3 ದಿನಗಳ ಯುದ್ಧವಿರಾಮ: ಅಫ್ಘಾನ್ ತಾಲಿಬಾನ್ ಘೋಷಣೆ
ಕಾಬೂಲ್, ಜೂ. 9: ಮುಂದಿನ ವಾರಾಂತ್ಯದಲ್ಲಿ ಬರುವ ಈದ್ ರಜಾ ದಿನಗಳ ಸಂದರ್ಭದಲ್ಲಿ ಮೂರು ದಿನಗಳ ಕಾಲ ಯುದ್ಧವಿರಾಮ ಆಚರಿಸುವುದಾಗಿ ಅಫ್ಘಾನ್ ತಾಲಿಬಾನ್ ಶನಿವಾರ ಘೋಷಿಸಿದೆ.
ಅಫ್ಘಾನ್ ಸರಕಾರವು ಗುರುವಾರ ಘೋಷಿಸಿದ ಯುದ್ಧವಿರಾಮಕ್ಕೆ ಭಯೋತ್ಪಾದಕ ಗುಂಪು ಈ ರೀತಿಯಾಗಿ ಪ್ರತಿಕ್ರಿಯಿಸಿದೆ. ತಾಲಿಬಾನ್ ಈ ಮಾದರಿಯ ಯುದ್ಧವಿರಾಮವನ್ನು ಘೋಷಿಸುವುದು ಇದೇ ಮೊದಲ ಬಾರಿಯಾಗಿದೆ.
ವಿದೇಶಿ ಪಡೆಗಳನ್ನು ಯುದ್ಧವಿರಾಮದ ವ್ಯಾಪ್ತಿಯಿಂದ ಹೊರಗಿಡಲಾಗುವುದು ಹಾಗೂ ಅವುಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಯುವುದು ಎಂದು ಅದು ಹೇಳಿದೆ. ಅದೇ ವೇಳೆ, ಯಾವುದೇ ದಾಳಿಯ ವಿರುದ್ಧ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದಾಗಿ ತಾಲಿಬಾನಿಗಳು ಹೇಳಿದ್ದಾರೆ.
ರಮಝಾನ್ ತಿಂಗಳ ಕೊನೆಯ ಭಾಗದಲ್ಲಿ ಬೇಷರತ್ ಯುದ್ಧವಿರಾಮ ಆಚರಿಸುವುದಾಗಿ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಗುರುವಾರ ಘೋಷಿಸಿರುವುದನ್ನು ಸ್ಮರಿಸಬಹುದಾಗಿದೆ. ಆದಾಗ್ಯೂ, ಐಸಿಸ್ ಮುಂತಾದ ಇತರ ಉಗ್ರ ಗುಂಪುಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಯವುದು ಎಂಬುದಾಗಿ ಅವರು ಹೇಳಿದ್ದಾರೆ.
ತಾಲಿಬಾನ್ ಘೋಷಿಸಿದ ಯುದ್ಧವಿರಾಮ ಯಾವಾಗ ಆರಂಭಗೊಳ್ಳುವುದೆಂದು ನಿಖರವಾಗಿ ಗೊತ್ತಾಗಿಲ್ಲ.