ಅಧಿಕ ಕೊಲೆಸ್ಟ್ರಾಲ್ ಇದೆಯೇ? ಹಾಗಿದ್ದರೆ ಈ ರಸವನ್ನು ಸೇವಿಸಿ ನೋಡಿ

Update: 2018-06-10 10:44 GMT

ಹಾಗಲಕಾಯಿಯ ಕಹಿರುಚಿಯನ್ನು ಹೆಚ್ಚಿನವರು ಮೆಚ್ಚದಿರಬಹುದು. ಆದರೆ ನಮ್ಮ ಶರೀರಕ್ಕೆ ಅದರಷ್ಟು ಆರೋಗ್ಯ ಲಾಭಗಳನ್ನು ನೀಡುವ ತರಕಾರಿ ಬೇರೊಂದಿಲ್ಲ. ರಕ್ತದಲ್ಲಿಯ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸಲು ನೆರವಾಗುವ ಅದು ಮಧುಮೇಹಿಗಳಿಗೆ ಮತ್ತು ಮಧುಮೇಹದ ಅಪಾಯವನ್ನು ಎದುರಿಸುತ್ತಿರುವವರಿಗಂತೂ ವರದಾನವಾಗಿದೆ. ಆದರೆ ಶರೀರದಲ್ಲಿಯ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವ ಅದರ ಗುಣಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಹೌದು,ಹಾಗಲಕಾಯಿ ಹೈಪರ್‌ಕೊಲೆಸ್ಟ್ರರೊಲಿಮಿಯಾ ಅಥವಾ ಅಧಿಕ ಕೊಲೆಸ್ಟ್ರಾಲ್ ಹೊಂದಿದವರಿಗೆ ಹೇಳಿ ಮಾಡಿಸಿದ ನೈಸರ್ಗಿಕ ಪರಿಹಾರವಾಗಿದೆ.

ಹಾಗಲಕಾಯಿ ಕೊಲೆಸ್ಟ್ರಾಲ್‌ನ್ನು ಹೇಗೆ ತಗ್ಗಿಸುತ್ತದೆ?

 ಹಾಗಲಕಾಯಿ ಹೈಪರ್‌ಕೊಲೆಸ್ಟ್ರರೊಲಿಮಿಯಾ ಮತ್ತು ಸಂಬಂಧಿತ ಕಾಯಿಲೆಗಳ ಚಿಕಿತ್ಸೆಯಲ್ಲಿ ಸಮರ್ಥ ಪೂರಕವಾಗಿ ಕಾರ್ಯಾಚರಿಸುತ್ತದೆ ಎನ್ನುವುದನ್ನು ಜರ್ನಲ್ ಆಫ್ ಬಿಎಂಸಿ ಕಾಂಪ್ಲಿಮೆಂಟರಿ ಆ್ಯಂಡ್ ಆಲ್ಟರ್ನೇಟಿವ್ ಮೆಡಿಸಿನ್(1)ನಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯೊಂದು ದೃಢಪಡಿಸಿದೆ.
ಅಧಿಕ ಕೊಲೆಸ್ಟ್ರಾಲ್ ಮಟ್ಟವು ಟೈಪ್-2 ಮಧುಮೇಹ,ಅಥೆರೊಸ್ಲಿರೊಸಿಸ್ ಅಥ ವಾ ಅಪಧಮನಿ ಕಾಠಿಣ್ಯ,ಹೃದ್ರೋಗಗಳು ಮತ್ತು ಯಕೃತ್ತಿನ ಕಾಯಿಲೆಗಳೊಂದಿಗೆ ಗುರುತಿಸಿಕೊಂಡಿದೆ. ಹಾಗಲಕಾಯಿಯಲ್ಲಿರುವ ಸಂಯುಕ್ತಗಳು ಎಂಜೈಮ್ ಅಥವಾ ಕಿಣ್ವಗಳ ಮಟ್ಟದಲ್ಲಿ ಕಾರ್ಯಾಚರಿಸುವ ಜೊತೆಗೆ ಯಕೃತ್ತಿನಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಲೆಸ್ಟ್ರಾಲ್‌ನ್ನೂ ನಿವಾರಿಸುತ್ತವೆ.

