ಬ್ಯಾಂಕ್ ಲಾಕರ್ ಪಡೆದುಕೊಳ್ಳುವಾಗ ಈ ಐದು ಅಂಶಗಳು ನಿಮ್ಮ ಗಮನದಲ್ಲಿರಲಿ

Update: 2018-06-12 12:20 GMT

ಕಳವು,ದರೋಡೆಗಳು ಹೆಚ್ಚುತ್ತಿರುವ ಈ ಕಾಲದಲ್ಲಿ ಚಿನ್ನಾಭರಣಗಳು ಮತ್ತು ಇತರ ಅಮೂಲ್ಯ ಸೊತ್ತುಗಳನ್ನು ಮನೆಯಲ್ಲಿ ಇರಿಸಿಕೊಳ್ಳುವುದೂ ಅಪಾಯವೇ. ಹಾಡಹಗಲೇ ಬೀಗ ಹಾಕಿದ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುವ ಖದೀಮರಿದ್ದಾರೆ. ಹೀಗಿರುವಾಗ ಮನೆಗೆ ಬೀಗ ಹಾಕಿಕೊಂಡು ಕೆಲವಾರು ದಿನಗಳ ಮಟ್ಟಿಗೆ ಪರವೂರಿಗೆ ತೆರಳುವುದೂ ಕಷ್ಟವಾಗಿದೆ. ಕಳ್ಳತನದ ವಿರುದ್ಧ ವಿಮಾ ರಕ್ಷಣೆಯನ್ನು ಪಡೆದುಕೊಳ್ಳಬಹುದಾದರೂ ಅದರಿಂದ ಹಣ ದೊರೆಯುತ್ತದೆಯೇ ಹೊರತು ನಾವು ಭಾವನಾತ್ಮಕ ಸಂಬಂಧಗಳನ್ನು ಹೊಂದಿರುವ ಅಮೂಲ್ಯ ಸೊತ್ತುಗಳು ಮತ್ತೆ ವಾಪಸ್ ಸಿಗುವುದಿಲ್ಲ. ಆದ್ದರಿಂದ ಚಿನ್ನಾಭರಣಗಳು ಮತ್ತು ಇತರ ಅಮೂಲ್ಯ ಸೊತ್ತುಗಳನ್ನು ಬ್ಯಾಂಕ್‌ನ ಸೇಫ್ ಲಾಕರ್‌ನಲ್ಲಿ ಇರಿಸುವುದು ಬುದ್ಧಿವಂತಿಕೆಯ ಕ್ರಮವಾಗುತ್ತದೆ. ಆದರೆ ಇದನ್ನೂ ಸಂಪೂರ್ಣವಾಗಿ ನೆಚ್ಚಿಕೊಳ್ಳುವಂತಿಲ್ಲ. ಏಕೆಂದರೆ ಗ್ರಾಹಕರ ಲಾಕರ್‌ಗಳಲ್ಲಿಯ ಅಮೂಲ್ಯ ಸೊತ್ತುಗಳ ಕಳ್ಳತನವಾದರೆ ಬ್ಯಾಂಕು ಹೊಣೆಗಾರಿಕೆಯನ್ನು ವಹಿಸಿಕೊಳ್ಳುವದಿಲ್ಲ. ಆದರೂ ಹೆಚ್ಚಿನ ಬ್ಯಾಂಕುಗಳಲ್ಲಿ ಭದ್ರತಾ ಸಿಬ್ಬಂದಿಗಳಿರುವುದರಿಂದ ಕಳ್ಳತನ ಪ್ರಕರಣಗಳು ಅಪರೂಪ. ಹೀಗಾಗಿ ಅಷ್ಟರ ಮಟ್ಟಿಗೆ ಬ್ಯಾಂಕ್ ಲಾಕರ್‌ಗಳನ್ನು ನಂಬಬಹುದಾಗಿದೆ. ಬ್ಯಾಂಕ್‌ಗಳಲ್ಲಿ ಲಾಕರ್‌ನ್ನು ಪಡೆಯುವಾಗ ಗಮನದಲ್ಲಿರಬೇಕಾದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ....

