ಮೋಸ ವ್ಯವಹಾರಗಳ ತನಿಖಾ ಸಂಸ್ಥೆಗೆ ಬೇಕಿರುವಷ್ಟು ಸಿಬ್ಬಂದಿಗಳೇ ಇಲ್ಲ!

Update: 2018-06-13 18:57 GMT

ಕಳೆದ 15 ವರ್ಷಗಳಲ್ಲಿ ಅದರಲ್ಲೂ ವಿಶೇಷವಾಗಿ 2013ರಿಂದಾಚೆಗೆ ಸೀರಿಯಸ್ ಫ್ರಾಡ್ ಇನ್ವೆಸ್ಟಿಗೇಟಿಂಗ್ ಆಫೀಸ್ (ಎಸ್‌ಎಫ್‌ಐಒ- ಗಂಭೀರ ಸ್ವರೂಪದ ಮೋಸ ವ್ಯವಹಾರಗಳ ತನಿಖಾ ಕಾರ್ಯಾಲಯ)ವು ಹಲವಾರು ದೊಡ್ಡ ಮತ್ತು ಕುಖ್ಯಾತ ಪ್ರಕರಣಗಳನ್ನು ತನಿಖೆ ಮಾಡುತ್ತಿದ್ದು ಕಾರ್ಪೊರೇಟ್ ಮೋಸಗಳನ್ನು ತನಿಖೆ ಮಾಡುವ ಭಾರತದ ಪ್ರಮುಖ ತನಿಖಾ ಸಂಸ್ಥೆಯಾಗಿ ಬೆಳೆದಿದೆ. ಹಾಗಿದ್ದ ಮೇಲೆ ಒಂದು ಕಾರ್ಪೊರೇಟ್ ಅವ್ಯವಹಾರಗಳನ್ನು ಬಯಲಿಗೆಳೆಯುವ ಹೊಣೆಗಾರಿಕೆಯನ್ನು ಹೊತ್ತ ಸಂಸ್ಥೆಯು ಸಿಬ್ಬಂದಿ ಕೊರತೆಯಿಂದಾಗಿ ತನಗೆ ವಹಿಸಿರುವ ಹೊಣೆಗಾರಿಕೆಯನ್ನು ಸಂಪೂರ್ಣವಾಗಿ ನಿಭಾಯಿಸಲಾಗದಂತಹ ಪರಿಸ್ಥಿತಿಗೆ ಏಕೆ ದೂಡಲ್ಪಟ್ಟಿದೆ?

ಸರಕಾರಿ ಕಾರ್ಯಾಲಯಗಳಲ್ಲಿ ಸಿಬ್ಬಂದಿ ಕೊರತೆ ಇರುವುದು ಹೊಸದೇನಲ್ಲ. ಆದರೆ 2013ರ ಕಂಪೆನಿ ಕಾಯ್ದೆಯ ಪ್ರಕಾರ ಈ ತನಿಖಾ ಸಂಸ್ಥೆಗೆ ಶಾಸನಾತ್ಮಕ ಅಧಿಕಾರವನ್ನು ನೀಡಿದ ಮೇಲೆ ಅದರ ಹೊಣೆಗಾರಿಕೆಯು ಹೆಚ್ಚಿದೆ. ಸಂಸತ್ತಿನಲ್ಲಿ ನಡೆದ ಪ್ರಶ್ನೋತ್ತರಗಳಲ್ಲಿ ಒದಗಿಸಲಾದ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ನೋಡುವುದಾದರೆ 2014ರ ಎಪ್ರಿಲ್ ಮತ್ತು 2018ರ ಜನವರಿಯ ನಡುವೆ ಈ ಎಸ್‌ಎಫ್‌ಐಒ ಸಂಸ್ಥೆಗೆ 447 ಕಂಪೆನಿಗಳ ವ್ಯವಹಾರಗಳನ್ನು ತನಿಖೆ ಮಾಡಲು ವಹಿಸಲಾಗಿದೆ. ಈ ಸಂಸ್ಥೆಯು 2003ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಅಂದಿನಿಂದ ಇಂದಿನವರೆಗೆ ಈ ಸಂಸ್ಥೆಗೆ ಒಟ್ಟಾರೆಯಾಗಿ 667 ಪ್ರಕರಣಗಳ ತನಿಖೆಯನ್ನು ವಹಿಸಲಾಗಿದೆ. ಅಂದರೆ ಈ ಸಂಸ್ಥೆಯು ಅಸ್ತಿತ್ವಕ್ಕೆ ಬಂದಮೇಲೆ ವಹಿಸಲಾಗಿರುವ ಪ್ರಕರಣಗಳಲ್ಲಿ ಶೇ.67ರಷ್ಟು ಪ್ರಕರಣಗಳನ್ನು 2014ರಿಂದಾಚೆಗೆ ವಹಿಸಲಾಗಿದೆ ಎಂದಾಯ್ತು. ಆದರೆ ಈ ಸಂಸ್ಥೆಗೆ ಮಂಜೂರು ಮಾಡಿರುವ ಸಿಬ್ಬಂದಿಯ ಸಂಖ್ಯೆ ಮಾತ್ರ 2003ರಿಂದ 133 ಕ್ಕಿಂತ ಹೆಚ್ಚಿಗೆಯಾಗಿಲ್ಲ.

