ಇಸ್ರೇಲ್ ಸೈನಿಕರ ಗುಂಡಿಗೆ ಬಾಲಕ ಸೇರಿ 3 ಫೆಲೆಸ್ತೀನಿಯರು ಬಲಿ: ಗಾಝಾ ಪಟ್ಟಿಯಲ್ಲಿ ಮುಂದುವರಿದ ಪ್ರತಿಭಟನೆ
ಗಾಝಾ, ಜೂ. 9: ಗಾಝಾ ಪಟ್ಟಿಯಲ್ಲಿ ಇಸ್ರೇಲ್ ಜೊತೆಗಿನ ಗಡಿ ಸಮೀಪ ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದ ಫೆಲೆಸ್ತೀನಿಯರ ಮೇಲೆ ಇಸ್ರೇಲ್ ಸೈನಿಕರು ಹಾರಿಸಿದ ಗುಂಡಿಗೆ 15 ವರ್ಷದ ಬಾಲಕ ಸೇರಿದಂತೆ ಮೂವರು ಫೆಲೆಸ್ತೀನಿಯರು ಮೃತಪಟ್ಟಿದ್ದಾರೆ.
1948ರಲ್ಲಿ ಇಸ್ರೇಲ್ ದೇಶದ ರಚನೆಯ ವೇಳೆ ನಡೆದ ಯುದ್ಧದಲ್ಲಿ ತಮ್ಮ ಪಿತ್ರಾರ್ಜಿತ ಆಸ್ತಿಗಳನ್ನು ಬಿಟ್ಟು ಬಂದ ಫೆಲೆಸ್ತೀನಿಯರಿಗೆ ಅಲ್ಲಿಗೆ ಮರಳಲು ಅವಕಾಶ ನೀಡಬೇಕೆಂದು ಆಗ್ರಹಿಸಿ ಫೆಲೆಸ್ತೀನಿಯರು ಮಾರ್ಚ್ 30ರಿಂದ ಪ್ರತಿ ಶುಕ್ರವಾರ ಗಾಝಾ ಪಟ್ಟಿಯ ಇಸ್ರೇಲ್ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನೆಗಳ ವೇಳೆ ಇಸ್ರೇಲ್ ಪೊಲೀಸರು ಹಾರಿಸಿದ ಗುಂಡಿಗೆ ಈವರೆಗೆ 120ಕ್ಕೂ ಅಧಿಕ ಫೆಲೆಸ್ತೀನಿಯರು ಪ್ರಾಣ ಕಳೆದುಕೊಂಡಿದ್ದಾರೆ.
ಇತ್ತೀಚೆಗೆ ಜೆರುಸಲೇಮನ್ನು ಇಸ್ರೇಲ್‌ನ ರಾಜಧಾನಿಯಾಗಿ ಅಮೆರಿಕ ಮಾನ್ಯ ಮಾಡಿದ ಬಳಿಕ ಫೆಲೆಸ್ತೀನಿಯರು ಆಕ್ರೋಶಗೊಂಡಿರುವುದನ್ನು ಸ್ಮರಿಸಬಹುದಾಗಿದೆ. ಅವರು ಜೆರುಸಲೇಮನ್ನು ತಮ್ಮ ಭವಿಷ್ಯದ ಫೆಲೆಸ್ತೀನ್ ರಾಷ್ಟ್ರದ ರಾಜಧಾನಿಯಾಗಿ ಮಾಡುವ ಯೋಜನೆ ಹೊಂದಿದ್ದರು.
ಗಾಝಾ ಗಡಿಯಲ್ಲಿ ಎರಡು ತಿಂಗಳುಗಳಿಂದ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಇಸ್ರೇಲ್ ಕಡೆಯಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಆದರೆ, ಪ್ರತಿಭಟನಕಾರರು ಹಾರಿಸುತ್ತಿರುವ ಕಲ್ಲಿದ್ದಲು ಅಥವಾ ತೈಲ ವಾಹಕ ಗಾಳಿಪಟಗಳಿಂದಾಗಿ ಇಸ್ರೇಲ್ ಭೂಭಾಗದಲ್ಲಿ ಹೊತ್ತಿಕೊಂಡ ಬೆಂಕಿಯಲ್ಲಿ ಭಾರೀ ಪ್ರಮಾಣದ ಕೃಷಿ ಮತ್ತು ಅರಣ್ಯ ಭೂಮಿ ಸುಟ್ಟು ಹೋಗಿದೆ ಎಂದು ಇಸ್ರೇಲ್ ಅಧಿಕಾರಿಗಳು ಹೇಳುತ್ತಾರೆ.