ನಿಮ್ಮ ರಕ್ತದಲ್ಲಿಯ ಹಿಮೊಗ್ಲೋಬಿನ್ ಪ್ರಮಾಣವನ್ನು ಹೀಗೆ ಹೆಚ್ಚಿಸಿಕೊಳ್ಳಿ

Update: 2018-06-14 11:46 GMT

ನೀವು ನಿಶ್ಶಕ್ತಿ, ಬಳಲಿಕೆ,ತಲೆನೋವು,ಉಸಿರಾಟದ ತೊಂದರೆ, ತಲೆ ಸುತ್ತುವಿಕೆ,ಕುಂದಿದ ಹಸಿವು ಮತ್ತು ತೀವ್ರ ಎದೆಬಡಿತ ಇವುಗಳನ್ನು ಅನುಭವಿಸುತ್ತಿದ್ದರೆ ಅದಕ್ಕೆ ನಿಮ್ಮ ರಕ್ತದಲ್ಲಿ ಹಿಮೊಗ್ಲೋಬಿನ್ ಮಟ್ಟ ಕಡಿಮೆಯಾಗಿರುವುದು ಕಾರಣವಾಗಿರಬಹುದು.

ಹಿಮೊಗ್ಲೋಬಿನ್ ಕೊರತೆಯಿಂದ ಉಂಟಾಗುವ ವ್ಯತಿರಿಕ್ತ ಪರಿಣಾಮಗಳನ್ನು ನಿವಾರಿಸಲು ಸೂಕ್ತ ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗುತ್ತದೆ. ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ರಕ್ತದಲ್ಲಿಯ ಹಿಮೊಗ್ಲೋಬಿನ್ ಮಟ್ಟವನ್ನು ಕಾಯ್ದುಕೊಳ್ಳಬಹುದು.

ಇದಕ್ಕಾಗಿ ಅನುಸರಿಸಬಹುದಾದ ಕೆಲವು ಸರಳ ಕ್ರಮಗಳು ಇಲ್ಲಿವೆ...

ಸಮೃದ್ಧ ಕಬ್ಬಿಣಾಂಶದ ಆಹಾರ ಸೇವನೆ

ಹಿಮೊಗ್ಲೋಬಿನ್ ಮಟ್ಟವು ತಗ್ಗುವುದಕ್ಕೆ ಕಬ್ಬಿಣದ ಕೊರತೆಯು ಅತ್ಯಂತ ಸಾಮಾನ್ಯ ಕಾರಣವಾಗಿದೆ. ಹಸಿರು ಎಲೆಗಳ ತರಕಾರಿಗಳು, ಬೀಟ್ರೂಟ್, ಶತಾವರಿ, ಇಡೀ ಮೊಟ್ಟೆ, ಚಿಕನ್ ಲಿವರ್,ಎಪ್ರಿಕಾಟ್, ಕಲ್ಲಂಗಡಿ, ಒಣದ್ರಾಕ್ಷಿ, ಕುಂಬಳಕಾಯಿ ಬೀಜಗಳು,ಖರ್ಜೂರ,ನೆಲ್ಲಿ ಮತ್ತು ಬೆಲ್ಲ ಇತ್ಯಾದಿಗಳು ಸಮೃದ್ಧ ಕಬ್ಬಿಣವನ್ನು ಒಳಗೊಂಡಿವೆ.

ವಿಟಾಮಿನ್ ಸಿ ಸೇವನೆಯನ್ನು ಹೆಚ್ಚಿಸಿ

ವಿಟಾಮಿನ್ ಸಿ ನಮ್ಮ ಶರೀರವು ಕಬ್ಬಿಣವನ್ನು ಹೀರಿಕೊಳ್ಳಲು ನೆರವಾಗುತ್ತದೆ. ಹೀಗಾಗಿ ಕಬ್ಬಿಣದ ಅಂಶವಿರುವ ಆಹಾರಗಳ ಜೊತೆಗೆ ಮತ್ತು ವಿಟಾಮಿನ್ ಸಿ ಒಳಗೊಂಡಿರುವ ಆಹಾರವನ್ನೂ ಸೇವಿಸುವುದು ಅಗತ್ಯವಾಗುತ್ತದೆ. ಕಿತ್ತಳೆ, ಲಿಂಬೆ, ಸ್ಟ್ರಾಬೆರ್ರಿ ,ಪಪ್ಪಾಯ, ದೊಣ್ಣೆಮೆಣಸು,ಬ್ರಾಕೊಲಿ,ದ್ರಾಕ್ಷಿ ಹಣ್ಣು ಮತ್ತು ಟೊಮೆಟೊ ಇತ್ಯಾದಿಗಳು ವಿಟಾಮಿನ್ ಸಿ ಅನ್ನು ಒಳಗೊಂಡಿವೆ.

