ಪ್ರಣಬ್ ಚಿತ್ರಕ್ಕೆ ಆರೆಸ್ಸೆಸ್ ಟೋಪಿ ಹಾಕಿದ್ದು ಯಾರು ಗೊತ್ತೇ?

Update: 2018-06-10 11:21 GMT

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ನಾಗ್ಪುರದಲ್ಲಿ ನಡೆದ ಸಮಾರಂಭದಲ್ಲಿ ಆರೆಸ್ಸೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೆಲವೇ ಗಂಟೆಗಳಲ್ಲಿ ಅಂದರೆ ಜೂನ್ 7ರಂದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೊವೊಂದು ವೈರಲ್ ಆಯಿತು. ಪ್ರಣಬ್ ಮುಖರ್ಜಿಯವರು ಆರೆಸ್ಸೆಸ್ ಟೋಪಿ ತೊಟ್ಟು ಆರೆಸ್ಸೆಸ್ ಗೀತೆಗೆ ನಮಿಸುವ ರೀತಿಯಲ್ಲಿ ತಿರುಚಿದ ಫೋಟೊ ಇದಾಗಿತ್ತು.

ಇದಕ್ಕೂ ಮುನ್ನ ಮಾಜಿ ರಾಷ್ಟ್ರಪತಿಯ ಪುತ್ರಿ ಶರ್ಮಿಷ್ಟ ಮುಖರ್ಜಿ, ತಮ್ಮ ತಂದೆ ಆರೆಸ್ಸೆಸ್ ಸಮಾರಂಭದಲ್ಲಿ ಪಾಲ್ಗೊಳ್ಳುವುದನ್ನು ಖಂಡಿಸಿ ಟ್ವೀಟ್ ಮಾಡಿದ್ದರು. “ಮಾತುಗಳನ್ನು ಮರೆತುಬಿಡಬಹುದು. ಆದರೆ ಚಿತ್ರಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ” ಎಂದು ಅವರು ಎಚ್ಚರಿಸಿದ್ದರು.

ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಣಬ್ ಮುಖರ್ಜಿಯವರ ಫೋಟೊವನ್ನು ಕಿಡಿಗೇಡಿಗಳು ತಿರುಚಿದ್ದು, ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಫೋಟೊಶಾಪ್ ಮಾಡಿದ ಚಿತ್ರದ ಮೂಲ ಯಾವುದು?

ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು ಈ ತಿರುಚಿದ ಚಿತ್ರದ ಮೂಲದ ಬಗ್ಗೆ ‘ಆಲ್ಟ್ ನ್ಯೂಸ್‍’ಗೆ ಮಾಹಿತಿ ನೀಡಿದ್ದರು. ಚಿತ್ರವನ್ನು ಮಿಹಿರ್ ಝಾ ಎನ್ನುವವರು ಮೊದಲು ಟ್ವೀಟ್ ಮಾಡಿದ್ದರು ಎಂದು ಮಾಹಿತಿ ನೀಡಲಾಗಿತ್ತು.

ಮಿಹಿರ್ ಝಾ ಟ್ವಿಟರ್ ಖಾತೆಯನ್ನು ಪರಿಶೀಲಿಸಿದಾಗ, ಅವರ ಪ್ರೊಫೈಲ್ ನೋಡದಂತೆ ನಿರ್ಬಂಧಿಸಲಾಗಿದೆ. ತನ್ನ ವಿವರಗಳನ್ನು ಪ್ರಕಟಿಸುವ ವಿಭಾಗದಲ್ಲಿ "ಪ್ರಧಾನಿ ನರೇಂದ್ರ ಮೋದಿಯವರು ಫಾಲೋವರ್ ಆಗಿರುವುದು ಹೆಮ್ಮೆಯ ವಿಚಾರ" ಎಂದು ಮಿಹಿರ್ ಝಾ ಬರೆದುಕೊಂಡಿದ್ದಾನೆ. ಮಿಹಿರ್ ಝಾ ಮಾಡಿದ್ದಾನೆ ಎನ್ನಲಾದ ಟ್ವೀಟ್ ನ ಶಬ್ಧಗಳನ್ನು ಗೂಗಲ್ ನಲ್ಲಿ ಹುಡುಕಾಡಿದಾಗ ‘ಆಲ್ಟ್ ನ್ಯೂಸ್’ಗೆ ಅದರ ಕ್ಯಾಚ್ಡ್ ವರ್ಷನ್ ಲಭಿಸಿದೆ. ಈ ಟ್ವೀಟನ್ನು ಮಿಹಿರ್ ಅದಾಗಲೇ ಡಿಲಿಟ್ ಮಾಡಿದ್ದ.

