ಮಹಾಮೈತ್ರಿಕೂಟಕ್ಕೆ ವಿಶಾಲವಾದ ತಾತ್ವಿಕ ನೆಲೆಯೊಂದರ ಅಗತ್ಯ

Update: 2018-06-11 18:22 GMT

ಇವತ್ತು ಭಾಜಪಕ್ಕೆ ಪರ್ಯಾಯವಾದ ಮಹಾಮೈತ್ರಿಕೂಟವೊಂದನ್ನು ರಚಿಸಲು ಕಾಂಗ್ರೆಸ್ ಸೇರಿದಂತೆ ಬಹುತೇಕ ರಾಷ್ಟ್ರೀಯ ಪಕ್ಷಗಳು ಅತೀವ ಉತ್ಸಾಹ ತೋರಿಸುತ್ತಿವೆ. ಅವುಗಳ ಇಂತಹ ಉತ್ಸಾಹಕ್ಕೆ ಪೂರಕವಾಗಿ ಮೊನ್ನೆ ಕರ್ನಾಟಕದಲ್ಲಿ ಭಾಜಪವನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳಗಳು ಚುನಾವಣೋತ್ತರ ಮೈತ್ರಿಮಾಡಿಕೊಂಡು ಅಧಿಕಾರದ ಗದ್ದುಗೆಹಿಡಿದವು. ಇಷ್ಟಲ್ಲದೆ ಇತ್ತೀಚೆಗೆ ಉತ್ತರಪ್ರದೇಶ ಮತ್ತು ಬಿಹಾರಗಳಲ್ಲಿ ನಡೆದ ಕೆಲವು ಲೋಕಸಭಾ ಉಪಚುನಾವಣೆಗಳಲ್ಲಿ ಭಾಜಪದ ವಿರುದ್ಧ ಬಹುಜನಪಕ್ಷ ಮತ್ತು ಸಮಾಜವಾದಿ ಪಕ್ಷಗಳು ಒಂದಾಗಿ ನಿಂತು ಚುನಾವಣೆ ಎದುರಿಸಿ ಭಾಜಪವನ್ನು ಸೋಲಿಸಿದ್ದು ಸಹ ಭಾಜಪದ ವಿರುದ್ಧ ರಚನೆಯಾಗಬಹುದಾದ ಮಹಾಮೈತ್ರಿಯೊಂದಕ್ಕೆ ಪೂರಕವಾಗಿಯೇ ಇತ್ತು. ಕಳೆದ ನಾಲ್ಕು ವರ್ಷಗಳ ಅವಧಿಯ ಭಾಜಪದ ಆಡಳಿತ ವಿರೋಧಿಅಲೆಯ ಜೊತೆಗೆ ಕೋಮುವಾದಿ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸಿ ಪರ್ಯಾಯ ರಾಜಕೀಯ ಶಕ್ತಿಯೊಂದನ್ನು ಕಟ್ಟುವ ದಿಸೆಯಲ್ಲಿ ಕೆಲಸ ಮಾಡುತ್ತಿರುವ ಭಾಜಪೇತರ ವಿರೋಧಪಕ್ಷಗಳ ಏಕೈಕ ಅಜೆಂಡಾ: ಕೋಮುವಾದಿ ಶಕ್ತಿಯನ್ನು ಅಧಿಕಾರದಿಂದ ದೂರ ಇಡುವುದು ಮಾತ್ರವಾಗಿದೆ ಎಂದರೆ ತಪ್ಪಾಗಲಾರದು. ಭಾಜಪೇತರ ರಾಜಕೀಯ ಪಕ್ಷಗಳ ಮಿತಿಯೇ ಇದಾಗಿದೆ. ಬಹುಶಃ ಈ ಮಿತಿಯೇ ಇಂತಹದೊಂದು ಮೈತ್ರಿಕೂಟದ ದೌರ್ಬಲ್ಯವೂ ಆಗಬಹುದೆಂಬ ಭಯ ನನಗಿದೆ. ಭಾಜಪ ವಿರುದ್ಧದ ಕೋಮುವಾದಿ ವಿರೋಧಿ ನಿಲುವೊಂದೇ ಇಂಡಿಯಾದ ಅಷ್ಟೂ ಪ್ರಾದೇಶಿಕ ಪಕ್ಷಗಳನ್ನು ಬಹುಕಾಲ ಒಟ್ಟಿಗಿರಿಸುತ್ತದೆಯೇ ಎನ್ನುವ ಪ್ರಶ್ನೆಯೊಂದು ಸಹಜವಾಗಿಯೇ ಕಾಡುತ್ತಿದೆ. ಇಂತಹದೊಂದು ಶಂಕೆಗೆ ಕಾರಣಗಳಿಲ್ಲದಿಲ್ಲ. ಮತೀಯವಾದಿ ವಿರೋಧಿ ಸಿದ್ಧಾಂತವೊಂದೇ ಮಹಾಮೈತ್ರಿಯ ರಚನೆಗೆ ಸಾಕಾಗಬಲ್ಲದೆಂಬುದು ನಿಜವಾದರೂ, ಅಂತಹದೊಂದು ಮೈತ್ರಿಯು ದೀರ್ಘಕಾಲ ಬಾಳಿಕೆ ಬರಲು ಅದೊಂದೇ ಸಾಕಾಗಲಾರದು ಎಂಬುದು ಸಹ ವಾಸ್ತವ! ಯಾಕೆಂದರೆ ಇವತ್ತು ಕೋಮುವಾದವೆನ್ನುವುದು ಅದೆಷ್ಟು ಅಪಾಯಕಾರಿಯಾಗಿದೆಯೊ ಅಷ್ಟೇ ಅಪಾಯಕಾರಿಯಾಗಿರುವುದು ನಾವು ಅನುಸರಿಸುತ್ತಿರುವ ಆರ್ಥಿಕನೀತಿಯಾಗಿದೆ.

 ಇತ್ತೀಚೆಗೆ ದೇಶದ ವಿವಿಧಭಾಗಗಳಲ್ಲಿ ನಡೆದ ಉಪಚುನಾವಣೆಗಳಲ್ಲಿ ಭಾಜಪ ಸೋತಿದ್ದರೆ ಅದಕ್ಕೆ ಅದರ ಕೋಮುವಾದಿ ನೀತಿಯೊಂದೇ ಕಾರಣವಲ್ಲವೆಂಬುದನ್ನು ನಾವೀಗ ಅರ್ಥಮಾಡಿಕೊಳ್ಳಬೇಕಿದೆ. ಕಳೆದ ನಾಲ್ಕುವರ್ಷಗಳಲ್ಲಿ ಹಳಿತಪ್ಪಿಹೋದ ನಮ್ಮ ಆರ್ಥಿಕ ನೀತಿ, ಹೆಚ್ಚುತ್ತಿರುವ ನಿರುದ್ಯೋಗ, ಕುಸಿದು ಹೋಗುತ್ತಿರುವ ಕೃಷಿ ಉತ್ಪಾದನೆ, ರೈತರ ಸರಣಿ ಆತ್ಮಹತ್ಯೆಗಳೆಲ್ಲವೂ ಭಾಜಪದ ಸೋಲಿಗೆ ಕಾರಣವಾಗಿದೆ ಎನ್ನುವುದನ್ನು ನಮ್ಮ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕಾಗಿದೆ. ಇದೆಲ್ಲಕ್ಕೂ ಮುಖ್ಯ ಕಾರಣ ನಾವೀಗ ಅನುಸರಿಸುತ್ತಿರುವ ಮುಕ್ತ ಆರ್ಥಿಕ ನೀತಿಯೇ ಮೂಲವಾಗಿದೆ

