ಅವರ ಸೋದರ ರಮೇಶ್ ಜಾರಕಿಹೊಳಿಯನ್ನು ಗುರಾಣಿಯಾಗಿ ಬಳಸಿಕೊಂಡಿದ್ದಾರೆ. ಒಂದೇ ಕುಟುಂಬದ ಇಬ್ಬರಿಗೆ ಸಚಿವ ಸ್ಥಾನ ಕೊಡಲಾಗುವುದಿಲ್ಲ ಎಂಬ ನೆಪವೊಡ್ಡಿ ಸತೀಶ್ ಅವರನ್ನು ದೂರ ಇಡಲಾಗಿದೆ. ಆರ್. ವಿ. ದೇಶಪಾಂಡೆಯಂತಹ ನಿಷ್ಕ್ರಿಯ ಸಚಿವರು ಎಂದಿನಂತೆ ತಮ್ಮ ಹಣಬಲ ಮತ್ತು ಮೇಲ್ಜಾತಿಯ ಬಲದಿಂದಲೇ ಸಚಿವ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿಗಳಾಗಿ ಯು.ಟಿ. ಖಾದರ್ ಮತ್ತು ಝಮೀರ್ ಗುರುತಿಸಿಕೊಂಡಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡದಿಂದ ಆಯ್ಕೆಯಾಗಿರುವ ಕಾಂಗ್ರೆಸ್‌ನ ಏಕೈಕ ಶಾಸಕ ಇವರಾಗಿರುವುದರಿಂದ ಅವರು ಸಚಿವರಾಗುವುದು ಅನಿರೀಕ್ಷಿತವಾಗಿರಲಿಲ್ಲ. ಜೆಡಿಎಸ್‌ನಿಂದ ಬಂದ ಕಾರಣದಿಂದ ಝಮೀರ್‌ಗೆ ಸಚಿವ ಸ್ಥಾನ ನೀಡುವುದೂ ಕಾಂಗ್ರೆಸ್‌ಗೆ ಅನಿವಾರ್ಯವಾಗಿತ್ತು. ಇಂದು ಝಮೀರ್ ಜೆಡಿಎಸ್ ಜೊತೆಗಿದ್ದಿದ್ದರೆ ಅವರ ಸ್ಥಾನಮಾನ ಸರಕಾರದಲ್ಲಿ ಇನ್ನೂ ದೊಡ್ಡದಿರುತ್ತಿತ್ತೋ ಏನೋ?

ಜೆಡಿಎಸ್‌ನಲ್ಲಿ ಎಚ್. ವಿಶ್ವನಾಥ್ ಅವರೂ ಸಚಿವ ಸ್ಥಾನಾಕಾಂಕ್ಷಿ. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಇವರ ಕೊಡುಗೆ ದೊಡ್ಡದು. ಸಂಪುಟದಿಂದ ಇವರನ್ನೂ ದೂರ ಇಡಲಾಗಿದೆ. ಅಂತೆಯೇ ಜೆಡಿಎಸ್ ಮತ್ತು ಕಾಂಗ್ರೆಸ್ ಈ ಬಾರಿ ಹಲವು ಮುತ್ಸದ್ದಿ ರಾಜಕಾರಣಿಗಳನ್ನು ದೂರ ಇಟ್ಟು ಸಚಿವ ಸಂಪುಟವನ್ನು ರಚಿಸಿದೆ. ಶಾಮನೂರು, ಎಚ್.ಕೆ. ಪಾಟೀಲ್ ಮೊದಲಾದವರು ಸಂಪುಟದಲ್ಲಿರಲು ಅರ್ಹರಾಗಿರುವವರು. ದತ್ತಾ ಅವರನ್ನು ವಿಧಾನಪರಿಷತ್‌ಗೆ ಕಳುಹಿಸುವ ಮೂಲಕವಾದರೂ, ಸರಕಾರದಲ್ಲಿ ಉಳಿಸಿಕೊಳ್ಳುವ ಬಾಧ್ಯತೆ ಜೆಡಿಎಸ್‌ಗಿತ್ತು. ಆದರೆ ರಾಜಕೀಯ ವೌಲ್ಯಗಳೆಲ್ಲ ಹಣ ಜಾತಿಯ ಮುಂದೆ ಮಂಕಾಗಿವೆ. ಎರಡನೆಯ ಸರದಿಯಲ್ಲಿ ತಮ್ಮ ಹೆಸರು ಪ್ರಸ್ತಾಪವಾಗದೇ ಇದ್ದರೆ ಅತೃಪ್ತ ಶಾಸಕರು ಸರಕಾರವನ್ನು ಬ್ಲಾಕ್‌ಮೇಲ್ ಮಾಡುವ ಎಲ್ಲ ಸಾಧ್ಯತೆಗಳಿವೆ. ಇದನ್ನು