ಅಷ್ಟು ಮಾತ್ರವಲ್ಲ 2014-15ರಿಂದಾಚೆಗೆ ಅದರಲ್ಲಿ 69 ಹುದ್ದೆಗಳು ಖಾಲಿ ಬಿದ್ದಿವೆ. ಎಸ್‌ಎಫ್‌ಐಒ ಕಾರ್ಯಾಲಯವು ಕಾರ್ಪೊರೇಟ್ ವ್ಯವಹಾರಗಳ ಇಲಾಖೆಯಡಿ ಬರುತ್ತದೆ ಮತ್ತು ಅದೊಂದು ಬಹು ಇಲಾಖಾ ಸಂಸ್ಥೆಯಾಗಿದ್ದು ಕಾರ್ಪೊರೇಟ್ ಅಪರಾಧಗಳನ್ನು ತನಿಖೆ ಮಾಡುವುದಲ್ಲದೆ ಅದರ ವಿರುದ್ಧ ಹೂಡುವ ಮೊಕದ್ದಮೆಗಳಿಗೆ ಮಾರ್ಗದರ್ಶನವನ್ನೂ ಮಾಡುತ್ತದೆ. ಆದ್ದರಿಂದ ಈ ಕಾರ್ಯಾಲಯದ ಕೆಲಸಗಳಿಗೆ ಫೊರೆನ್ಸಿಕ್ ಲೆಕ್ಕಪತ್ರ ತನಿಖೆ, ಕಾರ್ಪೊರೇಟ್ ಕಾನೂನು, ಮಾಹಿತಿ ತಂತ್ರಜ್ಞಾನ, ಶೇರುಮಾರುಕಟ್ಟೆ ಜ್ಞಾನ, ತೆರಿಗೆ ವ್ಯವಹಾರಗಳು ಹಾಗೂ ಇನ್ನಿತರ ಕ್ಷೇತ್ರಗಳ ಪರಿಣಿತಿಯ ಅಗತ್ಯವಿರುತ್ತದೆ. ಕಾರ್ಪೊರೇಟ್ ಹಣಕಾಸು ಲೆಕ್ಕಾಚಾರ ಮತ್ತು ನಿರ್ವಹಣೆಯ ಕುರಿತು ನರೇಶ್ ಚಂದ್ರ ಸಮಿತಿಯು ಕೊಟ್ಟ ವರದಿಯನ್ನು ಆಧರಿಸಿ 2003ರ ಜೂನ್ 2ರಂದು ಅಂದಿನ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರವು ಈ ಕಾರ್ಯಾಲಯವನ್ನು ಸ್ಥಾಪಿಸಿತ್ತು. ಆದರೆ ಅದಕ್ಕೆ ಕಂಪೆನಿ ಕಾಯ್ದೆಗಳ ಪ್ರಕಾರ ಶಾಸನಾತ್ಮಕ ಅಧಿಕಾರ ದೊರೆತದ್ದು 2013ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದಡಿಯಲ್ಲಿ.