ಇದೀಗ ಈ ಮುಕ್ತ ಆರ್ಥಿಕ ವ್ಯವಸ್ಥೆಯು ನಮ್ಮ ಕಲ್ಯಾಣ ರಾಜ್ಯದ ಕನಸುಗಳನ್ನು ಮಾತ್ರವಲ್ಲದೆ. ನಮ್ಮ ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ಮಾರಕವಾಗುವ ಎಲ್ಲ ಲಕ್ಷಣಗಳನ್ನೂ ತೋರಿಸುತ್ತಿದೆ. ನಮ್ಮ ಅಭಿವೃದ್ಧಿಯ ಪರಿಕಲ್ಪನೆಯನ್ನು ಸಂಪೂರ್ಣವಾಗಿ ಬದಲಾಯಿಸಿದ ಇದು ಪಶ್ಚಿಮ ಮಾದರಿಯ ಅಭಿವೃದ್ಧಿಯನ್ನು, ಅದೇ ಸಿದ್ಧ ಮಾದರಿಯ ಉಪಭೋಗ ಸಂಸ್ಕೃತಿಯನ್ನು ನಮ್ಮ ಮೇಲೆ ಹೇರಿದೆ. ಇದರಿಂದಾಗಿ ಸರಕಾರದ ಆರ್ಥಿಕ ಮತ್ತು ಸಾಮಾಜಿಕ ನೀತಿಗಳನ್ನು ಇವತ್ತಿನ ಮಾರುಕಟ್ಟೆಯ ಶಕ್ತಿಗಳೇ ನಿರ್ಣಯಿಸುವ ಸ್ಥಿತಿ ನಿರ್ಮಾಣವಾಗಿದೆ. ಸರಕಾರಗಳ ನೀತಿ ನಿರೂಪಣೆಯಲ್ಲಿ ಜನರ ಪಾತ್ರವಹಿಸುವಿಕೆ ಕ್ರಮೇಣ ಕಡಿಮೆಯಾಗುತ್ತಿದೆ.

  ಕಲ್ಯಾಣ ರಾಜ್ಯದ ಗುರಿಯನ್ನಿಟ್ಟುಕೊಂಡಿದ್ದ ನಮ್ಮ ಸರಕಾರಗಳು ಬಡತನರೇಖೆಯಿಂದ ಕೆಳಗಿದ್ದವರಿಗೆ ಮತ್ತು ರೈತರಿಗೆ ನೀಡುತ್ತಿದ್ದ ಸಹಾಯಧನಗಳು ಗಣನೀಯವಾಗಿ ಕಡಿಮೆಯಾಗುತ್ತಿವೆ. ಸರಕಾರಗಳು ಜಾರಿಗೆ ತರುತ್ತಿದ್ದ ಬಹುತೇಕ ಜನಪರ ಯೋಜನೆಗಳಿಗೆ ವಿಶ್ವಬ್ಯಾಂಕಿನ ಕರಾರುಗಳು ಅಡ್ಡಿಯಾಗಿವೆ. ಇಲ್ಲಿ ಎರಡು ರೀತಿಯ ಅಪಾಯಗಳಿವೆ: ಮೊದಲನೆಯದು, ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಸರಕಾರವೊಂದು ಮಂಡಿಸುವ ಆಯವ್ಯಯ ಹೇಗಿರಬೇಕೆಂಬುದನ್ನು ಮತ್ತು ತೆರಿಗೆ ವಿಧಿಸುವ ಪ್ರಕ್ರಿಯೆಯನ್ನೂ ನಮ್ಮ ಜನಪ್ರತಿನಿಧಿಗಳ ಬದಲಿಗೆ ಬಹುರಾಷ್ಟ್ರೀಯ ಕಂಪೆನಿಗಳ ಸಿಇಒಗಳು ನಿರ್ಧರಿಸುವಂತಾಗಿದೆ. ಇನ್ನು ಎರಡನೆಯದು, ನಮ್ಮ ಒಟ್ಟಾರೆ ಆರ್ಥಿಕ ನೀತಿಯನ್ನು ವಿಶ್ವಬ್ಯಾಂಕ್ ನಿರ್ದೇಶಿಸುತ್ತಿದ್ದು ಬಡವರಿಗೆ ನೀಡುತ್ತಿದ್ದ ಸಬ್ಸಿಡಿಗಳಿಗೆ ಕತ್ತರಿ ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ. ನಮ್ಮ ಪ್ರಜಾಪ್ರತಿನಿಧಿಗಳು ಭಾಗವಹಿಸುವ ಸಂಸತ್ತು, ವಿಧಾನಸಭೆಯಂತಹ ವೇದಿಕೆಗಳು ಸಾಂಕೇತಿಕವಾಗುತ್ತಿವೆ. 