ಅಂಬೇಡ್ಕರ್ ಹೆಸರಿಗೆ ‘ಮಹಾರಾಜ’ ಸೇರ್ಪಡೆ: ಮಹಾರಾಷ್ಟ್ರ ವಿ.ವಿ. ರಿಜಿಸ್ಟ್ರಾರ್ ಅಮಾನತು

Update: 2018-06-16 17:58 GMT

ಔರಂಗಾಬಾದ್, ಜೂ. 16: ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರ ಹೆಸರಿಗೆ ‘ಮಹಾರಾಜ’ ಪದ ಸೇರಿಸಿದ ಹಿನ್ನೆಲೆಯಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾನಿಲಯದ ಪ್ರಭಾರ ರಿಜಿಸ್ಟ್ರಾರ್ ಸಾಧನಾ ಪಾಂಡೆ ಅವರನ್ನು ಉಪ ಕುಲಪತಿ ಅವರು ಶುಕ್ರವಾರ ಸಂಜೆ ಅಮಾನತುಗೊಳಿಸಿದ್ದಾರೆ. 

ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರ ಸಭೆಯಲ್ಲಿ ಪಾಂಡೆಯನ್ನು ಅಮಾನತುಗೊಳಿಸಿ ಉಪ ಕುಲಪತಿ ಬಿ.ಎ. ಚೋಪ್ರಾ ಘೋಷಿಸಿದ್ದಾರೆ. ನಿರ್ವಹಣಾ ಮಂಡಳಿ ಚುನಾವಣೆ ನಡೆಸಲು ಈ ಸಭೆ ಕರೆಯಲಾಗಿತ್ತು. ಪತ್ರಕರ್ತರು ಕೂಡ ಈ ಸಭೆಯಲ್ಲಿ ಹಾಜರಾಗಿದ್ದರು. ಸಭೆಯಲ್ಲಿ ಮಾತನಾಡಿದ ಪಾಂಡೆ ಅವರು, ಅಂಬೇಡ್ಕರ್ ಅವರ ಹೆಸರಿನ ಜೊತೆಗೆ ಮಹಾರಾಜ ಸೇರಿಸಿದರು. ಇದು ಸಭೆಯಲ್ಲಿದ್ದವರ ಅಸಮಾಧಾನಕ್ಕೆ ಕಾರಣವಾಗಿತ್ತು. ಪಾಂಡೆ ಅವರು ದುರುದ್ದೇಶದಿಂದ ಅಂಬೇಡ್ಕರ್ ಅವರ ಹೆಸರಿನೊಂದಿಗೆ ‘ಮಹಾರಾಜ’ ಹೆಸರು ಸೇರಿಸಿದ್ದಾರೆ ಹಾಗೂ ಅವರು ಬಲಪಂಥೀಯ ಸಿದ್ಧಾಂತ ಅನುಸರಿಸುತ್ತಿದ್ದಾರೆ ಎಂದು ಸೆನೆಟ್ ಸದಸ್ಯರು ಆರೋಪಿಸಿದ್ದಾರೆ. ಪ್ರಭಾರಿ ರಿಜಿಸ್ಟ್ರಾರ್‌ರನ್ನು ಅಮಾನತುಗೊಳಿಸುವಂತೆ ಸೆನೆಟ್ ಸದಸ್ಯರು ಆಗ್ರಹಿಸಿದರು. ಪಾಂಡೆ ಅವರ ಅಮಾನತು ಘೋಷಿಸಿದ ಉಪ ಕುಲಪತಿ ಸಭೆ ತ್ಯಜಿಸುವಂತೆ ಪಾಂಡೆ ಅವರಿಗೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News