ಆರೋಪಿತರನ್ನು ಬಂಧಿಸುವ ಅಧಿಕಾರವನ್ನು ನೀಡುವ ನಿಯಮಾವಳಿಗಳು ರೂಪುಗೊಂಡಿದ್ದು ಮಾತ್ರ 2017ರ ಆಗಸ್ಟ್‌ನಲ್ಲಿ. ಹೀಗಾಗಿ ಇದು ಅಸ್ತಿತ್ವಕ್ಕೆ ಬಂದಾಗಿನಿಂದಲೂ ಇದನ್ನು ಒಂದು ವಿಶೇಷ ಪರಿಣಿತಿ ಹೊಂದಿರುವ ವಿಶೇಷ ಕಾರ್ಯಾಲಯವೆಂದೇ ಭಾವಿಸಲಾಗಿತ್ತು. ಹೀಗಾಗಿ ಇದಕ್ಕೆ ವಿವಿಧ ಕ್ಷೇತ್ರಗಳ ಪರಿಣಿತಿಯ ಅಗತ್ಯವಿದ್ದು ಇತರ ಇಲಾಖೆಗಳ ಪರಿಣಿತರನ್ನು ಎರವಲು ಕೊಡುವುದರ ಮೂಲಕ ಅದಕ್ಕೆ ಬೇಕಿರುವ ಸಿಬ್ಬಂದಿಯನ್ನು ಒದಗಿಸಲಾಗುವುದೆಂದೇ ಪರಿಗಣಿಸಲಾಗಿತ್ತು. ಹಾಗೆಯೇ ವಿಶೇಷ ಪರಿಣಿತರನ್ನು ಸಮಾಲೋಚಕರನ್ನಾಗಿ ನಿಯೋಜಿಸಿಕೊಳ್ಳುವುದು ಸಹ ಅದರ ಕಾರ್ಯನಿರ್ವಹಣೆಯ ಭಾಗವೇ ಆಗಿತ್ತು. ಹಣಕಾಸು ಅವ್ಯವಹಾರಗಳ ಮತ್ತು ಸಾರ್ವಜನಿಕ ಹಿತಾಸಕ್ತಿಗಳಿಗೆ ಆಗುವ ಧಕ್ಕೆಯ ಪ್ರಮಾಣವನ್ನು ಆಧರಿಸಿ ಈ ಎಸ್‌ಎಫ್‌ಐಒಗೆ ಪ್ರಕರಣಗಳನ್ನು ವಹಿಸಲಾಗುತ್ತದೆ. ತೀರಾ ಇತ್ತೀಚೆಗೆ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಮಾಡಿರುವ ಮೋಸದ ಪ್ರಕರಣದ ತನಿಖೆಯನ್ನು ಇದೇ ಸಂಸ್ಥೆಗೆ ವಹಿಸಲಾಗಿದೆ. ಕಳೆದ 15 ವರ್ಷಗಳಲ್ಲಿ 2ಜಿ ಹಗರಣ, ಕಿಂಗ್ ಫಿಷರ್ ಏರ್‌ಲೈನ್ಸ್ ಪ್ರಕರಣ, ಶಾರದಾ ಚಿಟ್ ಫಂಡ್ ಹಗರಣ, ಸತ್ಯಂ ಕಂಪ್ಯೂಟರ್ ಹಗರಣಗಳಂಥ ಹಲವಾರು ಕುಖ್ಯಾತ ಪ್ರಕರಣಗಳನ್ನು ಈ ಸಂಸ್ಥೆಯು ತನಿಖೆ ಮಾಡಿದೆ. ಈ ಎಲ್ಲಾ ಪ್ರಕರಣಗಳಲ್ಲೂ ಲೆಕ್ಕಪತ್ರ ತನಿಖೆ ನಿರ್ವಹಿಸುವ ಆಡಿಟರ್ ಗಳು ಸಕ್ರಿಯವಾಗಿ ಈ ಮೋಸ ವ್ಯವಹಾರಗಳಲ್ಲಿ ಕೈಗೂಡಿಸಿದ್ದಾರೆ ಅಥವಾ ತಪ್ಪುದಾರಿಗೆಳೆದಿದ್ದಾರೆ.

