ಸ್ಪೇನ್ ಕೋಚ್ ಸ್ಥಾನದಿಂದ ಲೊಪೆಟೆಗುಯ್ ಉಚ್ಚಾಟನೆ

Update: 2018-06-13 18:23 GMT

ಕ್ರಾಸ್ನೋಡರ್(ರಶ್ಯ), ಜೂ.13: ವಿಶ್ವಕಪ್‌ನಲ್ಲಿ ಪೋರ್ಚುಗಲ್ ವಿರುದ್ಧ ಆರಂಭಿಕ ಪಂದ್ಯ ಆಡಲು ಕೇವಲ ಎರಡು ದಿನಗಳು ಬಾಕಿ ಇರುವಾಗ ಸ್ಪೇನ್ ಫುಟ್ಬಾಲ್ ತಂಡ ತನ್ನ ಪ್ರಧಾನ ಕೋಚ್ ಜುಲೆನ್ ಲೊಪೆಟೆಗುಯ್ ಅವರನ್ನು ಹುದ್ದೆಯಿಂದ ಉಚ್ಚಾಟನೆ ಮಾಡಿದೆ.

 ಸ್ಪೇನ್ ತಂಡ ಶುಕ್ರವಾರ ಸೋಚಿಯಲ್ಲಿ ಯುರೋಪಿಯನ್ ಚಾಂಪಿಯನ್ ಪೋರ್ಚುಗಲ್ ತಂಡವನ್ನು ಎದುರಿಸುವ ಮೂಲಕ ಈ ವರ್ಷದ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.

ಕೋಚ್ ಜುಲೆನ್‌ರನ್ನು ಉಚ್ಚಾಟನೆ ಮಾಡಲಾಗಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಟೆಕ್ನಿಕಲ್ ಡೈರೆಕ್ಟರ್ ಫೆರ್ನಾಂಡೊ ಹೈರ್ರೊ ಅವರನ್ನು ನೇಮಕ ಮಾಡಲಾಗಿದೆ ಎಂದು ಸ್ಪೇನ್ ಫುಟ್ಬಾಲ್ ಸಂಸ್ಥೆ ಬುಧವಾರ ಘೋಷಿಸಿದೆ.

ಮಂಗಳವಾರ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ ರಿಯಲ್ ಮ್ಯಾಡ್ರಿಡ್ ತಂಡ ಝೈನುದ್ದೀನ್ ಝೈದಾನ್‌ರಿಂದ ತೆರವಾದ ಸ್ಥಾನಕ್ಕೆ ಲೊಪೆಟೆಗುಯ್ ಅವರನ್ನು ಮೂರು ವರ್ಷ ಅವಧಿಗೆ ಕೋಚ್ ಆಗಿ ನೇಮಿಸಿತ್ತು. ರಶ್ಯದಲ್ಲಿ ವಿಶ್ವಕಪ್ ಕೊನೆಗೊಂಡ ಬಳಿಕ ಮ್ಯಾಡ್ರಿಡ್ ತಂಡದ ಕೆಲಸ ಮಾಡಲಿದ್ದಾರೆ ಎಂದು ಹೇಳಿತ್ತು. ಈ ಘೋಷಣೆಯ ಮಾಡಿರುವ ಸನ್ನಿವೇಶದ ಬಗ್ಗೆ ಸ್ಪೇನ್ ಫುಟ್ಬಾಲ್ ಫೆಡರೇಶನ್ ಹಾಗೂ ಸ್ಪೇನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

ಟೂರ್ನಮೆಂಟ್ ಆರಂಭಕ್ಕೆ ದಿನಗಣನೆ ಆರಂಭವಾಗಿರುವಾಗ ತನಗೆ ಮಾಹಿತಿ ನೀಡದೇ ಮ್ಯಾಡ್ರಿಡ್‌ನ್ನು ಸೇರ್ಪಡೆಯಾಗಲು ಬಯಸಿರುವ ಲೊಪೆಟೆಗುಯ್‌ರನ್ನು ಸ್ಪೇನ್ ತಂಡದ ಕೋಚ್ ಹುದ್ದೆಯಿಂದ ಉಚ್ಚಾಟಿಸುತ್ತಿದ್ದೇವೆ ಎಂದು ಹೇಳಲು ನನಗೆ ಬೇಸರವಾಗುತ್ತಿದೆ ಎಂದು ಸ್ಪೇನ್ ಫುಟ್ಬಾಲ್ ಫೆಡರೇಶನ್ ಮುಖ್ಯಸ್ಥ ಲೂಯಿಸ್ ರುಬಿಯಲೆಸ್ ಹೇಳಿದ್ದಾರೆ.

ಲೊಪೆಟೆಗುಯ್ ಅವರ ಒಪ್ಪಂದದ ಅವಧಿಯನ್ನು ಕಳೆದ ತಿಂಗಳು 2020ಕ್ಕೆ ವಿಸ್ತರಿಸಲಾಗಿತ್ತು. ಲೊಪೆಟೆಗುಯ್ ತಾನು ರಿಯಲ್ ಮ್ಯಾಡ್ರಿಡ್‌ಗೆ ಸೇರ್ಪಡೆಯಾಗುವ ವಿಷಯವನ್ನು ತಡವಾಗಿ ತಿಳಿಸಿದ್ದಕ್ಕೆ ಸ್ಪೇನ್ ಫುಟ್ಬಾಲ್ ಫೆಡರೇಶನ್ ಮುಖಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೊಪೆಟೆಗುಯ್ 2016ರ ಜುಲೈನಲ್ಲಿ ಸ್ಪೇನ್ ತಂಡದ ಕೋಚ್ ಆಗಿ ನೇಮಕಗೊಂಡಿದ್ದರು. ಲೊಪೆಟೆಗುಯ್ ಕೋಚಿಂಗ್‌ನಲ್ಲಿ ಸ್ಪೇನ್ ಸೋಲನ್ನೇ ಕಂಡಿರಲಿಲ್ಲ. ವಿಶ್ವಕಪ್‌ಗೆ ಮೊದಲು ಆಡಿರುವ ಎಲ್ಲ 20 ಪಂದ್ಯಗಳಲ್ಲಿ ಸ್ಪೇನ್ 14ರಲ್ಲಿ ಜಯ ದಾಖಲಿಸಿದೆ. ಆರು ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಸ್ಪೇನ್ ತಂಡ ಈ ವರ್ಷದ ವಿಶ್ವಕಪ್ ಟ್ರೋಫಿ ಎತ್ತಿಹಿಡಿಯುವ ಫೇವರಿಟ್ ತಂಡಗಳ ಪೈಕಿ ಒಂದಾಗಿದೆ. ಆದರೆ, ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವಾಗ ಕೋಚ್‌ರನ್ನು ಉಚ್ಚಾಟಿಸಿರುವುದು ಆಟಗಾರರ ಮೇಲೆ ವ್ಯತಿರಿಕ್ತ ಪರಿಣಾಮಬೀರುವ ಸಾಧ್ಯತೆಯಿದೆ. ವಿಶ್ವಕಪ್ ವೇಳೆ ಲೊಪೆಟ್‌ಗುಯ್ ಅವರು ತಂಡದ ಉಸ್ತುವಾರಿ ವಹಿಸಿಕೊಳ್ಳಬೇಕು ಎಂದು ನಾಯಕ ಸರ್ಗಿಯೊ ರಾಮೊಸ್ ಸಹಿತ ಹಿರಿಯ ಆಟಗಾರರು ಒತ್ತಡ ಹೇರುತ್ತಿದ್ದಾರೆ.

ಲೊಪೆಟೆಗುಯ್ ವೃತ್ತಿಜೀವನದಲ್ಲಿ ಮ್ಯಾಡ್ರಿಡ್ ಹಾಗೂ ಬಾರ್ಸಿಲೋನದ ಪರ ಮೀಸಲು ಗೋಲ್‌ಕೀಪರ್ ಆಗಿ ಆಡಿದ್ದರು.

 ಸ್ಪೇನ್ ತಂಡ 2016ರ ಯುರೋ ಕಪ್‌ನಲ್ಲಿ ಅಂತಿಮ-16ರ ಸುತ್ತಿನಲ್ಲಿ ಸೋತ ಬಳಿಕ ಲೊಪೆಟೆಗುಯ್ ಅವರು 8 ವರ್ಷಗಳ ಕಾಲ ಕೋಚ್ ಆಗಿದ್ದ ವಿನ್ಸೆಂಟ್ ಡೆಲ್ ಬಾಸ್ಕ್ಯೊ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News