ಈ ಐದು ಸಾಮಾನ್ಯ ತೆರಿಗೆ ದಂಡಗಳ ಬಗ್ಗೆ ನಿಮಗೆ ಗೊತ್ತಿರಲಿ

Update: 2018-06-13 13:07 GMT

ಸರಕಾರವು ತಾನು ವಿವಿಧ ಮೂಲಗಳಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ದೇಶದ ಅಭಿವೃದ್ಧಿಗೆ ಬಳಸಿಕೊಳ್ಳುತ್ತದೆ. ಇದರಲ್ಲಿ ಆದಾಯ ತೆರಿಗೆಯೂ ಒಂದಾಗಿದೆ. ತಾವು ಕಷ್ಟ ಪಟ್ಟು ಗಳಿಸಿದ ಸಂಪಾದನೆಯಲ್ಲಿ ಒಂದು ಭಾಗವನ್ನು ಸರಕಾರವು ಕೇಳುವುದು ನ್ಯಾಯವಲ್ಲ ಎಂಬ ಭಾವನೆ ಹೆಚ್ಚಿನ ತೆರಿಗೆದಾತರಲ್ಲಿದೆ. ಎಷ್ಟೋ ಜನರು ತೆರಿಗೆಗೆ ಅರ್ಹ ಆದಾಯವನ್ನು ಹೊಂದಿದ್ದರೂ ಅದನ್ನು ಘೋಷಿಸದೆ ತೆರಿಗೆ ಜಾಲದಿಂದ ಹೊರಗೇ ಉಳಿದಿದ್ದಾರೆ. ಎಷ್ಟೋ ಜನರು ಆದಾಯವನ್ನು ಕಡಿಮೆ ತೋರಿಸಿ ಸರಕಾರಕ್ಕೆ ತೆರಿಗೆಯನ್ನು ವಂಚಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆದಾಯ ತೆರಿಗೆ ಇಲಾಖೆಯ ಕಠಿಣ ಕ್ರಮಗಳಿಂದ ತೆರಿಗೆ ಸಂಗ್ರಹವು ಹೆಚ್ಚುತ್ತಿದೆ. ತೆರಿಗೆ ನಿಯಮಗಳಿಗೆ ಸೊಪ್ಪು ಹಾಕದವರಿಗೆ ವಿಧಿಸಲಾಗುತ್ತಿರುವ ಸಾಮಾನ್ಯ ದಂಡನೆಗಳ ಕುರಿತು ಮಾಹಿತಿಗಳಿಲ್ಲಿವೆ.

►ತೆರಿಗೆ ಪಾವತಿಯಲ್ಲಿ ವಿಳಂಬ

  ತೆರಿಗೆಗೆ ಅರ್ಹವಾಗಿರುವ ಆದಾಯವನ್ನು ಹೊಂದಿರುವ ಪ್ರತಿಯೊಬ್ಬರೂ ತೆರಿಗೆಯನ್ನು ಪಾವತಿಸಲು ಬದ್ಧರಾಗಿರುತ್ತಾರೆ ಮತ್ತು ಈ ತೆರಿಗೆಯನ್ನು ಆದಾಯ ತೆರಿಗೆ ಇಲಾಖೆಯು ನೀಡಿರುವ ಗಡುವಿನೊಳಗೆ ಪಾವತಿಸುವುದು ಕಡ್ಡಾಯವಾಗಿದೆ. ಗಡುವಿನೊಳಗೆ ತೆರಿಗೆಯನ್ನು ಪಾವತಿಸಲು ವಿಫಲಗೊಂಡರೆ ತೆರಿಗೆ ಅಧಿಕಾರಿಗಳು ತಮ್ಮ ವಿವೇಚನೆಯಂತೆ ದಂಡವನ್ನು ವಿಧಿಸಬಹುದು.