2014ರ ನಂತರವಂತೂ ಸರಕಾರದ ಆರ್ಥಿಕ ನೀತಿ ನಿರೂಪಣೆಯಲ್ಲಿ ಬಹುರಾಷ್ಟ್ರೀಯ ಕಂಪೆನಿಗಳ, ಬಂಡವಾಳಶಾಹಿ ಉದ್ಯಮಿಗಳ ಪ್ರಭಾವ ಹೆಚ್ಚಾಗುತ್ತಿದೆ. ಯೋಜನಾ ಆಯೋಗವನ್ನು ರದ್ದುಗೊಳಿಸಿ ಕೇಂದ್ರ ಸರಕಾರ ರಚಿಸಿದ ನೀತಿ ಆಯೋಗವೂ ಸಹ ಇಂತಹ ಪ್ರಭಾವದ ಕೂಸೇ ಆಗಿದೆ. ಇನ್ನು ನಮ್ಮ ಪ್ರಧಾನಿಯವರು ದಿಢೀರನೆ ಘೋಷಿಸಿದ ನೋಟುಬ್ಯಾನ್ ಕೂಡ ಬ್ಯಾಂಕ್ ಮೂಲಕ ವ್ಯವಹರಿಸುವ ದೊಡ್ಡ ಉದ್ಯಮದಾರರ ಪರವಾಗಿಯೇ ಇತ್ತೆಂಬುದನ್ನು ನಾವು ಮರೆಯಬಾರದು. ಇನ್ನು ಗ್ರಾಮಸ್ವರಾಜ್ಯದ ಕಲ್ಪನೆಯ ಕೂಸಾದ ನಮ್ಮ ಪಂಚಾಯತ್ ವ್ಯವಸ್ಥೆಗೆ ಬಂದರೆ ಅಲ್ಲಿಯೂ ಜನರ ಭಾಗವಹಿಸುವಿಕೆ ಕಡಿಮೆಯಾಗುತ್ತಿದೆ. ಸರಕಾರ ನೀಡುವ ಅನುದಾನವನ್ನು ಖರ್ಚು ಮಾಡುವ ಬಗ್ಗೆಯೂ ಜನರ ಭಾಗವಹಿಸುವಿಕೆ ಇಲ್ಲವಾಗಿ, ಅವು ಸರಕಾರದ ಯೋಜನೆಗಳನ್ನು ವಿತರಿಸುವ ಕೇಂದ್ರಗಳಾಗಿ ಪರಿವರ್ತನೆಯಾಗಿವೆ. ಖಾಸಗೀಕರಣ ಹೆಚ್ಚಾದಂತೆ ಸರಕಾರದ ಪಾತ್ರ ನಗಣ್ಯವಾಗುತ್ತ, ಜನತೆಯ ಭಾಗವಹಿಸುವಿಕೆಗೆ ಅರ್ಥವಿಲ್ಲದಾಗಿ ಕ್ರಮೇಣ ಸರಕಾರಗಳು ದುರ್ಬಲಗೊಳ್ಳುತ್ತವೆ. ದುರ್ಬಲಗೊಳ್ಳುವ ಸರಕಾರಗಳು ಬಡ ಮತ್ತು ಕೆಳ ಮಧ್ಯಮ ವರ್ಗದ ಜನತೆಯನ್ನು ಉಪೇಕ್ಷಿಸುತ್ತ ಹೋಗುತ್ತವೆ. ಇದರಿಂದ ಸಮಾಜದಲ್ಲಿ ಅಸಮಾನತೆ ಇನ್ನಷ್ಟು ಹೆಚ್ಚುತ್ತ ಪ್ರಜಾಪ್ರಭುತ್ವದಲ್ಲಿನ ಜನತೆಯ ವಿಶ್ವಾಸವೇ ಕಡಿಮೆಯಾಗಿ ಬಿಡುವ ಸಾಧ್ಯತೆ ಇದೆ.

