ರೊಹಿಂಗ್ಯಾ ನಿರಾಶ್ರಿತರಿಗಾಗಿ ಆಸ್ಪತ್ರೆ ನಿರ್ಮಾಣ: ಶಾರ್ಜಾ ಸರಕಾರ ಘೋಷಣೆ

Update: 2018-06-14 18:08 GMT

ಶಾರ್ಜಾ (ಯುಎಇ), ಜೂ. 14: ಯುಎಇಯ ಶಾರ್ಜಾ ಸರಕಾರದ ಅಧೀನದಲ್ಲಿರುವ ಶಾರ್ಜಾ ಮೀಡಿಯಾ ಕಾರ್ಪೊರೇಶನ್, ರೊಹಿಂಗ್ಯಾ ನಿರಾಶ್ರಿತರಿಗಾಗಿ ಬಾಂಗ್ಲಾದೇಶದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲು ಮುಂದಾಗಿದೆ.

ಇದಕ್ಕಾಗಿ ‘ದ ಬಿಗ್ ಹಾರ್ಟ್ ಫೌಂಡೇಶನ್’ಗೆ 30 ಲಕ್ಷ ದಿರ್ಹಂ (ಸುಮಾರು 5.5 ಕೋಟಿ ರೂಪಾಯಿ) ನೆರವು ನೀಡಿದೆ.

ಬಾಂಗ್ಲಾದೇಶದ ಕಾಕ್ಸ್ ಬಝಾರ್ ಜಿಲ್ಲೆಯಲ್ಲಿ ಈ ಆಸ್ಪತ್ರೆ ನಿರ್ಮಾಣವಾಗಲಿದೆ. ನಿರ್ಮಾಣದ ಪ್ರಥಮ ವರ್ಷದಲ್ಲಿಯೇ ಅದು 7200 ರೋಗಿಗಳಿಗೆ ಚಿಕಿತ್ಸೆ ನೀಡಲಿದೆ. ಸುಮಾರು 1,40,000 ರೊಹಿಂಗ್ಯಾ ನಿರಾಶ್ರಿತರು ಕಾಕ್ಸ್ ಬಝಾರ್ ಜಿಲ್ಲೆಯಲ್ಲಿದ್ದಾರೆ. ಇದರಲ್ಲಿ 19.4 ಶೇ.ಮಂದಿ 5 ವಯಸ್ಸಿಗಿಂತ ಕೆಳಗಿನವರಾಗಿದ್ದಾರೆ.

‘ಮೆಡಿಸಿನ್ಸ್ ಸಾನ್ಸ್ ಫ್ರಂಟಿಯರ್ಸ್‌’ ಸಂಸ್ಥೆಯ ಸಹಕಾರದೊಂದಿಗೆ ಈ ಆಸ್ಪತ್ರೆ ನಿರ್ಮಾಣವಾಗಲಿದೆ.

 ಆಸ್ಪತ್ರೆಯ ಎಲ್ಲಾ ಘಟಕಗಳು ಪ್ರತಿದಿನ 24 ಗಂಟೆ ಕಾರ್ಯಾಚರಿಸಲಿದೆ. ತುರ್ತು ಚಿಕಿತ್ಸಾ ಘಟಕ, ತೀವ್ರ ನಿಗಾ ವಿಭಾಗ, ಮಕ್ಕಳ ವಿಭಾಗ ಹಾಗೂ ಪ್ರಸವ ವಾರ್ಡ್‌ಗಳನ್ನು ಆಸ್ಪತ್ರೆ ಹೊಂದಲಿದೆ.

ನಿರ್ವಸಿತರಲ್ಲದವರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾದರೂ, ನಿರಾಶ್ರಿತರಿಗೆ ಆದ್ಯತೆ ನೀಡಲಾಗುವುದು.

ಆರೋಗ್ಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಯತ್ನ

‘‘ರೊಹಿಂಗ್ಯಾ ನಿರಾಶ್ರಿತರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸಿಕೊಡುವುಕ್ಕಾಗಿ ‘ದ ಬಿಗ್ ಹಾರ್ಟ್ ಫೌಂಡೇಶನ್’ ಸಹಾಯದೊಂದಿಗೆ ಶಾರ್ಜಾ ಮೀಡಿಯಾ ಕಾರ್ಪೊರೇಶನ್ ಈ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದೆ’’ ಎಂದು ಶಾರ್ಜಾ ದೊರೆ ಶೇಖ್ ಡಾ. ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸಿಮಿ ಪತ್ನಿ ಶೇಖಾ ಜವಾಹರ್ ಬಿನ್ತ್ ಮುಹಮ್ಮದ್ ಅಲ್ ಖಾಸಿಮಿ ಹೇಳಿದ್ದಾರೆ.

Writer - ವರದಿ: ಸಿರಾಜ್ ಅರಿಯಡ್ಕ

contributor

Editor - ವರದಿ: ಸಿರಾಜ್ ಅರಿಯಡ್ಕ

contributor

Similar News