ನೀವು ಮಧುಮೇಹಿಗಳೇ? ಹಾಗಿದ್ದರೆ ಕನೋಲಾ ಎಣ್ಣೆಯ ಬಳಕೆಯನ್ನು ಆರಂಭಿಸಿ

Update: 2018-06-10 10:56 GMT

ನಿಮ್ಮ ಮನೆಯಲ್ಲಿ ಅಡುಗೆಗೆ ತೆಂಗಿನೆಣ್ಣೆ, ತಾಳೆಯೆಣ್ಣೆ,ಸೂರ್ಯಕಾಂತಿ ಇತ್ಯಾದಿಗಳನ್ನು ಬಳಸುತ್ತಿದ್ದೀರಾ? ಹೆಚ್ಚು ಆರೋಗ್ಯಕರವಾದ ಎಣ್ಣೆಗಾಗಿ ಹುಡುಕುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಒಳ್ಳೆಯ ಸುದ್ದಿ ಇಲ್ಲಿದೆ. ಕನೋಲಾ ಬೀಜಗಳಿಂದ ತಯಾರಿಸಲಾಗುವ ಕನೋಲಾ ಎಣ್ಣೆ ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತದೆ ಎಂದು ಕೆನಡಾದ ತಜ್ಞರ ತಂಡವೊಂದು ನಡೆಸಿರುವ ಸಂಶೋಧನೆಯು ದೃಢಪಡಿಸಿದೆ.

ವಿವಿಧ ಖಾದ್ಯತೈಲಗಳು ನಮ್ಮ ಶರೀರದ ತೂಕವನ್ನು ಅನಗತ್ಯವಾಗಿ ಹೆಚ್ಚಿಸುತ್ತ ಮತ್ತು ಕೊಬ್ಬು ಸೇರಿಕೊಳ್ಳಲು ಕಾರಣವಾಗುತ್ತವೆ. ಕನೋಲಾ ಎಣ್ಣೆಯಲ್ಲಿರುವ ವಿಟಾಮಿನ್ ಕೆ ಮತ್ತು ವಿಟಾಮಿನ್ ಇ ಕೊಬ್ಬನ್ನು ಕರಗಿಸುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಅದು ಹೊಟ್ಟೆಯ ಭಾಗದಲ್ಲಿಯ ಕೊಬ್ಬಿನ ಮಟ್ಟವನ್ನು ತಗ್ಗಿಸಲು ನೆರವಾಗುತ್ತದೆ ಎನ್ನುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

ಕನೋಲಾ ಎಣ್ಣೆಯು ಒಮೆಗಾ 3 ಮತ್ತು ಒಮೆಗಾ 6 ಫ್ಯಾಟಿ ಆ್ಯಸಿಡ್‌ಗಳನ್ನು ಸಮೃದ್ಧವಾಗಿ ಒಳಗೊಂಡಿರುವುದರಿಂದ ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ತನ್ಮೂಲಕ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ತಗ್ಗಿಸುತ್ತದೆ. ಮಿದುಳು ಮತ್ತು ರೋಗನಿರೋಧಕ ಶಕ್ತಿಯ ಬೆಳವಣಿಗೆಗೆ ನೆರವಾಗುವ ಅದು ರಕ್ತದೊತ್ತಡವನ್ನೂ ನಿಯಂತ್ರಿಸುತ್ತದೆ.

ಕನೋಲಾ ಎಣ್ಣೆಯಲ್ಲಿ ಟ್ರಾನ್ಸ್ ಫ್ಯಾಟಿ ಮತ್ತು ಸ್ಯಾಚುರೇಟೆಡ್ ಫ್ಯಾಟಿ ಆ್ಯಸಿಡ್‌ಗಳು ತೀರ ಕಡಿಮೆ ಪ್ರಮಾಣದಲ್ಲಿರುವುದರಿಂದ ಅದು ಪರಿಧಮನಿಯ ಹೃದಯ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ನಮ್ಮ ಶರೀರದಲ್ಲಿ ಒಳ್ಳೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್‌ಗಳೆರಡೂ ಇರುತ್ತವೆ. ಕೆಟ್ಟ ಕೊಲೆಸ್ಟ್ರಾಲ್ ಅಧಿಕವಾಗಿದ್ದರೆ ಅದು ತೀವ್ರ ಮತ್ತು ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು. ಕನೋಲಾ ಎಣ್ಣೆಯಲ್ಲಿರುವ ಮಾನೊಸ್ಯಾಚುರೇಟೆಡ್ ಫ್ಯಾಟ್ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ ಮತ್ತು ಒಳ್ಳೆಯ ಕೊಲೆಸ್ಟ್ರಾಲ್‌ನ್ನು ಹೆಚ್ಚಿಸುತ್ತದೆ.

ಗ್ಲುಕೋಸ್ ಮಟ್ಟ ಮತ್ತು ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಕಡಿಮೆ ಮಾಡುವ ಜೊತೆಗೆ ಕನೋಲಾ ಎಣ್ಣೆಯು ಸಮೃದ್ಧ ಉತ್ಕರ್ಷಣ ನಿರೋಧಕಗಳು ಮತ್ತು ವಿಟಾಮಿನ್‌ಗಳನ್ನು ಒಳಗೊಂಡಿರುವುದರಿಂದ ಕ್ಯಾನ್ಸರ್‌ಕಾರಕ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಜ್ಞಾಪಕ ಶಕ್ತಿ ನಷ್ಟ,ಮಾನಸಿಕ ಕುಸಿತ ಮತ್ತು ಅಲ್ಝೀಮರ್ಸ್ ಕಾಯಿಲೆಯ ಅಪಾಯಗಳನ್ನೂ ಅದು ತಗ್ಗಿಸುತ್ತದೆ. ಕನೋಲಾ ಎಣ್ಣೆಯು ರಕ್ತ ಪರಿಚಲನೆಯನ್ನು ಉತ್ತಮಗೊಳಿಸುವುದರಿಂದ ಬೆನ್ನುನೋವಿನಿಂದಲೂ ಉಪಶಮನ ನೀಡುತ್ತದೆ.

ಇತರ ಯಾವುದೇ ಸಾಮಾನ್ಯ ಖಾದ್ಯತೈಲಗಳಿಗೆ ಹೋಲಿಸಿದರೆ ಕನೋಲಾ ಎಣ್ಣೆಯಲ್ಲಿ ಸ್ಯಾಚುರೇಟೆಡ್ ಫ್ಯಾಟ್ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಕೇವಲ ಶೇ.7ರಷ್ಟು ಸ್ಯಾಚುರೇಟೆಡ್ ಫ್ಯಾಟ್ ಮತ್ತು ಶೇ.93ರಷ್ಟು ಆರೋಗ್ಯಕರ ಮಾನೊಅನ್‌ಸ್ಯಾಚುರೇಟೆಡ್ ಮತ್ತು ಪಾಲಿಅನ್‌ಸ್ಯಾಚುರೇಟೆಡ್ ಫ್ಯಾಟ್‌ಗಳನ್ನು ಅದು ಒಳಗೊಂಡಿದೆ.

ಕನೋಲಾ ಎಣ್ಣೆಯನ್ನು ಅಧಿಕ ಉಷ್ಣತೆಯಲ್ಲಿ ಕಾಯಿಸಬಹುದಾದ್ದರಿಂದ ಖಾದ್ಯಗಳನ್ನು ಕರಿಯಲು ಅದು ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ಕರಿದ ಖಾದ್ಯಗಳಲ್ಲಿ ಎಣ್ಣೆಯಂಶ ಕಡಿಮೆಯಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News