ಎಸ್‌ಎಫ್‌ಐಒದ 2015ರ ವಾರ್ಷಿಕ ವರದಿಯಲ್ಲಿ ಸ್ಪಷ್ಟಪಡಿಸಿರುವಂತೆ ಭಾರತದ ಪ್ರಥಮ ನೂರು ಕಂಪೆನಿಗಳ ಪಟ್ಟಿಯಲ್ಲಿರುವ ದೊಡ್ಡ ಕಂಪೆನಿಗಳನ್ನೂ ಒಳಗೊಂಡಂತೆ ಭಾರತದ 500 ದೊಡ್ಡ ಕಂಪೆನಿಗಳು ತಮ್ಮ ಎಲ್ಲಾ ವ್ಯವಹಾರಗಳು ಲೆಕ್ಕಾಚಾರಕ್ಕೆ ಒಳಪಡದ ರೀತಿಯಲ್ಲಿ ಲೆಕ್ಕಪತ್ರವನ್ನು ಇಟ್ಟುಕೊಂಡಿರುತ್ತಾರೆ. ಕೆಲವು ಪ್ರಕರಣಗಳಲ್ಲಂತೂ ಅಕ್ರಮಗಳಲ್ಲಿ ತೊಡಗಿರುವ ಆಡಿಟರ್‌ಗಳ ಬಗ್ಗೆ ತನಿಖೆ ಮಾಡಬೇಕೆಂದೂ ಎಸ್‌ಅಫ್‌ಐಒ ‘ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್’ ಸಂಸ್ಥೆಗೆ ಶಿಫಾರಸು ಮಾಡಿದೆ. ಇದು ನಮ್ಮನ್ನು ಚಕಿತಗೊಳಿಸಬೇಕಿಲ್ಲ: ಕಾರ್ಪೊರೇಟ್ ಸಂಸ್ಥೆಗಳು ಮತ್ತು ಅಕ್ರಮಿ ಆಡಿಟರ್‌ಗಳು ಕೈಗೂಡಿಸಿದ್ದರಿಂದಲೇ ಅಮೆರಿಕದ ಮತ್ತು ಜಗತ್ತಿನ ಹಣಕಾಸು ಕ್ಷೇತ್ರವು ಉಬ್ಬರಗೊಳ್ಳುತ್ತಾ ಹೋಗಿ 2007-08ರ ಜಾಗತಿಕ ಹಣಕಾಸು ಬಿಕ್ಕಟ್ಟಿಗೆ ಕಾರಣವಾಗಿ ದಿಢೀರ್ ಕುಸಿಯತೊಡಗಿದವು. ಆಗಲೇ ದೊಡ್ಡ ದೊಡ್ಡ ಕಂಪೆನಿಗಳ ಹಣಕಾಸು ಸ್ಥಿತಿಗತಿಗಳ ಬಗ್ಗೆ ಆಡಿಟರ್‌ಗಳು ಕೊಟ್ಟ ವರದಿಗಳು ಅಷ್ಟು ಅರ್ಥಹೀನವಾಗಿದ್ದವು ಎಂದು ಬಯಲಾಗತೊಡಗಿತು.

ಎಸ್‌ಎಫ್‌ಐಒ ಒಂದು ಸ್ವತಂತ್ರ ತನಿಖಾ ಸಂಸ್ಥೆಯಾಗಿದ್ದುಕೊಂಡು ಸಮರ್ಥವಾಗಿ ಕಾರ್ಯನಿರ್ವಹಿಸುವ ಮೂಲಕ ಕಾರ್ಪೊರೇಟ್ ದುರಾಸಕ್ತಿಗಳನ್ನು ಮತ್ತು ಅವರ ಅಕ್ರಮಗಳೊಂದಿಗೆ ಕೈಗೂಡಿಸುವ ಆಡಿಟರ್‌ಗಳನ್ನು ಹದ್ದುಬಸ್ತಿನಲ್ಲಿಡಬಹುದು. ಆ ಮೂಲಕ ನೆಲದ ಕಾನೂನುಗಳನ್ನು ಎತ್ತಿಹಿಡಿಯಬಹುದಲ್ಲದೆ, ಸಣ್ಣಪುಟ್ಟ ಹೂಡಿಕೆದಾರರ ಮತ್ತು ಒಟ್ಟಾರೆಯಾಗಿ ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡುವುದಕ್ಕೂ ಒಂದು ದಾರಿ ಸಿಕ್ಕಂತಾಗುತ್ತದೆ. ಇದನ್ನು ಸಮರ್ಥವಾಗಿ ಮಾಡಬೇಕೆಂದರೆ ಅಂಥ ತನಿಖೆಗಳನ್ನು ಪರಿಣಾಮಕಾರಿಯಾಗಿ ಮಾಡಬಲ್ಲ ಪರಿಣಿತರು ಬೇಕಾಗುತ್ತದೆ. ಅಗತ್ಯವಿರುವ ಪರಿಣಿತಿ ಮತ್ತು ಕೌಶಲ್ಯವಿರುವಂಥ ಸಿಬ್ಬಂದಿಗಳು ದೊರಕುತ್ತಿಲ್ಲವಾದ್ದರಿಂದಲೇ ಈ ಸಂಸ್ಥೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆಯೆಂಬ ಕಾರಣವನ್ನು ನೀಡಲಾಗುತ್ತಿದೆ. ಎಸ್‌ಎಫ್‌ಐಒಗೆ ವಹಿಸುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಅದಕ್ಕೆ ಎರವಲು ಸಿಬ್ಬಂದಿಗಳು ಮಾತ್ರ ಸಾಲುವುದಿಲ್ಲ.

