ಪ್ರತಿಭಟನೆ, ಟೀಕೆಯನ್ನು ಹತ್ತಿಕ್ಕಲು ದಲಿತರು, ಆದಿವಾಸಿಗಳಿಗೆ ಮಾವೋವಾದಿ ಹಣೆಪಟ್ಟಿ ಕಟ್ಟುವ ಹುನ್ನಾರ

Update: 2018-06-10 18:41 GMT

ಬಹಳಷ್ಟು ಮಟ್ಟಿಗೆ ಕಳಂಕ ಹೊರಿಸಲ್ಪಟ್ಟ ನಕ್ಸಲ್ ಚಳವಳಿಯು, ಮುಖ್ಯವಾಗಿ ಒಂದು ಭಿನ್ನಮತದ ಒಂದು ಅಭಿವ್ಯಕ್ತಿಯಾಗಿದೆ. ಈ ಸತ್ಯವನ್ನು ಸ್ವತಃ ಸರಕಾರ ಕೂಡಾ ಒಪ್ಪಿಕೊಂಡಿದೆ. ಆದರೆ ಸರಕಾರದ ಕ್ರಮಗಳು,ಅದು ಒಪ್ಪಿಕೊಂಡಿರುವ ಈ ಸತ್ಯವನ್ನು ಪ್ರತಿಬಿಂಬಿಸುವುದಿಲ್ಲ. ಆಡಳಿತವು ಯಾವತ್ತೂ ನಕ್ಸಲರನ್ನು ಕ್ರಿಮಿನಲ್‌ಗಳಾಗಿ ಬಿಂಬಿಸಲು ಎಷ್ಟರಮಟ್ಟಿಗೆ ಆದ್ಯತೆಯನ್ನು ನೀಡುತ್ತಿದೆಯೆಂದರೆ ನಕ್ಸಲ್‌ವಾದದ ವಿರುದ್ಧ ಹೋರಾಡುವ ನೆಪದಲ್ಲಿ ಅದು ಬುಡಕಟ್ಟು ಜನಾಂಗದ ಮೇಲೆ ಪೂರ್ಣಮಟ್ಟದ ಸಮರವನ್ನೇ ಸಾರಿದೆ. ಸರಕಾರದಿಂದ ಆಗುತ್ತಿರುವ ಮಾನವಹಕ್ಕು ಉಲ್ಲಂಘನೆಗಳನ್ನು ಪ್ರಶ್ನಿಸುವವರೆಲ್ಲರ ವಿರುದ್ಧವೂ ಅದು ಇದೇ ಧೋರಣೆಯನ್ನು ತಾಳುತ್ತಿದೆ ಹಾಗೂ ಸರಕಾರವು ಅವರಿಗೆ ನಕ್ಸಲರು/ಮಾವೋವಾದಿಗಳೆಂಬ ಹಣೆಪಟ್ಟಿಯನ್ನು ಕೂಡಾ ಕಟ್ಟಿದೆ. ಈಗ ಚಾಲ್ತಿಯಲ್ಲಿರುವ ಸಾಮಾನ್ಯ ಕಾನೂನುಗಳನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ, ಅವುಗಳಿಂದಲೇ ಈಗ ಅದು ನಕ್ಸಲರೆಂದು ಆರೋಪಿಸುವ ಗುಂಪುಗಳು ನಡೆಸುವ ಯಾವುದೇ ಕ್ರಿಮಿನಲ್ ಚಟುವಟಿಕೆಯನ್ನು ನಿಯಂತ್ರಿಸಲು ಸಾಧ್ಯವಿದೆ. ಇದರ ಬದಲು ಸರಕಾರವು, ನಕ್ಸಲ್ ಪಿಡುಗನ್ನು ನಿಭಾಯಿಸುವುದಕ್ಕಾಗಿ ವಿವಿಧ ರೀತಿಯ ಕರಾಳ ಕಾನೂನುಗಳನ್ನು ಸೃಷ್ಟಿಸುವುದಕ್ಕೆ ಆದ್ಯತೆ ನೀಡುತ್ತಿದೆ. ಆದರೆ ಇಂತಹ ಕಾನೂನುಗಳು ಭದ್ರತೆಯ ಕಲ್ಪನೆಯನ್ನು ತಪ್ಪಾಗಿ ವ್ಯಾಖ್ಯಾನಿಸಿರುವುದನ್ನು ಬಿಟ್ಟರೆ ಈ ಕಾನೂನುಗಳು ಏನನ್ನಾದರೂ ಸಾಧಿಸಿರುವ ಬಗ್ಗೆ ಒಂದೇ ಒಂದು ಪುರಾವೆಗಳಿಲ್ಲ.

ಏಕರೂಪವಾಗಿ ಈ ಕಾನೂನುಗಳು ರಕ್ಷಣೆಯಿಲ್ಲದ ಜನರ ವಿರುದ್ಧ ದಮನಕಾರಿ ಅಸ್ತ್ರಗಳಾಗಿ ಬಳಕೆಯಾಗುತ್ತಿವೆ ಹಾಗೂ ಅವು ಬಗೆಹರಿಸ ಬೇಕಾಗಿದ್ದ ಪ್ರತಿಯೊಂದು ಸಮಸ್ಯೆಯೂ ಉಲ್ಬಣಗೊಳ್ಳುತ್ತಿವೆ.
