ಮುಶರ್ರಫ್ ಪಾಸ್‌ಪೋರ್ಟ್ ಮೇಲಿನ ತಡೆ ತೆರವುಗೊಳಿಸಲು ಸುಪ್ರೀಂ ಆದೇಶ

Update: 2018-06-12 17:02 GMT

ಇಸ್ಲಾಮಾಬಾದ್, ಜೂ. 12: ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಪರ್ವೇಝ್ ಮುಶರ್ರಫ್‌ರ ರಾಷ್ಟ್ರೀಯ ಗುರುತು ಕಾರ್ಡ್ (ಎನ್‌ಐಸಿ) ಮತ್ತು ಪಾಸ್‌ಪೋರ್ಟ್‌ಗಳ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸುವಂತೆ ದೇಶದ ಸುಪ್ರೀಂ ಕೋರ್ಟ್ ಸೋಮವಾರ ಅಧಿಕಾರಿಗಳಿಗೆ ಆದೇಶ ನೀಡಿದೆ. ಇದರೊಂದಿಗೆ ಸ್ವಯಂ ದೇಶಭ್ರಷ್ಟ ಜೀವನವನ್ನು ನಡೆಸಿದ್ದ ಮಾಜಿ ಸೇನಾ ಮುಖ್ಯಸ್ಥರ ವಾಪಸಾತಿಗೆ ವೇದಿಕೆ ಸಿದ್ಧವಾದಂತಾಗಿದೆ.

ಮುಶರ್ರಫ್‌ರ ದಾಖಲೆಗಳ ಮೇಲಿನ ತಡೆಯನ್ನು ತೆರವುಗೊಳಿಸುವಂತೆ ಮುಖ್ಯ ನ್ಯಾಯಾಧೀಶ ಸಾಕಿಬ್ ನಿಸಾರ್, ನ್ಯಾಶನಲ್ ಡಾಟಾಬೇಸ್ ಮತ್ತು ರಿಜಿಸ್ಟ್ರೇಶನ್ ಅಥಾರಿಟಿ (ಎನ್‌ಎಡಿಆರ್‌ಎ) ಅಧ್ಯಕ್ಷ ಉಸ್ಮಾನ್ ಮುಬಿನ್‌ಗೆ ಸೂಚಿಸಿದರು.

ಮುಶರ್ರಫ್ ವಿರುದ್ಧದ ದೇಶದ್ರೋಹ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯವೊಂದರ ಆದೇಶಕ್ಕೆ ಅನುಗುಣವಾಗಿ, ಅವರ ಎನ್‌ಐಸಿ ಮತ್ತು ಪಾಸ್‌ಪೋರ್ಟ್‌ಗಳನ್ನು ಅಮಾನತಿನಲ್ಲಿಡುವಂತೆ ಎನ್‌ಎಡಿಆರ್‌ಎ ಹಾಗೂ ವಲಸೆ ಮತ್ತು ಪಾಸ್‌ಪೋರ್ಟ್‌ಗಳ ಮಹಾನಿರ್ದೇಶನಾಲಯಗಳಿಗೆ ಆಂತರಿಕ ಸಚಿವಾಲಯ ಸೂಚನೆ ನೀಡಿತ್ತು.

‘‘ನೀವು ಅವರ ಕಾರ್ಡ್ ಮತ್ತು ಪಾಸ್‌ಪೋರ್ಟ್‌ಗಳನ್ನು ಯಾಕೆ ಅಮಾನತು ಮಾಡುತ್ತೀರಿ? ವಾಪಸ್ ಬಾರದಿರಲು ಅವರಿಗೆ ಕಾರಣ ಕೊಡುವುದಕ್ಕಾ?’’ ಎಂದು ಮುಖ್ಯ ನ್ಯಾಯಾಧೀಶರು ಮುಬಿನ್‌ರನ್ನು ಪ್ರಶ್ನಿಸಿದರು.

‘‘ಮುಶರ್ರಫ್ ವಾಪಸಾಗಬೇಕು ಹಾಗೂ ಅವರ ವಿರುದ್ಧದ ಪ್ರಕರಣಗಳನ್ನು ಎದುರಿಸಬೇಕು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News