ಬದಲಿಗೆ ಅಗತ್ಯ ಕೌಶಲ್ಯವಿರುವ ವಿಶೇಷ ಪರಿಣಿತಿ ಹೊಂದಿರುವ ಪೂರ್ಣಾವಧಿ ಸಿಬ್ಬಂದಿಯ ಅಗತ್ಯ ಬೀಳುತ್ತದೆ. ಈ ಕೊರತೆಯನ್ನು ಖಾಸಗಿ ವಲಯದಿಂದ ಭರ್ತಿ ಮಾಡಿಕೊಳ್ಳುವುದರಲ್ಲಿ ಅದರದ್ದೇ ಆದ ಸಮಸ್ಯೆಗಳಿರುತ್ತವೆ. (ಖಾಸಗಿ ಕ್ಷೇತ್ರವು ಇಂಥಾ ಪರಿಣಿತರಿಗೆ ಐಷಾರಾಮಿ ವೇತನವನ್ನು ಕೊಡುತ್ತವೆ. ಹೀಗಾಗಿ ಅವರನ್ನು ನೇಮಕ ಮಾಡಿಕೊಂಡರೆ ವೇತನ ತಾರತಮ್ಯದ ಸಮಸ್ಯೆ ಉದ್ಭವಿಸುತ್ತದೆ. ಹಾಗೆಯೇ ಹಿತಾಸಕ್ತಿಗಳ ಸಂಘರ್ಷ ಮತ್ತು ಖಾಸಗಿ ಮಾಲಕರ ಬಗ್ಗೆ ನಿಷ್ಠೆಯ ಮುಂದುವರಿಕೆಯಂಥ ಹಲವಾರು ಸಮಸ್ಯೆಗಳು ತಲೆದೋರಬಹುದು.)

ಎಸ್‌ಎಫ್‌ಐಒ ಎರವಲು ಆಧರಿತ ಸಿಬ್ಬಂದಿ ಪದ್ಧತಿಯಿಂದ ಹೊರಬಂದು ತನ್ನದೇ ಆದ ಪೂರ್ಣಾವಧಿ ಸಿಬ್ಬಂದಿ ಮತ್ತು ಕೆಡರ್‌ಗಳನ್ನು ಹೊಂದುವ ಅಗತ್ಯವನ್ನು ತುಂಬಾ ಹಿಂದೆಯೇ ಗುರುತಿಸಲಾಗಿದ್ದರೂ ಜಾರಿಗೆ ಬಂದಿಲ್ಲ. ವೀರಪ್ಪ ಮೊಯ್ಲಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಹಣಕಾಸು ಇಲಾಖೆಯ ಬಗೆಗಿನ ಶಾಶ್ವತ ಸಮಿತಿಯು ತನ್ನ ವರದಿಯಲ್ಲಿ (2017ರ ಡಿಸೆಂಬರ್‌ನಲ್ಲಿ ನೀಡಲಾದ 33ನೇ ವರದಿ; 2018ರಲ್ಲಿ ನೀಡಲಾದ 59ನೇ ವರದಿ): ‘‘ಸಿಬ್ಬಂದಿಯ ನೇಮಕಾತಿಯ ನಿಯಮಾವಳಿಗಳನ್ನು ರೂಪಿಸಿದ್ದರೂ ಸಹ ಈ ಸಂಸ್ಥೆಯಲ್ಲಿ ದೊಡ್ಡ ಸಂಖ್ಯೆಯ ಹುದ್ದೆಗಳು ಖಾಲಿಯಾಗಿಯೇ ಉಳಿದಿವೆ. ಇದು ಪ್ರಕರಣದ ತನಿಖೆಯ ಮೇಲೆ ತೀವ್ರವಾದ ಪ್ರಭಾವನ್ನು ಬೀರುತ್ತಿದೆ’’ ಎಂದು ಆಕ್ಷೇಪಿಸಿದೆ. ಈ ಸಂಸ್ಥೆಗೆಂದೇ ಶಾಶ್ವತ ಸಿಬ್ಬಂದಿಗಳ ನೇಮಕಾತಿ ಪದ್ಧತಿಯನ್ನು ರೂಪಿಸಿದಾಗ ಮಾತ್ರ ಖಾಲಿ ಇರುವ ಹುದ್ದೆಗಳೂ ಸಹ ಭರ್ತಿಯಾಗುವಂತೆ ನೋಡಿಕೊಳ್ಳಬಹುದು.
 