 


ಮಹಾರಾಷ್ಟ್ರದ ಖ್ಯಾತ ಸಾಮಾಜಿಕ ಕಾರ್ಯಕರ್ತ ಸುಧೀರ್ ಧಾವಳೆ ಅವರನ್ನು ಮಾವೋವಾದಿಗಳ ಜೊತೆಗೆ ನಂಟು ಹೊಂದಿರುವ ಆರೋಪದಲ್ಲಿ ಪೊಲೀಸರು ಬಂಧಿಸಿದ್ದರು. ಆದರೆ 2014ರ ಮೇ 24ರಂದು ನ್ಯಾಯಾಲಯ ಎಲ್ಲಾ ವಿಧದ ಆರೋಪಗಳಿಂದ ಅವರನ್ನು ದೋಷಮುಕ್ತಗೊಳಿಸಿದ ಬಳಿಕ ಆತ ನಾಗಪುರದ ಕೇಂದ್ರೀಯ ಕಾರಾಗೃಹದಿಂದ ಬಿಡುಗಡೆಗೊಂಡಿದ್ದರು. ಇದಕ್ಕೂ ಮೊದಲು ವಿಚಾರಣಾಧೀನ ಕೈದಿಯಾಗಿ ಅವರು ಬರೊಬ್ಬರಿ ನಲ್ವತ್ತು ತಿಂಗಳುಗಳ ಕಾಲ ಜೈಲಿನಲ್ಲಿ ಕಳೆಯಬೇಕಾಯಿತು. ಅವರ ಜೊತೆಗೆ ಇತರ ಎಂಟು ಮಂದಿ ಸಹ ಆರೋಪಿಗಳು ಕೂಡಾ ಬಿಡುಗಡೆಗೊಂಡಿದ್ದರು. 2005ರಲ್ಲಿ ಇದೇ ಆರೋಪದಲ್ಲಿ ದಲಿತ ಕವಿ ಶಂತನು ಕಾಂಬ್ಳೆ ಬಂಧಿತರಾ ಗಿದ್ದರು. ಜಾಮೀನು ಬಿಡುಗಡೆ ದೊರೆಯುವ ಮುನ್ನ ಅವರು ನೂರಕ್ಕೂ ಅಧಿಕ ದಿನಗಳ ಕಾಲ ಜೈಲಿನಲ್ಲಿ ಪೊಲೀಸರಿಂದ ದೌರ್ಜನ್ಯಕ್ಕೊಳ ಗಾಗಿದ್ದರು. ನಾಲ್ಕು ವರ್ಷಗಳಿಗೂ ಅಧಿಕ ಸಮಯ ಜೈಲಿನಲ್ಲಿ ಬಂಧಿತ ರಾಗಿದ್ದ ಕ್ರಾಂತಿಕಾರಿ ರಾಜಕೀಯ ಕಾರ್ಯಕರ್ತ ಅರುಣ್ ಫೆರೇರಾ ಚಿತ್ರಹಿಂಸೆ ಹಾಗೂ ಕಿರುಕುಳವನ್ನು ಅನುಭವಿಸಿದ್ದರು. ಹಿಂದಿನ ಪ್ರಕರಣಗಳಲ್ಲಿ ದೋಷಮುಕ್ತಗೊಂಡಿದ್ದ ಅವರ ಮೇಲೆ ಪದೇ ಪದೇ ಹೊಸಹೊಸ ಪ್ರಕರಣಗಳನ್ನು ಪೊಲೀಸರು ದಾಖಲಿಸುತ್ತಿದ್ದರು. ಕೊನೆಗೂ 2012ರ ಜನವರಿಯಲ್ಲಿ ಅವರಿಗೆ ಜಾಮೀನು ದೊರೆತು, ಬಿಡುಗಡೆಗೊಂಡಿದ್ದರು.

2008ರ ಜನವರಿಯಲ್ಲಿ ಚಂದ್ರಾಪುರದ ದೇಶಭಕ್ತಿ ಯುವಮಂಚ್‌ನ 12 ಸದಸ್ಯರ ಬಂಧನದ ಪ್ರಕರಣವೂ ಇಲ್ಲಿ ನೆನಪಾಗುತ್ತದೆ ಹಾಗೂ ನಾಗಪುರದ ಬಂಧು ಮೆಶರಮ್ ವಿರುದ್ಧ ಹೊರಿಸಲಾದ ಇದೇ ರೀತಿಯ ಆರೋಪಗಳು ಕೂಡಾ ಮನಸ್ಸಿಗೆ ಹೊಳೆಯುತ್ತದೆ. ಈ ಎಲ್ಲಾ ವ್ಯಕ್ತಿಗಳು ದೋಷಮುಕ್ತರಾಗುವ ಮುನ್ನ ಜೈಲಿನಲ್ಲಿರುವಾಗ ಅವರನ್ನು ಪೊಲೀಸರು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಹಾಗೂ ಅಪಮಾ ನಗಳನ್ನು ಅನುಭವಿಸಿದ್ದಾರೆ. ಮಾವೋವಾದಿಗಳೆಂಬ ಹುಸಿ ಆರೋಪದಲ್ಲಿ ಭಾರತದ ದುರ್ಗಮ ಗ್ರಾಮೀಣ ಪ್ರದೇಶಗಳ ಯುವ ಮಹಿಳೆಯರು ಹಾಗೂ ಪುರುಷರು ಬಂಧಿತರಾಗಿರುವ ಅಸಂಖ್ಯಾತ ಪ್ರಕರಣಗಳು ವರದಿ ಯಾಗಿವೆ. ಅವರಲ್ಲಿ ಅನೇಕರು ದೋಷಾರೋಪ ಹೊರಿಸಲ್ಪಡದೆಯೇ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಅವರಲ್ಲಿ ಹಲವರಿಗೆ ಯಾವುದೇ ಬೆಂಬಲ ಅಥವಾ ಕಾನೂನು ನೆರವು ದೊರೆಯದೆ, ವಿಚಾರಣೆಯನ್ನೇ ಎದುರುನೋಡುತ್ತಾ ತಮ್ಮ ಯೌವನ ಹಾಗೂ ಭವಿಷ್ಯ ಭಗ್ನಗೊಂಡಿದೆ.
