ಕೇರಳ: ಜಲಸಾಕ್ಷರತಾ ಅಭಿಯಾನಕ್ಕೆ ಸರಕಾರದ ನಿರ್ಧಾರ
ತಿರುವನಂತಪುರಂ, ಜೂ.13: ವಿದ್ಯಾರ್ಥಿಗಳ ಸಹಯೋಗದಿಂದ ಜಲಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ‘ಜಲಸಾಕ್ಷರತಾ’ ಎಂಬ ಬೃಹತ್ ಅಭಿಯಾನವೊಂದನ್ನು ಆರಂಭಿಸಲು ಕೇರಳ ಸರಕಾರ ನಿರ್ಧರಿಸಿದೆ.
ಕೇರಳವು ನದಿ, ಹಿನ್ನೀರಕೊಳ್ಳ, ಹೊಳೆ, ಜಲಪಾತ, ಕೆರೆಗಳಿಂದ ಸಮೃದ್ಧ ಜಲಸಂಪನ್ಮೂಲವನ್ನು ಹೊಂದಿದ್ದು ಇವುಗಳ ನೀರನ್ನು ಸಂರಕ್ಷಿಸುವ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಕೇರಳ ರಾಜ್ಯ ಸಾಕ್ಷರತಾ ಮಿಷನ್ ಕೈಗೆತ್ತಿಕೊಂಡಿದೆ. ಇದರನ್ವಯ 10ನೇ ತರಗತಿ ಅಥವಾ ಹೆಚ್ಚಿನ ವಿದ್ಯಾಭ್ಯಾಸ ಹೊಂದಿರುವ 70,000 ವಿದ್ಯಾರ್ಥಿಗಳನ್ನು ಬಳಸಿಕೊಂಡು ರಾಜ್ಯಾದ್ಯಂತ 10 ಲಕ್ಷ ಕುಟುಂಬಗಳಲ್ಲಿ ನೀರಿನ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು.
ಸಾಕ್ಷರತಾ ಮಿಷನ್ ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ರಾಜ್ಯದಲ್ಲಿರುವ ಶೇ.26.90ರಷ್ಟು ಜಲಸಂಪನ್ಮೂಲಗಳು ಸಂಪೂರ್ಣ ಮಲಿನಗೊಂಡಿವೆ ಹಾಗೂ ಶೇ.46.10ರಷ್ಟು ಜಲಸಂಪನ್ಮೂಲ ಭಾಗಶಃ ಮಲಿನಗೊಂಡಿವೆ ಎಂಬ ಅಂಶ ಬೆಳಕಿಗೆ ಬಂದಿದೆ.
1,302 ಕೆರೆಗಳು, 941 ಕಾಲುವೆಗಳು, 153 ನದಿಪಾತ್ರಗಳು, 16 ಹಿನ್ನೀರ ಕೊಳ್ಳಗಳು, 1,107 ಸಾರ್ವಜನಿಕ ಬಾವಿಗಳು ಹಾಗೂ ಇತರ 87 ಜಲಮೂಲಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ.