ಅಪಹೃತ ಭಾರತೀಯ ಯೋಧ ಔರಂಗಝೇಬ್ ಮೃತದೇಹ ಪತ್ತೆ
Update: 2018-06-14 23:29 IST
ರಜೌರಿ, ಜೂ.14: ಅಪಹೃತ ಭಾರತೀಯ ಯೋಧ ಔರಂಗಝೇಬ್ ಮೃತದೇಹವು ಗುರುವಾರ ಸಂಜೆ ಪುಲ್ವಾಮಾದ ಗುಸೂ ಪ್ರದೇಶದಲ್ಲಿ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ.
ರಜೌರಿ ನಿವಾಸಿಯಾಗಿದ್ದ ಔರಂಗಝೇಬ್ ಈದ್ ಹಬ್ಬದ ಪ್ರಯುಕ್ತ ರಜೆಯಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯೆ ಪುಲ್ವಾಮಾದ ಕಲಂಪೋರಾದಲ್ಲಿ ಉಗ್ರರು ಔರಂಗಝೇಬ್ರನ್ನು ಅಪಹರಿಸಿದ್ದರು. 4 ಜಮ್ಮು ಮತ್ತು ಕಾಶ್ಮೀರ ಲೈಟ್ ಇನ್ಫಾಂಟ್ರಿಗೆ ಸೇರಿದ್ದ ಔರಂಗಝೇಬ್ ಶೋಪಿಯಾನ್‌ನ ಶಾದಿಮಾರ್ಗ್‌ನ 44 ರಾಷ್ಟ್ರೀಯ ರೈಫಲ್ಸ್‌ನ ಶಿಬಿರದಲ್ಲಿ ನಿಯುಕ್ತಿಗೊಂಡಿದ್ದರು.
ಗುರುವಾರ ಬೆಳಗ್ಗೆ 9 ಗಟೆಯ ಸುಮಾರಿಗೆ ಸೇನಾ ವಿಭಾಗದ ಅಧಿಕಾರಿಯೊಬ್ಬರು ಕಾರೊಂದನ್ನು ತಡೆದು ಔರಂಗಝೇಬ್ರನ್ನು ಶೋಪಿಯಾನ್‌ಗೆ ಬಿಡುವಂತೆ ಮನವಿ ಮಾಡಿದ್ದರು. ಅದರಂತೆ ಔರಂಗಝೇಬ್ ಕಾರಿನಲ್ಲಿ ತೆರಳುತ್ತಿದ್ದಾಗ ಅವರನ್ನು ತಡೆದ ಉಗ್ರರು ಯೋಧನನ್ನು ಅಪಹರಿಸಿದ್ದರು. ಔರಂಗಝೇಬ್ ಉಗ್ರ ಸಮೀರ್ ಟೈಗರ್ ಹತ್ಯಾ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.