ಸರಕಾರವು ತನ್ನದೇ ಜನರ ವಿರುದ್ಧ ದಮನಕಾರ್ಯಾಚರಣೆಗಳನ್ನು ನಡೆಸುವ ಸಂದರ್ಭದಲ್ಲಿ, ನಕ್ಸಲರು ನಗರಪ್ರದೇಶಗಳಲ್ಲೂ ತಮ್ಮ ಜಾಲವನ್ನು ಸೃಷ್ಟಿಸುತ್ತಿದ್ದಾರೆಂದು ಅಬ್ಬರದ ಪ್ರಚಾರ ಮಾಡುತ್ತಿದೆ.
ನಕ್ಸಲರ ವಿರುದ್ಧ ಸರಕಾರವು ನಡೆಸುವ ಕಾರ್ಯಾಚರಣೆಯ ವಿರುದ್ಧ ಯಾವುದೇ ಟೀಕೆಯನ್ನು ಮಾಡಿದಲ್ಲಿ ಅದನ್ನು ಅವರಿಗೆ ನೀಡುವ ಬೆಂಬಲವೆಂದು ಭಾವಿಸಬೇಕಾಗುತ್ತದೆಯೆಂಬ ಬೆದರಿಕೆಯನ್ನೂ ಎದುರಿಸಬೇಕಾಗುತ್ತದೆ ಮತ್ತು ಅವರು ಆಡಳಿತದ ಕೆಂಗಣ್ಣಿಗೂ ಗುರಿಯಾಗಬೇಕಾಗುತ್ತದೆ. 2007ರಲ್ಲಿ ಸಾರ್ವಜನಿಕ ಸೇವೆಯ ಅಸಾಧಾರಣವಾದ ದಾಖಲೆಯನ್ನು ಹೊಂದಿದ್ದು, ಆನಂತರ ಜೀವಾವಧಿ ಜೈಲು ಶಿಕ್ಷೆಗೊಳಗಾದ ಜನಪ್ರಿಯ ವೈದ್ಯ ಬಿನಾಯಕ್ ಸೇನಾ ಅವರ ಪ್ರಕರಣ ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ. ಪ್ರಸ್ತುತ ಸುಪ್ರೀಂಕೋರ್ಟ್‌ನಿಂದ ಜಾಮೀನು ಬಿಡುಗಡೆ ಪಡೆದಿರುವ ಸೇನ್ ಅವರು, ಛತ್ತೀಸ್‌ಗಡ ಸರಕಾರವು ನಕ್ಸಲ್ ನಿಗ್ರಹದ ಹೆಸರಿನಲ್ಲಿ ನಡೆಸಿದ ಅಸಾಂವಿಧಾನಿಕ ಕಾರ್ಯಾಚರಣೆಗಳನ್ನು ಬಯಲುಗೊಳಿಸಿದ್ದಕ್ಕಾಗಿ ಬಹುದೊಡ್ಡ ಬೆಲೆಯನ್ನು ತೆರಬೇಕಾಯಿತು.
ಇತ್ತೀಚಿನ ದಿನಗಳಲ್ಲಿ ನಗರಪ್ರದೇಶಗಳಲ್ಲಿ ಎಡಪಂಥೀಯ ಕಾರ್ಯಕರ್ತರು ಹಾಗೂ ಪ್ರತಿಭಟನಾಕಾರರರಿಗೆ ದೇಶದ್ರೋಹಿ ಗಳೆಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ. ಒಂದು ವೇಳೆ ಅವರು ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾದಾಗ ಅವರನ್ನು ನಕ್ಸಲೀಯರೆಂದು ಗುರುತಿಸುವ ಪರಿಪಾಠ ಬೆಳೆಯುತ್ತಿದೆ.