ಹೆಚ್ಚಿನ ಫಾಲಿಕ್ ಆ್ಯಸಿಡ್ ಸೇವನೆ

ಬಿ ಕಾಂಪ್ಲೆಕ್ಸ್ ವಿಟಾಮಿನ್ ಆಗಿರುವ ಫಾಲಿಕ್ ಆ್ಯಸಿಡ್ ಕೆಂಪು ರಕ್ತಕಣಗಳನ್ನು ಹೆಚ್ಚಿಸಲು ಅಗತ್ಯವಾಗಿದೆ. ಹಸಿರು ಎಲೆಗಳ ತರಕಾರಿಗಳು,ಒಣಗಿದ ಅವರೆ, ನೆಲಗಡಲೆ, ಬಾಳೆಹಣ್ಣು,ಬ್ರಾಕೊಲಿ,ಚಿಕನ್‌ಲಿವರ್,ಮೊಳಕೆ ಬರಿಸಿದ ಕಾಳುಗಳು,ಗೋದಿಯ ಮೊಳಕೆ ಇತ್ಯಾದಿಗಳು ಫಾಲಿಕ್ ಆ್ಯಸಿಡ್‌ನ ಉತ್ತಮ ಮೂಲಗಳಾಗಿವೆ. ಬೀಟ್ರೂಟ್ ಕೂಡ ಅಧಿಕ ಫಾಲಿಕ್ ಆ್ಯಸಿಡ್,ಕಬ್ಬಿಣ,ಪೊಟ್ಯಾಷಿಯಂ ಮತ್ತು ನಾರನ್ನು ಒಳಗೊಂಡಿದೆ.

ಕಬ್ಬಿಣಾಂಶ ಹೀರುವಿಕೆಯನ್ನು ತಡೆಯುವ ಆಹಾರಗಳಿಂದ ದೂರವಿರಿ

ನೀವು ಹಿಮೊಗ್ಲೋಬಿನ್ ಕೊರತೆಯಿಂದ ಬಳಲುತ್ತಿದ್ದರೆ ಕಬ್ಬಿಣಾಂಶವನ್ನು ಹೀರಿಕೊಳ್ಳುವ ಶರೀರದ ಚಟುವಟಿಕೆಯನ್ನು ನಿರ್ಬಂಧಿಸುವ ಆಹಾರಗಳ ಸೇವನೆಯಿಂದ ದೂರವಿರಿ. ಕಾಫಿ,ಚಹಾ,ಕಾರ್ಬನೀಕೃತ ಪಾನೀಯಗಳು,ವೈನ್,ಬಿಯರ್ ಇತ್ಯಾದಿಗಳು ಈ ಗುಂಪಿನಲ್ಲಿ ಸೆೇರುತ್ತವೆ.

 ವ್ಯಾಯಾಮ ಮಧ್ಯಮದಿಂದ ತೀವ್ರ ವ್ಯಾಯಾಮ ಚಟುವಟಿಕೆ ಹಿಮೊಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುವಲ್ಲಿಮಹತ್ವದ ಪಾತ್ರ ವಹಿಸುತ್ತದೆ. ನಾವು ವ್ಯಾಯಾಮದಲ್ಲಿ ತೊಡಗಿಕೊಂಡಾಗ ಹೆಚ್ಚಿನ ಆಮ್ಲಜನಕ ಅಗತ್ಯವಾಗುತ್ತದೆ ಮತ್ತು ಅದನ್ನು ಪೂರೈಸಲು ಶರೀರವು ಹೆಚ್ಚಿನ ಹಿಮೊಗ್ಲೋಬಿನ್‌ನ್ನು ಉತ್ಪಾದಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News