►ತೆರಿಗೆ ರಿಟರ್ನ್ ಸಲ್ಲಿಕೆಯಲ್ಲಿ ವಿಳಂಬ

 ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲು ಸಾಮಾನ್ಯವಾಗಿ ಪ್ರತಿ ವರ್ಷದ ಜುಲೈ 31 ಅಂತಿಮ ದಿನವಾಗಿರುತ್ತದೆ. ಇದಕ್ಕೆ ತಪ್ಪಿದರೆ ವ್ಯಕ್ತಿಯು ದಂಡವನ್ನು ತೆರಬೇಕಾಗುತ್ತದೆ. ಅದೇ ವರ್ಷದ ಡಿಸೆಂಬರ್ 31ರೊಳಗೆ ತೆರಿಗೆ ರಿಟರ್ನ್ ಸಲ್ಲಿಸಿದರೆ ದಂಡದ ಮೊತ್ತ 5,000 ರೂ.ಗಳಾಗಿರುತ್ತವೆ. ಈ ವಾಯಿದೆಯನ್ನೂ ತಪ್ಪಿಸಿಕೊಂಡರೆ ದಂಡದ ಪ್ರಮಾಣ 10,000 ರೂ.ಗೇರುತ್ತದೆ. ಅಲ್ಲದೆ ವ್ಯಕ್ತಿ ತನ್ನ ತೆರಿಗೆ ರಿಟರ್ನ್‌ನಲ್ಲಿ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿಗಳನು ಒದಗಿಸಿದರೆ ಜೈಲುಶಿಕ್ಷೆಯನ್ನೂ ಎದುರಿಸಬೇಕಾಗುತ್ತದೆ. ತೆರಿಗೆ ವಂಚನೆಯ ಮೊತ್ತವನ್ನು ಅವಲಂಬಿಸಿ ಕನಿಷ್ಠ ಆರು ತಿಂಗಳುಗಳಿಂದ ಏಳು ವರ್ಷಗಳವರೆಗೆ ಜೈಲುಶಿಕ್ಷೆಯನ್ನು ವಿಧಿಸಬಹುದಾಗಿದೆ.

►ಅಘೋಷಿತ ಮೂಲಗಳಿಂದ ಆದಾಯ

 ವ್ಯಕ್ತಿಯು ತನ್ನ ಎಲ್ಲ ಆದಾಯ ಮೂಲಗಳನ್ನು ಘೋಷಿಸುವದು ಕಾನೂನಿನ ಪ್ರಕಾರ ಕಡ್ಡಾಯವಾಗಿದೆ. ಯಾವುದೇ ಸಮಯದಲ್ಲಿ ವ್ಯಕ್ತಿ ತನ್ನ ಎಲ್ಲ ಆದಾಯ ಮೂಲಗಳನ್ನು ಬಹಿರಂಗಗೊಳಿಸಿಲ್ಲ ಎನ್ನುವುದು ರುಜುವಾತಾದರೆ ತೆರಿಗೆ ಅಧಿಕಾರಿಯು ಪಾವತಿಸಬೇಕಾದ ತೆರಿಗೆಯ ಶೇ.10ರಷ್ಟು ದಂಡವನ್ನು ವಿಧಿಸಬಹುದು. ಇಂತಹ ಪ್ರಕರಣಗಳಲ್ಲಿ ದಂಡದ ಮೊತ್ತ ತುಂಬ ದುಬಾರಿಯಾಗಬಹುದು. ಅಲ್ಲದೆ ವಿವರಗಳನ್ನು ನೀಡಿರದ ಹೂಡಿಕೆಗಳು,ಹಣ ಅಥವಾ ಸ್ಪಷ್ಟವಾಗಿ ವಿವರಿಸಿರದ ಆದಾಯ ಮೂಲಗಳ ಮೇಲೆ ದಂಡವನ್ನು ವಿಧಿಸುವ ಅಧಿಕಾರವೂ ತೆರಿಗೆ ಅಧಿಕಾರಿಗಳಿಗೆ ಇರುತ್ತದೆ.