 ಮಹಾರಾಷ್ಟ್ರದಲ್ಲಿ ಮಾವೋವಾದಿಗಳೆಂಬ ಆರೋಪದಲ್ಲಿ ಬಂಧಿತರಾದ ಹಲವಾರು ಮಂದಿ ದಲಿತರು ಹಾಗೂ ಆದಿವಾಸಿ ಪಂಗಡಗಳಿಗೆ ಸೇರಿದವರಾಗಿದ್ದಾರೆ. ಮೊದಲೇ ತಮ್ಮ ಜಾತಿ ಗುರುತಿನ ಜೊತೆಗೆ ಅವರಿಗೆ ಮಾವೋವಾದಿ ಹಣೆಪಟ್ಟಿ ಕಟ್ಟುವ ಮೂಲಕ ಅವರನ್ನು ಇನ್ನಷ್ಟು ಅಸಹಾಯಕರನ್ನಾಗಿ ಮಾಡಲಾಗುತ್ತಿದೆ.
 ದಲಿತ ಚಳವಳಿಯನ್ನು ಎದೆಗುಂದಿಸುವಲ್ಲಿ ಆಡಳಿತಾರೂಢ ವರ್ಗಗಳು ಯಶಸ್ವಿಯಾಗಿದ್ದರೂ, ದಲಿತರ ನಡುವೆ ಈಗಲೂ ಅಂಬೇಡ್ಕರ್ ಪ್ರಜ್ಞೆಯು ಜೀವಂತವಾಗಿ ಉಳಿದಿದೆ. ಖೈರ್ಲಾಂಜಿ ದಲಿತ ಹತ್ಯಾಕಾಂಡದ ಹಿನ್ನೆಲೆಯಲ್ಲಿ ನಡೆದಂತೆ ವ್ಯವಸ್ಥೆಯ ಅತಿರೇಕಗಳ ವಿರುದ್ಧ ತೀವ್ರ ಸ್ವರೂಪದ ಆಕ್ರೋಶವನ್ನು ಹೊರಹಾಕುವ ಮೂಲಕ ಅವು ಆಗಾಗ ಪ್ರಕಟಗೊಳ್ಳುತ್ತವೆ. ಉತ್ತರಪ್ರದೇಶದ ಸಹಾರನ್‌ಪುರದಲ್ಲಿ ದಲಿತ ಕುಟುಂಬಗಳ ಮೇಲೆ ನಡೆದ ಹಿಂಸಾಚಾರಕ್ಕೆ ಪ್ರತಿಕ್ರಿಯೆಯಾಗಿ ಭೀಮ್‌ಆರ್ಮಿಯ ಕೃತ್ಯಗಳು ಇದಕ್ಕೆ ನಿದರ್ಶನವಾಗಿದೆ. ನಿರ್ದಿಷ್ಟವಾಗಿ ದಲಿತ ಹಾಗೂ ಆದಿವಾಸಿ ಯುವಜನರ ಮೇಲೆ ಮಾವೋವಾದಿ ಹಾಗೂ ನಕ್ಸಲ್‌ವಾದದ ಹಣೆಪಟ್ಟಿ ಕಟ್ಟುವ ಮೂಲಕ, ಈ ರೀತಿಯ ಪ್ರತಿಭಟನೆಯನ್ನು ಸರಕಾರವು ಮೊಳಕೆಯಲ್ಲೇ ಚಿವುಟಿ ಹಾಕಲು ಬಯಸುತ್ತಿದೆ.
ಬಂಡಾಯದ ಧ್ವನಿಗಳನ್ನು ನಿಗ್ರಹಿಸಲಾಗುತ್ತಿದೆ. ತಮ್ಮ ಮೇಲಿನ ದೌರ್ಜನ್ಯದ ವಿರುದ್ಧ ದಮನಿತ ಜಾತಿಗಳು ಪ್ರತಿ ಹೋರಾಟ ನಡೆಸುವುದು ಇತ್ತೀಚಿನ ದಿನಗಳಲ್ಲಿ ಅಪರೂಪವಾಗುತ್ತಿದೆ. ಖೈರ್ಲಾಂಜಿ ಘಟನೆಯ ಬಳಿಕ ಜಾತಿ ದೌರ್ಜನ್ಯಗಳ ವಿರುದ್ಧ ಸುಸ್ಥಿರವಾದ ಪ್ರತಿಭಟನೆ ನಡೆಸುವುದು ಈಗ ಸಾಮಾನ್ಯ ನೋಟವಾಗಿ ಕಂಡುಬರುತ್ತಿಲ್ಲ. ಖೈರ್ಲಾಂಜಿ ಘಟನೆಯ ಬಳಿಕ ನಡೆದ ಪ್ರತಿಭಟನಾ ರ್ಯಾಲಿಗಳಲ್ಲಿ ಪಾಲ್ಗೊಂಡಿದ್ದ ನಮ್ಮಲ್ಲಿ, ಅನೇಕ ಮಂದಿಯ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ನಮಗೆ ‘ನಕ್ಸಲ’ರೆಂಬ ಹಣೆಪಟ್ಟಿ ಕಟ್ಟಲಾಗಿದೆ.