►ಬ್ಯಾಂಕಿನ ಆಯ್ಕೆ

ನೀವು ಲಾಕರ್ ಪಡೆಯುವ ಯೋಚನೆಯಲ್ಲಿದ್ದರೆ ನಿಮ್ಮ ಹಲವು ಆಪ್ತರು ರಾಷ್ಟ್ರೀಕೃತ ಬ್ಯಾಂಕುಗಳನ್ನು ಸೂಚಿಸಬಹುದು,ಇನ್ನು ಕೆಲವರು ಖಾಸಗಿ ಬ್ಯಾಂಕುಗಳು ಒಳ್ಳೆಯದು ಎಂದು ಸಲಹೆ ನೀಡಬಹುದು. ಆದರೆ ಇವೆರಡೂ ಆಯ್ಕೆಗಳಲ್ಲಿ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ. ಲಾಕರ್‌ಗಳನ್ನು ನೀಡಲು ವಿವಿಧ ಬ್ಯಾಂಕುಗಳು ರೂಪಿಸಿರುವ ನಿಯಮಗಳನ್ನು ಕೂಲಂಕಶವಾಗಿ ಪರಿಶೀಲಿಸಿ ಮತ್ತು ನಿಮ್ಮ ಅಗತ್ಯಗಳಿಗೆ ಹೊಂದಿಕೆಯಾಗುವ ಮತ್ತು ಅತ್ಯಂತ ಪ್ರಮುಖವಾಗಿ, ನಿಮ್ಮ ಬಜೆಟ್‌ಗೆ ಸರಿದೂಗುವ ಬಾಡಿಗೆಯನ್ನು ವಿಧಿಸುವ ಬ್ಯಾಂಕನ್ನು ಆಯ್ಕೆ ಮಾಡಿಕೊಳ್ಳಿ. ಬ್ಯಾಂಕುಗಳು ಒದಗಿಸುವ ಭದ್ರತೆಯಲ್ಲಿ ವ್ಯತ್ಯಾಸವಿಲ್ಲದಿದ್ದರೂ ಕೆಲವು ಬ್ಯಾಂಕುಗಳು ಭಾರೀ ಲಾಕರ್ ಬಾಡಿಗೆಯನ್ನು ವಿಧಿಸುತ್ತವೆ. ಲಾಕರ್‌ಗಳ ಬಾಡಿಗೆಯೂ ಅವುಗಳ ಗಾತ್ರಗಳನ್ನು ಅವಲಂಬಿಸಿರುತ್ತದೆ. ಹೀಗಾಗಿ ನೀವು ಲಾಕರ್‌ನಲ್ಲಿಡಲು ಬಯಸಿರುವ ಚಿನ್ನಾಭರಣಗಳು ಮತ್ತು ಇತರ ಅಮೂಲ್ಯ ಸೊತ್ತುಗಳು ಕಡಿಮೆ ಪ್ರಮಾಣದಲ್ಲಿದ್ದರೆ ಕಡಿಮೆ ಬಾಡಿಗೆಯ ಸಣ್ಣ ಲಾಕರ್ ಸಾಕಾಗುತ್ತದೆ.

►ನಿಯಮ-ನಿಬಂಧನೆಗಳು

   ಹೆಚ್ಚಿನೆಲ್ಲ ಬ್ಯಾಂಕುಗಳು ತಮ್ಮ ಹಾಲಿ ಗ್ರಾಹಕರು ಬಯಸಿದಲ್ಲಿ ಮೌಲ್ಯವರ್ಧಿತ ಸೇವೆಯಾಗಿ ಲಾಕರ್‌ಗಳನ್ನು ಒದಗಿಸುತ್ತವೆ. ಹೀಗಾಗಿ ಲಾಕರ್ ಪಡೆಯಲು ಬಯಸುವವರು ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದರೆ ಲಾಕರ್‌ಗಾಗಿ ಪ್ರತ್ಯೇಕ ಕೆವೈಸಿ ಬೇಕಾಗುವುದಿಲ್ಲ. ಹೊಸ ಗ್ರಾಹಕರಾಗಿದ್ದಲ್ಲಿ ತಮ್ಮ ವಾರ್ಷಿಕ ಲಾಕರ್ ಬಾಡಿಗೆ ಪಾವತಿ ವಸೂಲಿಗಾಗಿ ನಿರಖು ಠೇವಣಿಯನ್ನು ಇರಿಸುವಂತೆ ಬ್ಯಾಂಕುಗಳು ಸೂಚಿಸುತ್ತವೆ,ಇದರ ಜೊತೆಗೆ ಉಳಿತಾಯ ಖಾತೆಯನ್ನೂ ತೆರೆಯಬೇಕಾಗುತ್ತದೆ. ಕೆಲವು ಬ್ಯಾಂಕುಗಳು ಭಾರೀ ಮೊತ್ತದ ಹಣವನ್ನು ಠೇವಣಿಯಿಡುವಂತೆ ಒತ್ತಾಯಿಸಬಹುದು. ಹೀಗಾಗಿ ನೀವು ಲಾಕರ್‌ಗೆ ಸಂಬಂಧಿಸಿದ ಕಾಗದಪತ್ರಗಳಿಗೆ ಸಹಿ ಹಾಕುವ ಮುನ್ನ ಪ್ರತಿಯೊಂದೂ ನಿಯಮ-ನಿಬಂಧನೆಗಳನ್ನು ಸರಿಯಾಗಿ ಓದುವುದು ಅಗತ್ಯವಾಗುತ್ತದೆ.