►ಎರಡು ಲ.ರೂ.ಗಿಂತ ಅಧಿಕ ನಗದು ಸ್ವೀಕೃತಿ

ನೋಟು ನಿಷೇಧದ ಬಳಿಕ ಆದಾಯ ತೆರಿಗೆ ಕಾಯ್ದೆಯಲ್ಲಿ ಹೊಸದಾಗಿ ಸೆಕ್ಷನ್ 269ಎಸ್‌ಟಿ ಅನ್ನು ಸೇರಿಸಲಾಗಿದೆ. ಇದರನ್ವಯ ಯಾವುದೇ ವ್ಯಕ್ತಿಯು ಒಂದೇ ದಿನದಲ್ಲಿ ಅಥವಾ ಒಂದೇ ವಹಿವಾಟಿನಲ್ಲಿ ಅಥವಾ ಯಾವುದೇ ಕಾರ್ಯಕ್ರಮ ಅಥವಾ ಸಂದರ್ಭಗಳಿಂದ ಉದ್ಭವಿಸುವ ವಹಿವಾಟುಗಳಲ್ಲಿ ಥರ್ಡ್ ಪಾರ್ಟಿಯಿಂದ ಎರಡು ಲ.ರೂ.ಗಳಿಗಿಂತ ಹೆಚ್ಚಿನ ನಗದುಹಣವನ್ನು ಸ್ವೀಕರಿಸುವಂತಿಲ್ಲ. ಇದನ್ನು ಉಲ್ಲಂಘಿಸಿದರೆ ತೆರಿಗೆ ಅಧಿಕಾರಿಗಳು ದಂಡ ವಿಧಿಸಬಹುದು ಮತ್ತು ಅದು ಹಾಗೆ ಸ್ವೀಕರಿಸಿದ ನಗದು ಹಣಕ್ಕೆ ಸಮನಾದ ಮೊತ್ತವಾಗಿರಲೂಬಹುದು.

►ಉದ್ದೇಶಪೂರ್ವಕ ತೆರಿಗೆ ವಂಚನೆ

 ವ್ಯಕ್ತಿಯು ತೆರಿಗೆಗೆ ಅರ್ಹ ಆದಾಯವನ್ನು ಹೊಂದಿದ್ದರೂ ಅದನ್ನು ಬಚ್ಚಿಟಿದ್ದರೆ ಆದಾಯ ತೆರಿಗೆಯ ಭಾಷೆಯಲ್ಲಿ ಅದನ್ನು ‘ಅಂಡರ್‌ರಿಪೋರ್ಟಿಂಗ್ ’ಎನ್ನಲಾಗುತ್ತದೆ. ಒಂದಿಲ್ಲೊಂದು ವಿಧದಲ್ಲಿ ಆದಾಯವನ್ನು ತಪ್ಪಾಗಿ ತೋರಿಸಿದ್ದರೆ ಅದನ್ನು ‘ಮಿಸ್‌ರಿಪೋರ್ಟಿಂಗ್’ ಎನ್ನಲಾಗುತ್ತದೆ. ತೆರಿಗೆ ವಂಚಿಸಿರುವುದು ಪತ್ತೆಯಾದರೆ ಆತ/ಆಕೆ ಜೈಲುಶಿಕ್ಷೆಗೆ ಗುರಿಯಾಗಬೇಕಾಗಬಹುದು. ಆದಾಯ ತೆರಿಗೆ ಕಾಯ್ದೆಯ 270ಎ ಕಲಮ್‌ನಡಿ ಅಂಡರ್‌ರಿಪೋರ್ಟಿಂಗ್ ಪ್ರಕರಣದಲ್ಲಿ ವ್ಯಕ್ತಿಗೆ ಪಾವತಿಸಬೇಕಾದ ತೆರಿಗೆಯ ಶೇ.50 ರಷ್ಟು ದಂಡವನ್ನು ವಿಧಿಸಬಹುದಾಗಿದೆ. ಆದಾಯವನ್ನು ತಪ್ಪಾಗಿ ವರದಿಮಾಡಿದ್ದರೆ ಅಂದರೆ ಮಿಸ್‌ರಿಪೋರ್ಟಿಂಗ್ ಪ್ರಕರಣದಲ್ಲಿ ದಂಡದ ಹಣವು ಪಾವತಿಸಬೇಕಾದ ತೆರಿಗೆಯ ಶೇ.200ಕ್ಕೆ ಹೆಚ್ಚಬಹುದು. ಅಲ್ಲದೆ 276ಸಿ ಕಲಮ್‌ನಡಿ ತೆರಿಗೆ ವಂಚನೆಗೆ ಜೈಲುಶಿಕ್ಷೆಯನ್ನೂ ವಿಧಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News