ಒಂದು ಶಾಶ್ವತ ಸಿಬ್ಬಂದಿ ನೇಮಕಾತಿ ಪದ್ಧತಿಯನ್ನು ಜಾರಿಗೆ ತರುವ ಮೂಲಕ ಎಸ್‌ಎಫ್‌ಐಒ ಸಂಸ್ಥೆ ಎದುರಿಸುತ್ತಿರುವ ಸಮಸ್ಯೆಗಳನ್ನೂ ಬಗೆಹರಿಸಬಹುದು. ಆದರೆ ಈ ಬಗೆಯ ಇನ್ನೂ ಹಲವಾರು ಸಂಸ್ಥೆಗಳಲ್ಲೂ ಸಹ ಸಿಬ್ಬಂದಿ ಕೊರತೆ ಇದೆ. ಉದಾಹರಣೆಗೆ ಸಿಬಿಐ ಸಂಸ್ಥೆಯು ವಿವಿಧ ಪರಿಣಿತಿಗಳನ್ನುಳ್ಳ ಹಳೆಯ ಸಂಸ್ಥೆಯಾಗಿದ್ದರೂ ಅಗತ್ಯವಿರುವಷ್ಟು ತರಬೇತಿ ಹೊಂದಿರುವ ಸಿಬ್ಬಂದಿಗಳಿಲ್ಲ. ಸಿಬಿಐಗೆ 7,274 ಹುದ್ದೆಗಳನ್ನು ಮಂಜೂರು ಮಾಡಲಾಗಿದ್ದರೂ 2017ರ ಮಾರ್ಚ್ ವೇಳೆಗೆ ಶೇ.20ರಷ್ಟು ಹುದ್ದೆಗಳು ಖಾಲಿ ಬಿದ್ದಿದ್ದವು. ಸಿಬ್ಬಂದಿ ಮಂಜೂರು ಆಗದಿರುವುದಕ್ಕೆ ಇರುವ ಹಲವಾರು ಕಾರಣಗಳಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯೂ ಒಂದಾಗಿದೆ. ಹಣಕಾಸು ದುರ್ವ್ಯವಹಾರ ಮತ್ತು ಭ್ರಷ್ಟಾಚಾರಗಳನ್ನು ಗಂಭೀರವಾಗಿ ತೆಗೆದುಕೊಂಡು ಹತ್ತಿಕ್ಕುತ್ತೇವೆ ಎಂದು ಕೊಚ್ಚಿಕೊಳ್ಳುತ್ತಿರುವ ಸರಕಾರ ಎಸ್‌ಎಫ್‌ಐಒ ಮತ್ತು ಸಿಬಿಐನಂಥಾ ತನಿಖಾ ಸಂಸ್ಥೆಗಳು ಸಮರ್ಥವಾಗಿ ಕಾರ್ಯನಿರ್ವಹಿಸಲು ಬೇಕಾದಷ್ಟು ಸಿಬ್ಬಂದಿಯನ್ನು ಒದಗಿಸಲು ಮಾತ್ರ ಮಾಡಬೇಕಾದದ್ದನ್ನು ಮಾಡುತ್ತಿಲ್ಲ.

Writer - ಕೃಪೆ: Economic and Political Weekly

contributor

Editor - ಕೃಪೆ: Economic and Political Weekly

contributor

Similar News