ಚೀಲ ಹಿಡಿದು ಸರತಿ ಸಾಲಲ್ಲಿ ನಿಲ್ಲುತ್ತಿದ್ದ ಆ ದಿನಗಳು...

Update: 2018-06-15 13:18 GMT

ಬಾಲ್ಯ ಕಾಲ. ಮಣ್ಣಿನ ಗೋಡೆಯ ಪುಟ್ಟ ಮನೆ. ಗೋಡೆಯ ಮೇಲೆ ಮುಳಿಹುಲ್ಲಿನ ಮಾಡು. ಅಮ್ಮ ಬೀಡಿ ಸುರುಟಿ ಅಪ್ಪನಿಗೆ ನೆರವಾಗುತ್ತಿದ್ದರು. ಅಪ್ಪ ಅಡಿಕೆ ಸುಲಿಯುವ ಕೂಲಿ ಕೆಲಸ ಮಾಡುತ್ತಿದ್ದರು. ಇಬ್ಬರು ಅಣ್ಣಂದಿರು (ನಾವು ನಾಲ್ಕು ಮಂದಿ ಗಂಡು ಮಕ್ಕಳು) ಮಾವನ ಜೊತೆ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದರು. ಅಂದರೆ ಬಾಲಕಾರ್ಮಿಕರು. ನಮಗೆ ಹೋಲಿಸಿದರೆ ಮಾವ ಅಂದಿನ ಕಾಲದಲ್ಲಿ ತುಸು ಸ್ಥಿತಿವಂತರು. ನಾವೆಲ್ಲಾ ಮೈಸೂರು ಕಾಕಾ ಎಂದೇ ಅವರನ್ನು ಕರೆಯುತ್ತಿದ್ದೆವು. ಮೈಸೂರು ಕಾಕನ ಮಕ್ಕಳು ಅಂದಿನ ಕಾಲದಲ್ಲಿ ಪ್ಯಾಂಟು ಧರಿಸುತ್ತಿದ್ದರು. ನಾವು ಪ್ಯಾಂಟು ಧರಿಸಿದವರಲ್ಲ. ಹೀಗಿರುವಾಗ ಒಂದು ಪೆರ್ನಾಳ್‌ಗೆ ನನ್ನ ಅಳತೆಯ ಪ್ಯಾಂಟು ಬಂತು. ಮೈಸೂರು ಕಾಕನ ಮಗನ ಪ್ಯಾಂಟು. ಹಳತಾದರೂ ನನಗೆ ಅದು ಹೊಸತೇ ಆಗಿತ್ತು. ನನಗೆ ಖುಷಿಯೋ ಖುಷಿ. ಪೆರ್ನಾಳ್‌ಗಿಂತ ಒಂದು ದಿನ ಮೊದಲು ನನ್ನ ಅಣ್ಣ ಆಚೆ ಮನೆಯಿಂದ ಇಸ್ತ್ರಿ ಪೆಟ್ಟಿಗೆ ತಂದು ಪ್ಯಾಂಟ್‌ಗೆ ಇಸ್ತ್ರಿ ಹಾಕಲು ಮುಂದಾದ. ಆ ದಿನಗಳಲ್ಲಿ ಕರೆಂಟು ಇರಲಿಲ್ಲ. ತೆಂಗಿನ ಕಾಯಿಯ ಚಿಪ್ಪನ್ನು ಉರಿಸಿ ಅದನ್ನು ಇಸ್ತ್ರಿ ಪೆಟ್ಟಿಗೆಯೊಳಗೆ ಹಾಕಿ ಬಿಸಿ ಮಾಡಲಾಗುತ್ತಿತ್ತು. ಇಸ್ತ್ರಿ ಪೆಟ್ಟಿಗೆಯೊಂದಿಗೆ ಅಣ್ಣ ತಯಾರಾದ. ಆದರೆ, ಇಸ್ತ್ರಿ ಹಾಕುವ ಉತ್ಸಾಹದಲ್ಲಿ ಅಣ್ಣ ಯಡವಟ್ಟು ಮಾಡಿದ. ಪ್ಯಾಂಟ್‌ಗೆ ಬಿಸಿ ಎಷ್ಟು ಬೇಕು ಎಂಬುದರ ಅರಿವಿಲ್ಲದ ಆತ, ಇಸ್ತ್ರಿ ಪೆಟ್ಟಿಗೆಯನ್ನು ಎತ್ತಿ ನೆರವಾಗಿ ಪ್ಯಾಂಟ್‌ನ ಮೇಲಿಟ್ಟಿದ್ದ. ಆ ಬಳಿಕದ ಸ್ಥಿತಿಯನ್ನು ಹೇಳಬೇಕಿಲ್ಲ. ಇಸ್ತ್ರಿ ಪೆಟ್ಟಿಗೆಯ ಅಡಿ ಭಾಗದಲ್ಲಿ ನನ್ನ ಪ್ಯಾಂಟ್‌ನ ಒಂದು ಭಾಗ ಅಂಟಿಕೊಂಡಿತ್ತು. ಕರಿದ ವಾಸನೆ. ದೊಡ್ಡ ಆಘಾತ ವೆಂಬಂತೆ ನಾವಿಬ್ಬರೂ ಮುಖಮುಖ ನೋಡಿಕೊಂಡಿದ್ದೆವು. ನನಗಿಂತಲೂ ನನ್ನ ಅಣ್ಣನ ಮುಖವನ್ನು ನೋಡಲಾಗುತ್ತಿರಲಿಲ್ಲ. ಮುಖಕ್ಕೇ ಇಸ್ತ್ರಿ ಪೆಟ್ಟಿಗೆ ತಾಗಿದ ಹಾಗೆ ಅವನು ಬಾಡಿ ಹೋಗಿದ್ದ. ಆ ಬಳಿಕ ಒಂದು ಲುಂಗಿಯನ್ನು ಅಪ್ಪಖರೀದಿಸಿ ತಂದರು. ಸಾಮಾನ್ಯವಾಗಿ ಪೆರ್ನಾಳ್‌ನ ಸಮಯದಲ್ಲಿ ಅಪ್ಪನಮ್ಮನ್ನೆಲ್ಲ ತನ್ನ ಸಂಬಂಧಿಕರ ಮನೆಗೆ ಕರಕೊಂಡು ಹೋಗುತ್ತಿದ್ದರು. ವಿಟ್ಲ-ಒಕ್ಕೆತ್ತೂರಿನಲ್ಲಿ ನಮ್ಮ ಅಪ್ಪನ ಸಂಬಂಧಿಕರಿದ್ದರು. ಕುಕ್ಕಿಲದಿಂದ ಒಕ್ಕೆತ್ತೂರಿಗೆ ಏನಿಲ್ಲವೆಂದರೂ ಆರೇಳು ಕಿಲೋ ಮೀಟರ್ ದೂರ ಇದೆ. ಅಲ್ಲಿಗೆ ನಾವು ಅಪ್ಪನ ಜೊತೆ ನಡೆದುಕೊಂಡೇ ಹೋಗುತ್ತಿದ್ದೆವು. ಇವತ್ತಿನ ಹಾಗೆ ಆ ದಿನಗಳಲ್ಲಿ ಮಕ್ಕಳಿಗೆ ‘ಈದ್’ನ ಹಣವೂ ಸಿಗುತ್ತಿರಲಿಲ್ಲ. ಅಲ್ಲದೆ, ಇಂದಿನಂತೆ ಫಿತ್ರ್ ಝಕಾತ್ ಅಕ್ಕಿಯನ್ನು ಮನೆಮನೆಗೆ ತಂದು ಯಾರೂ ಮುಟ್ಟಿಸುತ್ತಲೂ ಇರಲಿಲ್ಲ. ಪೆರ್ನಾಳ್‌ನ ದಿನದಂದು ಕೋಳಿ ಕೂಗುವ ಹೊತ್ತಿಗೆ ಅಮ್ಮ ನಮ್ಮನ್ನು ಎಬ್ಬಿಸುತ್ತಿದ್ದರು. ಕೈಯ್ಯಲ್ಲೊಂದು ಚೀಲ. ಅದನ್ನು ಹಿಡಿದುಕೊಂಡು ಧನಿಕರ ಮನೆಬಾಗಿಲಿಗೆ ಓಡುತ್ತಿದ್ದೆವು. ನನ್ನ ಜೊತೆ ನನ್ನಣ್ಣನೂ ಇರುತ್ತಿದ್ದ. ನಮ್ಮ ಪರಿಸರದಲ್ಲಿ ಫಿತ್ರ್ ಝಕಾತ್ ಕೊಡುವ ಧನಿಕ ಮುಸ್ಲಿಮರ ಮನೆ ಇದ್ದುದು ಬಹುಶಃ ಒಂದೇ. ಆದರೆ, ಸುಮಾರು ಒಂದು-ಒಂದೂವರೆ ಕಿಲೋ ಮೀಟರ್ ದೂರದಲ್ಲಿ ಹತ್ತರಷ್ಟು ಶ್ರೀಮಂತ ಮುಸ್ಲಿಮರ ಮನೆಗಳಿದ್ದುವು. ಅವರ ಮನೆಯ ಮುಂದೆ ಚೀಲ ಹಿಡಿದು ಸರತಿ ಸಾಲಲ್ಲಿ ನಾನು ಮತ್ತು ನನ್ನಣ್ಣನಂತೆ ನಮ್ಮಂಥ ಕೆಲವು ಮಕ್ಕಳೂ ಇರುತ್ತಿದ್ದರು. ಒಮ್ಮೆ ಹೀೀಗಾಯಿತು, ಸಾಲಿನಲ್ಲಿ ನನ್ನ ಅಣ್ಣ ಮುಂದೆ ನಿಂತಿದ್ದ. ಹಿಂದೆ ನಾನಿದ್ದೆ. ಅಣ್ಣನಿಗೆ ಅಕ್ಕಿ ಕೊಟ್ಟವರು ನನ್ನ ಗುರುತು ಹಿಡಿದರು. ಒಂದೇ ಮನೆಯ ಇಬ್ಬರಿಗೂ ಅಕ್ಕಿ ಕೊಡಲಾಗುವುದಿಲ್ಲ ಎಂದು ಹೇಳಿ ಹಾಗೆಯೇ ಹಿಂದಕ್ಕೆ ಕಳುಹಿಸಿದರು. ಹೀಗೆ ಚೀಲದಲ್ಲಿ ಒಟ್ಟು ಸೇರುವ ಅಕ್ಕಿಯು ಒಂದೇ ರೀತಿಯದ್ದಾಗಿರುತ್ತಿರಲಿಲ್ಲ. ಬೇರೆ ಬೇರೆ ಜಾತಿಯ ಅಕ್ಕಿಗಳು ಚೀಲದಲ್ಲಿರುತ್ತಿದ್ದುವು. ಅಮ್ಮ ಆ ಅಕ್ಕಿಯನ್ನು ಬಿಸಿ ಮಾಡುತ್ತಿದ್ದರು. ಆ ಬಳಿಕ ಪೆರ್ನಾಳ್‌ನ ಆಹಾರ ತಯಾರಾಗುತ್ತಿತ್ತು. ಸಾಮಾನ್ಯವಾಗಿ ಇಡ್ಲಿ ಮತ್ತು ಬೆಲ್ಲ-ಕೊಬ್ಬರಿಯಿಂದ ತಯಾರಿಸಲಾಗುವ ಹಾಲು ಅಂದಿನ ವಿಶೇಷ ಆಹಾರ. ಕೋಳಿ ಪದಾರ್ಥ ಮಾಡುವ ಮನೆಗಳೂ ಇರುತ್ತಿದ್ದುವು. ನಾವು ಪೆರ್ನಾಳ್‌ನ ದಿವಸ ಮಸೀದಿಯಿಂದಿಳಿದು ನೇರವಾಗಿ ಪರಿಸರದಲ್ಲಿರುವ ಸಂಬಂಧಿಕರ ಮನೆಗೆ ಹೋಗುತ್ತಿದ್ದೆವು.

ಹೊಟ್ಟೆ ತುಂಬಾ ತಿನ್ನಲು ಸಿಗುವ ಸಂದರ್ಭವಾಗಿಯೂ ನಮಗೆ ಪೆರ್ನಾಳ್ ಮುಖ್ಯವಾಗಿರುತ್ತಿತ್ತು. ಧರಿಸಿರುವ ಬಟ್ಟೆಗಿಂತ ಯಾವ ಯಾವ ಮನೆಯಲ್ಲಿ ಏನೇನು ವಿಶೇಷ ಆಹಾರಗಳಿದ್ದುವು ಅನ್ನುವುದು ನಮ್ಮ ಚರ್ಚಾ ವಿಷಯವಾಗಿತ್ತು... ಇವತ್ತು ನನ್ನ ಜೊತೆ ನನ್ನ ಅಪ್ಪಇಲ್ಲ. ಜೊತೆ ಇರುವ ಅಮ್ಮನ ಮುಖದ ನೆರಿಗೆಗಳಲ್ಲಿ ಹಳೆ ಕಾಲವನ್ನು ನೆನೆಯುತ್ತೇನೆ.

ಎ.ಕೆ. ಕುಕ್ಕಿಲ ಸಂಪಾದಕರು, ಸನ್ಮಾರ್ಗ ವಾರಪತ್ರಿಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News