ನವಿಲುಗಳ ಜೀವನ ರಹಸ್ಯದತ್ತ...!

Update: 2018-06-08 18:20 GMT

ಅನುವಂಶೀಯ ಸರಣಿಯ ವಿಶ್ಲೇಷಣೆಯಿಂದ ನವಿಲುಗಳಿಗೆ ವಿಶಿಷ್ಟವಾದ ಜೀನ್‌ಗಳಿರುವುದು ತಿಳಿದು ಬಂದಿದೆ. ಈ ಜೀನ್‌ಗಳು ನವಿಲುಗಳ ಗರಿಗಳಿಗೆ ಹಾಗೂ ಅವುಗಳ ದೀರ್ಘಾಯುಷ್ಯಕ್ಕೆ ಕಾರಣವಿರಬಹುದು.

ರಡು ವರ್ಷಗಳ ದೀರ್ಘ ಪ್ರಯತ್ನದ ಬಳಿಕ ಭೋಪಾಲ್‌ನ ಐಐಎಸ್‌ಇಆರ್‌ನ ಸಂಶೋಧಕರ ತಂಡವೊಂದು ಭಾರತದ ರಾಷ್ಟ್ರಪಕ್ಷಿ ನವಿಲಿನ ವಂಶವಾಹಿಗಳ ಸರಣಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ನವಿಲುಗಳಿಗೆ ಆಕರ್ಷಕ ಬಣ್ಣಗಳ ಗರಿಗಳು ಹೇಗೆ ಬಂದಿವೆ? ಮತ್ತು ಅವುಗಳ ದೇಹದ ಭಾರದ ಹೊರತಾಗಿಯೂ ಅವು ಯಾಕೆ ಹಾರಲು ಸಮರ್ಥವಾಗಿವೆ ಎಂಬ ಎರಡು ಪ್ರಶ್ನೆಗಳಿಗೆ ಉತ್ತರ ನೀಡಲು ಈ ಸಂಶೋಧನೆ ಸಹಕಾರಿಯಾಗಬಲ್ಲದು. ಈ ಎರಡು ಪ್ರಶ್ನೆಗಳು ಬಹಳ ಸಮಯದಿಂದ ವಿಜ್ಞಾನಿಗಳಿಗೆ ಒಗಟುಗಳಾಗಿದ್ದು ನವಿಲಿನ ಸಂಪೂರ್ಣ ಜಿನೋಮ್‌ನಲ್ಲಿ 1.1 ಬಿಲಿಯ ಬೇಸ್‌ಫೇರ್ಸ್‌ (ಜೋಡಿಗಳು/ಡಿಎನ್‌ಎಯ ಯೂನಿಟ್‌ಗಳು) ಇವೆ ಎಂದು ಸಂಶೋಧಕರ ಅಧ್ಯಯನದಿಂದ ತಿಳಿದು ಬಂತು. ಒಟ್ಟು 15,970 ವಂಶವಾಹಿಗಳಿಗೆ ಕೋಡ್‌ಗಳಿವೆ ಎಂದೂ ಅವರು ಪತ್ತೆ ಮಾಡಿದ್ದಾರೆ. ಕೋಳಿ ಮತ್ತು ಬಾತುಕೋಳಿಯಂತಹ ಪರಸ್ಪರ ತುಂಬಾ ಸಂಬಂಧ ಇರುವ ಪಕ್ಷಿಗಳ ವಂಶವಾಹಿಗಳೊಂದಿಗೆ ಹೋಲಿಸಿದಾಗ ನವಿಲಿನಲ್ಲಿರುವ ಸುಮಾರು 99 ವಂಶವಾಹಿಗಳು ತೀರಾ ಭಿನ್ನವಾಗಿವೆ ಎಂಬುದು ಕೂಡ ಸಂಶೋಧಕರಿಗೆ ತಿಳಿದು ಬಂತು. ಈ ವಿಭಿನ್ನ ವಂಶವಾಹಿಗಳಲ್ಲಿ ಹೆಚ್ಚಿನ ಬಹುಪಾಲು ವಂಶವಾಹಿಗಳು ನವಿಲುಗಳ ಭ್ರೂಣದ ಬೆಳವಣಿಗೆಗೆ ಅಥವಾ ನವಿಲುಗಳಿಗೆ ರೋಗ ನಿರೋಧಕ ಗುಣ (ಇಮ್ಯುನಿಟಿ)ಯನ್ನು ಕೊಡುವುದಕ್ಕೆ ಸಂಬಂಧಿಸಿದವುಗಳಾಗಿವೆ.