ಜನಪ್ರಿಯ ದಲಿತ ಸಾಮಾಜಿಕ ಕಾರ್ಯಕರ್ತ ಹಾಗೂ ವಿದ್ರೋಹಿ ಪತ್ರಿಕೆಯ ಸಂಪಾದಕ ಧಾವಳೆ ಬಂಧಿತರಾಗುವ ಮೂಲಕ ಇನ್ನೋರ್ವ ಬಿನಾಯಕ್ ಸೇನ್ ಹೊರಹೊಮ್ಮಿದ್ದಾರೆ. ಬಿನಾಯಕ್ ಸಾಮಾಜಿಕವಾಗಿ ಮೇಲ್ವರ್ಗವೆನಿಸಿರುವ ಭದ್ರಲೋಕ್ ಕುಟುಂಬದಿಂದ ಬಂದವರಾಗಿದ್ದು, ಪ್ರತಿಷ್ಠಿತ ವೈದ್ಯಕೀಯ ವಿದ್ಯಾಲಯವೊಂದರಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದರು ಹಾಗೂ ತನ್ನ ಸಾಮಾಜಿಕ ಬದುಕಿನಲ್ಲಿ ಪ್ರತಿಷ್ಠಿತ ಸ್ಥಾನಮಾನವನ್ನು ಪಡೆದಿದ್ದರು.
ಆದರೆ ಸುಧೀರ್ ಧಾವಳೆ, ಬಡ ದಲಿತ ಕುಟುಂಬದಿಂದ ಬಂದವರಾಗಿದ್ದು ಸಾಧಾರಣವಾದ ಶಿಕ್ಷಣವನ್ನು ಪಡೆದಿದ್ದರು ಹಾಗೂ ಯಾವುದೇ ಗಣನೀಯ ಸಾಮಾಜಿಕ ಮನ್ನಣೆಯನ್ನು ಕೂಡಾ ಗಳಿಸಿದವರಲ್ಲ. ಆದರೆ ಧಾವಳೆ ಹಾಗೂ ಬಿನಾಯಕ್ ಸೇನ್ ಅವರಲ್ಲಿರುವ ಸಾಮ್ಯತೆಯೇನೆಂದರೆ ಇವರಿಬ್ಬರಿಗೂ ದಮನಿತರ ಹಿತಾಸಕ್ತಿಗಳ ರಕ್ಷಣೆ ಕುರಿತು ಅಚಲವಾದ ಬದ್ಧತೆಯಿತ್ತು ಹಾಗೂ ಅದಕ್ಕಾಗಿ ಆಡಳಿತವು ಅವರ ವಿರುದ್ಧ ಅಮಾನುಷವಾಗಿ ವರ್ತಿಸಿತ್ತು.

 1980ರ ದಶಕದಲ್ಲಿ ಧಾವಳೆ ನಾಗಪುರದಲ್ಲಿ ಕಾಲೇಜ್ ವಿದ್ಯಾರ್ಥಿ ಯಾಗಿದ್ದ ದಿನಗಳಲ್ಲೇ ರಾಜಕೀಯ ಹೋರಾಟಗಾರರಾಗಿದ್ದರು. ವಿದ್ಯಾರ್ಥಿಗಳ ತೀವ್ರವಾದಿ ಸಂಘಟನೆಯಾದ ‘ವಿದ್ಯಾರ್ಥಿ ಪ್ರಗತಿ ಸಂಘಟನಾ’ದ ಸಕ್ರಿಯ ಕಾರ್ಯಕರ್ತರಾಗಿ ಅವರು ಕಾರ್ಯ ನಿರ್ವಹಿಸಿದ್ದರು. ಲಘುವಾಗಿ ನಕ್ಸಲ್‌ವಾದದ ಜೊತೆಗೆಯೇ ಗುರುತಿಸಲ್ಪಡುವ ಮಾರ್ಕ್ಸ್‌ವಾದ ಹಾಗೂ ಲೆನಿನ್‌ವಾದವನ್ನು ಪ್ರತಿಪಾದಿಸುತ್ತಿದ್ದ ಸಾಮೂಹಿಕ ಸಂಘಟನೆಗಳ ಜೊತೆಗಿನ ತನ್ನ ನಂಟನ್ನು ಹಾಗೂ ಸೈದ್ಧಾಂತಿಕ ಒಲವನ್ನು ಅವರು ಯಾವತ್ತೂ ಮರೆಮಾಚಿರಲಿಲ್ಲ. ಆದರೆ ಅವರು ಮಾವೋವಾದಿ ಪಕ್ಷ ಹಾಗೂ ಅದರ ಚಟುವಟಿಕೆಗಳ ಜೊತೆ ಯಾವತ್ತೂ ಗುರುತಿಸಿಕೊಂಡಿರಲಿಲ್ಲ ಮಾತ್ರವಲ್ಲ ಮಾವೋವಾದಿ ಪಕ್ಷವು ನಡೆಸಿದ್ದ ಹಿಂಸಾತ್ಮಕ ಚಟುವಟಿಕೆಗಳ ಜೊತೆಗೆ ತನಗೆ ಯಾವುದೇ ಸಂಬಂಧವಿರುವುದನ್ನು ಅವರು ಸಾರಾಸಗಟಾಗಿ ತಿರಸ್ಕರಿಸಿದ್ದರು. 