ಕ್ಯಾಚ್ಡ್ ವರ್ಶನ್ ಮೂಲಕ  ಟ್ವೀಟನ್ನು ‘ಆಲ್ಟ್ ನ್ಯೂಸ್’ ಪರಿಶೀಲಿಸಿದೆ. ಈ ಟ್ವೀಟ್ ನ ಸಮಯ ಮುಂಜಾನೆ 7.07 ಗಂಟೆ ಎಂದು ತೋರಿಸುತ್ತದೆ. ಇದು ಸಮಯ ವಲಯದ ವ್ಯತ್ಯಾಸದಿಂದ ಆಗಿರಬಹುದಾಗಿದ್ದು, ಬಹುಶಃ ಫೆಸಿಫಿಕ್ ಸಮಯ ವಲಯ (ಕ್ಯಾಲಿಫೋರ್ನಿಯಾ, ಅಮೆರಿಕ)ದಿಂದ ಕ್ಯಾಚ್ ಆಗಿರಬಹುದಾಗಿದೆ ಎನ್ನುವುದನ್ನು ಆಲ್ಟ್ ನ್ಯೂಸ್ ಕಂಡುಕೊಂಡಿತು. ಇದು ಭಾರತೀಯ ನಿಗದಿತ ಕಾಲಮಾನಕ್ಕಿಂತ ಹನ್ನೆರಡೂವರೆ ಗಂಟೆ ಹಿಂದಿರುತ್ತದೆ. ಈ ಟ್ವೀಟ್‍ನ ನಿಖರವಾದ ಸಮಯವನ್ನು ನಿರ್ಧರಿಸಲು, ಟ್ವೀಟ್‍ನ ಮೂಲ ಸಂಕೇತವನ್ನು ಬಳಸಿಕೊಂಡು ‘ಯುನಿಕ್ಸ್ ಟೈಮ್’ ಪತ್ತೆ ಮಾಡಲಾಯಿತು. ಯುನಿಕ್ಸ್ ಟೈಮ್ ಎಂದರೆ, 1970ರ ಜನವರಿ 1ರ ಬಳಿಕ ಕಳೆದು ಹೋದ ಸೆಕೆಂಡ್‍ಗಳು. ಝಾ ಟ್ವೀಟ್ ಮಾಡಿದ ಸಮಯ ಯುನಿಕ್ಸ್ ಟೈಮ್ ನಲ್ಲಿ ‘1528380453’ ಎಂದಿರುವುದನ್ನು ಈ ಕೆಳಗಿನ ಸ್ಕ್ರೀನ್‍ಶಾಟ್‍ನಲ್ಲಿ ಕಾಣಬಹುದು.

ಯುನಿಕ್ಸ್ ಸಮಯ 1528380453ವನ್ನು ಪರಿವರ್ತಿಸಿದಾಗ ಅದು ಜೂನ್ 7ರಂದು ಸಂಜೆ 7:37 ಆಗುತ್ತದೆ. ಆದ್ದರಿಂದ ಜಾ ಅವರ ಟ್ವೀಟ್ ಸಂಜೆ 7:37ಕ್ಕೆ ಪೋಸ್ಟ್ ಆಗಿದೆ ಎನ್ನುವುದು ಇದರರ್ಥ.

