ಫಿಫಾ ವಿಶ್ವಕಪ್: ಈಜಿಪ್ಟ್ ವಿರುದ್ಧ ನಾಟಕೀಯ ಗೆಲುವು ದಾಖಲಿಸಿದ ಉರುಗ್ವೆ

Update: 2018-06-15 14:33 GMT

 ಎಕಟೆರಿನ್‌ಬರ್ಗ್, ಜೂ.15: ಫಿಫಾ ವಿಶ್ವಕಪ್‌ನ ‘ಎ’ ಗುಂಪಿನ ಎರಡನೇ ಪಂದ್ಯದಲ್ಲಿ ಕೊನೆಯ ಕ್ಷಣದಲ್ಲಿ ಗೋಲು ಬಾರಿಸಿದ ಉರುಗ್ವೆ ತಂಡ ಈಜಿಪ್ಟ್ ವಿರುದ್ಧ 1-0 ಗೋಲುಗಳ ಅಂತರದಿಂದ ಜಯ ಸಾಧಿಸಿದೆ.

ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಕೊನೆಯ ತನಕ ಉಭಯ ತಂಡಗಳು ಗೋಲು ಬಾರಿಸಲು ವಿಫಲವಾಗಿದ್ದು ಪಂದ್ಯ ಗೋಲುರಹಿತ ಡ್ರಾಗೊಳ್ಳುವತ್ತ ಮುಖ ಮಾಡಿತ್ತು. ಆಗ 90ನೇ ನಿಮಿಷದಲ್ಲಿ ಹೆಡರ್‌ನ ಮೂಲಕ ಶಕ್ತಿಶಾಲಿ ಗೋಲು ಬಾರಿಸಿದ ಜೋಸ್ ಗಿಮೆನೆಝ್ ಉರುಗ್ವೆಗೆ ನಾಟಕೀಯ ಗೆಲುವು ತಂದುಕೊಟ್ಟರು.

  ಗಿಮೆನೆಝ್ ಬಾರಿಸಿದ ಗೆಲುವಿನ ಗೋಲಿನ ನೆರವಿನಿಂದ ಉರುಗ್ವೆ ಮೂರು ಅಂಕವನ್ನು ಗಳಿಸಿದೆ. ರಶ್ಯ ಗುರುವಾರ ನಡೆದ ತನ್ನ ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯಾವನ್ನು 5-0 ಅಂತರದಿಂದ ಸೋಲಿಸಿ ಎ ಗುಂಪಿನಲ್ಲಿ ಮೂರಂಕವನ್ನು ಪಡೆದಿತ್ತು.

 ಈ ಗೆಲುವಿನ ಮೂಲಕ ಉರುಗ್ವೆ ತಂಡ 1970ರ ವಿಶ್ವಕಪ್‌ನ ಬಳಿಕ ತನ್ನ ಮೊದಲ ಪಂದ್ಯವನ್ನು ಗೆದ್ದುಕೊಂಡಿದೆ. ಉರುಗ್ವೆ 1970ರ ವಿಶ್ವಕಪ್‌ನಲ್ಲಿ ಕೊನೆಯ ಬಾರಿ ಇಸ್ರೇಲ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಗೆದ್ದುಕೊಂಡಿತ್ತು.

ಮತ್ತೊಂದೆಡೆ ಈಜಿಪ್ಟ್ ತಂಡ ವಿಶ್ವಕಪ್‌ನಲ್ಲಿ ಸೋಲಿನ ಸರಪಳಿಯನ್ನು ಮುಂದುವರಿಸಿದೆ. ಐದು ಪಂದ್ಯಗಳಲ್ಲಿ 3ರಲ್ಲಿ ಸೋಲು ಹಾಗೂ 2ರಲ್ಲಿ ಡ್ರಾ ಸಾಧಿಸಿದೆ.

ಮೂರು ವಾರಗಳ ಹಿಂದೆ ಲಿವರ್‌ಪೂಲ್ ಚಾಂಪಿಯನ್ಸ್ ಲೀಗ್ ಫೈನಲ್‌ನಲ್ಲಿ ಗಾಯಗೊಂಡಿರುವ ಈಜಿಪ್ಟ್‌ನ ಪ್ರಮುಖ ಸ್ಟ್ರೈಕರ್ ಮುಹಮ್ಮದ್ ಸಲೇಹ್ ಉರುಗ್ವೆ ವಿರುದ್ಧ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News