ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್: ಶಮಿ ಬದಲಿಗೆ ಸೈನಿಗೆ ಸ್ಥಾನ

Update: 2018-06-11 18:50 GMT

ಹೊಸದಿಲ್ಲಿ, ಜೂ.11:ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ ಸೋಮವಾರ ಫಿಟ್ನೆಸ್ ಟೆಸ್ಟ್‌ನಲ್ಲಿ ಅನುತ್ತೀರ್ಣರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆಯ್ಕೆಗಾರರು ದಿಲ್ಲಿಯ ವೇಗದ ಬೌಲರ್ ನವ್‌ದೀಪ್ ಸೈನಿಗೆ ಅಫ್ಘಾನಿಸ್ತಾನ ವಿರುದ್ಧ ಜೂ.14 ರಿಂದ ಆರಂಭವಾಗಲಿರುವ ಏಕೈಕ ಟೆಸ್ಟ್ ಪಂದ್ಯಕ್ಕೆ ಕರೆ ನೀಡಿದ್ದಾರೆ.

ಸೈನಿ ಪ್ರಸ್ತುತ ದೇಶೀಯ ಕ್ರಿಕೆಟ್‌ನಲ್ಲಿ ವೇಗವಾಗಿ ಬೌಲಿಂಗ್ ಮಾಡಬಲ್ಲ ಆಟಗಾರನಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ರಣಜಿ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಸೈನಿ ಭಾರತದ ಭವಿಷ್ಯದ ಉತ್ತಮ ಬೌಲರ್ ಎಂದೇ ಪರಿಗಣಿಸಲ್ಪಟ್ಟಿದ್ದರು.

 ಸೈನಿ ಮುಂದಿನ ತಿಂಗಳು ಇಂಗ್ಲೆಂಡ್‌ಗೆ ತೆರಳಲಿರುವ ಭಾರತ ‘ಎ’ ತಂಡಕ್ಕೆ ಆಯ್ಕೆಯಾಗಿದ್ದಾರೆ. 25ರ ಹರೆಯದ ಸೈನಿ 31 ಪ್ರಥಮ ದರ್ಜೆ ಪಂದ್ಯಗಳಲ್ಲಿ 96 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ‘‘ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಅಖಿಲ ಭಾರತ ಸೀನಿಯರ್ ಆಯ್ಕೆ ಸಮಿತಿಯು ಮುಹಮ್ಮದ್ ಶಮಿ ಸ್ಥಾನಕ್ಕೆ ನವ್‌ದೀಪ್ ಸೈನಿ ಅವರನ್ನು ಆಯ್ಕೆ ಮಾಡಿದೆ. ಬೆಂಗಳೂರಿನ ಎನ್‌ಸಿಎನಲ್ಲಿ ನಡೆದ ಫಿಟ್ನೆಸ್ ಟೆಸ್ಟ್‌ನಲ್ಲಿ ಶಮಿ ವಿಫಲರಾದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ’’ ಎಂದು ಬಿಸಿಸಿಐ ತಿಳಿಸಿದೆ.

ಆಟಗಾರರ ಫಿಟ್ನೆಸ್‌ನ್ನು ಅಳೆಯಲು ಯೋ-ಯೋ ಟೆಸ್ಟ್ ನ್ನು ಟೀಮ್ ಇಂಡಿಯಾ ನಡೆಸುತ್ತಿದೆ. ಭಾರತದ ಹಿರಿಯರ ತಂಡ ಹಾಗೂ ಭಾರತ ‘ಎ’ ತಂಡ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಬೇಕಾದರೆ 16.1 ಅಂಕ ಗಳಿಸಬೇಕು. 18ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಕರುಣ್ ನಾಯರ್ ಹಾಗೂ ಹಾರ್ದಿಕ್ ಪಾಂಡ್ಯ ಯೋ-ಯೋ ಟೆಸ್ಟ್‌ನಲ್ಲಿ ಉತ್ತಮ ನಿರ್ವಹಣೆ ತೋರಿದ್ದಾರೆ.

27ರ ಹರೆಯದ ಶಮಿ ಗಾಯದ ಸಮಸ್ಯೆಯ ಜೊತೆಗೆ ವೈಯಕ್ತಿಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಶಮಿ ವಿರುದ್ಧ ಆತನ ಪತ್ನಿ ಕೌಟುಂಬಿಕ ದೌರ್ಜನ್ಯದ ಪ್ರಕರಣದ ದಾಖಲಿಸಿದ್ದಾರೆ. ಶಮಿ 30 ಟೆಸ್ಟ್ ಪಂದ್ಯಗಳಲ್ಲಿ 110 ವಿಕೆಟ್‌ಗಳನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News