ಬಿಜೆಪಿ ತನಗೆ ಪೂರಕವಾಗಿ ಬಳಸಿಕೊಳ್ಳುವ ಅಪಾಯವಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯ ಮುಂದಿರುವ ಸವಾಲು ದೊಡ್ಡದು. ನೂತನ ಮೈತ್ರಿ ಸರಕಾರ ಅತ್ಯುತ್ತಮ ಆಡಳಿತವನ್ನು ನೀಡುತ್ತಾ, ತನ್ನ ಪ್ರತಿಷ್ಠೆಯನ್ನು ಹೆಚ್ಚಿಸಿಕೊಂಡರೆ ಭವಿಷ್ಯದಲ್ಲಿ ಜೆಡಿಎಸ್‌ಗೆ ಅದು ವರವಾಗಲಿದೆ. ಈಗಾಗಲೇ ಸಿದ್ದರಾಮಯ್ಯ ಉಳಿಸಿ ಹೋದ ದಾರಿಯೊಂದು ಕುಮಾರಸ್ವಾಮಿಯ ಮುಂದೆ ಬಿದ್ದುಕೊಂಡಿದೆ. ಆ ದಾರಿಯನ್ನು ಅವರು ಎಷ್ಟರಮಟ್ಟಿಗೆ ಬಳಸಿಕೊಳ್ಳಲು ಯಶಸ್ವಿಯಾಗುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

ದುರದೃಷ್ಟವಶಾತ್, ಸರಕಾರ ರಚನೆಯಾದ ದಿನದಿಂದ ವಾಸ್ತುಗಳು, ಗ್ರಹಗತಿಗಳು ಸುದ್ದಿಯಲ್ಲಿವೆ. ಮುಖ್ಯಮಂತ್ರಿಯವರು ಮಠ, ದೇವಸ್ಥಾನಗಳನ್ನು ಸುತ್ತತೊಡಗಿದ್ದಾರೆ. ಉಪಮುಖ್ಯಮಂತ್ರಿ ತಾನೇನೂ ಕಮ್ಮಿಯಿಲ್ಲ ಎಂದು ಪೂಜೆ, ವಾಸ್ತುವಿನ ಮೊರೆಹೊಕ್ಕಿದ್ದಾರೆ. ದಲಿತ ಸಮುದಾಯವನ್ನು ಪ್ರತಿನಿಧಿಸುವ ನಾಯಕರಾಗಿ ಪರಮೇಶ್ವರ್ ಉಪಮುಖ್ಯಮಂತ್ರಿ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ. ಇದೀಗ ನೋಡಿದರೆ ಅವರೇ, ತನ್ನ ಸ್ಥಾನವನ್ನು ವೈದಿಕರ ಪಾದತಳಕ್ಕೆ ಒಪ್ಪಿಸುತ್ತಿದ್ದಾರೆ. ಇದರಿಂದ ದಲಿತರಿಗೆ ಏನು ಪ್ರಯೋಜನವಾಯಿತು? ಉಪಮುಖ್ಯಮಂತ್ರಿಯಾದಾಕ್ಷಣ ಪರಮೇಶ್ವರ್ ಕೃತಜ್ಞರಾಗಬೇಕಾದುದು ಅಂಬೇಡ್ಕರ್‌ಗೆ. ಅವರ ಪ್ರತಿಮೆಗೆ ಹೂವಿನ ಹಾರ ಹಾಕುವ ಮೂಲಕ ತನ್ನ ಕರ್ತವ್ಯವನ್ನು ಆರಂಭಿಸಬೇಕಾಗಿತ್ತು. ಇದೀಗ ವಾಸ್ತು, ಪೂಜೆ ಎಂಬ ಹೆಸರಿನಲ್ಲಿ ಇಡೀ ದಲಿತ ಸಮೂಹವನ್ನೇ ಅವರು ವೈದಿಕರ ಪಾದತಳಕ್ಕೆ ತಳ್ಳಲು ಹೊರಟಿದ್ದಾರೆ. ಸದ್ಯದ ಸರಕಾರದಲ್ಲಿ ದಲಿತ ಸಮುದಾಯ ಪರಮೇಶ್ವರ್ ಅವರಿಗಿಂತ, ಬಿಎಸ್ಪಿಯಿಂದ ಆಯ್ಕೆಯಾಗಿರುವ ಮಹೇಶ್ ಅವರಿಂದಲೇ ಬಹಳಷ್ಟನ್ನು ನಿರೀಕ್ಷಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News