×
Ad

ಫೇಸ್‌ಬುಕ್ ಬಗ್ಗೆ ಬೆಚ್ಚಿಬೀಳಿಸುವ ವರದಿ ಪ್ರಕಟಿಸಿದ ‘ವಾಲ್ ಸ್ಟ್ರೀಟ್ ಜರ್ನಲ್’

Update: 2018-06-09 22:42 IST

ವಾಶಿಂಗ್ಟನ್, ಜೂ. 9: ಸಾಮಾಜಿಕ ಜಾಲ ತಾಣ ದೈತ್ಯ ಫೇಸ್‌ಬುಕ್ ಹಲವು ನಿರ್ದಿಷ್ಟ ಕಂಪೆನಿಗಳೊಂದಿಗೆ ಮಾಹಿತಿ ಹಂಚಿಕೆ ಒಪ್ಪಂದ ಮಾಡಿಕೊಂಡಿದ್ದು, ಅಂಥ ಕಂಪೆನಿಗಳಿಗೆ ಬಳಕೆದಾರರ ಮಾಹಿತಿಗಳನ್ನು ಪಡೆಯಲು ವಿಶೇಷ ಅವಕಾಶಗಳನ್ನು ಕೊಡಲಾಗಿದೆ ಎಂದು ಮಾಧ್ಯಮ ವರದಿಯೊಂದು ಶನಿವಾರ ತಿಳಿಸಿದೆ.

‘ವೈಟ್‌ಲಿಸ್ಟ್’ ಎಂಬುದಾಗಿ ಆಂತರಿಕವಾಗಿ ಕರೆಯಲ್ಪಡುವ ಕೆಲವೊಂದು ಒಪ್ಪಂದಗಳು ನಿರ್ದಿಷ್ಟ ಕಂಪೆನಿಗಳಿಗೆ ಬಳಕೆದಾರರೊಬ್ಬರ ಫೇಸ್‌ಬುಕ್ ಸ್ನೇಹಿತರ ಬಗ್ಗೆ ಹೆಚ್ಚುವರಿ ಮಾಹಿತಿ ಸಂಗ್ರಹಿಸಲು ಅವಕಾಶ ನೀಡುತ್ತವೆ ಎಂದು ಈ ಬಗ್ಗೆ ತಿಳಿದಿರುವ ಜನರು ಹೇಳಿದ್ದಾರೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.

‘‘ಫೋನ್ ನಂಬರ್‌ನಂಥ ಮಾಹಿತಿಗಳು ಹಾಗೂ ಬಳಕೆದಾರರು ಮತ್ತು ಅವರ ನೆಟ್‌ವರ್ಕ್‌ನಲ್ಲಿರುವ ಇತರರ ನಡುವಿನ ಆತ್ಮೀಯತೆಯ ಮಟ್ಟವನ್ನು ಅಳೆಯುವ ‘ಫ್ರೆಂಡ್‌ಲಿಂಕ್’ ಎಂಬುದಾಗಿ ಕರೆಯಲ್ಪಡುವ ಅಂಶಗಳನ್ನು ಪಡೆಯಲು ಈ ಕಂಪೆನಿಗಳಿಗೆ ಅವಕಾಶವಿದೆ ಎಂದು ಈ ಜನರು ಹೇಳಿದ್ದಾರೆ’’ ಎಂದು ವರದಿ ತಿಳಿಸಿದೆ.

ಫೇಸ್‌ಬುಕ್‌ಗೆ ಜಾಹೀರಾತು ನೀಡುವ ಅಥವಾ ಇತರ ಕಾರಣಗಳಿಗಾಗಿ ಮಹತ್ವ ಪಡೆದುಕೊಂಡಿರುವ ರಾಯಲ್ ಬ್ಯಾಂಕ್ ಆಫ್ ಕೆನಡ ಮತ್ತು ನಿಸಾನ್ ಮೋಟರ್ ಕೊ. ಮುಂತಾದ ಕಂಪೆನಿಗಳೊಂದಿಗೆ ಫೇಸ್‌ಬುಕ್ ವೈಟ್‌ಲಿಸ್ಟ್ ಒಪ್ಪಂದಗಳನ್ನು ಹೊಂದಿದೆ ಎಂದು ಪತ್ರಿಕೆ ಹೇಳಿದೆ.

ಕನಿಷ್ಠ 60 ಕಂಪೆನಿಗಳೊಂದಿಗೆ ಫೇಸ್‌ಬುಕ್ ಮಾಹಿತಿ ಹಂಚಿಕೆ ಭಾಗೀದಾರಿಕೆ ಹೊಂದಿದೆ ಎಂಬ ವರದಿ ಪ್ರಕಟವಾದ ಬೆನ್ನಿಗೇ ಈ ವರದಿ ಹೊರಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News