ಉದ್ಯೋಗಿಗಳು, ಪಿಂಚಣಿದಾರರಿಗೆ ಕ್ರೆಡಿಟ್ ಕಾರ್ಡ್‌ನಂತಹ ಮೆಡಿಕಲ್ ಕಾರ್ಡ್ ವಿತರಣೆಗೆ ರೈಲ್ವೆ ನಿರ್ಧಾರ

Update: 2018-06-16 17:51 GMT

ಹೊಸದಿಲ್ಲಿ, ಜೂ. 16: ಅಖಿಲ ಭಾರತ ವಿಶಿಷ್ಟ ಸಂಖ್ಯೆ ಹೊಂದಿರುವ ಹಾಗೂ ಕ್ರೆಡಿಟ್ ಕಾರ್ಡ್‌ನಂತಹ ಆರೋಗ್ಯ ಕಾರ್ಡ್ ಅನ್ನು ತನ್ನ ಉದ್ಯೋಗಿಗಳಿಗೆ ಹಾಗೂ ಪಿಂಚಣಿದಾರರಿಗೆ ನೀಡಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಪ್ರಸ್ತುತ ಪಡಿತರ ಚೀಟಿ ಹೋಲುವ ಕಿರುಪುಸ್ತಕ ರೂಪದ ಮೆಡಿಕಲ್ ಕಾರ್ಡ್ ಅನ್ನು ವಲಯ ರೈಲ್ವೆ ನೀಡುತ್ತಿದೆ.

ವಿಶಿಷ್ಟ ಗುರುತಿನ ಸಂಖ್ಯೆ ಇರುವ ಪ್ರತ್ಯೇಕ ವೈದ್ಯಕೀಯ ಗುರುತು ಕಾರ್ಡ್ ಅನ್ನು ಉದ್ಯೋಗಿಗಳು, ಅವರನ್ನು ಅವಲಂಬಿಸಿರುವವರು ಹಾಗೂ ಪಿಂಚಣಿದಾರರಿಗೆ ನೀಡಲಾಗುವುದು ಎಂದು ರೈಲ್ವೇ ಮಂಡಳಿ ಆದೇಶ ತಿಳಿಸಿದೆ. ಭಾರತೀಯ ರೈಲ್ವೆ ಉದ್ಯೋಗಿಗಳು ಹಾಗೂ ಇತರ ಫಲಾನುಭವಿಗಳಿಗೆ ನೀಡುವ ವೈದ್ಯಕೀಯ ಗುರುತು ಪತ್ರಕ್ಕೆ ಏಕರೂಪತೆ ತರುವ ಸಲುವಾಗಿ ಪ್ಲಾಸ್ಟಿಕ್ ಕಾರ್ಡ್ ರೂಪಿಸಲು ರೈಲ್ವೆ ಮಂಡಳಿ ಅನುಮತಿ ನೀಡಿದೆ. ಈ ಕಾರ್ಡ್‌ನ ಗಾತ್ರ ಬ್ಯಾಂಕ್‌ಗಳು ನೀಡುವ ಡೆಬಿಟ್/ಕ್ರೆಡಿಟ್ ಕಾರ್ಡ್‌ನಷ್ಟೇ ಇರಲಿದೆ ಎಂದು ಆದೇಶ ಹೇಳಿದೆ. ಪ್ರತಿ ಕಾರ್ಡ್ ಮೇಲ್ಭಾಗದಲ್ಲಿ ಬಣ್ಣದ ಪಟ್ಟಿ ಇದೆ. ಈ ಬಣ್ಣದ ಪಟ್ಟಿ ಕಾರ್ಡ್ ಹೊಂದಿರುವವರು ಯಾವ ವರ್ಗಕ್ಕೆ ಸೇರಿದ್ದಾರೆ, ಅಂದರೆ-ಸೇವೆ ಸಲ್ಲಿಸುತ್ತಿರುವವರು, ನಿವೃತ್ತ ಉದ್ಯೋಗಿಗಳು ಅಥವಾ ಅವಲಂಬಿತರು ಎಂಬುದನ್ನು ಗುರುತಿಸಲು ಸಹಕಾರಿಯಾಗಲಿದೆ. ಪ್ರಸ್ತುತ ರೈಲ್ವೆಯಲ್ಲಿ 13 ಲಕ್ಷ ಉದ್ಯೋಗಿಗಳು ಹಾಗೂ ಅದೇ ಸಂಖ್ಯೆಯ ಪಿಂಚಣಿದಾರರು ಇದ್ದಾರೆ. ಅವರನ್ನು ಅವಲಂಬಿಸಿರುವ ಎಲ್ಲರೂ ಮೆಡಿಕಲ್ ಕಾರ್ಡ್ ಬಳಸಲು ಅರ್ಹರು.

15 ವರ್ಷದ ಒಳಗಿನ ಫಲಾನುಭವಿಗಳಿಗೆ ನೀಡಲಾದ ಕಾರ್ಡ್‌ಗಳಿಗೆ 5 ವರ್ಷಗಳ ಮಾನ್ಯತೆ ಇದೆ. ಅನಂತರ ಅವರು ಅದನ್ನು ನವೀಕರಣಗೊಳಿಸಬೇಕು. 15 ವರ್ಷಕ್ಕಿಂತ ಮೇಲಿನ ಫಲಾನುಭವಿಗಳಿಗೆ ನೀಡಲಾದ ಕಾರ್ಡ್ ಅನ್ನು ಅವರು 40 ವರ್ಷಗಳ ಬಳಿಕ ಹಾಗೂ ನಿವೃತ್ತರಾದ ಬಳಿಕ ನವೀಕರಣಗೊಳಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News