►ಆಗಾಗ್ಗೆ ಪರೀಕ್ಷಿಸುತ್ತಿರಿ

ನೀವು ಲಾಕರ್ ಪಡೆದುಕೊಂಡು ನಿಮ್ಮ ಅಮೂಲ್ಯ ಸೊತ್ತುಗಳನ್ನು ಅದರಲ್ಲಿರಿಸಿದ ಬಳಿಕ ಕೆಲಸ ಅಲ್ಲಿಗೇ ಮುಗಿಯುವುದಿಲ್ಲ. ಆಗಾಗ್ಗೆ ಬ್ಯಾಂಕಿಗೆ ಭೇಟಿ ನೀಡಿ ನಿಮ್ಮ ಲಾಕರ್ ತೆರೆದು ಪರೀಕ್ಷಿಸುವುದೂ ಅಗತ್ಯವಾಗಿದೆ. ಕನಿಷ್ಠ ಆರು ತಿಂಗಳಿಗೊಮ್ಮೆಯಾದರೂ ಈ ಕೆಲಸವನ್ನು ಮಾಡಬೇಕಾಗುತ್ತದೆ. ಕೆಲವು ಬ್ಯಾಂಕುಗಳು ವರ್ಷದಲ್ಲಿ ಕನಿಷ್ಠ 15 ಬಾರಿಯಾದರೂ ಲಾಕರ್ ಪರಿಶೀಲಿಸುವಂತೆ ತಮ್ಮ ಗ್ರಾಹಕರಿಗೆ ಸೂಚಿಸುತ್ತವೆ.

►ಖಾತೆಯ ಮಾದರಿ

ಬ್ಯಾಂಕುಗಳು ಇಂತಹುದೇ ಲಾಕರ್ ಖಾತೆಯನ್ನು ತೆರೆಯಲು ನಿಮಗೆ ಸೂಚಿಸುವುದಿಲ್ಲವಾದರೂ ಉತ್ತಮ ಮತ್ತು ಸುಗಮ ನಿರ್ವಹಣೆಗಾಗಿ ಜಂಟಿ ಹೆಸರುಗಳಲ್ಲಿ(ಉದಾ:ಪತಿ ಮತ್ತು ಪತ್ನಿ) ಲಾಕರ್ ಪಡೆದುಕೊಳ್ಳಬೇಕು ಮತ್ತು ನಾಮಿನಿಯನ್ನು ಅಗತ್ಯವಾಗಿ ಸೂಚಿಸಬೇಕು. ಜಂಟಿ ಖಾತೆದಾರರಲ್ಲಿ ಯಾರೇ ಆದರೂ ಲಾಕರ್ ನಿರ್ವಹಿಸುವಂತಿರಬೇಕು. ಇದರಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿದ ಸಂದರ್ಭದಲ್ಲಿ ಲಾಕರ್ ನಿರ್ವಹಣೆಗೆ ತೊಂದರೆಯಾಗುವುದಿಲ್ಲ.