 ಖಾಸಗೀಕರಣದ ಹಿನ್ನೆಲೆಯಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಹುನ್ನಾರವೊಂದು ಸದ್ದಿರದೆ ನಡೆಯುತ್ತಿದೆ. ಬ್ರಿಟಿಷರು ತಮ್ಮ ಆಳ್ವಿಕೆಯಲ್ಲಿ ಗುಮಾಸ್ತರುಗಳನ್ನು ಸೃಷ್ಟಿಸುವ ಶಿಕ್ಷಣವನ್ನು ನಮಗೆ ನೀಡಿದರೆಂದು ದೂರುವ ನಾವಿವತ್ತು, ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಬಹುರಾಷ್ಟ್ರೀಯ ಕಂಪೆನಿಗಳ ಗುಲಾಮರನ್ನು ತಯಾರಿಸುವ ಶಿಕ್ಷಣ ನೀತಿಗೆ ಮಣೆ ಹಾಕುತ್ತಿದ್ದೇವೆ. ತಾಂತ್ರಿಕ ಶಿಕ್ಷಣದಿಂದ ನಮ್ಮ ಯುವಜನರ ನೈಪುಣ್ಯತೆ ಬೆಳೆಯುತ್ತದೆ ಮತ್ತು ಉದ್ಯೋಗಾವಕಾಶಗಳು ಹೆಚ್ಚುತ್ತವೆ ಎಂಬ ಕಾರಣ ಕೊಡುತ್ತ, ಉನ್ನತ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಮನ್ನಣೆ ನೀಡುತ್ತ ಮಾನವೀಯ ಸಾಮಾಜಿಕ ಶಾಸ್ತ್ರಗಳ ಅಧ್ಯಯನವನ್ನೇ ವ್ಯರ್ಥವೆನ್ನುವ ಮಟ್ಟಕ್ಕೆ ಬಂದು ನಿಂತಿದ್ದೇವೆ. ಶಿಕ್ಷಣವನ್ನೂ ಖಾಸಗೀಕರಿಸಿ, ಮುಕ್ತ ಆರ್ಥಿಕನೀತಿಗೆ ಅನುಕೂಲಕರ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸುತ್ತ ಸಾಗಿದ್ದೇವೆ. ಈ ಕ್ರಮಗಳಿಂದ ನಮ್ಮ ಶಿಕ್ಷಣದ ಇತರೇ ವಿಭಾಗಗಳು ಬಡವಾಗುತ್ತಿವೆ.

 ಹೀಗೆ ಒಂದೆಡೆ ಜಾಗತೀಕರಣವೆನ್ನುವುದು ಸರಕಾರದಲ್ಲಿ ಜನರ ಭಾಗವಹಿಸುವಿಕೆಯನ್ನು ಕಡಿಮೆ ಮಾಡುತ್ತ, ಇನ್ನೊಂದೆಡೆ ಶಿಕ್ಷಣವನ್ನೂ ಮಾರಾಟದ ಸರಕನ್ನಾಗಿಸಿ ಸಮಾಜ ಮತ್ತು ಮಾನವೀಯ ಶಾಸ್ತ್ರಗಳನ್ನು ಕಸದ ಬುಟ್ಟಿಗೆಸೆಯುತ್ತಿದೆ. ದೀರ್ಘಕಾಲೀನವಾಗಿ ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿರುವ ಜಾಗತೀಕರಣಕ್ಕೆ ಪರ್ಯಾಯ ಆರ್ಥಿಕನೀತಿಯೊಂದನ್ನು ನಾವು ರೂಪಿಸಿಕೊಳ್ಳದೆ ಹೋದರೆ ಮುಂದೊಂದು ದಿನ ಪ್ರಜಾಸತ್ತೆಯನ್ನು ನಾಶ ಮಾಡಿದ ಅಪವಾದಕ್ಕೆ ನಾವೇ ಸಿಕ್ಕಿ ಹಾಕಿಕೊಳ್ಳಲಿದ್ದೇವೆ.