1995ರ ಆರಂಭದಲ್ಲಿ ಧಾವಳೆ ಅವರು ದಲಿತರ ವಿರುದ್ಧ ಪೊಲೀಸರು ನಡೆಸಿದ ಕಾರ್ಯಾಚರಣೆಯನ್ನು ಪ್ರತಿಭಟಿಸಲು ಸಕ್ರಿಯವಾಗಿ ಶ್ರಮಿಸಿದ್ದರು ಹಾಗೂ ದೌರ್ಜನ್ಯ ತಡೆ ಕಾಯ್ದೆಯ ಪರಿಣಾಮಕಾರಿ ಜಾರಿಗಾಗಿ ಅಭಿಯಾನವನ್ನೇ ನಡೆಸಿದ್ದರು. ಮುಂಬೈಗೆ ತನ್ನ ವಾಸ್ತವ್ಯವನ್ನು ಬದಲಾಯಿಸಿದ ಬಳಿಕ ಅವರು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸಕ್ರಿಯರಾದರು. 1999ರಲ್ಲಿ ಮಹಾರಾಷ್ಟ್ರ ಸರಕಾರದ ಪ್ರಾಯೋಜಕತ್ವದಲ್ಲಿ ನಡೆದ ಮುಖ್ಯವಾಹಿನಿಯ ಸಾಹಿತ್ಯ ಸಮಾವೇಶಕ್ಕೆ ಪ್ರತಿಯಾಗಿ ಪರ್ಯಾಯ ವಿದ್ರೋಹಿ ಮರಾಠಿ ಸಾಹಿತ್ಯ ಸಮ್ಮೇಳನವನ್ನು ಸಂಘಟಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಆನಂತರ ಅವರು ವಿದ್ರೋಹಿ ಎಂಬ ದ್ವೈಮಾಸಿಕ ಪತ್ರಿಕೆಯನ್ನು ಆರಂಭಿಸುವ ಮೂಲಕ ವಿದ್ರೋಹಿ ಸಾಂಸ್ಕೃತಿಕ ಚಳ್‌ವಳ್ (ಪ್ರತಿರೋಧ ಸಾಂಸ್ಕೃತಿಕ ಚಳವಳಿ ) ಎಂಬ ವೇದಿಕೆಯನ್ನು ಹುಟ್ಟುಹಾಕಿದರು. ವಿದ್ರೋಹಿಯು ತ್ವರಿತವಾಗಿ ಮಹಾರಾಷ್ಟ್ರದ ಕ್ರಾಂತಿಕಾರಿ ಹೋರಾಟಗಾರರನ್ನು ಒಗ್ಗೂಡಿಸುವಲ್ಲಿ ಮುಖ್ಯ ಪಾತ್ರ ವಹಿಸಿತು. ಆದಿವಾಸಿಗಳು ಹಾಗೂ ದಲಿತರ ಹೋರಾಟವನ್ನು ಬೆಂಬಲಿಸಿ, ಕ್ರಾಂತಿಕಾರಿ ಚಿಂತನೆಗಳನ್ನು ಪ್ರತಿಪಾದಿಸುವ ಕರಪತ್ರಗಳನ್ನು ಹಾಗೂ ಕಿರುಹೊತ್ತಿಗೆಗಳನ್ನು ಬರೆಯುವಾಗ ತನ್ನಲ್ಲಿರುವ ಸಾಹಿತ್ಯಿಕ ಪ್ರತಿಭೆಯನ್ನು ಅವರು ಬಳಸಿಕೊಳ್ಳುತ್ತಿದ್ದರು. 1997ರ ಜುಲೈ 11ರಂದು ರಮಾಬಾಯಿ ನಗರದಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಮಲಿನಗೊಳಿಸಿದ್ದನ್ನು ಖಂಡಿಸಿ ಪ್ರತಿಭಟನೆಗಿಳಿದ ದಲಿತರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿದಾಗ ಹತ್ತು ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಪೊಲೀಸರ ಗೋಲಿಬಾರ್ ಘಟನೆಯಲ್ಲಿ ಮಡಿದವರಿಗೆ ನ್ಯಾಯಕೋರಿ ನಡೆದ ಹೋರಾಟದಲ್ಲಿ ಧಾವಳೆ ಮುಂಚೂಣಿಪಾತ್ರ ವಹಿಸಿದ್ದರು.
 2007ರಲ್ಲಿ ಅಂಬೇಡ್ಕರ್ ಅವರ ನಿಧನದ ವರ್ಷಾಚರಣೆಯ ದಿನವಾದ ಡಿಸೆಂಬರ್ 7ರಂದು ಅವರು ರಿಪಬ್ಲಿಕ್ ಪ್ಯಾಂಥರ್ ಪ್ರತಿಷ್ಠಾನವನ್ನು ಆರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜಾತಿ ಪದ್ಧತಿಯನ್ನು ನಿರ್ಮೂಲನಗೊಳಿಸುವ ಚಳವಳಿಯೆಂಬುದಾಗಿ ರಿಪಬ್ಲಿಕ್ ಪ್ಯಾಂಥರ್ ತನ್ನನ್ನು ಗುರುತಿಸಿಕೊಂಡಿತ್ತು.
ಖೈರ್ಲಾಂಜಿಯಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯದ ಬಳಿಕ ಮಹಾರಾಷ್ಟ್ರಾದ್ಯಂತ ಭುಗಿಲೆದ್ದ ಪ್ರತಿಭಟನೆಯಲ್ಲಿ ಧಾವಳೆ ಸಕ್ರಿಯ ಪಾತ್ರ ವಹಿಸಿದ್ದರು. ಖೈರ್ಲಾಂಜಿ ದಲಿತ ಹತ್ಯಾಕಾಂಡ ವಿರೋಧಿಸಿ ನಡೆದ ಪ್ರತಿಭಟನೆಯ ವೇಳೆ ಭುಗಿಲೆದ್ದ ಹಿಂಸಾಚಾರದಲ್ಲಿ ನಕ್ಸಲರ ಕೈವಾಡವಿದೆಯೆಂದು ಆಗಿನ ಮಹಾರಾಷ್ಟ್ರದ ಗೃಹ ಸಚಿವ ಆರ್.ಆರ್.ಪಾಟೀಲ್ ಆರೋಪಿಸಿದ್ದರು. ಅವಾಗಿನಿಂದ ಧಾವಳೆ ಅವರು ಪೊಲೀಸರ ಕಣ್ಗಾವಲಿಗೊಳಗಾಗಿದ್ದರು.

ಧಾವಳೆ ಅವರನ್ನು ಸಾಮಾನ್ಯ ಉಡುಪಿನಲ್ಲಿದ್ದ ಪೊಲೀಸರು 2011ರ ಜನವರಿ 2ರಂದು ವಾರ್ಧಾ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದರು. ವಾರ್ಧಾದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ವಾಪಸಾಗುತ್ತಿದ್ದಾಗ ಅವರನ್ನು ಬಂಧಿಸಲಾಗಿತ್ತು. ಧಾವಳೆ ವಿರುದ್ಧ ದೇಶದ್ರೋಹ ಹಾಗೂ ಸರಕಾರದ ವಿರುದ್ಧ ಯುದ್ಧವನ್ನು ಸಾರಿದ ಆರೋಪದಲ್ಲಿ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)ಯ ಸೆಕ್ಷನ್‌ಗಳಾದ 17, 20, 39 ಹಾಗೂ ಭಾರತೀಯ ದಂಡಸಂಹಿತೆಯ ಸೆಕ್ಷನ್‌ಗಳಾದ 124ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಧಾವಳೆ ಅವರ ಮನೆಯಲ್ಲಿ ಕೆಲವು ಪ್ರಚೋದನಾಕಾರಿ ಸಾಹಿತ್ಯ ಹಾಗೂ ಮಾವೋವಾದಿಯೆನ್ನಲಾದ ಭೀಮ್‌ರಾವ್ ಭೋಯಿತೆ ಅವರ ಕೆಲವು ಬರಹಗಳು ಪತ್ತೆಯಾಗಿರುವುದಾಗಿ ಪೊಲೀಸರು ಆರೋಪಿಸಿದ್ದರು. ಅಂಬೇಡ್ಕರ್, ಕಾರ್ಲ್‌ಮಾರ್ಕ್ಸ್, ಲೆನಿನ್ ಹಾಗೂ ಅರುಂಧತಿ ರಾಯ್ ಅವರ 87 ಪುಸ್ತಕಗಳನ್ನು ಕೂಡಾ ಪೊಲೀಸರು ದಾಳಿ ವೇಳೆ ವಶಪಡಿಸಿಕೊಂಡಿದ್ದರು. ಜೊತೆಗೆ ಅವರ ಕಂಪ್ಯೂಟರ್ ಹಾಗೂ ಪುಸ್ತಕಗಳನ್ನು ಕೂಡಾ ಪೊಲೀಸರು ಕೊಂಡೊಯ್ದಿದ್ದರು. ಧಾವಳೆ ಅವರ ಪ್ರಕರಣವು ಭಾರತದ ಸಹಸ್ರಾರು ಬುಡಕಟ್ಟು ಜನರು ಹಾಗೂ ದಲಿತರ ಶೋಚನೀಯ ಪರಿಸ್ಥಿತಿಗೆ ಜೀವಂತ ಸಾಕ್ಷಿಯಾಗಿದೆ. ಪರಿಶಿಷ್ಟ ಜಾತಿ ಹಾಗೂ ಬುಡಕಟ್ಟುಗಳನ್ನು ರಕ್ಷಿಸಲು ನಮ್ಮಲ್ಲಿ ಸಾಂವಿಧಾನಿಕ ನಿಯಮಗಳ ದೊಡ್ಡ ಪಟ್ಟಿಯೇ ಇದೆ. ಆದರೆ ವಾಸ್ತವಿಕವಾಗಿ ಪರಿಶಿಷ್ಟರನ್ನು ರಕ್ಷಿಸಲು ಹಾಗೂ ಅವರ ಮೇಲೆ ದೌರ್ಜನ್ಯವೆಸಗಿದವರನ್ನು ಶಿಕ್ಷಿಸಲು ಯಾವುದೇ ಎಸ್ಸಿ/ಎಸ್ಟಿ ಕಾನೂನುಗಳು ನೆರವಿಗೆ ಬರುವುದಿಲ್ಲ.ಯಾಕೆಂದರೆ ಈ ಅಸಹಾಯಕ ದಲಿತರಿಗೆ ಭಯಾನಕ ಮಾವೋವಾದಿಗಳೆಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ.
