ಗೋಣಿ ಚೀಲದಲ್ಲಿ 2,000 ಆಧಾರ್ ಕಾರ್ಡ್‌ಗಳು ಪತ್ತೆ!
ಜೈಪುರ, ಜೂ.14: ಹಳೆ ದಿನಪತ್ರಿಕೆಗಳನ್ನು ತುಂಬಿಸಲಾಗಿದ್ದ ಗೋಣಿಚೀಲದಲ್ಲಿ 2,000 ಆಧಾರ್ ಕಾರ್ಡ್‌ಗಳು ಪತ್ತೆಯಾದ ಘಟನೆ ಜೈಪುರದಲ್ಲಿ ನಡೆದಿದೆ. ಇಮ್ರಾನ್ ಎಂಬ ಹೆಸರಿನ ಗುಜರಿ ವ್ಯಾಪಾರಿ ಗ್ರಾಹಕರೊಬ್ಬರಿಂದ ಖರೀದಿಸಿದ ಹಳೆದಿನಪತ್ರಿಕೆಗಳ ಗೋಣಿಚೀಲದಲ್ಲಿ ಈ ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ ಎಂದು ವರದಿಗಳು ತಿಳಿಸಿವೆ. ಈ ಬಗ್ಗೆ ಇಮ್ರಾನ್ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಹುಶಃ ಆಧಾರ್ ಕಾರ್ಡ್‌ಗಳನ್ನು ಇಡಲಾಗಿದ್ದ ಚೀಲ ಬದಲಾವಣೆಯಾಗಿರಬಹುದು ಎಂದು ತಿಳಿಸಿದ್ದಾರೆ.
ಪೊಲೀಸರಿಗೆ ಮಾಹಿತಿ ನೀಡುವ ಜೊತೆಗೆ ಇಮ್ರಾನ್ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ದೂರಸಂಪರ್ಕ ಇಲಾಖೆಗೂ ಸುದ್ದಿ ಮುಟ್ಟಿಸಿದ್ದಾರೆ. ಈ ಆಧಾರ್ ಕಾರ್ಡ್‌ಗಳನ್ನು ಅಂಚೆ ಮೂಲಕ ಜನರಿಗೆ ತಲುಪಿಸಬೇಕಾದ ಸಾಧ್ಯತೆಯಿದೆ. ಆದರೆ ಯಾವುದೋ ಕಾರಣದಿಂದ ಈ ಚೀಲವು ಬದಲಾವಣೆಗೊಂಡು ಇಲ್ಲಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಅಂಚೆ ಇಲಾಖೆಗೆ ಮಾಹಿತಿಯನ್ನು ನೀಡಿದ್ದು ಅಷ್ಟಕ್ಕೂ ಈ ಆಧಾರ್ ಕಾರ್ಡ್‌ಗಳು ಇಲ್ಲಿಗೆ ಹೇಗೆ ಬಂತು ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.