ಮಲಗಿದ್ದ ನಾಯಿಯ ಮೇಲೆಯೇ ರಸ್ತೆ ನಿರ್ಮಾಣಗೈದ ಕಾರ್ಮಿಕರು!

Update: 2018-06-13 07:59 GMT

ಆಗ್ರಾ, ಜೂ.13: ಇಲ್ಲಿನ ಫತೇಹ್ ಬಾದ್ ರಸ್ತೆಯನ್ನು ಮಂಗಳವಾರ ರಾತ್ರಿ ನಿರ್ಮಿಸುವಾಗ ಅಲ್ಲಿದ್ದ ನಾಯಿಯೊಂದರ ದೇಹದ ಮೇಲೆಯೇ ಬಿಸಿ ಡಾಮರನ್ನು ಸುರಿಯಲಾಗಿದೆಯೆಂದು ಆರೋಪಿಸಲಾಗಿದೆ. 

ನಾಯಿ ಜೀವಂತವಾಗಿತ್ತೆಂದು ಸ್ಥಳೀಯ ನಿವಾಸಿಗಳು ಹೇಳುತ್ತಿದ್ದಾರೆ. ಆ ಬಡ ಪ್ರಾಣಿ ನೋವಿನಿಂದ ಚೀರಾಡುತ್ತಿದ್ದರೂ ಅದನ್ನು ನಿರ್ಲಕ್ಷ್ಯಿಸಿ ಕಾರ್ಮಿಕರು ತಮ್ಮ ಕಾರ್ಯ ಮುಂದುವರಿಸಿ ಅದು ಅಡಿಯಲ್ಲಿರುವಂತೆಯೇ ರಸ್ತೆ ನಿರ್ಮಿಸಿದ್ದಾರೆಂಬ ಆರೋಪವಿದೆ. ಇನ್ನೊಂದು ವರದಿಯ ಪ್ರಕಾರ ಆಗ ಕತ್ತಲಾಗಿದ್ದರಿಂದ ರಸ್ತೆಯಲ್ಲಿ ಬಿದ್ದಿದ್ದ ನಾಯಿ ಕಾರ್ಮಿಕರ ಕಣ್ಣಿಗೆ ಬಿದ್ದಿರಲಿಲ್ಲ ಎಂದು ಹೇಳಲಾಗಿದೆ.

ತಾನು ನಾಯಿಯ ಕಾಲುಗಳು ರಸ್ತೆಯ ಅಡಿಯಿಂದ ಇಣುಕುತ್ತಿದ್ದುದನ್ನು ನೋಡಿದೆ ಹಾಗೂ ಅದರ ನರಳಾಟ ಕೇಳಿಸಿತ್ತೆಂದು ಆಗ್ರಾದ ಬಲಪಂಥೀಯ ಸಂಘಟನೆಯ ಕಾರ್ಯಕರ್ತ ಗೋವಿಂದ್ ಪರಾಶರ್ ಹೇಳಿಕೊಂಡಿದ್ದಾರೆ.

‘‘ಕೆಲವೇ ಕ್ಷಣಗಳಲ್ಲಿ ನಾಯಿ ಸಾವಿಗೀಡಾಗಿತ್ತು. ಬಹಳ ದುಃಖವಾಗಿತ್ತು. ಕೊನೆಗೆ ನಾಯಿಯ ಕಳೇಬರವನ್ನು ಅಗೆದು ತೆಗೆದು ಅದನ್ನು ಹೂಳಲಾಯಿತು’’ ಎಂದೂ ಆತ ತಿಳಿಸಿದ್ದಾರೆ.

ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ತಾವು ನಿರ್ಮಾಣ ಕಂಪೆನಿಯ ವಿರುದ್ಧ ದೂರು ನೀಡಿದ್ದಾಗಿ ಪರಾಶರ್ ಹೇಳಿದ್ದಾರೆ. ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ನಿರ್ಮಾಣ ಕಂಪೆನಿಯ ವಾಹನಗಳನ್ನು ತಡೆದರು. ಈ ಘಟನೆಯ ಹಿನ್ನೆಲೆಯಲ್ಲಿ ರಸ್ತೆ ನಿರ್ಮಾಣ ಕಂಪೆನಿ ಆರ್ ಪಿ ಇನ್ಫ್ರಾವೆಂಚರ್ ಪ್ರೈವೇಟ್ ಲಿಮಿಟೆಡ್ ಗೆ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ನರೇಶ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News