 ಆದರಿವತ್ತು ನಮ್ಮ ಯಾವುದೇ ರಾಜಕೀಯ ಪಕ್ಷಗಳೂ ಈ ಮುಕ್ತ ಆರ್ಥಿಕ ನೀತಿಯ ಬಗ್ಗೆ ಚಕಾರವೆತ್ತುತ್ತಿಲ್ಲ. ಬದಲಿಗೆ ಕೋಮುವಾದದ ಸುತ್ತಲೇ ತಮ್ಮೆಲ್ಲ ಶಕ್ತಿಯನ್ನು ವ್ಯಯಮಾಡುತ್ತಿವೆ. ಭಾಜಪದ ಮತೀಯವಾದದ ವಿರುದ್ಧ ರಚನೆಯಾಗಲಿರುವ ಮಹಾ ಮೈತ್ರಿಕೂಟವೊಂದು ದೀರ್ಘಕಾಲದಲ್ಲಿ ಯಶಸ್ಸನ್ನು ಗಳಿಸಲು ಮತ್ತು ಉಳಿಯಲು ಕೋಮುವಾದಿ ವಿರೋಧಿ ನೀತಿಯೊಂದೇ ಸಾಲದು. ಬದಲಿಗೆ ದೇಶ ವರ್ತಮಾನದಲ್ಲಿ ಅನುಸರಿಸುತ್ತಿರುವ ಆರ್ಥಿಕ ನೀತಿಯ ಬಗ್ಗೆಯೂ ಸ್ಪಷ್ಟ ನಿಲುವೊಂದನ್ನು ತೆಗೆದುಕೊಳ್ಳಬೇಕಿದೆ. ಇದರ ಜೊತೆಗೆ ದೇಶ ಎದುರಿಸುತ್ತಿರುವ ತೀವ್ರತರವಾದ ಕೃಷಿ ಬಿಕ್ಕಟ್ಟನ್ನು ಬಗೆಹರಿಸುವ ಮತ್ತು ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲು ತಾವು ಅನುಸರಿಸಬಹುದಾದ ಒಂದು ಸ್ಪಷ್ಟ ನೀತಿಯೊಂದನ್ನು ರೂಪಿಸಿ ಜನತೆಯ ಮುಂದಿಡಬೇಕಾಗಿದೆ. ಭಾಜಪದ ವಿರುದ್ಧ ಸೃಷ್ಟಿಯಾಗಲಿರುವ ಮಹಾ ಮೈತ್ರಿಕೂಟವೊಂದು ತನ್ನ ಕೋಮುವಾದಿ ವಿರೋಧಿ ಅಜೆಂಡಾದ ಜೊತೆಗೆ ನಮ್ಮ ಆರ್ಥಿಕ ನೀತಿಯ ಬಗ್ಗೆಯೂ ಒಂದು ಸ್ಪಷ್ಟ ಸಿದ್ಧಾಂತವನ್ನು ರೂಪಿಸಿಕೊಳ್ಳಬೇಕಾಗಿದೆ. ಯಾಕೆಂದರೆ ಈ ದೇಶದ ಒಟ್ಟು ಮತದಾರರಲ್ಲಿ ಶೇ. ಎಪ್ಪತ್ತರಷ್ಟಿರುವ ತಳಸಮುದಾಯಗಳಿಗೆ ಮತ್ತು ದುಡಿಯುವ ವರ್ಗಗಳಿಗೆ ಕೋಮುವಾದಕ್ಕಿಂತ ಹೆಚ್ಚಾಗಿ ಅವರ ಜೀವನ ಮಟ್ಟ ಸುಧಾರಣೆಯಾಗುವುದೇ ಬಹುಮುಖ್ಯವಾಗಿದೆ. ಇವತ್ತು ಮತೀಯವಾದದ ವಿರೋಧಿ ಅಂಶವೊಂದನ್ನೇ ಇಟ್ಟುಕೊಂಡು ರಾಜಕಾರಣ ಮಾಡಿ ಭಾಜಪವನ್ನು ಸೋಲಿಸುವುದು ಕಷ್ಟಸಾಧ್ಯದ ಕೆಲಸ.

Similar News