ಕುತೂಹಲದ ವಿಚಾರವೆಂದರೆ ಈ ಚಿತ್ರ ಟ್ವೀಟ್ ಮಾಡುವ ಕೇವಲ 23 ನಿಮಿಷಗಳ ಮುನ್ನ ಅಂದರೆ ಭಾರತೀಯ ಕಾಲಮಾನದ ಪ್ರಕಾರ, ಸಂಜೆ 7:14ಕ್ಕೆ, ಮತ್ತೊಬ್ಬ ಬಳಕೆದಾರ  @Atheist_Krishna ಎನ್ನುವವರಿಗೆ ಟ್ಯಾಗ್ ಮಾಡಿರುವ ಮಿಹಿರ್ ಝಾ ಅಸಲಿ ಚಿತ್ರವನ್ನು ಟ್ವೀಟ್ ಮಾಡಿದ್ದ. "ಇವರ ತಲೆಯ ಮೇಲೆ ಒಂದು ಕರಿ ಟೋಪಿ ಹಾಕಬಹುದೇ ಮತ್ತು ಅವರ ಕೈ ಸನ್ನೆ ಬದಲಿಸಬಹುದೇ? ಕಾಂಗ್ರೆಸ್ ಐಟಿ ಸೆಲ್‍ನ ಸ್ನೇಹಿತರೊಬ್ಬರಿಗಾಗಿ ಕೇಳುತ್ತಿದ್ದೇನೆ" ಎಂದು @Atheist_Krishna ಎಂಬವರಿಗೆ ಮಿಹಿರ್ ಝಾ ಪ್ರಶ್ನಿಸಿದ್ದಾನೆ. @Atheist_Krishna ಖಾತೆಯನ್ನು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಫಾಲೋ ಮಾಡುತ್ತಿದ್ದಾರೆ.

ಮಿಹಿರ್ ಝಾನ ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ ಅಭಿ ಝಾ ಎನ್ನುವ ಖಾತೆಯ ಬಳಕೆದಾರನೊಬ್ಬ ತಿರುಚಿದ ಫೋಟೊವನ್ನು ಟ್ವೀಟ್ ಮಾಡಿದ್ದಾನೆ. ಆದರೆ ಈ ಟ್ವಿಟರ್ ಖಾತೆ ಇದೀಗ ಟ್ವಿಟರ್‍ನಲ್ಲಿ ಇಲ್ಲ. ಅದನ್ನು ಡಿಲೀಟ್ ಮಾಡಲಾಗಿದೆ.

ಜೂನ್ 8ರಂದು ಸಂಜೆ, ಇಂಡಿಯಾ ಟುಡೇ ವರದಿ ಮಾಡಿ, ಮಿಹಿರ್ ಝಾ ಎಂಬಾತ ಈ ಫೋಟೊಶಾಪ್ ಮಾಡಲಾದ ಪ್ರಣಬ್ ಮುಖರ್ಜಿ ಚಿತ್ರದ ಹಿಂದಿರುವ ವ್ಯಕ್ತಿ ಎಂದು ಸ್ಪಷ್ಟಪಡಿಸಿದೆ. ಇಂತಹ ಫೋಟೊಶಾಪ್‍ನಲ್ಲಿ ತಿದ್ದಿದ ಚಿತ್ರಗಳನ್ನು ಸಂಘಟಿತ ರೂಪದಲ್ಲಿ ಟ್ವಿಟರ್ ಖಾತೆಗಳು ಮತ್ತು ನಿರ್ವಹಿಸುವವರ ಫೇಸ್‍ಬುಕ್ ಪೇಜ್ ಮೂಲಕ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತದೆ. ಇದಕ್ಕೆ ಲಕ್ಷಾಂತರ ಸದಸ್ಯರು ಫಾಲೋವರ್‍ಗಳಾಗಿರುತ್ತಾರೆ.

ನಿರಂತರವಾಗಿ ತಪ್ಪು ಮಾಹಿತಿಯನ್ನು ಪ್ರಸಾರ ಮಾಡುವ ಖಾತೆಗಳು ಈ ಫೋಟೊಶಾಪ್ ಮಾಡಲಾದ ಚಿತ್ರವನ್ನು ಶೇರ್ ಮಾಡಿಲ್ಲ. ಆದರೆ ಪುರಾವೆಗಳಿಂದ ತಿಳಿದುಬರುವಂತೆ ಈ ಚಿತ್ರವನ್ನು ಮೊದಲ ಬಾರಿಗೆ ತಿದ್ದಿ ಬಳಿಕ ಇದನ್ನು ಟ್ವಿಟರ್‍ನಲ್ಲಿ ಪ್ರಕಟಿಸಿದವನು ಮಿಹಿರ್ ಝಾ. ವಿಪರ್ಯಾಸವೆಂದರೆ ಪ್ರಧಾನಿ ಮೋದಿ ಈತನನ್ನು ಟ್ವಿಟರ್ ನಲ್ಲಿ ಫಾಲೋ ಮಾಡುತ್ತಿದ್ದಾರೆ.

ಕೃಪೆ: www.altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News