ದೌರ್ಜನ್ಯದ ವಿರುದ್ಧ ಧ್ವನಿಯೆತ್ತುವವರನ್ನು ಸಾಧ್ಯವಿದ್ದಷ್ಟು ಹೆಚ್ಚು ಸಮಯದವರೆಗೆ ಜೈಲಿನಲ್ಲಿ ಇರಿಸಿ,ಅವರಿಗೆ ಕಿರುಕುಳ ನೀಡುವುದೇ ಪೊಲೀಸರ ಉದ್ದೇಶವೆಂಬುದು ತಥಾಕಥಿತ ಮಾವೋವಾದಿ ಪ್ರಕರಣಗಳ ಮೇಲೆ ಸ್ಥೂಲನೋಟ ಬೀರಿದಾಗ ಅರಿವಾಗುತ್ತದೆ. ಭಾರತವು ಚಿತ್ರಹಿಂಸೆ ಮತ್ತಿತರ ಕ್ರೌರ್ಯಗಳು,ಅಮಾನವೀಯ ವರ್ತನೆ ಅಥವಾ ದಂಡನೆಯ ವಿರುದ್ಧದ ವಿಶ್ವಸಂಸ್ಥೆಯ ಒಡಂಬಡಿಕೆಗೆ 1997ರಲ್ಲಿ ಸಹಿಹಾಕಿತ್ತು. ಆದರೆ ಅದು ತನ್ನ ಆಂತರಿಕ ಕಾನೂನಿನಲ್ಲಿ ಈ ಒಡಂಬಡಿಕೆಯನ್ನು ಇನ್ನಷ್ಟೇ ಒಳಪಡಿಸಬೇಕಾಗಿದೆ.
ಜೈಲಿನಲ್ಲಿ ನೀಡಲಾಗುವ ಚಿತ್ರಹಿಂಸೆಯ ವಿರುದ್ಧ ಯಾವುದೇ ಪ್ರಕ್ರಿಯಾತ್ಮಕ ಸುರಕ್ಷಿತ ಕಾನೂನುಗಳು ನಮ್ಮಲ್ಲಿಲ್ಲ. ಪೊಲೀಸರ ಕಾನೂನುಬಾಹಿರ ವರ್ತನೆಗೆ ಇದು ನೇರವಾಗಿ ಕುಮ್ಮಕ್ಕು ನೀಡುತ್ತದೆ. ಜನರನ್ನು ಬಂಧಿಸಲು ಹಾಗೂ ತಮಗೆ ದೊರೆತ ಮಾಹಿತಿಯನ್ನು ಆಧರಿಸಿ ಅವರ ವಿರುದ್ಧ ದೋಷಾರೋಪ ಹೊರಿಸಲು ಪೊಲೀಸರಿಗೆ ಇರುವ ವೃತ್ತಿಪರ ಅವಕಾಶವನ್ನು ಯಾರೂ ಪ್ರಶ್ನಿಸಲಾರರು. ಆದರೆ ಈ ಆರೋಪಗಳು ನ್ಯಾಯಾಂಗದ ಪರಿಶೋಧನೆಗೆ ಒಳಪಟ್ಟಿರಬೇಕೆಂಬುದು ಕೂಡಾ ಅಷ್ಟೇ ನಿರ್ವಿವಾದವಾದುದು.
ಪೊಲೀಸರು ತಮಗೆ ಬೇಕಾದ ಯಾರನ್ನು ಕೂಡಾ ಮಾವೋವಾದಿಯೆಂದು ಆರೋಪಿಸಿ ಬಂಧಿಸಬಹುದಾಗಿದೆ. ಅವರನ್ನು ಡಝನ್‌ಗಟ್ಟಲೆ ಪ್ರಕರಣಗಳಲ್ಲಿ ಸಿಲುಕಿಸಿ, ನ್ಯಾಯಾಲಯದ ತೀರ್ಪು ಬರುವವರೆಗೆ ಕನಿಷ್ಠ ನಾಲ್ಕರಿಂದ ಐದು ವರ್ಷಗಳವರೆಗೆ ಜೈಲಿನಲ್ಲೇ ಕೊಳೆಯುವಂತೆ ಮಾಡಬಹುದಾಗಿದೆ. ಹೀಗೆ ಮಾವೋವಾದಕ್ಕೆ ಸಂಬಂಧಿಸಿ ಅನೇಕ ಪ್ರಕರಣಗಳಲ್ಲಿ ಪೊಲೀಸರಿಂದಲೇ ಉಲ್ಲಂಘನೆಯಾಗುತ್ತಿರುವ ಕಾನೂನೇ ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲುತ್ತದೆಯೆಂಬುದು ವಾಸ್ತವ.

Writer - ಆನಂದ್ ತೆಲ್‌ತುಂಬ್ಡೆ

contributor

Editor - ಆನಂದ್ ತೆಲ್‌ತುಂಬ್ಡೆ

contributor

Similar News

ಜಗದಗಲ
ಜಗ ದಗಲ