►ಅಮೂಲ್ಯ ಸೊತ್ತುಗಳು

ಈಗಾಗಲೇ ಹೇಳಿರುವಂತೆ ನೀವು ಲಾಕರ್‌ಗೆ ಕಡ್ಡಾಯವಾಗಿ ಆಗಾಗ್ಗೆ ಭೇಟಿ ನೀಡುತ್ತಿರಬೇಕು. ನೀವು ಇಟ್ಟಿರುವ ಅಮೂಲ್ಯ ಸೊತ್ತುಗಳನ್ನು ಪರಿಶೀಲಿಸುವುದು ಮಾತ್ರವಲ್ಲ,ಆಗಾಗ್ಗೆ ಅವುಗಳನ್ನು ಪಡೆಯುವುದೋ ವಾಪಸ್ ಇಡುವುದನ್ನೋ ಮಾಡುತ್ತಿರಬೇಕು. ಇದರಿಂದ ನಿಮ್ಮ ಸೊತ್ತುಗಳು ಸುಭದ್ರವಾಗಿವೆ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲು ಸುಲಭವಾಗುತ್ತದೆ.

ಇವಿಷ್ಟು ಪ್ರಮುಖ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳುವ ಜೊತೆಗೆ ಬ್ಯಾಂಕು ಅಲಾರ್ಮ್ ವ್ಯವಸ್ಥೆ,ಲಾಕರ್ ರೂಮ್‌ಗೆ ಕಬ್ಬಿಣದ ಬಾಗಿಲುಗಳು ಮತ್ತು ಸಿಸಿಟಿವಿ ನಿಗಾದಂತಹ ಎಲ್ಲ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ನಿಮ್ಮ ಜೊತೆಗೆ ಲಾಕರ್ ರೂಮಿಗೆ ಬಂದು ಬ್ಯಾಂಕಿನ ಕೀ ಅನ್ನು ಬಳಸುವ ಸಿಬ್ಬಂದಿ ವಾಪಸ್ ಹೋದ ಬಳಿಕವೇ ಲಾಕರ್‌ನ್ನು ತೆರೆಯಿರಿ. ನೀವು ಅಲ್ಲಿಂದ ಹೊರಡುವ ಮುನ್ನ ಲಾಕರ್‌ನ್ನು ಸರಿಯಾಗಿ ಲಾಕ್ ಮಾಡಿರುವುದನ್ನು ಎರಡೆರಡು ಬಾರಿ ಖಚಿತಪಡಿಸಿಕೊಳ್ಳಿ.

ನೀವು ಲಾಕರ್‌ನಲ್ಲಿರಿಸುವ ಎಲ್ಲ ಅಮೂಲ್ಯ ಸೊತ್ತುಗಳ ಪಟ್ಟಿಯೊಂದನ್ನು ಸಿದ್ಧಪಡಿಸಿಕೊಳ್ಳಿ. ಚಿನ್ನಾಭರಣಗಳ ತೂಕ,ಅವುಗಳ ಮಾರುಕಟ್ಟೆ ವೌಲ್ಯ ಇತ್ಯಾದಿ ಮಾಹಿತಿಗಳೂ ನಿಮ್ಮ ಬಳಿಯಿರಲಿ. ಇನ್ನೊಂದು ಮಹತ್ವದ ವಿಷಯವೆಂದರೆ ನೀವು ಲಾಕರ್‌ನಲ್ಲಿ ಇರಿಸುವ ಪ್ರತಿಯೊಂದೂ ದಾಖಲೆಯನ್ನು ಲ್ಯಾಮಿನೇಟ್ ಮಾಡಿಸಬೇಕು ಮತ್ತು ಅದರ ಝೆರಾಕ್ಸ್ ಪ್ರತಿ ನಿಮ್ಮ ಬಳಿಯಿರಬೇಕು. ಉಯಿಲು ಪತ್ರದಂತಹ ಅತ್ಯಂತ ಮಹತ್ವದ ಮತ್ತು ಅತ್ಯಂತ ಅಗತ್ಯದ ದಾಖಲೆಗಳನ್ನು ಲಾಕರ್‌ನಲ್ಲಿರಿಸಬೇಡಿ. ಸುರಕ್ಷತೆಯ ಜೊತೆಗೆ ಬುದ್ಧಿವಂತಿಕೆಯೂ ಇಂದಿನ ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News