ಸ್ಕಾಟ್ಲೆಂಡ್ ವಿರುದ್ಧ ಟ್ವೆಂಟಿ-20 ಸರಣಿ ಜಯಿಸಿದ ಪಾಕಿಸ್ತಾನ

Update: 2018-06-14 06:28 GMT

ಡಬ್ಲಿನ್,ಜೂ.14: ಆಲ್‌ರೌಂಡರ್ ಶುಐಬ್ ಮಲಿಕ್ ಅವರ ಬಿರುಸಿನ ಬ್ಯಾಟಿಂಗ್(ಔಟಾಗದೆ 49 ರನ್,22 ಎಸೆತ, 5 ಸಿಕ್ಸರ್,1 ಬೌಂಡರಿ) ನೆರವಿನಿಂದ ಪಾಕಿಸ್ತಾನ ತಂಡ ಬುಧವಾರ ಸ್ಕಾಟ್ಲೆಂಡ್ ವಿರುದ್ಧದ ಎರಡನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನು 84 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ಈ ಗೆಲುವಿನೊಂದಿಗೆ ಪಾಕ್ ತಂಡ 2 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡು ಕ್ಲೀನ್‌ಸ್ವೀಪ್ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 166 ರನ್ ಗಳಿಸಿತ್ತು. ಗೆಲ್ಲಲು ಕಠಿಣ ಸವಾಲು ಪಡೆದಿದ್ದ ಸ್ಕಾಟ್ಲೆಂಡ್ ಕೇವಲ 15 ಓವರ್‌ಗಳಲ್ಲಿ 82 ರನ್‌ಗೆ ಆಲೌಟಾಯಿತು. ಫಹೀಮ್ ಅಶ್ರಫ್ ಮೂರು ವಿಕೆಟ್ ಹಾಗೂ ಉಸ್ಮಾನ್ ಖಾನ್ 2 ವಿಕೆಟ್ ಪಡೆದು ಸ್ಕಾಟ್ಲೆಂಡ್‌ನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದರು.

ಮೊದಲ ವಿಕೆಟ್‌ಗೆ 60 ರನ್ ಸೇರಿಸಿದ ಫಖರ್ ಝಮಾನ್(33) ಹಾಗೂ ಅಹ್ಮದ್ ಶೆಹಝಾದ್(24) ಪಾಕ್‌ಗೆ ಉತ್ತಮ ಆರಂಭ ನೀಡಿದ್ದರು. ಆಗ ತಿರುಗೇಟು ನೀಡಿದ ಸ್ಕಾಟ್ಲೆಂಡ್ ತಂಡ ಪಾಕ್ ತಂಡ 98 ರನ್ ಗಳಿಸುವಷ್ಟರಲ್ಲಿ 5 ವಿಕೆಟ್‌ನ್ನು ಕಬಳಿಸಿತು. ಇನಿಂಗ್ಸ್ ಕೊನೆಯಲ್ಲಿ ಅಬ್ಬರಿಸಿದ ಮಲಿಕ್ ಪಾಕಿಸ್ತಾನ 6 ವಿಕೆಟ್‌ಗೆ 166 ರನ್ ಗಳಿಸಲು ನೆರವಾದರು.

ರವಿವಾರ ವಿಶ್ವದ ನಂ.1 ಏಕದಿನ ತಂಡ ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿ ಐತಿಹಾಸಿಕ ಸಾಧನೆ ಮಾಡಿದ್ದ ಸ್ಕಾಟ್ಲೆಂಡ್ ತಂಡ ವಿಶ್ವದ ನಂ.1 ಟ್ವೆಂಟಿ-20 ತಂಡ ಪಾಕ್ ವಿರುದ್ಧ ಮತ್ತೊಂದು ಮಹತ್ವದ ಗೆಲುವು ಸಾಧಿಸಲು ವಿಫಲವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News