ವಿಶ್ವಕಪ್‌ನ ಕಳಪೆ ಇತಿಹಾಸದಿಂದ ಹೊರಬರುವ ವಿಶ್ವಾಸದಲ್ಲಿ ಇಂಗ್ಲೆಂಡ್

Update: 2018-06-12 18:27 GMT

ಮಾಸ್ಕೊ, ಜೂ.12: ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ 18 ಗೋಲುಗಳನ್ನು ಬಾರಿಸಿ, ಕೇವಲ ಮೂರು ಗೋಲುಗಳನ್ನು ಎದುರಾಳಿಗೆ ಬಿಟ್ಟುಕೊಟ್ಟಿರುವ ಇಂಗ್ಲೆಂಡ್ ಫುಟ್ಬಾಲ್ ತಂಡ ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ ಕಳಪೆ ಆಟದ ಇತಿಹಾಸದಿಂದ ಹೊರಬರುವ ವಿಶ್ವಾಸದಲ್ಲಿದೆ.

ಇಂಗ್ಲೆಂಡ್ ನಾಯಕ ಹ್ಯಾರಿ ಕೇನ್ ಈ ಬಾರಿಯ ವಿಶ್ವಕಪ್‌ನಲ್ಲಿ ತಂಡದ ಅವಕಾಶದಲ್ಲಿ ನಿರ್ಣಾಯಕ ಪಾತ್ರವಹಿಸಲಿದ್ದಾರೆ. ಯುರೋಪಿಯನ್ ಅರ್ಹತಾ ಸುತ್ತಿನಲ್ಲಿ 10 ಪಂದ್ಯಗಳಲ್ಲಿ 8ರಲ್ಲಿ ಜಯ ಸಾಧಿಸಿರುವ ಇಂಗ್ಲೆಂಡ್ ಉತ್ತಮ ದಾಖಲೆ ನಿರ್ಮಿಸಿತ್ತು.

ವಿಶ್ವಕಪ್ ಇತಿಹಾಸವನ್ನು ಅವಲೋಕಿಸಿದರೆ ಇಂಗ್ಲೆಂಡ್ ಸಾಧನೆ ನಿರಾಶಾದಾಯಕವಾಗಿದೆ. 14 ಬಾರಿ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿರುವ ಇಂಗ್ಲೆಂಡ್ 1966ರಲ್ಲಿ ಮಾತ್ರ ಚಾಂಪಿಯನ್‌ಪಟ್ಟಕ್ಕೇರಿತ್ತು.

ಈ ವರ್ಷದ ವಿಶ್ವಕಪ್ ಕಣದಲ್ಲಿರುವ ಇಂಗ್ಲೆಂಡ್ ತಂಡದಲ್ಲಿ ಯುವಕರು ಹಾಗೂ ಹಿರಿಯ ಆಟಗಾರರ ಮಿಶ್ರಣವಿದೆ. ಹ್ಯಾರಿ ಕೇನ್, ರಹೀಮ್ ಸ್ಟರ್ಲಿಂಗ್, ಜಮ್ಮಿ ವಾರ್ಡಿ ಹಾಗೂ ಮಾರ್ಕಸ್ ರಶ್‌ಫೋರ್ಡ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ. 19ರ ಹರೆಯದ ಲಿವರ್‌ಪೂಲ್ ಆಟಗಾರ ಟ್ರೆಂಟ್ ಅಲೆಕ್ಸಾಂಡರ್-ಅರ್ನಾಲ್ಡ್ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

 ನಾಲ್ಕು ವರ್ಷಗಳ ಹಿಂದೆ ಬ್ರೆಝಿಲ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ‘ತ್ರಿ ಲಯನ್ಸ್’ ಖ್ಯಾತಿಯ ಇಂಗ್ಲೆಂಡ್ ಗ್ರೂಪ್ ಹಂತ ದಾಟಲು ವಿಫಲವಾಗಿತ್ತು. ಈಗಿನ ತಂಡಕ್ಕೆ ಹಳೆಯ ಕಳಪೆ ದಾಖಲೆ ಮರೆತು ಆಡುವುದು ದೊಡ್ಡ ಸವಾಲಾಗಿದೆ. ಇಂಗ್ಲೆಂಡ್ ತಂಡದಲ್ಲಿ ಗಮನ ಸೆಳೆಯುತ್ತಿರುವ ಮೂವರು ಆಟಗಾರರು

ಹ್ಯಾರಿ ಕೇನ್: ಇಂಗ್ಲೆಂಡ್ ನಾಯಕ ಕೇನ್ ಈ ಋತುವಿನಲ್ಲಿ ಪ್ರೀಮಿಯರ್ ಲೀಗ್‌ನಲ್ಲಿ ಟಾಂಟ್ಟೆನ್‌ಹ್ಯಾಮ್ ಹಾಟ್ಸ್‌ಪುರ್ ತಂಡದ ಪರ ನೀಡಿರುವ ಶ್ರೇಷ್ಠ ಪ್ರದರ್ಶನವನ್ನು ವಿಶ್ವಕಪ್ ವೇದಿಕೆಯಲ್ಲಿ ಪುನರಾವರ್ತಿಸಲು ಎದುರು ನೋಡುತ್ತಿದ್ದಾರೆ. ಒಟ್ಟು 30 ಗೋಲುಗಳನ್ನು ಬಾರಿಸಿರುವ ಕೇನ್ ಲೀಗ್‌ನಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದವರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಒಟ್ಟು 5 ಗೋಲುಗಳನ್ನು ಬಾರಿಸಿ ತಂಡದ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.

ರಹೀಮ್ ಸ್ಟರ್ಲಿಂಗ್: ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ಕ್ಲಬ್‌ನಲ್ಲಿ ಪೆಪ್ ಗಾರ್ಡಿಯೊಲಾ ಮಾರ್ಗದರ್ಶನದಲ್ಲಿ ಓರ್ವ ಪರಿಣಾಮಕಾರಿ ಸ್ಟ್ರೈಕರ್ ಎಂದು ಗುರುತಿಸಲ್ಪಟ್ಟಿರುವ ಸ್ಟರ್ಲಿಂಗ್ ವೇಗವಾಗಿ ಆಡುವ ಮೂಲಕ ಎದುರಾಳಿಗೆ ಸವಾಲಾಗಬಲ್ಲರು.

ಜಮ್ಮಿ ವಾರ್ಡಿ: ಲೈಸೆಸ್ಟರ್ ಪರ 20 ಗೋಲುಗಳನ್ನು ಬಾರಿಸಿರುವ ಜಮ್ಮಿ ವಾರ್ಡಿ ಈ ವರ್ಷ ಪ್ರೀಮಿಯರ್ ಲೀಗ್‌ನಲ್ಲಿ ನಾಲ್ಕನೇ ಗರಿಷ್ಠ ಗೋಲ್ ಸ್ಕೋರರ್ ಎನಿಸಿಕೊಂಡಿದ್ದಾರೆ.ಗೋಲು ಗಳಿಸುವಲ್ಲಿ ಅವರ ವೇಗ ಹಾಗೂ ಸಾಮರ್ಥ್ಯ ತಂಡದ ಅದೃಷ್ಟವನ್ನು ಬದಲಿಸಬಲ್ಲದು. ಇಂಗ್ಲೆಂಡ್ ಸ್ಟರ್ಲಿಂಗ್ ಹಾಗೂ ಕೇನ್ ಬದಲಿಗನಾಗಿ ವಾರ್ಡಿಯನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News