‘ಬೀಂಕೆ’ ಪ್ರಾಜೆಕ್ಟ್‌ನ ಸಂಘಟಕರಲ್ಲೊಬ್ಬರಾದ ಗುವೋಜಿ ಝಾಂಗ್ 99 ವಿಭಿನ್ನ ವಂಶವಾಹಿಗಳ ಸಂಶೋಧನೆಯನ್ನು ‘‘ತುಂಬಾ ಆಸಕ್ತಿದಾಯಕ’’ ಎಂದು ಕರೆದಿದ್ದಾರೆ.
 ಕೋಳಿಯಂತಹ ಹಕ್ಕಿಗಳಿಗೆ ಹೋಲಿಸಿದರೆ ನವಿಲುಗಳು ತುಂಬಾ ದೀರ್ಘ ಕಾಲದವರೆಗೆ (25 ವರ್ಷಗಳ ಕಾಲ) ಬದುಕುತ್ತವೆ. ಕೋಳಿಗಳು ಏಳು-ಎಂಟು ವರ್ಷಗಳು ಬದುಕಿದರೆ ಬಾತುಕೋಳಿಗಳು ಸುಮಾರು ಹತ್ತು ವರ್ಷ ಬದುಕುತ್ತವೆ. ನವಿಲುಗಳಿಗೆ ವಿಶಿಷ್ಟವಾಗಿರುವ ರೋಗ ನಿರೋಧಕ ಸಂಬಂಧಿ ವಂಶವಾಹಿಗಳು ಅವುಗಳಿಗೆ ಕಾಯಿಲೆ ಬರದಂತೆ ತಡೆಯುವುದರ ಮತ್ತು ಅವುಗಳ ದೀರ್ಘ ಆಯುಷ್ಯದ ಗುಟ್ಟು ಇರಬಹುದು.

ನವಿಲುಗಳು ತಮ್ಮ ಲೈಂಗಿಕ ಜತೆಗಾರರನ್ನು ಆಯ್ಕೆ ಮಾಡಲು ಒಂದು ವಿಚಿತ್ರವಾದ ವ್ಯವಸ್ಥೆ ಇದೆ. ಕುತೂಹಲದ ವಿಷಯವೆಂದರೆ ಗಂಡು ನವಿಲುಗಳು ತಮ್ಮ ಜತೆಗಾರ್ತಿಯನ್ನು ಆಯ್ಕೆ ಮಾಡುವುದಿಲ್ಲ. ಹೆಣ್ಣು ನವಿಲೇ ತನ್ನ ಪ್ರಿಯಕರನನ್ನು ಆಯ್ಕೆ ಮಾಡುತ್ತದೆ. ಹೀಗೆ ಆಯ್ಕೆ ಮಾಡುವಾಗ ಹೆಣ್ಣು ನವಿಲು, ಗಂಡು ನವಿಲೊಂದರ ಗರಿಗಳು, ಅದರಲ್ಲಿರುವ ಕಣ್ಣಿನ ಚುಕ್ಕಿಗಳು ಅಥವಾ ನೇತ್ರ ಬಿಂದುಗಳು ಮತ್ತು ಗಂಡು ನವಿಲು ತನ್ನ ಗರಿಗಳನ್ನು ಪ್ರದರ್ಶಿಸುವ ರೀತಿಯಿಂದ ಕೂಡ ಪ್ರಭಾವಿತವಾಗುತ್ತದೆ. ನೇತ್ರ ಬಿಂದುಗಳ ಸಂಖ್ಯೆಗಳು ಮತ್ತು ಹೆಣ್ಣು ನವಿಲೊಂದಕ್ಕೆ ಅವುಗಳು ಹೇಗೆ ಒಪ್ಪಿಗೆಯಾಗುತ್ತವೆ, ಹೊಂದಿಕೆಯಾಗುತ್ತವೆ ಎಂಬ ಕುರಿತು ಹಲವಾರು ಅಧ್ಯಯನಗಳು ನಡೆದಿವೆ. ‘‘ನೇತ್ರ ಬಿಂದುಗಳ ಸಂಖ್ಯೆ ಒಂದು ನಿರ್ದಿಷ್ಟ ಸಂಖ್ಯೆಗಿಂತ ಕಡಿಮೆ ಇದ್ದಾಗ ಗಂಡು ನವಿಲೊಂದಕ್ಕೆ ಹೆಣ್ಣು ನವಿಲಿನೊಂದಿಗೆ ಕೂಡುವ ಪ್ರಣಯದಾಟ ನಡೆಸುವ ಅವಕಾಶಗಳು ಕೂಡ ಕಡಿಮೆಯಾಗಬಹುದು. ಆದ್ದರಿಂದ ನೇತ್ರ ಬಿಂದುಗಳು ಒಂದು ಹಕ್ಕಿಯ (ನವಿಲಿನ) ಕೂಟ ಸಾಮರ್ಥ್ಯದ ಅಳತೆಗೋಲು ಎನ್ನುತ್ತಾರೆ ಅಧ್ಯಯನ ತಂಡದ ಪ್ರಮುಖ ಸಂಶೋಧಕ ವಿನೀತ್ ಕೆ. ಶರ್ಮಾ.
ಇದನ್ನು ಖಚಿತವಾಗಿ ಸಾಬೀತುಪಡಿಸಲು ಇನ್ನಷ್ಟು ಸಂಶೋಧನೆ ಅಗತ್ಯವಿರಬಹುದಾದರೂ, ನವಿಲುಗಳ ಗರಿಗಳು ಅವುಗಳ ಜೊತೆಗಾರರ ಆಯ್ಕೆ ಮಾಡುವಾಗ ಅವುಗಳಿಗೆ ಹೆಚ್ಚು ನೆರವಾಗುತ್ತಿರಬಹುದು.
ನವಿಲುಗಳ ಸರಣಿ ಮಾಹಿತಿಯು ಸಂಶೋಧಕರಿಗೆ ನವಿಲಿನ ವಿಕಾಸದ ಇತಿಹಾಸವನ್ನು ಅಧ್ಯಯನ ಮಾಡಲು ಕೂಡ ಅವಕಾಶ ಮಾಡಿಕೊಟ್ಟಿದೆ. ನವಿಲುಗಳ ಸಂಖ್ಯೆಯೂ ಅವುಗಳ ವಿಕಾಸದ ಹಾದಿಯಲ್ಲಿ ಕನಿಷ್ಠ ಎರಡು ‘ಬಾಟಲ್‌ನೆಕ್’ಗಳನ್ನು ಅಥವಾ ಸಂಖ್ಯೆ ಕುಸಿತ (ಪಾಪುಲೇಷನ್ ಕ್ರ್ಯಾಶ್)ಗಳನ್ನು ಕಂಡಿದೆ. ಒಂದು, ಸುಮಾರು ನಾಲ್ಕು ಮಿಲಿಯ ವರ್ಷಗಳ ಹಿಂದೆ ಮತ್ತು ಇನ್ನೊಂದು ಕುಸಿತ 4,50,000 ವರ್ಷಗಳ ಹಿಂದೆ. ಈ ಕುಸಿತಗಳಿಗೆ ಕಾರಣಗಳೇನು ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ.

