ಪಾಕಿಸ್ತಾನದ ಪಿಲ್ಲರ್ ಭೋಪಾಲ್‌ನಲ್ಲಿ ಪ್ರತ್ಯಕ್ಷ!

Update: 2018-06-13 18:52 GMT

ಒಂದು ಬಿರುಕು ಬಿಟ್ಟ ಪಿಲ್ಲರ್. ಅದನ್ನು ಇಟ್ಟುಕೊಂಡು ಕಾಂಗ್ರೆಸ್ ಕಡೆಯವರು, ಬಿಜೆಪಿ ಕಡೆಯವರು ಮತ್ತು ಇತರರು ಈ ಎರಡು ವರ್ಷಗಳಲ್ಲಿ ಸಿಕ್ಕಾಪಟ್ಟೆ ಟ್ವೀಟ್ ಮಾಡಿದ್ದಾರೆ. ದೇಶದೊಳಗೇ ಇರದ ಆ ಪಿಲ್ಲರ್ ತೋರಿಸಿ, ಇಲ್ಲಿ ಯಾವುದೋ ಬ್ರಿಡ್ಜ್ ಬಿರುಕು ಬಿಟ್ಟಿದೆ, ಅನಾಹುತ ತಪ್ಪಿಸಿ ಎಂದೆಲ್ಲ ಟ್ವೀಟ್‌ಗಳು ಹರಿದಾಡಿವೆ
ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್‌ರಿಗೂ ಟ್ವಿಟರ್ ವ್ಯಾಮೋಹ ಹೆಚ್ಚು. ಆದರೆ ಅವರು ದುಡುಕಿದ್ದೇ ಹೆಚ್ಚು. ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಈ ಸಲವೂ ಅವರು ಯಡವಟ್ಟು ಮಾಡಿಕೊಂಡು ಹಾಸ್ಯಾಸ್ಪದರಾಗಿದ್ದಾರೆ.
ಮಿಥ್ಯ: ‘‘ಈ ಫೋಟೊದಲ್ಲಿ ಒಂದು ಬಿರುಕು ಬಿಟ್ಟ ಪಿಲ್ಲರ್ ಇದೆ. ಇದು ಭೋಪಾಲ್‌ನ ಸುಭಾಸ್ ನಗರದ ರೈಲ್ವೆ ಗೇಟ್ ಬಳಿ ನಿರ್ಮಾಣ ಆಗುತ್ತಿರುವ ರೈಲ್ವೆ ಮೇಲ್ಸೇತುವೆಯ ಅವಸ್ಥೆ. ಇನ್ನೂ ಪೂರ್ಣಗೊಳ್ಳುವ ಮೊದಲೇ ಬಿರುಕು ಕಾಣಿಸಿಕೊಂಡಿದೆ. ಬಿಜೆಪಿಯ ನಾಯಕರೊಬ್ಬರ ಉಸ್ತುವಾರಿಯಲ್ಲಿ ಈ ಕೆಲಸ ನಡೆಯುತ್ತಿದೆ. ವಾರಣಾಸಿಯಲ್ಲಿ ಸೇತುವೆ ಕುಸಿದು ಅನಾಹುತ ಆಗದಂತೆ ಎಚ್ಚರ ವಹಿಸಿ. ಬಿಜೆಪಿ ನಾಯಕರಿಗೆ ಜನರ ಸುರಕ್ಷತೆ ಬಗ್ಗೆ ಕಾಳಜಿಯೇ ಇಲ್ಲ.’’
- ಇದು ದಿಗ್ವಿಜಯ ಸಿಂಗ್‌ರ ಟ್ವೀಟ್‌ನ ತಾತ್ಪರ್ಯ.

ಸತ್ಯ:  
2016ರಿಂದಲೂ ಈ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಫೇಮಸ್ ಆಗಿದೆ. ಇದೇ ಫೋಟೊಗೆ ಬೇರೆ ಬೇರೆ ಶೀರ್ಷಿಕೆ ಹಾಕಿ ಜನರನ್ನು ದಾರಿ ತಪ್ಪಿಸುತ್ತ ಬರಲಾಗಿದೆ. ಕಳೆದ ಮೇನಲ್ಲಿ ಕೆಲವರು ಇದೇ ಫೋಟೊ ಹಾಕಿ, ಚಂಡಿಗಡ ಸಮೀಪದ ಜಿರಕ್‌ಪುರದಲ್ಲಿರುವ ಹೈವೇ ಮೇಲಿನ ಮೇಲ್ಸೇತುವೆ ಎಂದು ಟ್ವೀಟ್ ಮಾಡಿದ್ದರು. ಕೆಲವರು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿಗೂ ಇದನ್ನು ತಲುಪಿಸಿದ್ದರು. ಅವರೇನೂ ಉತ್ತರಿಸಲಿಲ್ಲ. ‘ಹೈದರಾಬಾದ್ ಮೆಟ್ರೊದ ಮೇಲ್ಸೇತುವೆ’ ಎಂದು ಕಳೆದ ವರ್ಷ ಟ್ವೀಟ್‌ಗಳು ಬಂದಿದ್ದವು. ಆಗ ತೆಲಂಗಾಣ ಸರಕಾರ ಸ್ಪಷ್ಟನೆ ನೀಡಿ, ಸತ್ಯವನ್ನು ಶೋಧಿಸಿ ವಿವರಿಸಿತ್ತು. ಅದು ಪಾಕಿಸ್ತಾನದ ರಾವಲ್‌ಪಿಂಡಿಯಲ್ಲಿನ ಮೇಲ್ಸೇತುವೆಯ ಫೋಟೊ. ಒಂದೆರಡು ವರ್ಷ ಕಾಮಗಾರಿ ನಡೆಸಿ, ನಂತರ ಅದನ್ನು ಅಪೂರ್ಣವಾಗಿ ಹಾಗೇ ಬಿಡಲಾಗಿದೆ..
 ಒಂದೇ ಫೋಟೊ ಇಟ್ಟುಕೊಂಡು, ಬೇರೆ ಬೇರೆ ಕ್ಯಾಪ್ಷನ್‌ಗಳಲ್ಲಿ ಅಲ್ಲಿ ಬಿರುಕು, ಇಲ್ಲಿ ಬಿರುಕು ಎನ್ನುತ್ತ ಸುಳ್ಳು ಟ್ವೀಟ್‌ಗಳನ್ನು ಹಾಕುತ್ತ ಬರಲಾಗಿದೆ. ಕೆಲವರು ಇಂತಹ ಆಧಾರರಹಿತ ಟ್ವೀಟ್‌ಗಳನ್ನು ನಿರ್ಲಕ್ಷಿಸುತ್ತಾರೆ. ಇನ್ನು ಕೆಲವರು ತಾವು ವಿರೋಧಿಸುವ ಪಕ್ಷಗಳನ್ನು ತೆಗಳಲು ಇಂತಹ ಸುಳ್ಳು ಟ್ವೀಟ್‌ಗಳನ್ನು ಹರಿಬಿಡುತ್ತಾರೆ. ಆದರೆ ದಿಗ್ವಿಜಯ ಸಿಂಗ್‌ರಂತಹ ಹಿರಿಯ ನಾಯಕರು ಇಂತಹ ಕೆಲಸ ಮಾಡುವುದು ಸರಿಯೇ?

Writer - -ಪಿ.ಕೆ. ಮಲ್ಲನಗೌಡರ್

contributor

Editor - -ಪಿ.ಕೆ. ಮಲ್ಲನಗೌಡರ್

contributor

Similar News