ನಾಲ್ವರು ಮಕ್ಕಳನ್ನು ಕೊಂದು ಆತ್ಮಹತ್ಯೆಗೈದ ದುಷ್ಕರ್ಮಿ

Update: 2018-06-12 17:01 GMT

ವಾಶಿಂಗ್ಟನ್, ಜೂ. 12: ಅಮೆರಿಕದ ಫ್ಲೋರಿಡ ರಾಜ್ಯದಲ್ಲಿ ನಡೆದ ಒತ್ತೆಸೆರೆ ಪ್ರಕರಣವು ದುರಂತದಲ್ಲಿ ಕೊನೆಗೊಂಡಿದೆ. ದುಷ್ಕರ್ಮಿಯು ತನ್ನ ಒತ್ತೆಸೆರೆಯಲ್ಲಿದ್ದ ನಾಲ್ವರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ರವಿವಾರ ಒರ್ಲಾಂಡೊದ ಅಪಾರ್ಟ್‌ಮೆಂಟೊಂದರಲ್ಲಿ ಕೌಟುಂಬಿಕ ಹಿಂಸೆ ನಡೆಯುತ್ತಿದೆ ಎಂಬ ಕರೆಗೆ ಸ್ಪಂದಿಸಿದ ಪೊಲೀಸರು ಸ್ಥಳಕ್ಕೆ ತೆರಳಿದಾಗ ಓರ್ವ ಪೊಲೀಸ್ ಅಧಿಕಾರಿಯ ಮೇಲೆ ಗುಂಡು ಹಾರಿಸಲಾಯಿತು. ಅವರ ಪರಿಸ್ಥಿತಿ ಗಂಭೀರವಾಗಿದೆ.

ಬಂದೂಕುಧಾರಿಯು ರವಿವಾರ ರಾತ್ರಿ ಮತ್ತು ಸೋಮವಾರ ಇಡೀ ದಿನ ಅಪಾರ್ಟ್‌ಮೆಂಟ್‌ನಲ್ಲಿ ಮಕ್ಕಳೊಂದಿಗೆ ಇದ್ದನು. 1, 6, 10 ಮತ್ತು 11 ವರ್ಷದ ಮಕ್ಕಳನ್ನು ದುಷ್ಕರ್ಮಿಯು ತನ್ನ ಒತ್ತೆಸೆರೆಯಲ್ಲಿ ಇಟ್ಟುಕೊಂಡಿದ್ದನು.

‘‘ಸ್ವಲ್ಪ ಹಿಂದೆ ನಾವು ಅಪಾರ್ಟ್‌ಮೆಂಟ್ ಹೊಕ್ಕಾಗ ಎಲ್ಲ ನಾಲ್ವರು ಮಕ್ಕಳು ಗುಂಡು ಹಾರಿಸಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ದುಷ್ಕರ್ಮಿಯೂ ಆತ್ಮಹತ್ಯೆ ಮಾಡಿಕೊಂಡಂತೆ ಕಂಡುಬರುತ್ತಿದೆ’’ ಎಂದು ಒರ್ಲಾಂಡೊ ಪೊಲೀಸ್ ಮುಖ್ಯಸ್ಥ ಜಾನ್ ಮಿನ ಸೋಮವಾರ ಮಧ್ಯರಾತ್ರಿಗೆ ಮೊದಲು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

 ದುಷ್ಕರ್ಮಿಯನ್ನು 35 ವರ್ಷದ ಗ್ರೇ ಲಿಂಡ್ಸೆ ಎಂದು ಗುರುತಿಸಲಾಗಿದೆ. ಹತ್ಯೆಗೀಡಾದ ಮಕ್ಕಳ ಪೈಕಿ ಇಬ್ಬರು ಅವನ ಮಕ್ಕಳಾದರೆ, ಇನ್ನಿಬ್ಬರು ಆತನ ವಿರುದ್ಧ ಹಲ್ಲೆ ದೂರು ದಾಖಲಿಸಿದ್ದ ಮಹಿಳೆಯದ್ದಾಗಿವೆ.

ರವಿವಾರ ರಾತ್ರಿ ಅಪಾರ್ಟ್‌ಮೆಂಟ್‌ನಿಂದ ತಪ್ಪಿಸಿಕೊಂಡ ಬಳಿಕ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News