ಹಾಗಲಕಾಯಿ ಬಳಕೆ ಹೇಗೆ?

ಗಿಡಮೂಲಿಕೆ ಔಷಧಿಯಾಗಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಹಾಗಲಕಾಯಿಯು ಸುರಕ್ಷಿತ ಮಾತ್ರವಲ್ಲ,ವಿವಿಧ ಔಷಧಿಗಳಿಂದುಂಟಾಗುವ ಅಡ್ಡಪರಿಣಾಮಗಳನ್ನೂ ತೊಲಗಿಸುತ್ತದೆ.

ಹಾಗಲಕಾಯಿಯನ್ನು ತರಕಾರಿಯ ರೂಪದಲ್ಲಿ ಸೇವಿಸಬಹುದು ಅಥವಾ ಮಾರುಕಟ್ಟೆಯಲ್ಲಿ ಲಭ್ಯವಿರುವ ಅದರ ರಸ,ಚೂರ್ಣ,ಕ್ಯಾಪ್ಸೂಲ್‌ಗಳು ಮತ್ತು ಮಾತ್ರೆಗಳನ್ನು ಸೇವಿಸಬಹುದಾಗಿದೆ.

ಹಾಗಲಕಾಯಿ ರಸ: 10-15 ಎಂಎಲ್‌ಗಳಷ್ಟು ಹಾಗಲಕಾಯಿ ರಸವನ್ನು ಅಷ್ಟೇ ಪ್ರಮಾಣದ ನೀರಿನೊಂದಿಗೆ ಬೆರೆಸಿ ದಿನಕ್ಕೊಂದು ಬಾರಿ ಖಾಲಿಹೊಟ್ಟೆಯಲ್ಲಿ ಸೇವಿಸಿ.

ಹಾಗಲಕಾಯಿ ಚೂರ್ಣ: ನೀವು ಮಧುಮೇಹಿಯಲ್ಲದಿದ್ದರೆ 1-2 ಗ್ರಾಂ.ಚೂರ್ಣವನ್ನು ಒಂದು ಚಮಚ ಜೇನಿನೊಂದಿಗೆ ಅಥವಾ ಮಧುಮೇಹಿಯಾಗಿದ್ದರೆ ಅಷ್ಟೇ ಪ್ರಮಾಣದ ಚೂರ್ಣವನ್ನು ಒಂದು ಗ್ಲಾಸ್ ನೀರಿನಲ್ಲಿ ಚೆನ್ನಾಗಿ ಮಿಶ್ರ ಮಾಡಿ ದಿನಕ್ಕೆರಡು ಬಾರಿ ಊಟದ ನಂತರ ಸೇವಿಸಿ.

ಕ್ಯಾಪ್ಸೂಲ್ ಮತ್ತು ಮಾತ್ರೆಗಳು: ದಿನಕ್ಕೆರಡು ಬಾರಿ ಊಟವಾದ ಬಳಿಕ 1-2 ಕ್ಯಾಪ್ಸೂಲ್ ಅಥವಾ ಮಾತ್ರೆಗಳನ್ನು ನೀರಿನೊಂದಿಗೆ ತೆಗೆದುಕೊಳ್ಳಬಹುದು.
ಆದರೆ ಹಾಗಲಕಾಯಿಯನ್ನು ಈ ರೂಪಗಳಲ್ಲಿ ಸೇವಿಸುವ ಮುನ್ನ ನಿಮ್ಮ ವ್ಯೆದ್ಯರು ಅಥವಾ ಆಯುರ್ವೇದ ತಜ್ಞರ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News