ಅನಿವಾಸಿ ಭಾರತೀಯರಿಗೆ ವಾರದ ಒಳಗಡೆ ವಿವಾಹ ನೋಂದಣಿ ಕಡ್ಡಾಯ
ಹೊಸದಿಲ್ಲಿ, ಜೂ. 12: ಅನಿವಾಸಿ ಭಾರತೀಯರು ವಿವಾಹದ ಒಂದು ವಾರಗಳ ಒಳಗೆ ಕಡ್ಡಾಯವಾಗಿ ವಿವಾಹ ನೋಂದಣಿ ಮಾಡಬೇಕು ಹಾಗೂ ತಮ್ಮ ಪಾಸ್‌ಪೋರ್ಟ್‌ನಲ್ಲಿ ವೈವಾಹಿಕ ಸ್ಥಿತಿ ನವೀಕರಿಸಬೇಕು ಎಂದು ಕೇಂದ್ರ ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಅನಿವಾಸಿ ಭಾರತೀಯರು ತಮ ಪತ್ನಿಯನ್ನು ತ್ಯಜಿಸುತ್ತಿರುವುದನ್ನು ತಡೆಯಲು ಬುಧವಾರ ನಡೆದ ಅಂತರ್ ಸಚಿವರ ಸಮಿತಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ತಮ್ಮ ವಿವಾಹದ ಸ್ಥಿತಿ ನವೀಕರಿಸಲು ವಿಫಲವಾದಲ್ಲಿ ಪಾಸ್‌ಪೋರ್ಟ್ ರದ್ದುಗೊಳಿಸಲಾಗುವುದು ಎಂದು ಹೆಸರು ಹೇಳಲಿಚ್ಛಿಸದ ಓರ್ವ ಅಧಿಕಾರಿ ತಿಳಿಸಿದ್ದಾರೆ. ‘‘ಬದಲಾವಣೆ ಅಳವಡಿಸಿಕೊಳ್ಳಲು ಪಾಸ್‌ಪೋರ್ಟ್ ಕಾಯ್ದೆಗೆ ಅಗತ್ಯವಿರುವ ತಿದ್ದುಪಡಿ ತರಲು ಸಚಿವರ ಗುಂಪು ನಿರ್ಧರಿಸಿದೆ’’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅನಿವಾಸಿ ಭಾರತೀಯರಿಂದ ಪರಿತ್ಯಕ್ತ ಪತ್ನಿಯರು ಎದುರಿಸುತ್ತಿರುವ ಕಾನೂನು ಹಾಗೂ ನಿಯಂತ್ರಕ ಸವಾಲನ್ನು ಪರಿಶೀಲಿಸಲು ಕಳೆದ ವರ್ಷ ಸಮಿತಿ ರೂಪಿಸಲಾಗಿತ್ತು. ಈ ಸಮಿತಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಗೃಹ ಸಚಿವ ರಾಜನಾಥ್ ಸಿಂಗ್, ಕಾನೂನು ಸಚಿವ ರವಿ ಶಂಕರ್ ಪ್ರಸಾದ್, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಮನೇಕಾ ಗಾಂಧಿ ಸೇರಿದಂತೆ ಹಲವು ಸಚಿವರು ಒಳಗೊಂಡಿದ್ದಾರೆ. ಬುಧವಾರ ನಡೆದ ಸಭೆಯಲ್ಲಿ ಸ್ವರಾಜ್, ಸಿಂಗ್, ಪ್ರಸಾದ್ ಹಾಗೂ ಗಾಂಧಿ ಪಾಲ್ಗೊಂಡಿದ್ದರು.