‘‘ಇದೀಗ ವಿಜ್ಞಾನಿಗಳು ಕೈಗೊಂಡಿರುವ ಅಧ್ಯಯನವು ನವಿಲುಗಳ ವಿಕಾಸವಾದದ ಇತಿಹಾಸಕ್ಕೆ ಸಂಬಂಧಿಸಿದ ಅಧ್ಯಯನದಲ್ಲಿ ಇಡಲಾದ ಮೊದಲ ಹೆಜ್ಜೆ’’ ಎಂದಿದ್ದಾರೆ ಝಾಂಗ್ ವಂಶವಾಹಿಗಳ ಸರಣಿಯ ಅಧ್ಯಯನಕ್ಕೆ ಸಂಶೋಧಕರು ‘ಶಾರ್ಟ್ ರೀಡ್ಸ್ ಟೆಕ್ನಾಲಜಿ’ ಎಂಬ ವಿಧಾನವನ್ನು ಬಳಸಿದ್ದಾರೆ. ಇದರಿಂದ ಉತ್ತಮವಾದ ‘ಜೆನೋಮ್ ಅಸೆಂಬ್ಲಿ’ ಲಭಿಸುವುದಿಲ್ಲವಾದರೂ, ಸಂಶೋಧನೆಯ ಮುಂದಿನ ಹಂತದಲ್ಲಿ ನವಿಲು ಯಾಕೆ ಇತರ ಪಕ್ಷಿಸಂಕುಲದಿಂದ ಭಿನ್ನವಾಗಿದೆ ಎಂಬ ಬಗ್ಗೆ ಇನ್ನಷ್ಟು ಒಳನೋಟಗಳು ಲಭಿಸಬಹುದು.
ಸಂಶೋಧನೆ ಮುಂದುವರಿದಂತೆ ಸಂಶೋಧಕರು ಈ ವಂಶವಾಹಿಗಳ ನಿಖರವಾದ ಪಾತ್ರವೇನು ಎಂದೂ ತಿಳಿಯುವ ಮೂಲಕ ನವಿಲುಗಳ ಸಂತತಿಯ ಸಂಪೂರ್ಣ ವಂಶವಾಹಿ ತಂತುಗಳನ್ನು ಪಡೆಯುವ ಪ್ರಯತ್ನಗಳನ್ನು ನಡೆಸಲಿದ್ದಾರೆ.
ನವಿಲುಗಳ ಕುರಿತಾದ ಈ ಅಧ್ಯಯನವು ನಮ್ಮ ರಾಷ್ಟ್ರ ಪಕ್ಷಿಯ ಬಗ್ಗೆ ಇನ್ನಷ್ಟು ಆಳವಾದ ತಿಳಿವಳಿಕೆ ಪಡೆಯಲು ಒಂದು ಪರಿಪೂರ್ಣ ಅವಕಾಶ ಒದಗಿಸಿದೆ. ನವಿಲುಗಳ ಸಂರಕ್ಷಣೆಗೆ ಇನ್ನಷ್ಟು ಉತ್ತಮವಾದ ತಂತ್ರಗಳನ್ನು, ಹಾದಿಗಳನ್ನು ಕಂಡು ಹಿಡಿಯಲು ಕೂಡ ಈ ಅಧ್ಯಯನದಿಂದ ಸಾಧ್ಯವಾಗಬಹುದು.
ನವಿಲುಗಳು ಹಾರುವಂತೆ ಮಾಡುವುದು ಯಾವುದು? ಅವುಗಳಿಗೆ ಯಾಕೆ ಕೊಕ್ಕುಗಳಿವೆ? ಯಾಕೆ ಹಲ್ಲುಗಳಿಲ್ಲ? ಅವುಗಳಿಗೆ ಯಾಕೆ ಬಣ್ಣ ಬಣ್ಣದ ಗರಿಗಳಿವೆ? ಅವುಗಳಿಗೆ ಯಾಕೆ ಉದ್ದವಾದ ಗರಿಗಳಿವೆ? ಮತ್ತು ಗರಿಗಳ ಮೇಲೆ ಯಾಕೆ ಕೇಂದ್ರ ಬಿಂದುಗಳಿವೆ? ಪೆಂಗ್ವಿನ್‌ಗಳು ಯಾಕೆ ಹಾರುವ ಸಾಮರ್ಥ್ಯವನ್ನು ಕಳೆದುಕೊಂಡವು? ಆದರೆ ಅವುಗಳು ಹೇಗೆ ಸಮುದ್ರದಲ್ಲಿ ಮುಳುಗಿ ಏಳಬಲ್ಲವು? ಹಾಡುವ ಹಕ್ಕಿ(ಹಮ್ಮಿಂಗ್ ಬರ್ಡ್)ಗಳು ಯಾಕಾಗಿ ಗಾತ್ರದಲ್ಲಿ ಅಷ್ಟೊಂದು ಚಿಕ್ಕವುಗಳು? ಆದರೆ ಉಷ್ಟ್ರಪಕ್ಷಿಗಳು ಗಾತ್ರದಲ್ಲಿ ಯಾಕೆ ಅಷ್ಟೊಂದು ದೊಡ್ಡದಾಗಿವೆ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಪಡೆಯಲು ಸದ್ಯದ ಅಧ್ಯಯನ ನೆರವಾಗಬಲ್ಲದು. ಪರಿಣಾಮವಾಗಿ ಹಕ್ಕಿಗಳು ಹೇಗೆ ವಿಕಾಸ ಹೊಂದುತ್ತವೆ ಎಂಬ ಬಗ್ಗೆ ನಮಗಿರುವ ತಿಳಿವಳಿಕೆ, ಅಭಿಪ್ರಾಯ ಸಂಪೂರ್ಣವಾಗಿ ಬದಲಾಗಬಹುದು
ಕೃಪೆ: india.mongabay.com

Writer - ಮನುಪ್ರಿಯ

contributor

Editor - ಮನುಪ್ರಿಯ

contributor

Similar News

ಜಗದಗಲ
ಜಗ ದಗಲ